ಸೋಮವಾರ, ಡಿಸೆಂಬರ್ 9, 2019
21 °C

‘ಸಂಘಟಿತರಾಗಿ ರಾಜಕೀಯ ಶಕ್ತಿ ಪಡೆಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂಘಟಿತರಾಗಿ ರಾಜಕೀಯ ಶಕ್ತಿ ಪಡೆಯಿರಿ’

ಚಿಕ್ಕಮಗಳೂರು: ‘ಮಡಿವಾಳ ಸಮುದಾಯದವರು ಸಂಘಟಿತರಾಗಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು’ ಎಂದು ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮ ಅಧ್ಯಕ್ಷ ಎ.ಎನ್.ಮಹೇಶ್ ಸಲಹೆ ನೀಡಿದರು.

ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಮಡಿವಾಳ ಸಮುದಾಯದವರು ಸಂಘಟಿತರಾಗಿ ಬಲ ಪ್ರದರ್ಶಿಸಬೇಕು. ರಾಜಕೀಯ ಶಕ್ತಿ ಪಡೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅವರನ್ನು ಐಎಎಸ್, ಕೆಎಎಸ್, ಐಪಿಎಸ್‌ ಅಧಿಕಾರಿಗಳನ್ನಾಗಿಸುವ ಗುರಿ ಹೊಂದಬೇಕು’ ಎಂದರು.

‘ಮಡಿವಾಳ ಸಮುದಾಯದವರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಲು ಸಮೀಕ್ಷೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಶೀಘ್ರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದೆ’ ಎಂದರು.

ಕಾಯಕವೇ ಕೈಲಾಸ ಎಂದು ಶರಣರು ನಂಬಿದ್ದು, ಅವರು ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡಿದ್ದರು. ನುಡಿದಂತೆ ನಡೆಯುತ್ತಿದ್ದರು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿದ್ದ ಅವರು ಬದುಕಿನ ಸತ್ವವನ್ನು ವಾಸ್ತವ ನೆಲಗಟ್ಟಿನಲ್ಲಿ ವಚನಗಳ ಮೂಲಕ ಜನರಿಗೆ ಸಾರಿದರು’ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ದಾರ್ಶನಿಕರ ಜಯಂತ್ಯುತ್ಸವ ಆಚರಣೆಗೆ ಸೀಮಿತವಾಗಬಾರದು.  ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಸಮುದಾಯದ ಕಸುಬಿನ ಮೇಲೆ ಯುವಪೀಳಿಗೆ ಅವಲಂ ಬಿತರಾಗಬಾರದು. ಶಿಕ್ಷಣ ಜೀವನದ ಆಸ್ತಿ. ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿಯಾಗಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.

ಮನುಷ್ಯನಿಗೆ ಜೀವನದಲ್ಲಿ ಗುರಿ ಮತ್ತು ಗುರು ಇರಬೇಕು. ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಬೇಕು. ಪರೋಪಕಾರಿಯಾಗಿರಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಮಡಿವಾಳ ಸಮುದಾಯದ ಬಹಳಷ್ಟು ಜನರಿಗೆ ವಸತಿ ಇಲ್ಲ. ಅವರಿಗೆ ವಸತಿ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಶ್ರಾಂತ ಸಂಪಾದಕ ಬಿ.ಶಾಮಸುಂದರ ಮಾತನಾಡಿ, 12ನೇ ಶತಮಾನದಲ್ಲಿ ಶರಣರ ವಚನ ಮತ್ತು ಗ್ರಂಥಗಳನ್ನು ದುಷ್ಟರಿಂದ ಮಡಿವಾಳ ಮಾಚಿದೇವ ಅವರು ರಕ್ಷಣೆ ಮಾಡಿದ್ದರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಪ್ರಮುಖವಾಗಿದೆ. ಮೂಲ ಕನ್ನಡ ಶಬ್ದಗಳು ವಚನ ಸಾಹಿತ್ಯದಲ್ಲಿ ಇವೆ. ಮಡಿವಾಳ ಮಾಚಿದೇವ ನೂರಕ್ಕೂ ಹೆಚ್ಚು ವಚನ ರಚಿಸಿದ್ದಾರೆ. ‘ಕಲಿದೇವರ ದೇವ’ ಎನ್ನುವುದು ಅವರ ಅಂಕಿತ ನಾಮವಾಗಿದೆ’ ಎಂದು ತಿಳಿಸಿದರು. ಸಮುದಾಯದ ಮುಖಂಡರಾದ ಲಕ್ಷ್ಮಣ್, ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಇದ್ದರು.

ಪ್ರತ್ಯೇಕ ಒಳ ಮೀಸಲಾತಿ: ಆಗ್ರಹ

ಕಡೂರು: 12ನೇ ಶತಮಾನದ ಶರಣ ಚಳವಳಿಯ ಪ್ರಮುಖ ಹೆಸರು ವಚನಕಾರ ಮಡಿವಾಳ ಮಾಚಿದೇವ ಎಂಬುದು ನಿರ್ವಿವಾದ ಎಂದು ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು. ಕಡೂರಿನಲ್ಲಿ ತಾಲ್ಲೂಕು ಆಡಳಿತ ಗುರುವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ‍ಅವರು ಮಾತನಾಡಿದರು.

‘ಮಡಿವಾಳ ಮಾಚಯ್ಯನ ವಚನಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಸಿಕ್ಕಿರುವ ವಚನಗಳಲ್ಲಿರುವ ಜೀವನಾನು ಭವ, ವಾಸ್ತವ ಈಗಲೂ ಪ್ರಸ್ತುತವಾಗಿದೆ. ವಚನ ಸಾಹಿತ್ಯದಲ್ಲಿ ಮಾಚಿದೇವನ ವಚನಗಳ ರಕ್ಷಣೆ ಮಾಡಲು ರಚನಾತ್ಮಕ ಕಾರ್ಯಕ್ಕೆ ಮುಂದಾಗಬೇಕಿದೆ’ ಎಂದು ತಿಳಿಸಿದರು.

ಮಡಿವಾಳ ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಒತ್ತಾಯವಿದೆ. ಪ್ರಸ್ತುತ 2A ಗುಂಪಿಗೆ ಸೇರಿದ್ದು, ಉಳಿದ ಜನಾಂಗಗಳ ಜತೆಯಲ್ಲಿರುವುದರಿಂದ ಮಡಿವಾಳ ಜನಾಂಗಕ್ಕೆ ಪ್ರತ್ಯೇಕ ಮೀಸಲಾತಿ ಬೇಕು ಎಂಬ ಬೇಡಿಕೆಯಿದೆ. ರಾಜಕೀಯ ನುಸುಳದೆ ಬಸವಣ್ಣನವರ ಆಶಯ ಸಾಕಾರವಾಗಬೇಕಾದರೆ ಈ ಜನಾಂಗಕ್ಕೆ 2A ಗುಂಪಿನಲ್ಲಿ ಪ್ರತ್ಯೇಕ ಒಳಮೀಸಲಾತಿ ನೀಡಬೇಕು. ಆಗ ಮಾತ್ರ ಈ ಜನಾಂಗ ಆರ್ಥಿಕ. ಸಾಮಾಜಿಕ, ಶೈಕ್ಷಣಿಕವಾಗಿ ಮೇಲೇರುತ್ತದೆ. ಕಡೂರಿನಲ್ಲಿ ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕಾಗಿ ₹3 ಲಕ್ಷ ನೀಡಿದ್ದೇನೆ. ಜನಾಂಗದ ಅಭಿವೃದ್ದಿಗಾಗಿ ಸಹಕಾರ ನೀಡುತ್ತೇನೆ ಎಂದರು.

ಸಾಹಿತಿ ಸಿಂಗಟಗೆರೆ ಸಿದ್ದಪ್ಪ ಉಪನ್ಯಾಸ ನೀಡಿ ‘12ನೇ ಶತಮಾನದಲ್ಲಿ ಆರಂಭವಾದ ವಚನ ಸಾಹಿತ್ಯ ಚಳವಳಿಯ ಮಂಚೂಣಿಯಲ್ಲಿದ್ದವರು ಮಡಿವಾಳ ಮಾಚಿದೇವರು. ಕೇವಲ ವಚನಕಾರರಲ್ಲದೆ ಮಾಚಿದೇವರ ಬಗ್ಗೆ ಜನಪದರು ಲಾವಣಿಗಳನ್ನು ರಚಿಸಿದ್ದಾರೆ. ಅವರು ರಚಿಸಿದ 345 ವಚನಗಳ ಪೈಕಿ ಕೇವಕ 145 ವಚನಗಳು ದೊರೆತಿವೆ. ಬಸವಣ್ಣನವರ ಆತ್ಮೀಯರಾಗಿದ್ದ ಮಾಚಿದೇವರ ವಚನಗಳನ್ನು ರಕ್ಷಿಸುವ ಕೆಲಸವಾಗಬೇಕು’ ಎಂದು ಆಶಿಸಿದರು.

ಪ್ರಭಾರಿ ಉಪವಿಭಾಗಾಧಿಕಾರಿ ನಾರಾಯಣ ಕನಕರೆಡ್ಡಿ, ತಾಲ್ಲೂಕು ಕಾರ್ಯಾಧ್ಯಕ್ಷ ಭಂಢಾರಿ ಶ್ರೀನಿವಾಸ್, ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ಎಸ್.ಕೃಷ್ಣಮೂರ್ತಿ,ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಉಮೇಶ್, ಬೀರೂರು ಪುರಸಭಾಧ್ಯಕ್ಷೆ ಸವಿತಾ ರಮೇಶ್, ವೈ.ಕೆ.ರಂಗಪ್ಪ ಇದ್ದರು.

'ಮಾಚಿದೇವ ವೈಶಾಲ್ಯ ಸರ್ವರಿಗೂ ಮಾದರಿ'

ಶೃಂಗೇರಿ: ಅಧುನಿಕ ಜೀವನದಲ್ಲಿ ಅಧಿಕಾರ, ಹಣಕ್ಕಾಗಿ ನಾವು ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ದೇಶದಲ್ಲಿ ಹುಟ್ಟಿದ ಸಂತರು, ಸಂಸ್ಕೃತಿ ಹಾಗೂ ಇತಿಹಾಸ ಮುಂತಾದ ಬಗ್ಗೆ ತಿಳಿಯುವ ಕುತೂಹಲ ಇರಬೇಕು. ಆಗ ಮಾತ್ರ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಜೇಸಿ ಸಂಸ್ಥೆಯ ರಾಷ್ಟ್ರೀಯ ತರಬೇತುದಾರ ವಿಜಯಕುಮಾರ್ ಅಭಿಪ್ರಾಯಪಟ್ಟರು.

ಶೃಂಗೇರಿ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಮಡಿವಾಳ ಮಾಚಯ್ಯ ಜಯಂತಿ ಯಲ್ಲಿ ಅವರು ಉಪನ್ಯಾಸ ನೀಡಿದರು.

‘12ನೇ ಶತಮಾನದಲ್ಲಿ ಜ್ಞಾನವನ್ನು ಪ್ರಸರಿಸಿದವರಲ್ಲಿ ಅಂಬಿಗರ ಚೌಡಯ್ಯ, ಬಸವಣ್ಣ, ಮಡಿವಾಳ ಮಾಚಿದೇವರು ಶ್ರೇಷ್ಠರು. ಹಿಂದುಳಿದ ಹಾಗೂ ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಒಬ್ಬರು. ಮೇಲು-ಕೀಲು, ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೊಳಗಾದವರ ಬಗ್ಗೆ ಚಿಂತಿಸಿ ವ್ಯಕ್ತಿ-ವ್ಯಕ್ತಿಗಳ ಬಗ್ಗೆ ಇರುವ ಅಂತರವನ್ನು ಹೋಗಲಾಡಿಸಲು ಅವರು ಹೋರಾಡಿದರು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶೀಲಚಂದ್ರಶೇಖರ್ ಮಾತನಾಡಿ ‘ಬಸವಣ್ಣ ಅವರ ಕಾಯಕವೇ ಕೈಲಾಸ ಎಂಬ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡ ಮಾಚಿದೇವ ಅವರ ಸತ್ಕಾರ್ಯ ಚಿರನೂತನ. ವಚನ ಸಾಹಿತ್ಯವನ್ನು ಜತನದಿಂದ ಕಾಪಾಡಿಕೊಂಡು ಬಸವೇಶ್ವರರು ಅವರಿಂದ "ಮಾಚಿತಂದೆ" ಎಂದು ಕರೆಯಲ್ಪಟ್ಟ ಅವರ ಜೀವನ ಆದರ್ಶವಾದುದು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಪದ್ಮನಾಭಶಾಸ್ತ್ರಿ ವಹಿಸಿದ್ದರು. ತಾಲ್ಲೂಕು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಕೃಷ್ಣಪ್ಪ ಮತ್ತು ಪದಾಧಿಕಾರಿಗಳು ಹಾಜರಿದ್ದರು.

ಪುರಸಭೆ ಅಧ್ಯಕ್ಷರ ಆಕ್ಷೇಪ

ಕಡೂರು: ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವುದಕ್ಕೆ ಬೀರೂರು ಪುರಸಭಾಧ್ಯಕ್ಷೆ ಸವಿತಾರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರವೇ ಆಚರಿಸುವ ಜಯಂತಿಗಳಿಗೆ ಕಡೇ ಗಳಿಗೆಯಲ್ಲಿ ಕರೆಯುವ ಪರಿಪಾಠವನ್ನು ತಾಲ್ಲೂಕು ಆಡಳಿತ ಬಿಡಬೇಕು. ಮಹಾ ಪುರುಷರ ಜಯಂತಿಯಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ. ಈ ರೀತಿಯ ಪ್ರಮಾದವಾಗದಂತೆ ಎಚ್ಚರ ವಹಿಸಬೇಕು’ ಎಂದರು.

ಮಹರ್ಷಿ ಮಡಿವಾಳ ಮಾಚಿದೇವ ಜಯಂತಿ

ತರೀಕೆರೆ: ಮಹರ್ಷಿ ಮಡಿವಾಳ ಮಾಚಿದೇವರು ಸಮಾಜದಲ್ಲಿ ಆಸು ಹೊಕ್ಕಾಗಿದ್ದ ಮೌಢ್ಯಗಳ ಕೊಳೆಯನ್ನು ತೊಳೆದವರು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಕನಕ ಕಲಾಭವನದಲ್ಲಿ ತಾಲ್ಲೂಕು ಆಡಳಿತದಿಂದ ಗುರುವಾರ ಏರ್ಪಡಿಸಿದ್ದ ಮಹರ್ಷಿ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ  ಅವರು ಮಾತನಾಡಿ, ಅಲ್ಪಸಂಖ್ಯಾತ ಸಮಾಜವಾಗಿರುವ ಮಡಿವಾಳ ಜನಾಂಗವು ರಾಜಕೀಯ, ಶಿಕ್ಷಣ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದು, ಸಮಾಜಕ್ಕೆ ಪ್ರತ್ಯೇಕ ಮೀಸಲಾತಿಯನ್ನು ದೊರಕಿಸಿಕೊಡುವಲ್ಲಿ ಸರ್ಕಾರ ಮುಂದಾಗಬೇಕು ಎಂಬುದು ತಮ್ಮ ಒತ್ತಾಯ’ ಎಂದರು.

ಮಾಚಿದೇವರು ಅನುಭವ ಮಂಟಪ ಸೇರಿಕೊಂಡು ಜಾತಿ ನಿಂದನೆ ಹೋಗಲಾಡಿಸಲು ಹಾಗೂ ಭವಿಷ್ಯದ ದೃಷ್ಟಿಯಿಂದ ಇಂತಹ ಜಾತಿ ನಿಂದನೆ ಪದ್ದತಿ ನಿರ್ಮೂಲವಾಗಬೇಕೆಂದು ಹೋರಾಟ ಮಾಡಿದರು ಎಂದರು.

ಪುರಸಭಾ ಅಧ್ಯಕ್ಷೆ ಟಿ.ಎಲ್. ಅಶ್ವಿನಿ, ಸದಸ್ಯೆ ಮಾಲಾ, ಮಾಜಿ ಅಧ್ಯಕ್ಷ ಎಂ.ನರೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಮ್ಮ, ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷ ಎಂ.ಚಂದ್ರು , ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್ , ಅಧಿಕಾರಿಗಳಾದ ಎಸ್.ಎಲ್ ಗಂಗಾಧರ ಮೂರ್ತಿ, ವಿದ್ಯಾ.ಎಂ.ಕಾಳೆ ಇದ್ದರು.

ಪ್ರತಿಕ್ರಿಯಿಸಿ (+)