ಶುಕ್ರವಾರ, ಡಿಸೆಂಬರ್ 13, 2019
27 °C

ಕುರಿ ಸಂತೆ ನಿರ್ವಹಣೆ ಮಹಾಮಂಡಳದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರಿ ಸಂತೆ ನಿರ್ವಹಣೆ ಮಹಾಮಂಡಳದ್ದು

ದಾವಣಗೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಡೆಯುವ ಕುರಿ ಸಂತೆಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಬೇಕಾದ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ಮಹಾಮಂಡಳಕ್ಕೆ ಒಪ್ಪಿಸಿದೆ ಎಂದು ಕುರಿ ಮತ್ತು ಮೇಕೆ ಮಹಾಮಂಡಳದ ಅಧ್ಯಕ್ಷ ಪಂಡಿತ್‌ರಾವ್‌ ಚಿದ್ರಿ ತಿಳಿಸಿದರು.

ನಗರದ ದೇವರಾಜ ಅರಸು ಬಡಾವಣೆಯ ಶ್ರೀಬೀರೇಶ್ವರ ಭವನದಲ್ಲಿ ಕರ್ನಾಟಕ ಸಹಕಾರ ಸಂಘಗಳ ಕುರಿ ಮತ್ತು ಮೇಕೆ ಮಹಾಮಂಡಳ ಮತ್ತು ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತವಾಗಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವೈಜ್ಞಾನಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಕುರಿಗೆ ₹ 5 ನಿರ್ವಹಣೆ ವೆಚ್ಚವಾಗಿ ತೆಗೆದುಕೊಳ್ಳಲಾಗುವುದು. ಇದರಲ್ಲಿ ₹ 3 ಮಹಾಮಂಡಳಕ್ಕೆ, ₹ 2 ಎಪಿಎಂಸಿಗೆ ನೀಡಲಾಗುವುದು. ಈ ಸಂಬಂಧ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ ಎಂದು ಹೇಳಿದರು.

ರಾಜ್ಯದಾದ್ಯಂತ 200 ಕುರಿ ಮಾಂಸದ ಅಂಗಡಿ ಸ್ಥಾಪನೆಗೆ ಟೆಂಡರ್‌ ಕರೆದಿದ್ದು, ಶೀಘ್ರದಲ್ಲೇ ಈ ಪ್ರಕ್ರಿಯೆಗಳು ಆರಂಭವಾಗಲಿವೆ. ₹ 5 ಲಕ್ಷ ವೆಚ್ಚದಲ್ಲಿ ಕುರಿ ಮಾಂಸದ ಅಂಗಡಿ ಸ್ಥಾಪಿಸಬೇಕು. ಇದಕ್ಕೆ ಮಹಾಮಂಡಳ ₹ 1.25 ಲಕ್ಷ ಸಬ್ಸಿಡಿ ನೀಡುತ್ತದೆ. ಉಳಿದ ₹ 3.75 ಲಕ್ಷ ಸಾಲ ಪಡೆದುಕೊಳ್ಳಬೇಕು. ಇದಕ್ಕಾಗಿ ಮಹಾಮಂಡಳಕ್ಕೆ ಸರ್ಕಾರ ₹ 2 ಕೋಟಿ ನೀಡಿದೆ ಎಂದು ಹೇಳಿದರು.

ಗುಣಮಟ್ಟದ ಮಾಂಸ ಮಾರಾಟ ಮಾಡುವ ದೃಷ್ಟಿಯಿಂದ ಕೆಎಂಎಫ್‌ ಮಾದರಿಯಲ್ಲಿ ಮಹಾಮಂಡಳ ಬ್ರಾಂಡ್‌ವೊಂದನ್ನು ಸಿದ್ಧಪಡಿಸಿದೆ. ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು ಮಹಾಮಂಡಳಕ್ಕೆ ₹ 5 ಸಾವಿರ ಕೋಟಿ ನೆರವು ನೀಡಲು ಸಿದ್ಧವಿದೆ. ಇದಕ್ಕೆ ರಾಜ್ಯ ಸರ್ಕಾರ ಸಾಲದ ಖಾತ್ರಿ ನೀಡಬೇಕು. ಈ ಸಂಬಂಧ ಸರ್ಕಾರಕ್ಕೆ ಮಹಾಮಂಡಳ ಪತ್ರ ಬರೆದಿದ್ದು, ಶೀಘ್ರದಲ್ಲೇ ಇದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಈ ಯೋಜನೆ ಜಾರಿಗೆ ಬಂದರೆ ರಾಜ್ಯದಲ್ಲಿ ಕುರಿ ಮತ್ತು ಮೇಕೆ ಕೃಷಿಯಲ್ಲಿ ಕ್ರಾಂತಿ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕುರಿಗಾರರ ಮಕ್ಕಳಿಗೆ ತರಬೇತಿ: ಇಲಾಖೆಯಲ್ಲಿ ಔಷಧ ದಾಸ್ತಾನು ಇದ್ದರೂ ವೈದ್ಯರ ಕೊರತೆಯಿಂದ ಕುರಿಗಳಿಗೆ ಅವುಗಳನ್ನು ಸಕಾಲಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಾಗ, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಕುರಿಗಾರರ ಮಕ್ಕಳಿಗೇ ಔಷಧ ನೀಡುವ ತರಬೇತಿ ಕೊಡಲು ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದೆ ಎಂದು ಹೇಳಿದರು.

ತರಬೇತಿಯಲ್ಲಿ ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ.ವೆಂಕಟರಾಮ ರೆಡ್ಡಿ, ವೈದ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಪಿ.ಟಿ.ರಮೇಶ್, ತರಳಬಾಳು ಕೆವಿಕೆ ಪ್ರಾಧ್ಯಾಪಕ ಪ್ರೊ.ಜಯದೇವಪ್ಪ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಮಹಾ ಮಂಡಳದ ನಿರ್ದೇಶಕ ಮಹಾಲಿಂಗ‍ಪ್ಪ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಎಚ್‌.ನಾಗರಾಜ ಉಪಸ್ಥಿತರಿದ್ದರು. ದೀಪಕ್‌ ಬಿ.ಜೋಗಪ್ಪನವರ್ ಸ್ವಾಗತಿಸಿದರು. ಎಚ್‌.ಜಯಪ್ಪ ವಂದಿಸಿದರು.

ಪ್ರತಿಕ್ರಿಯಿಸಿ (+)