4

ಮಹೋತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಬೇಕು

Published:
Updated:
ಮಹೋತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಬೇಕು

ಶ್ರವಣಬೆಳಗೊಳ: ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಎಲ್ಲರ ಸಹಕಾರದಿಂದ ಧಾರ್ಮಿಕ ಉತ್ಸವವನ್ನು ಯಶಸ್ವಿಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದರು.

ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಬಳಿಕ ಗುರುವಾರ ಶ್ರವಣಬೆಳಗೊಳದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮಹಾಮಸ್ತಕಾಭಿಷೇಕ ಮಹೋತ್ಸವದ ಯಶಸ್ಸಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ₹ 275 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 12 ಉಪನಗರಗಳನ್ನು ನಿರ್ಮಾಣ ಮಾಡಲಾಗಿದ್ದು, 26 ಸಾವಿರ ಪ್ರವಾಸಿಗರು ಉಳಿದುಕೊಳ್ಳಲು ಅವಕಾಶವಾಗಲಿದೆ. ವಿಂಧ್ಯಗಿರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿರುವ ಅಟ್ಟಣಿಗೆ ಕಾಮಗಾರಿ ಪೂರ್ಣಗೊಂಡಿದೆ. ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅಂತಿಮ ಹಂತ ತಲುಪಿವೆ ಎಂದರು.

‘ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಕಾಳಜಿ ವಹಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ಈಗಾಗಲೇ ಸಭೆ ಕರೆದು ಚರ್ಚಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿಯೂ ಎರಡು ಸಭೆ ಕರೆದು ಚರ್ಚಿಸಿ ಅಗತ್ಯ ಸಲಹೆ, ಸೂಚನೆ ನೀಡಿದ್ದಾರೆ. ಕಾಮಗಾರಿ ಕುರಿತು ಆಗಾಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನನ್ನೊಡನೆ ಚರ್ಚಿಸಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಎಂ.ಎ. ಗೋಪಾಲಸ್ವಾಮಿ, ಮಹಾಮಸ್ತಕಾಭಿಷಕ ಮಹೋತ್ಸವದ ರಾಷ್ಟ್ರೀಯ ಅಧ್ಯಕ್ಷೆ ಸರಿತಾ ಎಂ.ಕೆ. ಜೈನ್‌, ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷ ಅಧಿಕಾರಿ ಬಿ.ಎನ್‌. ವರಪ್ರಸಾದರೆಡ್ಡಿ, ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ ಇದ್ದರು.

‘ಸಮನ್ವಯದ ಕೊರತೆ ಇದೆ’

‘ಮಹಾಮಸ್ತಕಾಭಿಷೇಕ ಮಹೋತ್ಸವದ ಕೆಲಸ, ಕಾರ್ಯಗಳು ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸಮನ್ವಯದ ಕೊರತೆ ಉಂಟಾಗುತ್ತಿದೆ’ ಎಂದು ಚಾರುಕೀರ್ತಿ ಭಟ್ಟಾರಕಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಮಸ್ತಕಾಭಿಷೇಕದ ಯಶಸ್ಸಿಗೆ ಶ್ರಮಿಸಬೇಕು. ಲೋಕೋಪಯೋಗಿ ಸಚಿವರು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ಇಂದಿನಿಂದ ಧಾರ್ಮಿಕ ಸಮಾರಂಭ ನಡೆಯಲಿದೆ. ಲೋಕೋಪಯೋಗಿ ಸಚಿವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಧಾರ್ಮಿಕ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry