ಶುಕ್ರವಾರ, ಡಿಸೆಂಬರ್ 13, 2019
27 °C

ಕಾಡದಿರಲಿ ಕ್ಯಾನ್ಸರ್‌

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

ಕಾಡದಿರಲಿ ಕ್ಯಾನ್ಸರ್‌

ಮೊನ್ನೆ ಮೊನ್ನೆಯವರೆಗೂ ಆರೋಗ್ಯವಾಗಿದ್ದು, ವಿಭಾಗದ ಕೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ, ಹಿರಿಯ ಸಹೋದ್ಯೋಗಿಯೊಬ್ಬರು ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಅಸ್ವಸ್ಥರಾಗಿ ವಿಧಿವಶರಾದಾಗ ನನಗೆ ಬಹಳ ನೋವಾಗಿತ್ತು. ಅವರ ಕುಟುಂಬದವರಲ್ಲಿ ವಿಚಾರಿಸಿದಾಗ ಪಿತ್ತಜನಕಾಂಗದ ಕ್ಯಾನ್ಸರ್ ಅವರ ಸಾವಿಗೆ ಕಾರಣ ಎಂಬ ವಿಷಯ ತಿಳಿದು ಬಂತು. ಯಾವ ಗುಣಲಕ್ಷಣಗಳ ಸುಳಿವೂ ಕೊಡದೆ ಅವರನ್ನು ಆವರಿಸಿತ್ತು, ಪಿತ್ತಜನಕಾಂಗದ ಕ್ಯಾನ್ಸರ್!

ಇತ್ತೀಚೆಗೆ ನಮ್ಮ ಕಾಲೇಜಿನ ಫೇಸ್‌ಬುಕ್ ಗ್ರೂಪ್‍ನಲ್ಲಿ ಬಂದ ಸುದ್ದಿ ಕೂಡ ನನ್ನನ್ನು ತೀವ್ರವಾಗಿ ವಿಚಲಿತಗೊಳಿಸಿತ್ತು. ನನ್ನ ಆಸುಪಾಸಿನ ಬ್ಯಾಚ್‍ನ ಗೆಳತಿಯೊಬ್ಬಳು (ಸುಮಾರು ನಲವತ್ತೈದು ವರ್ಷ ವಯಸ್ಸು) ನಮ್ಮನ್ನು ಅಗಲಿದ್ದಳು. ಆಕೆಯ ಸಾವಿಗೆ ಕಾರಣವೇನೆಂದು ವಿಚಾರಿಸಿದಾಗ ತಿಳಿದು ಬಂದದ್ದು ಆಕೆ ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳೆಂದು!

ಇಲ್ಲಿ ನನ್ನನ್ನು ಕಾಡಿದ್ದು ಎರಡು ಅಂಶಗಳು! ಇಬ್ಬರೂ ಸ್ವತಃ ವೈದ್ಯರಾಗಿದ್ದೂ ತಮ್ಮಲ್ಲಿ ಹುದುಗಿದ್ದ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತಗಳಲ್ಲಿಯೇ ಗುರುತಿಸದೇ ಹೋದರಲ್ಲ ಎಂಬುದು ಒಂದು ಅಂಶವಾದರೆ, ನಲವತ್ತೈದರ ಪ್ರಾಯದಲ್ಲಿಯೇ ಗೆಳತಿಯ ಬದುಕನ್ನು ಗರ್ಭಾಶಯದ ಕ್ಯಾನ್ಸರ್ ಅಂತ್ಯಗೊಳಿಸಿದ್ದು ಇನ್ನೊಂದು ಅಂಶ.

ಮೂಲ ಕಾರಣಗಳೇನು?

ಕ್ಯಾನ್ಸರ್‌ಗೆ ಮೂಲಕಾರಣ ಜೀವಕೋಶಗಳ ವಂಶವಾಹಿಗಳಲ್ಲಿ ಆಗುವ ಧಿಡೀರ್ ಬದಲಾವಣೆಗಳು. ಆನುವಂಶೀಯವಾಗಿ ಬಂದ ದೋಷಯುಕ್ತ ವಂಶವಾಹಿಗಳು ಕೆಲವೊಮ್ಮೆ ತಮ್ಮಷ್ಟಕ್ಕೆ ತಾವೇ ಬದಲಾವಣೆಗಳಿಗೆ ಒಳಪಡಬಹುದು. ಹಾಗಾಗಿಯೇ ಒಮ್ಮೊಮ್ಮೆ ಆರೋಗ್ಯಕರ ಜೀವನಶೈಲಿ ಹೊಂದಿರುವವರೂ ಕ್ಯಾನ್ಸರ್‌ನಿಂದ ಬಳಲುವ ಸಾಧ್ಯತೆಯಿರುತ್ತದೆ.

ಇನ್ನು ಕೆಲವೊಮ್ಮೆ ವಂಶವಾಹಿಗಳ ಈ ಬದಲಾವಣೆಗೆ ಕೆಲವು ಬಾಹ್ಯ ಹಾಗೂ ಆಂತರಿಕ ಅಂಶಗಳ ಸಹಕಾರ ಅತ್ಯಗತ್ಯ. ಆಂತರಿಕ ಅಂಶಗಳೆಂದರೆ, ರಸದೂತಗಳ ಪ್ರಮಾಣದಲ್ಲಿ ವ್ಯತ್ಯಾಸ, ವ್ಯಕ್ತಿಯ ರೋಗನಿರೋಧಕ ಶಕ್ತಿ, ಆನುವಂಶೀಯವಾಗಿ ಬಂದ ದೋಷಯುಕ್ತ ಜೀವಕೋಶಗಳು ಮುಂತಾದುವು. ಬಾಹ್ಯ ಅಂಶಗಳೆಂದರೆ, ವೈರಾಣುವಿನ ಸೋಂಕು, ಕೆಲವು ಬಗೆಯ ರಾಸಾಯನಿಕಗಳ ಹಾಗೂ ವಿಕಿರಣಗಳ ಸಂಪರ್ಕ, ಆಹಾರದಲ್ಲಿ ಜೀವಸತ್ವಗಳ (ವಿಟಮಿನ್ ಎ) ಮತ್ತು ನಾರಿನಾಂಶದ ಕೊರತೆ, ತಂಬಾಕುಸೇವನೆ, ಧೂಮಪಾನ, ಮದ್ಯಪಾನ ಮುಂತಾದುವು.

ಕ್ಯಾನ್ಸರ್‌ಗೆ ಕಾರಣವಾಗುವ ಬಾಹ್ಯ ಅಂಶ

* ಧೂಮಪಾನ / ತಂಬಾಕು ಸೇವನೆ - ಶ್ವಾಸಕೋಶ, ಅನ್ನನಾಳ, ಧ್ವನಿ ಪೆಟ್ಟಿಗೆ, ಬಾಯಿ, ಜಠರ, ಮೂತ್ರಕೋಶದ ಕ್ಯಾನ್ಸರ್‌.

* ಮದ್ಯಪಾನ - ಪಿತ್ತಜನಕಾಂಗದ ಕ್ಯಾನ್ಸರ್.

* ಬೊಜ್ಜು – ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್.

* ಆಹಾರದಲ್ಲಿ ವಿಟಮಿನ್ ಎ ಕೊರತೆ - ಶ್ವಾಸಕೋಶ, ಗರ್ಭಕೊರಳಿನ ಕ್ಯಾನ್ಸರ್.

* ಅತಿಯಾದ ಸೂರ್ಯನ ವಿಕಿರಣ ಸಂಪರ್ಕ – ಚರ್ಮದ ಕ್ಯಾನ್ಸರ್.

* ವೈರಾಣುವಿನ ಸೋಂಕು - ಹೆಪಟೈಟಿಸ್ ಬಿ ವೈರಾಣು - ಪಿತ್ತಜನಕಾಂಗದ ಕ್ಯಾನ್ಸರ್.. ಹ್ಯುಮನ್ ಪ್ಯಾಪಿಲ್ಲೋಮ ವೈರಸ್ – ಗರ್ಭಕೋಶದ ಕೊರಳು, ಪುರುಷರ ಜನನಾಂಗದ ಕ್ಯಾನ್ಸರ್.

* ಹೊಗೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳ ಸೇವನೆ – ಜಠರದ ಕ್ಯಾನ್ಸರ್.

* ಅತಿ ಗಟ್ಟಿಯಾದ ಆಹಾರದ ಸೇವನೆ – ಅನ್ನನಾಳದ ಕ್ಯಾನ್ಸರ್.

* ವಿಕಿರಣದ ಸಂಪರ್ಕ – ಥೈರಾಯ್ಡ್ ಕ್ಯಾನ್ಸರ್, ರಕ್ತದ ಕ್ಯಾನ್ಸರ್.

* ಆಹಾರದಲ್ಲಿ ನಾರಿನಾಂಶದ ಕೊರತೆ – ದೊಡ್ಡ ಕರುಳಿನ ಕ್ಯಾನ್ಸರ್.

ಅನೇಕ ಅಧ್ಯಯನಗಳಿಂದ ಹಾಗೂ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಈ ಮೇಲಿನ ಅಂಶಗಳು ಕ್ಯಾನ್ಸರ್ ಬೆಳವಣಿಗೆಯಲ್ಲಿ ಸಹಕರಿಸುವುದೆಂಬುದು ಧೃಡಪಟ್ಟಿದೆ. ಆದ್ದರಿಂದ ನಾವು ಈ ಅಂಶಗಳನ್ನು ಸದಾ ಗಮನದಲ್ಲಿಟ್ಟು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರೆಡೆಗೆ ಮನಸ್ಸು ಮಾಡಬೇಕು.

ವೈದ್ಯಕೀಯ ತಂತ್ರಜ್ಞಾನವು ಸಾಕಷ್ಟು ಮುಂದುವರೆದಿದ್ದು ಇದೀಗ ವೈದ್ಯವಿಜ್ಞಾನಿಗಳು ವ್ಯಕ್ತಿಯಲ್ಲಿನ ದೋಷಪೂರಿತ ವಂಶವಾಹಿಗಳನ್ನೇ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಹೇಳುವಾಗ ಅಮೆರಿಕದ ಖ್ಯಾತ ಚಿತ್ರತಾರೆ ಅಂಜಲೀನಾ ಜೋಲಿಯನ್ನು ನಾವು ಮರೆಯುವಂತಿಲ್ಲ. ತನ್ನ ಅಜ್ಜಿ, ತಾಯಿ, ಹಾಗೂ ತಾಯಿಯ ಸಹೋದರಿ – ಹೀಗೆ ಕುಟುಂಬದಲ್ಲಿ ಮೂವರು ಸ್ತನಕ್ಯಾನ್ಸರ್ ಹಾಗೂ ಅಂಡಾಶಯದ ಕ್ಯಾನ್ಸರ್‌ನಿಂದ ಮೃತ ಪಟ್ಟಾಗ ಆಕೆ ತನ್ನ ಮೂವತ್ತೇಳನೆಯ ಹರೆಯದಲ್ಲಿ ಅದಕ್ಕೆ ಅವಶ್ಯವಾದ ತಪಾಸಣೆಗೆ ಒಳಪಡುತ್ತಾಳೆ. ತನ್ನಲ್ಲಿಯೂ ದೋಷಪೂರಿತ ವಂಶವಾಹಿ ಪತ್ತೆಯಾಗಿ, ತಾನೂ ಸ್ತನಕ್ಯಾನ್ಸರ್‌ನಿಂದ ಬಳಲುವ ಸಾಧ್ಯತೆ ಶೇ 87ರಷ್ಟು ಇದೆ ಎಂದು ತಿಳಿದ ಆಕೆ ತನ್ನ ಎರಡೂ ಸ್ತನಗಳನ್ನು ಶಸ್ತ್ರಚಿಕಿತ್ಸೆಯ ಸಹಾಯದಿಂದ ತೆಗೆಸಿಕೊಂಡಳು. ಕೆಲವು ವರ್ಷಗಳ ಬಳಿಕ ಮತ್ತೆ ತನ್ನಲ್ಲಿ ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ವಂಶವಾಹಿಯು ಪತ್ತೆಯಾದ ಹಿನ್ನೆಲೆಯಲ್ಲಿ ತನ್ನ ಎರಡೂ ಅಂಡಾಶಯಗಳನ್ನೂ ತೆಗೆಸಿಕೊಂಡಳು.

ಆದರೆ, ಆ ಬಗೆಯ ತಂತ್ರಜ್ಞಾನ ಹಾಗೂ ಚಿಕಿತ್ಸೆ ಎಲ್ಲ ವರ್ಗದವರಿಗೂ ಎಟುಕುವಂತಹದ್ದಲ್ಲ. ಅದರಲ್ಲಿಯೂ ಭಾರತದಂತಹ ದೇಶದಲ್ಲಿ, ಮೂಲಭೂತ ಆರೋಗ್ಯಸೌಕರ್ಯಗಳನ್ನು ಎಲ್ಲ ವರ್ಗದವರಿಗೆ ತಲುಪಿಸುವುದೇ ಕಷ್ಟವಾಗುತ್ತಿರುವಾಗ ಅದು ಇನ್ನೂ ಬಲು ದೂರದ ಮಾತು.

ಆದರೂ ಒಂದಿಲ್ಲೊಂದು ರೀತಿಯಲ್ಲಿ ನಾವು ಕ್ಯಾನ್ಸರ್‌ನ ವಿರುದ್ಧ ಹೋರಾಡಲೇಬೇಕಾಗಿದೆ. ಏಕೆಂದರೆ, ಅಂಕಿ–ಅಂಶಗಳ ಪ್ರಕಾರ ವಿಶ್ವದ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ಕ್ಯಾನ್ಸರ್‌ನಿಂದ ಎಂದು ತಿಳಿದು ಬಂದಿದೆ. ಆದ್ದರಿಂದಲೇ, ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲೆಂದು ವಿಶ್ವದಾದ್ಯಂತ ಪ್ರತಿ ವರ್ಷವೂ ಫೆಬ್ರುವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ. ಈ ಆಚರಣೆಯ ಮುಖ್ಯ ಉದ್ದೇಶ ವಿಶ್ವದ ಕ್ಯಾನ್ಸರ್ ಹೊರೆಯನ್ನು ತಗ್ಗಿಸುವುದು ಮತ್ತು ಕ್ಯಾನ್ಸರ್‌ನಿಂದ ಉಂಟಾಗುವ ಸಾವು ನೋವುಗಳನ್ನು ಕಡಿಮೆ ಮಾಡುವುದು. ‘ನಾವು ಮಾಡಬಲ್ಲೆವು. ನಾನು ಮಾಡಬಲ್ಲೆ’ ಎಂಬುದು ಈ ಬಾರಿಯ ವಿಶ್ವ ಕ್ಯಾನ್ಸರ್ ದಿನದ ಘೋಷಣಾ ವಾಕ್ಯ. ನಾವೆಲ್ಲರೂ ಕ್ಯಾನ್ಸರ್ ವಿರುದ್ಧ ಹೋರಾಡಬೇಕು ಎಂಬುದೇ ಈ ಮಾತಿನ ಒಳ ಅರ್ಥ.

ಒಬ್ಬ ವ್ಯಕ್ತಿ ಕ್ಯಾನ್ಸರ್ ವಿರುದ್ಧ ಹೇಗೆ ಹೋರಾಡಬಹುದು?

ಪ್ರತಿಯೊಬ್ಬರೂ ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸುವುದರ ಬಗ್ಗೆ ಅರಿವು ಹೊಂದಿರಬೇಕು. ಏಕೆಂದರೆ, ಆರಂಭಿಕ ಹಂತಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿಯೇ ಆಗುತ್ತದೆ. ನಂತರದ ಹಂತಗಳಲ್ಲಿ, ಅದರಲ್ಲಿಯೂ ಕ್ಯಾನ್ಸರ್ ಜೀವಕೋಶಗಳು ಇತರ ಅಂಗಾಂಗಗಳಿಗೆ ಹರಡಿದಾಗ ಅದರ ಚಿಕಿತ್ಸೆ ಸ್ವಲ್ಪ ಕ್ಲಿಷ್ಟಕರವೆನಿಸುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು

ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕೆಲವು ವೈರಾಣುಗಳ ವಿರುದ್ಧ ಇದೀಗ ಲಸಿಕೆಗಳೂ ಲಭ್ಯವಿವೆ. ಹೆಪಟೈಟಿಸ್ ಬಿ ಹಾಗೂ ಹುಮನ್ ಪ್ಯಾಪಿಲ್ಲೋಮ ವೈರಾಣುವಿನ ವಿರುದ್ಧ ಲಭ್ಯವಿರುವ ಲಸಿಕೆಗಳ ಬಗ್ಗೆ ನಿಮ್ಮ ವೈದ್ಯರಲ್ಲಿ ವಿಚಾರಿಸಿ ಅದನ್ನು ಅವಶ್ಯ ಹಾಕಿಸಿಕೊಳ್ಳಬೇಕು. ಅಂತೆಯೇ ನಲವತ್ತು ವರ್ಷವಾಗುತ್ತಲೂ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಸಂಪೂರ್ಣ ದೇಹದ ತಪಾಸಣೆಗೆ ಒಳಗಾಗುವುದೂ ಸೂಕ್ತವೇ. ರಕ್ತದ ತಪಾಸಣೆ, ಹೊಟ್ಟೆಯ ಸ್ಕ್ಯಾನಿಂಗ್, ಎದೆಗೂಡಿನ ಎಕ್ಸ್‌–ರೇ, ಮ್ಯಾಮ್ಮೋಗ್ರ್ಯಾಫಿ, ಪ್ಯಾಪ್ ಸ್ಮಿಯರ್, ಪುರುಷರಲ್ಲಿ ರಕ್ತದ ಪಿ. ಎಸ್. ಎ. ಪ್ರಮಾಣದ ಪರೀಕ್ಷೆ ಮೊದಲಾದವುಗಳ ಸಹಾಯದಿಂದ ಅಂಗಾಂಗಗಳಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸುವುದು ಸಾಧ್ಯ. ಆರಂಭಿಕ ಹಂತಗಳಲ್ಲಿಯೇ ಕ್ಯಾನ್ಸರ್‌ನ ಪತ್ತೆಗೂ ಈ ತಪಾಸಣೆಗಳು ಸಹಾಯಕಾರಿ. ತಪಾಸಣೆಯ ವರದಿಯನ್ನು ಆಧರಿಸಿ, ಜೀವನಶೈಲಿಯಲ್ಲಿ ಅವಶ್ಯ ಮುಂಜಾಗೃತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಇವು ಸಹಕರಿಸುತ್ತವೆ. ಸಮತೋಲನ ಆಹಾರಸೇವನೆ ಹಾಗೂ ನಿಯಮಿತವಾದ ವ್ಯಾಯಾಮ ಕೂಡ ಈ ನಿಟ್ಟಿನಲ್ಲಿ ಸಹಕಾರಿಯೇ.

**

ಯಾವುದು ಕ್ಯಾನ್ಸರ್ ಗುಣಲಕ್ಷಣವಿರಬಹುದು?

* ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ವ್ಯಕ್ತಿಯ ತೂಕ ಕಡಿಮೆಯಾಗುವುದು.

* ಹಸಿವು ಕಡಿಮೆಯಾಗುವುದು.

* ಬಾಯಿ ಅಥವಾ ಮೂಗಿನಿಂದ ಪದೇ ಪದೇ ರಕ್ತ ಒಸರಿಸುವಿಕೆ.

* ಮಲ ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವಿಕೆ

* ದೇಹದ ಯಾವುದೇ ಭಾಗದಲ್ಲಿ (ಕುತ್ತಿಗೆ, ಹೊಟ್ಟೆ, ಮಹಿಳೆಯರಲ್ಲಿ ಸ್ತನ) ಗಂಟು ಅಥವಾ ಗಡ್ಡೆ ಕಾಣಿಸಿಕೊಳ್ಳುವುದು.

* ದೇಹದಲ್ಲಿ ಮೊದಲಿನಿಂದಲೂ ಇದ್ದ ಮಚ್ಚೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುವುದು - ಅದರ ಗಾತ್ರದಲ್ಲಿ ದೊಡ್ಡದಾಗುವುದು, ಆಕಾರದಲ್ಲಿ ಬದಲಾವಣೆ, ಬಣ್ಣದಲ್ಲಿ ವ್ಯತ್ಯಾಸ ಮೊದಲಾದುವು.

* ಧ್ವನಿಯಲ್ಲಿ ಬದಲಾವಣೆ. ಧ್ವನಿ ಇದ್ದಕ್ಕಿದ್ದಂತೆ ಗಡುಸಾಗುವುದು.

* ಆಹಾರಪದಾರ್ಥಗಳನ್ನು ನುಂಗುವಾಗ ಗಂಟಲಲ್ಲಿ ತೊಂದರೆ ಅಥವಾ ನೋವು.

* ಸಾಮಾನ್ಯ ಔಷಧೋಪಚಾರಕ್ಕೆ ನಿಯಂತ್ರಣಕ್ಕೆ ಬಾರದ ಅತಿಸಾರ.

* ಬಹುಕಾಲದವರೆಗೆ ವಾಸಿಯಾಗದ ಗಾಯಗಳು. ಬಾಯಿಯ ಹುಣ್ಣುಗಳು.

* ಸಾಮಾನ್ಯ ಔಷಧೋಪಚಾರಕ್ಕೆ ನಿಯಂತ್ರಣಕ್ಕೆ ಬಾರದ ಕೆಮ್ಮು.

ಈ ಮೇಲಿನ ಗುಣಲಕ್ಷಣಗಳು ನಿಮ್ಮಲ್ಲಿ ಅಥವಾ ನಿಮ್ಮ ಸುತ್ತಲಿನವರಲ್ಲಿ ಕಂಡುಬಂದರೆ, ಕೂಡಲೇ ಹತ್ತಿರದ ತಜ್ಞವೈದ್ಯರಲ್ಲಿ ಸಲಹೆ ಪಡೆಯುವುದು ಸೂಕ್ತ. ಕೆಲವು ವರ್ಷಗಳ ಹಿಂದೆ, ಕ್ಯಾನ್ಸರ್ ಬಂದರೆ ಸಾವು ಕಟ್ಟಿಟ್ಟ ಬುತ್ತಿ ಎಂದಿತ್ತು. ಆದರೆ, ಈಗ ವೈದ್ಯವಿಜ್ಞಾನ ಬಹಳಷ್ಟು ಮುಂದುವರೆದಿದೆ. ಇದೀಗ ಕ್ಯಾನ್ಸರ್‌ಗೆ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನಗಳು, ಔಷಧಗಳು, ವಿಕಿರಣ ಚಿಕಿತ್ಸೆಗಳು ಲಭ್ಯವಿರುವುದರಿಂದ ಅನೇಕ ಬಗೆಯ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

(ಡಾ. ವಿನಯ ಶ್ರೀನಿವಾಸ್)

ಪ್ರತಿಕ್ರಿಯಿಸಿ (+)