ಶನಿವಾರ, ಜೂನ್ 6, 2020
27 °C

2006ರ ಮಸ್ತಕಾಭಿಷೇಕ ಸಿಬಿಐಗೆ ತನಿಖೆಗೆ ವಹಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2006ರ ಮಸ್ತಕಾಭಿಷೇಕ ಸಿಬಿಐಗೆ ತನಿಖೆಗೆ ವಹಿಸಲಿ

ಹಾಸನ: ‘2006ರಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಸಿಬಿಐ ತನಿಖೆಗೆ ವಹಿಸಲಿ’ ಎಂದು ಶಾಸಕ ಎಚ್.ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿರುಗೇಟು ನೀಡಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರಿಗೆ ಯಾವ ಮಾಹಿತಿಯು ಇಲ್ಲ. ಇವರ ಹಾಗೆ ನಾನೂ ಮಸ್ತಕಾಭಿಷೇಕ ಕಾಮಗಾರಿಗಳನ್ನು ಇಂತವರಿಗೆ ವಹಿಸಬೇಕು ಎಂದು ಪಟ್ಟು ಹಿಡಿದಿರಲಿಲ್ಲ. ಐತಿಹಾಸಿಕ ಕಾರ್ಯಕ್ರಮದ ಅನುದಾನದಲ್ಲಿ ಲಾಭ ಮಾಡಿಕೊಳ್ಳುವ ಕೆಟ್ಟ ಮನಸ್ಥಿತಿ ನನಗಿಲ್ಲ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೊಶ ವ್ಯಕ್ತಪಡಿಸಿದರು.

‘2006ರ ಮಸ್ತಕಾಭಿಷೇಕ ಕಾಮಗಾರಿ ಪಾರದರ್ಶಕವಾಗಿ ನಡೆಸಿದ್ದೇನೆ ಎಂಬ ನಂಬಿಕೆ ನನಗಿದೆ. ವಿವಿಧ ಇಲಾಖೆಗಳಿಂದ ಕೆಲಸ ಮಾಡಿಸಿದ್ದೇನೆ. ಈ ಕುರಿತು ಸತ್ಯಾಂಶ ತಿಳಿಯಲು ಬಯಸುವವರು ಕಡತಗಳ ಪರಿಶೀಲನೆ ನಡೆಸಬೇಕು. ಕಚೇರಿಗಳಲ್ಲಿ ದಾಖಲೆಗಳೇ ಇಲ್ಲ ಎಂದು ಹೇಳುವುದು ಸಚಿವರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಮಸ್ತಕಾಭೀಷೇಕ ನಡೆದು 12 ವರ್ಷಗಳಾಗಿದ್ದು, ಈಗ ದಾಖಲೆ ಕೇಳಿದರೆ ನಾನೇನು ಮಾಡಲಿ. ಧೈರ್ಯವಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಲಿ. ಜತೆಗೆ ಕಳೆದ ನಾಲ್ಕುವರೆ ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.

‘ಇಂಧನ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮದ ವಿರುದ್ಧ ತನಿಖೆಗೆ ಆಗ್ರಹಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಮನೆಗೆ ಹೋಗಿದ್ದು ಕ್ಷೇತ್ರ ಅಭಿವೃದ್ಧಿಗಾಗಿಯೇ ಹೊರತು ವೈಯಕ್ತಿಕ ಫೈಲ್‌ಗಳಿಗೆ ಸಹಿ ಹಾಕಿಸಿಕೊಳ್ಳುವುದಕ್ಕಾಗಿ ಅಲ್ಲ. ಯಾವ ಡಿನೋಟಿಫಿಕೇಷನ್, ದುಡ್ಡು ಹೊಡೆಯುವ ದುರುದ್ದೇಶ ನನಗಿಲ್ಲ’ ಎಂದು ಟಾಂಗ್‌ ನೀಡಿದರು.

‘ಸಾಲಬಾಧೆ ತಾಳಲಾರದೆ ರಾಜ್ಯದಾದ್ಯಾಂತ 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ, ನೀರಾವರಿಗೆ ಆದ್ಯತೆ, ಸಾಲಮನ್ನಾ ಮಾಡುವ ಕುರಿತು ಯೋಚಿಸಬೇಕಿದ್ದ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದೆ. ರೈತರ ಆತ್ಮಹತ್ಯೆ ತಡೆಯದಿರುವುದೇ ಇವರ ಸಾಧನೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದಿದ್ದರು ಸಹ ಅವರು ಈಗ ಪರಿವರ್ತನೆ ಹೆಸರಿನಲ್ಲಿ ರ‍್ಯಾಲಿ ಮಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಮೊದಲ ಆದ್ಯತೆ 2018ರ ವಿಧಾನಸಭೆ ಚುನಾವಣೆ ಮಾತ್ರ ಆಗಿದೆ. ಇವರಿಗೆ ರೈತಾಪಿ ವರ್ಗದ ಹಿತ ಬೇಕಿಲ್ಲ’ ಎಂದು ಟೀಕಿಸಿದರು.

ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಯನ್ನು ಆಹ್ವಾನಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಿದೆಯೋ ಗೊತ್ತಿಲ್ಲ. ಕೇವಲ ಜೈನ ಸಂಘದವರು ಆಮಂತ್ರಿಸಿದರೆ ಪ್ರಧಾನಿ ಬರುವುದಿಲ್ಲ ಎಂದರು.

‘ಜೆಡಿಎಸ್ ಆಡಳಿತದ ಅವಧಿಯಲ್ಲಿ ನಡೆದ ಅಕ್ರಮಗಳ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಯಾವ ದಾಖಲೆ ಅಂತ ನಾನು ಕಾಯುತ್ತಿದ್ದೇನೆ. ಇವರ ಬಗ್ಗೆ ಮಾತನಾಡಿದರೆ ನಾನು ಪೊಳ್ಳೆದ್ದು ಹೋಗ್ತಿನಿ, ಅವರನ್ನ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಅಂತ ಹೇಳೋಕೆ ನಾಚಿಕೆ ಆಗುತ್ತೆ’ ಎಂದು ಜರಿದರು. ಜೆಡಿಎಸ್ ಮುಖಂಡ ಲಕ್ಷ್ಮಣೇಗೌಡ ಇದ್ದರು.

15 ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ 15 ದಿನಗಳಲ್ಲಿ ಬಿಡುಗಡೆಯಾಗಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಟಿಕೆಟ್ ಹಂಚಿಕೆ ಮಾಡುತ್ತಿದ್ದು, ಕ್ಷೇತ್ರದ ಜನ ಬಯಸಿದವರಿಗೆ ಟಿಕೆಟ್ ನೀಡಲಾಗುವುದು. ಬೇಲೂರು ಕ್ಷೇತ್ರ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.