ಭಾನುವಾರ, ಡಿಸೆಂಬರ್ 8, 2019
25 °C

ಕನ್ನಡ ಪರಂಪರೆಯ ಸ್ಮರಣೆ ಸರ್ವಶ್ರೇಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಪರಂಪರೆಯ ಸ್ಮರಣೆ ಸರ್ವಶ್ರೇಷ್ಠ

ಶಿಗ್ಗಾವಿ: ‘ಕನ್ನಡ ನಾಡಿನ ಪರಂಪರೆಯ ಸ್ಮರಣೆ ಸರ್ವಶ್ರೇಷ್ಠವಾದುದು. ಅದು ಭವಿಷ್ಯದ ನಾಡಿನ ಏಳಿಗೆ ಮತ್ತು ಶ್ರೇಯೋಭಿವೃದ್ಧಿಗೆ ಪೂರಕವಾಗಲಿದೆ’ ಎಂದು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಭಿನವಕುಮಾರ ಚನ್ನಬಸವ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ಗುರುವಾರ ನಡೆದ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿಶ್ವದಲ್ಲಿ ಮೊಟ್ಟ ಮೊದಲು ಮಹಿಳಾ ಸೈನ್ಯ ಕಟ್ಟುವ ಮೂಲಕ ಆಡಳಿತ ನಡೆಸಿದ ಕೆಳದಿ ಚನ್ನಮ್ಮ, ಬ್ರಿಟಿಷರ ವಿರುದ್ದ ಹೋರಾಡಿದ ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕೀರ್ತಿ ಹೆಚ್ಚಿಸುವ ಜೊತೆಗೆ, ತಮ್ಮ ಬಲಿದಾನ ಮಾಡಿಕೊಂಡಿದ್ದಾರೆ. ಸಾಮಾಜಿಕ ಕ್ರಾಂತಿಕಾರ ಬಸವಣ್ಣ, ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕನ್ನಡ ಪರಂಪರೆಗೆ ವಿಶೇಷ ಕೊಡುಗೆ ನೀಡಿದ್ದಾರೆ’ ಎಂದು ನೆನೆದರು.

ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ, ‘ಕನ್ನಡ ಭಾಷೆಯಲ್ಲಿ ತಾಯಿಯ ಮಮಕಾರವಿದ್ದು, ಕನ್ನಡ ಸಾಹಿತ್ಯ ಸಮ್ಮೇಳನಗಳು ಅಕ್ಷರ ಮಾಲೆ, ಜಾತ್ರೆ ಹಬ್ಬವಾಗಿ ಸಂಭ್ರಮಿಸುವುದನ್ನು ಕಾಣುತ್ತೇವೆ’ ಎಂದು ವಿಷಾದಿಸಿದರು.

ಪ್ರತಿಜ್ಞೆ ಮಾಡಬೇಕು: ‘ಭ್ರಷ್ಟಾಚಾರ, ನಿರುದ್ಯೋಗ, ಬಡತನ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯಲು ನಾವೆಲ್ಲ ಪ್ರತಿಜ್ಞೆ ಮಾಡಬೇಕಾಗಿದೆ. ಮಾತೃ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಕನ್ನಡ ಶಾಲೆಗಳ ಉಳಿವಿಗೆ ಶ್ರಮಿಸಬೇಕು. ಮಹದಾಯಿವಿವಾದ ಇತ್ಯರ್ಥಕ್ಕಾಗಿ ರಾಜಕಾರಣಿಗಳು ಮುಂದಾಗಬೇಕು’ ಎಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಮಂಜುನಾಥ ಕುನ್ನೂರ, ‘ಬೇಡ್ತಿ ನದಿ ಜೋಡಣೆ ಮಾಡಿ ರೈತರಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಿದಾಗ ಮಾತ್ರ, ಈ ಭಾಗದ ರೈತರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು. ಶಾಸಕ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ, ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ, ನಿಕಟಪೂರ್ವ ಅಧ್ಯಕ್ಷ ಎಸ್‌.ಬಿ. ಅಂಗಡಿ ಹಾಗೂ ಪುರ ಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ ಇದ್ದರು.

ಕವಿಗೋಷ್ಠಿ: ಕವಿಗಳಾದ ವಿ.ಎಸ್‌. ಮಡ್ಲಿಮಠ, ಬಿ.ಎಸ್‌. ಬಣಕಾರ, ಉಷಾ ಪಾಟೀಲ, ಪರಮೇಶ ಬಾರಂಗಿ, ಪ್ರೊ. ಸುಜಾತಾ ದೇವರಮನಿ, ಸಿ.ಎನ್‌. ಶಿಗ್ಗಾವಿ, ಎಂ.ಬಿ. ದೊಡ್ಡಮನಿ, ಶಕುಂತಲಾ ಕೋಣಿನವರ, ಲಕ್ಷ್ಮೀಕಾಂತ ಮಿರಜಕರ, ಮಂಜು ಕೂಲಿ, ಮಂಜುಳಾ ಪಾಟೀಲ, ದುಡದಯ್ಯ ನಾಗನೂರ, ಜಿ.ಎಂ. ಅರಗೋಳ, ಸಿ.ಎಚ್‌. ಸೋಮನಕಟ್ಟಿ, ಗುರುರಾಜ ಹುಚ್ಚಣ್ಣವರ ಕವಿತೆ ವಾಚಿಸಿದರು. ಸಾಹಿತಿ ಶಿವನಗೌಡ ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರೊ. ರಂಜಾನ ಕಿಲ್ಲೇದಾರ ಆಶಯ ನುಡಿ ವ್ಯಕ್ತಪಡಿಸಿದರು.

ಸೆಳೆದ ಮೆರವಣಿಗೆ: ಸಂತೆ ಮೈದಾನದಿಂದ ಸಾವಿರಾರು ಕನ್ನಡಾಭಿಮಾನಿಗಳ ಕನ್ನಡ ಘೋಷಣೆಗಳೊಂದಿಗೆ ಸಮ್ಮೇಳನಾಧ್ಯಕ್ಷ ಹುಲಗೂರಿನ ಓಲೇಮಠದ ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ವೇದಿಕೆ ತರಲಾಯಿತು. ರಾಷ್ಟ್ರ ನಾಯಕರ ಪೋಷಾಕಿನಲ್ಲಿದ್ದ ವಿದ್ಯಾರ್ಥಿಗಳು, ಪೂರ್ಣಕುಂಭದೊಂದಿಗೆ ಹೆಜ್ಜೆ ಹಾಕಿದ ಮಹಿಳೆಯರು, ಡೊಳ್ಳು ಮತ್ತು ಕುದರಿ ಕುಣಿತ, ಝಾಂಜಮೇಳ, ಭಜನೆ ಸೇರಿದಂತೆ ವಿವಿಧ ವಾದ್ಯವೈಭವದೊಂದಿಗೆ ಮೆರವಣಿಗೆ ಮೆರುಗು ನೀಡಿತು.

‘ಬದುಕು ರೂಪಿಸುವ ಶಿಕ್ಷಣ ಬೇಕು’

‘ಮಕ್ಕಳಿಗೆ ಅಂಕ ಗಳಿಸುವ ಶಿಕ್ಷಣದ ಬದಲಿಗೆ, ಬದುಕು ರೂಪಿಸುವ ನೀಡಬೇಕಾದ ಅಗತ್ಯವಿದೆ’ ಎಂದು ಸಾಹಿತಿ ಡಾ. ಎಚ್‌.ಎಸ್‌. ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಸಮ್ಮೇಳನದಲ್ಲಿ ‘ಶೈಕ್ಷಣಿಕ ಕ್ಷೇತ್ರದ ಸವಾಲುಗಳು‘ ಎಂಬ ವಿಷಯ ಕುರಿತು ಮಾತನಾಡಿದ ಅವರು, ‘ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಜೈಲುಗಳಾಗಿವೆ. ಪಾಲಕರು ತಮ್ಮ ಪ್ರತಿಷ್ಠೆಗಾಗಿ ಕೊಡಿಸುವ ಶಿಕ್ಷಣ ಮಕ್ಕಳಿಗೆ ಶಿಕ್ಷೆಯಾಗಿ ಪರಿಣಮಿಸುುತ್ತಿದೆ’ ಎಂದರು.

ಸಾಹಿತಿ ಡಾ. ವೈ.ಎಂ. ಯಾಕೊಳ್ಳಿ, ‘ಸಾಹಿತ್ಯ ಮತ್ತು ಸಾಮರಸ್ಯ’ ವಿಷಯ ಹಾಗೂ ಡಾ. ಬಸು ಬೇವಿನಗಿಡದ ‘ಜಾನಪದ ಕಲೆ ಹಾಗೂ ಸಾಮಾಜಿಕ ಪ್ರಜ್ಞೆ‘ ವಿಷಯ ಕುರಿತು ಮಾತನಾಡಿದರು. ಜಾನಪದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಡಿ.ಬಿ. ನಾಯಕ ಅಧ್ಯಕ್ಷತೆ ವಹಿಸಿದ್ದರು.

ಪ್ರತಿಕ್ರಿಯಿಸಿ (+)