ಶುಕ್ರವಾರ, ಡಿಸೆಂಬರ್ 6, 2019
24 °C

ಊರಿನ ಹೆಸರಿನ ಸಾರಿನ ಘಮಲು

Published:
Updated:
ಊರಿನ ಹೆಸರಿನ ಸಾರಿನ ಘಮಲು

ಧಾರವಾಡ ಪೇಡ, ಮೈಸೂರು ಪಾಕ್, ದಾವಣಗೆರೆ ಬೆಣ್ಣೆದೋಸೆ – ಹೀಗೆ ಊರಿನ ಹೆಸರಿನ ತಿಂಡಿಗಳನ್ನು ಕೇಳಿದ್ದೇವೆ. ಹಾಗೆಯೇ ಊರಿನ ಹೆಸರಿನಲ್ಲಿ ಸಾರು, ಸಾಂಬಾರುಗಳು ಇವೆ ಎಂಬುದು ನಿಮಗೆ ತಿಳಿದಿದೆಯಾ? ಇಲ್ಲಿವೆ ಅಂತಹ ಕೆಲವು ಸಾರುಗಳು. ತರಕಾರಿಪ್ರಿಯರಿಗೆ ಇಷ್ಟವಾಗುವ ಈ ಸಾರು–ಸಾಂಬಾರುಗಳನ್ನು ಮಾಡುವ ವಿಧಾನವನ್ನು ಓದಿದರೆ ಬಾಯಲ್ಲಿ ನೀರೂರುತ್ತದೆ; ಇನ್ನು ಇದನ್ನು ನೀವೇ ಮನೆಯಲ್ಲಿ ತಯಾರಿಸಿ ತಿಂದರೆ ಹೇಗಿರಬಹುದು?. ಹೌದು, ರುಚಿರುಚಿಯಾದ ಅಂಥ ಸಾರುಗಳನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ, ಅಹಲ್ಯ ಎಂ.

**

ಮದ್ರಾಸ್ ಸಾರು

ಬೇಕಾಗುವ ಸಾಮಗ್ರಿಗಳು: ಹಣ್ಣಾಗಿರುವ ನಾಟಿ ಟೊಮೆಟೊ – 2, ಕೊತ್ತಂಬರಿಸೊಪ್ಪು – 3ಕಡ್ಡಿ, ಬೆಳ್ಳುಳ್ಳಿ – 2ಎಸಳು, ಕರಿಬೇವು – 5ಎಲೆ, ಇಂಗು – ಚಿಟಿಕೆ, ರುಚಿಗೆ – ಉಪ್ಪು, ಸಾರಿನ ಮೆಣಸಿನಪುಡಿ – 1/2ಚಮಚ, ಹಸಿಮೆಣಸು – 5, ಬೆಲ್ಲ – ಚೂರು, ಹುಣಸೆರಸ – 1/2ಚಮಚ, ತುಪ್ಪ ಹಾಗೂ ಸಾಸಿವೆ – ಸ್ವಲ್ಪ.

ತಯಾರಿಸುವ ವಿಧಾನ: ಸಾಸಿವೆ, ತುಪ್ಪ, ಕರಿಬೇವು ಹೊರತು ಮೇಲೆ ತಿಳಿಸಿರುವ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಕೈಯಲ್ಲೇ ಚೆನ್ನಾಗಿ ಹಿಸುಕಬೇಕು. ಕೊನೆಗೆ ಸಿಪ್ಪೆ ಇದ್ದರೆ ತೆಗೆದು ತಯಾರಿಸಿದ ರಸಕ್ಕೆ ತುಪ್ಪದಲ್ಲಿ ಸಾಸಿವೆ ಸಿಡಿಸಿ ಕರಿಬೇವನ್ನು ಹಾಕಿ ಕುದಿಸಬೇಕು. ಬೇಕಾದರೆ ಸ್ಪಲ್ಪ ನೀರನ್ನು ಸೇರಿಸಿದರೆ ಸವಿಯಲು ಮದ್ರಾಸ್ ಸಾರು ರೆಡಿ.

**

ಮೈಸೂರು ಸಾರು

ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ – 1/4ಕಪ್‌, ಹುಣಸೆಹಣ್ಣು – ನಿಂಬೆಗಾತ್ರ, ಚೂರು ಮಾಡಿದ ಟೊಮೆಟೊ – 1, ಅರಿಸಿನಪುಡಿ – 1/4ಚಮಚ, ರಸಂಪುಡಿ – 2ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು – 2ಚಮಚ, ಉಪ್ಪು – ರುಚಿಗೆ, ಎಣ್ಣೆ – 1ಚಮಚ, ಸಾಸಿವೆ ಹಾಗೂ ಜೀರಿಗೆ – 1/4ಚಮಚ, ಕರಿಬೇವು  – 6, ಒಣಮೆಣಸಿನಕಾಯಿ – 2, ಚಿಟಿಕೆ – ಇಂಗು

ತಯಾರಿಸುವ ವಿಧಾನ: ಎರಡು ಬಟ್ಟಲು ನೀರಿನಲ್ಲಿ ಹುಣಸೆಹಣ್ಣು ನೆನೆಸಬೇಕು. ಬೇಳೆಯನ್ನು ತೊಳೆದು ನೀರಿರುವ ಪಾತ್ರೆಗೆ ಹಾಕಿ. ಅರಿಸಿನ ಮತ್ತು 1/2ಚಮಚ ಎಣ್ಣೆ ಹಾಕಿ ಪಾತ್ರೆಯನ್ನು ಕುಕ್ಕರಿನಲ್ಲಿಟ್ಟು ಬೇಯಿಸಿ. ಮೂರು ವಿಶಲ್ ಹಾಕಿಸಿ. ತಣಿದ ನಂತರ ಬೇಳೆಯನ್ನು ಚೆನ್ನಾಗಿ ನೀರಿನಲ್ಲಿ ಬೆರೆಸಿ.

ಒಂದು ಗಂಟೆಯ ನಂತರ ಬೇಳೆ ನೀರನ್ನು ಬೇರೆ ಪಾತ್ರೆಗೆ ಹಾಕಿ. ಹುಣಸೆ ನೀರನ್ನು ಬಾಣಲೆಗೆ ಹಾಕಿ, ಅದಕ್ಕೆ ಚೂರು ಮಾಡಿದ ಟೊಮೆಟೊ ಹಾಕಿ ಚೆನ್ನಾಗಿ ಕುದಿಸಿ, ಬೆಂದ ಬೇಳೆ ನೀರನ್ನು ಹುಣಸೆಹಣ್ಣಿನ ಮಿಶ್ರಣಕ್ಕೆ ಸೇರಿಸಿ, ಕುದಿಸಿ. ನಂತರ ಸಾರಿನ ಪುಡಿ ಹಾಕಿ ಕುದಿಸಿ. ಐದು ನಿಮಿಷಗಳ ನಂತರ ಸಾರಿನ ಪಾತ್ರೆಯನ್ನು ಕೆಳಗಿಳಿಸಿ. ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಜೀರಿಗೆ, ಒಣಮೆಣಸು, ಇಂಗು ಮತ್ತು ಕರಿಬೇವನ್ನು ಹಾಕಿ ಸಿಡಿಸಿ ಸಾರಿಗೆ ಹಾಕಿ, ಅನಂತರ ಉಪ್ಪನ್ನು ಹಾಕಿ ಚೆನ್ನಾಗಿ ಕಲೆಸಿ. ಕೊತ್ತಂಬರಿಸೊಪ್ಪನ್ನು ಅಲಂಕರಿಸಿ.

**

ಉಡುಪಿ ಸಾಂಬಾರು

ಬೇಕಾಗುವ ಸಾಮಗ್ರಿಗಳು: ಬೆಂದ ತರಕಾರಿಗಳು – 1ಕಪ್‌, ತೊಗರಿಬೇಳೆ – 3/4ಕಪ್‌, ನೀರು – 600 ಮಿ.ಲೀ., ಹುಣಸೆಹಣ್ಣಿನರಸ – 2ಚಮಚ, ಅರಿಸಿನಪುಡಿ – 1/2ಚಮಚ, ಸಾಂಬಾರುಪುಡಿ – 2ಚಮಚ, ತುರಿದ ತೆಂಗಿನಕಾಯಿ – 1ಚಮಚ, ಬೆಲ್ಲದ ಪುಡಿ – 1ಚಮಚ, ಉಪ್ಪು – ರುಚಿಗೆ, ಎಣ್ಣೆ – 1ಚಮಚ, ಸಾಸಿವೆ – 1/4ಚಮಚ, ಕರಿಬೇವು – 1ಕಡ್ಡಿ, ಕೊತ್ತಂಬರಿಸೊಪ್ಪು – 1ಚಮಚ

 

ತಯಾರಿಸುವ ವಿಧಾನ: ಪಾತ್ರೆಯಲ್ಲಿ ನೀರು, ಬೇಳೆ, ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿ. ಸಾಂಬಾರ್ ಪುಡಿ, ತೆಂಗಿನಕಾಯಿ ತುರಿ, ಬೆಲ್ಲವನ್ನು ಸೇರಿಸಿ ಮಿಕ್ಸಿ ಮಾಡಿ ಬೇಯಿಸಿದ ಬೇಳೆಗೆ ಹಾಕಿ ಕುದಿಸಿ. ಇದಕ್ಕೆ ಬೇಯಿಸಿದ ತರಕಾರಿಯನ್ನು ಹಾಕಿ ಮಿಶ್ರಣ ಮಾಡಿ. ಹುಣಸೆರಸವನ್ನು ಮತ್ತು ಉಪ್ಪನ್ನು ಸೇರಿಸಿ ಕುದಿಸಿ ಇಳಿಸಿರಿ. ಎಣ್ಣೆಯನ್ನು ಬಿಸಿಮಾಡಿ ಸಾಸಿವೆಯನ್ನು ಸಿಡಿಸಿ ಹಾಕಿ ಮತ್ತು ಕರಿಬೇವನ್ನು ಹಾಕಿ ಕುದಿಸಿ. ನಂತರ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಇದು ಅನ್ನ, ದೋಸೆ ಮತ್ತು ಇಡ್ಲಿಗೆ ಹೊಂದುತ್ತದೆ.

**

ಹುಣಸೆಹಣ್ಣಿನ ರಸ

ಬೇಕಾಗುವ ಸಾಮಗ್ರಿಗಳು: ಹುಣಸೆಹಣ್ಣು – ಒಂದು ಚಿಕ್ಕ ನಿಂಬೆ ಗಾತ್ರ, ಉಪ್ಪು – ರುಚಿಗೆ, ಬೆಲ್ಲ – ಚಿಕ್ಕ ನಿಂಬೆಗಾತ್ರ, ಹಸಿಮೆಣಸು – 3ರಿಂದ 4, ಸಾಸಿವೆ ಹಾಗೂ ತುಪ್ಪ – ಸ್ವಲ್ಪ.

ತಯಾರಿಸುವ ವಿಧಾನ: ಹುಣಸೆಹಣ್ಣು, ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ನೆನೆಸಿ. ಸ್ವಲ್ಪ ಸಮಯದ ನಂತರ ಅದನ್ನು ಹಿಂಡಿ ರಸ ತೆಗೆದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಹಸಿಮೆಣಸನ್ನು ಚೂರು ಮಾಡಿ. ನಂತರ ತುಪ್ಪ ಕಾಯಿಸಿ ಸಾಸಿವೆಯನ್ನು ಒಗ್ಗರಿಸಿ ಸೇರಿಸಿದರೆ ರೆಡಿ.

**

ನಿಂಬೆಹಣ್ಣಿನ ಸಾರು

ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ – 1/2ಕಪ್‌, ಹಸಿಮೆಣಸು – 8, ಉಪ್ಪು – ರುಚಿಗೆ, ಜೀರಿಗೆ – 1/2ಚಮಚ, ಕಾಳುಮೆಣಸಿನ ಪುಡಿ – 4, ನಿಂಬೆಹಣ್ಣಿನ ರಸ – 1/2ಚಮಚ, ಕರಿಬೇವು – 1ಕಡ್ಡಿ, ಸಾಸಿವೆ – 1/4ಚಮಚ, ತುಪ್ಪ ಹಾಗೂ ಅರಿಸಿನಪುಡಿ – ಸ್ವಲ್ಪ

ತಯಾರಿಸುವ ವಿಧಾನ: ಸಾಕಷ್ಟು ನೀರಿಗೆ ಬೇಳೆ, ಅರಿಶಿನಪುಡಿ, ತುಪ್ಪ ಹಾಗೂ ಹಸಿಮೆಣಸನ್ನು ಮಧ್ಯಕ್ಕೆ ಸೀಳಿ ನೀರಿನೊಂದಿಗೆ ಹಾಕಿ ಬೇಯಿಸಿ. ತುಪ್ಪ ಬಿಸಿಮಾಡಿ ಸಾಸಿವೆ, ಕಾಳುಮೆಣಸಿನಪುಡಿ, ಜೀರಿಗೆಯನ್ನು ಒಗ್ಗರಿಸಿ ಹಾಕಿ. ಕರಿಬೇವನ್ನು ಹಾಕಿ ಕುದಿಸಿ. ತಣಿದ ನಂತರ ನಿಂಬೆರಸವನ್ನು ಸೇರಿಸಿದರೆ, ಅನ್ನದೊಂದಿಗೆ ಸವಿಯಲು ಸಿದ್ಧ.

ಪ್ರತಿಕ್ರಿಯಿಸಿ (+)