ಸೋಮವಾರ, ಡಿಸೆಂಬರ್ 9, 2019
21 °C

ತರ್ಕ ಬಿಡಿ, ನಕ್ಕುಬಿಡಿ

Published:
Updated:
ತರ್ಕ ಬಿಡಿ, ನಕ್ಕುಬಿಡಿ

ಚಿತ್ರ: ಚಲೋ (ತೆಲುಗು)

ನಿರ್ಮಾಣ: ಉಷಾ ಮುಲ್ಪುರಿ

ನಿರ್ದೇಶನ: ವೆಂಕಿ ಕುದುಮುಲಾ

ತಾರಾಗಣ: ನಾಗ ಶೌರ್ಯ, ರಶ್ಮಿಕಾ ಮಂದಣ್ಣ, ಅಚ್ಯುತ್ ಕುಮಾರ್, ನರೇಶ್, ವಿವಾ ಹರ್ಷ, ರಘು ಬಾಬು

‘ಮರ್ಯಾದಾ ರಾಮಣ್ಣ’ ಸಿನಿಮಾದಲ್ಲಿ ರಾಜಮೌಳಿ ಏನನ್ನು ತೋರಿದ್ದರೋ ಅದನ್ನೇ ಭಿನ್ನವಾಗಿ ಕಟ್ಟಿಕೊಡಲು ನಿರ್ದೇಶಕ ವೆಂಕಿ ಕುದುಮುಲಾ ಯತ್ನಿಸಿದ್ದಾರೆ. ಚೊಚ್ಚಿಲ ಚಿತ್ರದಲ್ಲೇ ತೆಲುಗು ಸಿನಿಮಾಗಳ ಜನಪ್ರಿಯ ಸೂತ್ರವನ್ನು ಅವರು ಹಿಡಿದಿರುವ ರೀತಿಯನ್ನು ಕೆಲವು ಲೋಪಗಳ ಮನ್ನಿಸಿಯೂ ಗುರುತಿಸಬಹುದು.

ಚಿತ್ರದ ನಾಯಕ ಅಪ್ಪ–ಅಮ್ಮನ ಮುದ್ದಿನ ಕೂಸು. ಎಲ್ಲರಿಗೂ ಏಟು ಕೊಟ್ಟು ಖುಷಿ ಪಡುವ ಮನಸ್ಥಿತಿಯನ್ನು ಅಪ್ಪ ಬೆಳೆಸಿಬಿಡುತ್ತಾನೆ. ಮುಂದೆ ಅವನು ಪುಂಡನಾದದ್ದೇ ತಿದ್ದುವ ಕೆಲಸವೂ ಅವರ ಹೆಗಲಿಗೇ ಬರುತ್ತದೆ. ಅವರು ಮಗನನ್ನು ತೆಲುಗು, ತಮಿಳು ಬಹು ಸಂಸ್ಕೃತಿ ಇರುವ ಊರಿನ ಕಾಲೇಜಿಗೆ ಕಳುಹಿಸುತ್ತಾರೆ. ಅಲ್ಲಿ ತೆಲುಗು, ತಮಿಳರಿಗೆ ಪರಸ್ಪರ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದು. ಇಡೀ ಊರಿನ ನಡುವೆ ಮುಳ್ಳುಬೇಲಿ ಇರುತ್ತದೆ. ಬೇಲಿಯ ಒಂದು ಭಾಗ ತಮಿಳರದ್ದು, ಇನ್ನೊಂದು ತೆಲುಗರದ್ದು. ತಮ್ಮದಲ್ಲದ ಭಾಗಕ್ಕೆ ಕಾಲಿಟ್ಟರೆ ಲಾಂಗುಗಳು ಮಾತನಾಡುವಂಥ ಊರು ಅದು. ಅಂಥ ದ್ವೇಷಮಯ ವಾತಾವರಣದಲ್ಲಿ ತೆಲುಗು ನಾಯಕ ತಮಿಳು ಹುಡುಗಿಯನ್ನು ಪ್ರೀತಿಸುವ ರೋಚಕ ಕಥೆ ಚಿತ್ರದ್ದು.

ಈ ಕಥೆಯನ್ನು ಬೇರೆ ಬೇರೆ ಶೈಲಿಗಳಲ್ಲಿ ಹೇಳಬಹುದಿತ್ತು. ಕ್ರೌರ್ಯ, ಅತಿ ಕ್ರೌರ್ಯ ಎರಡೂ ಸುಲಭದ ದಾರಿಗಳು. ಆದರೆ, ವೆಂಕಿ ಆರಿಸಿಕೊಂಡಿರುವುದು ಹಾಸ್ಯದ ದಾರಿಯನ್ನು. ಹೀಗಾಗಿ ಚಿತ್ರಕಥೆ ಬರೆಯುವಾಗ ಅವರು ಹೆಚ್ಚೇ ಬುದ್ಧಿ ಖರ್ಚು ಮಾಡಬೇಕಾಗಿ ಬಂದಿದೆ. ಅಲ್ಲಲ್ಲಿ ಹಾಡುಗಳಿವೆ, ಫೈಟುಗಳೂ ಇವೆ. ಕಣ್ಣು ಕೀಲಿಸಿಕೊಳ್ಳಲಿ ಸೊಗಸುಗಾರ ನಾಯಕ, ಮುದ್ದಾದ ನಾಯಕಿ ಇದ್ದಾರೆ. ಕಚಗುಳಿ ಇಡುವ ಪಂಚಿಂಗ್ ಸಂಭಾಷಣೆಗಳೂ ಇವೆ.

‘ಮರ್ಯಾದಾ ರಾಮಣ್ಣ’ ಚಿತ್ರದಲ್ಲಿ ರಾಜಮೌಳಿ ಹೆಚ್ಚೇ ಬಿಗಿಯಾಗಿ ಹಾಸ್ಯರಸವನ್ನು ಉಕ್ಕಿಸಿದ್ದರು. ಇಲ್ಲಿ ವೆಂಕಿ ಅವರಿಗೆ ಅಷ್ಟು ಹಿಡಿತ ಸಿಕ್ಕಿಲ್ಲ. ಆದರೆ, ತಲೆಬುಡವಿಲ್ಲದ ರಂಜನೆಯನ್ನು ಆಸ್ವಾದಿಸುವವರಿಗೆ ಏನು ಬೇಕು ಎನ್ನುವುದನ್ನು ಅವರು ಅರಿತಂತಿದೆ.

ಸಿನಿಮಾ ಅಲ್ಲಲ್ಲಿ ಎಳೆದಂತಾಗಿದೆ. ತರ್ಕವನ್ನು ಪೂರ್ತಿ ಪಕ್ಕಕ್ಕೆ ಇಡಬೇಕು. ಮಹತಿ ಸ್ವರ ಸಾಗರ್ ಸ್ವರ ಸಂಯೋಜನೆಯ ಹಾಡುಗಳಲ್ಲಿ ಪೂರ್ಣ ಸ್ವಂತಿಕೆ ಇಲ್ಲದಿದ್ದರೂ ಕರ್ಣಾನಂದ ನೀಡುತ್ತವೆ. ಸಾಯಿ ಶ್ರೀರಾಮ್ ಛಾಯಾಗ್ರಹಣ ಸಿನಿಮಾವನ್ನು ಕಳೆಗಟ್ಟಿಸಿದೆ.

ನಾಯಕ ನಾಗ ಶೌರ್ಯ ತಣ್ಣನೆಯ ಅಭಿನಯದಿಂದ ಆವರಿಸಿಕೊಂಡಿದ್ದಾರೆ. ಕನ್ನಡತಿ ರಶ್ಮಿ ಮಂದಣ್ಣ ಅವರಿಂದಲೂ ಒಂದಿಷ್ಟು ಅಭಿನಯ ತೆಗೆಸಿರುವುದು ನಿರ್ದೇಶಕರ ಜಾಣ್ಮೆಗೆ ಸಾಕ್ಷಿ. ಅವರ ಕಣ್ಣ ಮಾತುಗಳನ್ನು ನಿರ್ದೇಶಕರು ಹೃದಯಕ್ಕೆ ದಾಟಿಸಿದ್ದಾರೆ. ಕನ್ನಡದವರೇ ಆದ ಅಚ್ಯುತ್ ಕುಮಾರ್ ಕೂಡ ಮುಖ್ಯ ಪಾತ್ರಕ್ಕೆ ಅರ್ಥ ಕೊಟ್ಟಿದ್ದಾರೆ.

‘ಬಾಲಿಶ’ ಎಂದು ತಳ್ಳಿಹಾಕಬಹುದಾದ ವಸ್ತುವನ್ನೂ ನೋಡುವಂತೆ ಮಾಡುವುದು ತಮಾಷೆಯಲ್ಲ. ಹೀಗಾಗಿ ವೆಂಕಿ ಅವರಿಗೆ ಶಹಬ್ಬಾಸ್ ಹೇಳಬಹುದು.

ಪ್ರತಿಕ್ರಿಯಿಸಿ (+)