ಸೋಮವಾರ, ಡಿಸೆಂಬರ್ 9, 2019
21 °C

ಒಳ್ಳೆಯ ಹುಡುಗನ ‘ಪ್ರಥಮ’ ಸಿನಿಮಾ

Published:
Updated:
ಒಳ್ಳೆಯ ಹುಡುಗನ ‘ಪ್ರಥಮ’ ಸಿನಿಮಾ

ಸಿನಿಮಾ: ದೇವ್ರಂಥ ಮನುಷ್ಯ

ನಿರ್ದೇಶನ: ಕಿರಣ್ ಶೆಟ್ಟಿ

ಸಂಗೀತ: ಪ್ರದ್ಯೋತನ್

ನಿರ್ಮಾಣ: ಎಚ್.ಸಿ. ಮಂಜುನಾಥ್

ತಾರಾಗಣ: ಪ್ರಥಮ್, ಶ್ರುತಿ, ವೈಷ್ಣವಿ, ಸುಚೇಂದ್ರ ಪ್ರಸಾದ್, ತಬಲಾ ನಾಣಿ

*

ಮದ್ಯಕ್ಕೊಂದು ಗುಣವಿದೆ. ಆರಂಭದಲ್ಲಿ ಅದು ತುಸು ಒಗರೊಗರಾಗಿ ಕಂಡರೂ, ಅದರ ಜೊತೆಗಿನ ಸಖ್ಯ ಮುಂದುವರಿದಂತೆಲ್ಲಾ ಅದು ಸಿಹಿಯಾಗುತ್ತ ಹೋಗುತ್ತದೆ! ಅದರ ಸಖ್ಯದಲ್ಲಿ ಇರುವವ ಅದನ್ನು ಇಷ್ಟಪಡುತ್ತಾ ಹೋಗುತ್ತಾನೆ. ಹೀಗಿದ್ದರೂ, ಅದು ಹಲವರ ಪಾಲಿಗೆ ಯಾವತ್ತಿಗೂ ಇಷ್ಟವಾಗದೆ ಇರುವ ಸಾಧ್ಯತೆಯಂತೂ ಖಂಡಿತ ಇದೆ.

ಇದೇ ಮಾತನ್ನು ‘ಒಳ್ಳೆಯ ಹುಡುಗ’ ಪ್ರಥಮ್ ಅವರ ಮೊದಲ ಸಿನಿಮಾ ‘ದೇವ್ರಂಥ ಮನುಷ್ಯ’ ಬಗ್ಗೆಯೂ ಹೇಳಲು ಅಡ್ಡಿಯಿಲ್ಲ. ಈ ಸಿನಿಮಾದ ಕೇಂದ್ರ ಭಾಗದಲ್ಲಿ ಇರುವುದು ಪ್ರಥಮ್, ಪ್ರೀತಿ ಮತ್ತು ಮದ್ಯ. ಹಾಗಾಗಿ ಸಿನಿಮಾದ ಸೊಗಡನ್ನು ಮದ್ಯದ ಜೊತೆ ಹೋಲಿಕೆ ಮಾಡುವುದು ತಪ್ಪಾಗಲಿಕ್ಕಿಲ್ಲ!

ಪ್ರಥಮ್‌ ಈ ಸಿನಿಮಾದಲ್ಲಿ ಆರು ಬಾರ್‌ಗಳ ಮಾಲೀಕನ ಮಗ. ಈತನ ವ್ಯಕ್ತಿತ್ವದಲ್ಲಿ ತಿಕ್ಕಲುತನ ಹಾಸುಹೊಕ್ಕಾಗಿರುತ್ತದೆ. ಸಂಜೆಯ ನಂತರ ಮದ್ಯಕ್ಕಾಗಿ ಯಾರನ್ನು ಬೇಕಿದ್ದರೂ ಯಾಮಾರಿಸಬಲ್ಲ ಚಾಲಾಕಿ ಈ ‘ದೇವ್ರಂಥ ಮನುಷ್ಯ’. ಹಾಗೆಯೇ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಗುಣವೂ ಢಾಳಾಗಿ ಇರುತ್ತದೆ. ಒಟ್ಟಿನಲ್ಲಿ, ಈತ ಸಂಜೆಯ ನಂತರ ಸಿಗಬಾರದ ವ್ಯಕ್ತಿ.

ಇಂತಿಪ್ಪ ವ್ಯಕ್ತಿಯ ಬಗ್ಗೆ ಒಂದಿಷ್ಟು ಮಾತುಗಳನ್ನು ಕೇಳಿ ಗೀತಾ ಎನ್ನುವವಳು (ವೈಷ್ಣವಿ) ‘ನಾನು ಇವನನ್ನೇ ಮದುವೆ ಆಗುವುದು’ ಎಂಬ ಹಟಕ್ಕೆ ಬೀಳುತ್ತಾಳೆ. ಪ್ರಥಮ್‌ ಮತ್ತು ಗೀತಾ ನಡುವೆ ಪ್ರೀತಿ ಚಿಗುರುತ್ತದೆ, ಬೆಳೆಯುತ್ತದೆ. ಇವೆಲ್ಲದರ ನಡುವೆ ಒಂದಿಷ್ಟು ಹಾಸ್ಯ, ಚಿಕ್ಕ–ಪುಟ್ಟ ಹೊಡೆದಾಟದ ದೃಶ್ಯಗಳು, ಬಾರ್‌ನಲ್ಲಿನ ಹಾಡುಗಳು ಇವೆ.

ಮಳೆ ಬರುತ್ತಿದ್ದ ಹೊತ್ತಿನಲ್ಲಿ ಒಂದು ಬಾರ್‌ನಲ್ಲಿ ಭೇಟಿಯಾಗಿ ಸ್ನೇಹಿತರಾಗುವ ತಬಲಾ ನಾಣಿ ಮತ್ತು ಸುಚೇಂದ್ರ ಪ್ರಸಾದ್ ಅವರು ಒಂದಿಷ್ಟು ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ತಬಲಾ ನಾಣಿ ಅವರು ಪ್ರೇಮಿಗಳನ್ನು ಒಂದುಮಾಡುವ ಕೆಲಸವನ್ನೂ ಮಾಡುತ್ತಾರೆ – ಸುಚೇಂದ್ರ ಪ್ರಸಾದ್ ಅವರು ಈ ಕೆಲಸದಲ್ಲಿ ತುಸು ಸಹಾಯ ಮಾಡುತ್ತಾರೆ.

ಬಿಗ್‌ ಬಾಸ್‌ ರಿಯಾಲಿಟಿ ಕಾರ್ಯಕ್ರಮದ ಮೂಲಕ ಮನೆಮಾತಾದವರು ಪ್ರಥಮ್. ಅವರನ್ನು ತೆರೆಯ ಮೇಲೆ ಇಷ್ಟಪಡುವ ವೀಕ್ಷಕ ವರ್ಗವೊಂದು ಇದೆ. ಆ ವೀಕ್ಷಕ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿದಂತಿದೆ. ಸಿನಿಮಾದಲ್ಲಿನ ಪ್ರಥಮ್ ‍ಪಾತ್ರ ಹೇಳುವ ಕೆಲವು ಡೈಲಾಗ್‌ಗಳನ್ನು ಈ ಮಾತಿಗೆ ಪೂರಕವಾಗಿ ಉಲ್ಲೇಖಿಸಬಹುದು.

ಹಾಡುಗಳು ಅಥವಾ ಕ್ಯಾಮೆರಾ ಮೂಲಕ ಕಟ್ಟಿಕೊಡುವ ದೃಶ್ಯಗಳಿಗಾಗಿ ನೋಡುವಂತಹ ಸಿನಿಮಾ ಇದಲ್ಲ. ಪ್ರಥಮ್‌ ಅವರನ್ನು ತೆರೆಯ ಮೇಲೆ ಕಾಣಬಯಸುವವರಿಗೆ ಈ ಸಿನಿಮಾ.

ಪ್ರತಿಕ್ರಿಯಿಸಿ (+)