ಶುಕ್ರವಾರ, ಡಿಸೆಂಬರ್ 6, 2019
24 °C

‘ನಗರದಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚುತ್ತಿದೆ’

Published:
Updated:
‘ನಗರದಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚುತ್ತಿದೆ’

ಬೆಂಗಳೂರಿನಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿರುವ ಕ್ಯಾನ್ಸರ್‌ಗಳು ಯಾವುವು?

ಸ್ತನದ ಕ್ಯಾನ್ಸರ್‌ ಮತ್ತು ತಂಬಾಕು ಸೇವನೆಯಿಂದ ಬರುವ ಕ್ಯಾನ್ಸರ್‌ಗಳು ಬೆಂಗಳೂರಿನಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿವೆ. ಸಾಮಾನ್ಯವಾಗಿ ಋತುಬಂಧದ ವಯಸ್ಸಿನಲ್ಲಿ ಕಂಡುಬರುತ್ತಿದ್ದ ಸ್ತನದ ಕ್ಯಾನ್ಸರ್‌ ಈಗಿನ ಜೀವನಶೈಲಿಯಿಂದಾಗಿ 35ರಿಂದ 50ನೇ ವಯಸ್ಸಿಗೇ ಪತ್ತೆಯಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೇ ಈ ಪ್ರಮಾಣ ಹೆಚ್ಚುತ್ತಿದೆ. ಬಾಯಿಯಲ್ಲಿ ತಂಬಾಕು ಜಗಿಯುವುದರಿಂದಾಗಿ ಬಾಯಿಯ ಕ್ಯಾನ್ಸರ್‌ ಅತ್ಯಂತ ಸಾಮಾನ್ಯವಾಗಿದೆ.

ಭಾರತದ ಜೀವನಶೈಲಿಯನ್ನು ಅನುಕರಿಸುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿಯೂ ಬಾಯಿಯ ಕ್ಯಾನ್ಸರ್‌ ಹೆಚ್ಚುತ್ತಿದೆ. ಈಗಿನ ಪ್ರಮಾಣ ಹೀಗೇ ಮುಂದುವರಿದರೆ ಐದು ವರ್ಷಗಳಲ್ಲಿ ಭಾರತವು, ಜಗತ್ತಿನಲ್ಲಿ ಅತ್ಯಧಿಕ ಬಾಯಿ ಕ್ಯಾನ್ಸರ್‌ ಇರುವ ಎರಡನೇ ದೇಶವಾಗಿಬಿಡುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ನಿಯಂತ್ರಣ ಹೇಗೆ?

ಗ್ರಾಮೀಣ ಪ್ರದೇಶಗಳಲ್ಲಿಯೂ ಕ್ಯಾನ್ಸರ್‌ ಚಿಕಿತ್ಸೆ ಲಭ್ಯವಾಗುವಂತೆ ಮಾಡುವುದು ಮತ್ತು ಕ್ಯಾನ್ಸರ್‌ ರೋಗದ ಬಗ್ಗೆ, ರೋಗದ ಬರದಂತೆ ತಡೆಗಟ್ಟುವ ಬಗ್ಗೆ ಮತ್ತು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು. ಇದನ್ನು ವಿವಿಧ ಹಂತಗಳಲ್ಲಿ ಸರ್ಕಾರ ಮಾಡಬೇಕಾಗಿದೆ.

ಬೆಂಗಳೂರಿನಲ್ಲಿ ಲಭ್ಯವಿರುವ ಚಿಕಿತ್ಸೆಗಳಾವುವು?

ವಿದೇಶಗಳಲ್ಲಿ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳೂ ಈಗ ಬೆಂಗಳೂರಿನಲ್ಲಿಯೂ ಲಭ್ಯ.

ಪೆಟ್‌ ಸಿ.ಟಿ. ಸ್ಕ್ಯಾನ್‌, ಎಂ.ಆರ್.ಐ. ಸ್ಕ್ಯಾನ್‌, ಜೆನೆಟಿಕ್‌ ಸ್ಟಡೀಸ್‌, ಜೀನ್ಸ್‌ ಮೂಲಕ ಪತ್ತೆ ಹಚ್ಚುವುದು, ರೊಬೊಟಿಕ್‌ ಸರ್ಜರಿಯೂ ಇದೆ. ಆದರೆ ರೊಬೊಟಿಕ್‌ ಸರ್ಜರಿ ಎನ್ನುವುದು ಒಂದು ಭ್ರಮೆ. ವೈದ್ಯ ಮಾಡುವ ಶಸ್ತ್ರಚಿಕಿತ್ಸೆಯನ್ನು ಉನ್ನತ ತಂತ್ರಜ್ಞಾನದೊಂದಿಗೆ ಮಾಡುತ್ತೇವೆ ಅಷ್ಟೇ. ಪರಿಕರಗಳು ಬದಲಾಗುತ್ತವೆ. ಇದು ದುಬಾರಿ ಕೂಡಾ. ಕಿಮೊ ಥೆರಪಿಯಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಿದೆ.

ರಕ್ತದ ಕ್ಯಾನ್ಸರ್‌ ಸಂಬಂಧ ಹೆಮೆಟೊ ಆಂಕಾಲಜಿಯಲ್ಲಿಯೂ ಉನ್ನತ ಮಟ್ಟದ ತಪಾಸಣಾ ವಿಧಾನಗಳು ಮತ್ತು ಚಿಕಿತ್ಸೆ ಬೆಂಗಳೂರಿನಲ್ಲಿ ಲಭ್ಯ. ಮೂಳೆ ಕ್ಯಾನ್ಸರ್‌ ವಿಚಾರದಲ್ಲಿ ಹೇಳುವುದಾದರೆ ಅಸ್ಥಿಮಜ್ಜೆ ಕಸಿ ಇನ್ನು ಆರು ತಿಂಗಳಲ್ಲಿ ಲಭ್ಯವಾಗಲಿದೆ. ಕ್ಯಾನ್ಸರ್‌ ಸಂಬಂಧಿ ರೋಗ ಪತ್ತೆ ಮತ್ತು ಚಿಕಿತ್ಸೆಗಳಿಗೆ ಬೇಕಾದ ಉಪಕರಣಗಳು, ತಂತ್ರಜ್ಞಾನದ ಅಳವಡಿಕೆ ಅತ್ಯಂತ ದುಬಾರಿ. ಹಾಗಾಗಿ ಚಿಕಿತ್ಸೆಗಳೂ ದುಬಾರಿಯಾಗುತ್ತಿವೆ.

ರೋಗ ಪತ್ತೆ ಮತ್ತು ಚಿಕಿತ್ಸೆಯ ವೆಚ್ಚವನ್ನು ತಗ್ಗಿಸಲು ಏನು ಮಾಡಬಹುದು?

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಬಡವರಿಗಾಗಿ ಆರೋಗ್ಯ ವಿಮೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದರೆ ಕ್ಯಾನ್ಸರ್‌ ಚಿಕಿತ್ಸೆಯ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಸರ್ಕಾರವು ವಿಮೆ ಕಂಪೆನಿಗಳಿಗೆ ಫಲಾನುಭವಿಗಳ ಪರವಾಗಿ ಕಂತು ಪಾವತಿಸಿದರೆ ಮಾತ್ರ ವಿಮೆ ಕಂಪೆನಿಗಳು ತಮ್ಮ ಫಲಾನುಭವಿಗಳಿಗೆ, ಅಂದರೆ ಬಡವರ ಚಿಕಿತ್ಸಾ ವೆಚ್ಚವನ್ನು ಆರೋಗ್ಯ ವಿಮೆಯ ಮೂಲಕ ಭರಿಸಬಲ್ಲದು. ಸರ್ಕಾರ ಕಂತು ಪಾವತಿಸದೇ ಇದ್ದರೆ ಕಂಪೆನಿಗಳು ತಪ್ಪಿಸಿಕೊಳ್ಳುತ್ತವೆ.

ಸರ್ಕಾರಗಳು ಆರೋಗ್ಯ ವಿಮೆ ಯೋಜನೆಯಲ್ಲಿ ಮಧ್ಯಪ್ರವೇಶಿಸುವ ಬದಲು, ಎಷ್ಟು ಶುಲ್ಕವನ್ನು ಭರಿಸಬೇಕು ಎಂಬ ಬಗ್ಗೆ ವಿಮೆ ಕಂಪೆನಿಗಳಿಗೆ ನಿರ್ದೇಶಿಸಿ ಕಾನೂನು ರೂಪಿಸಬೇಕು. ಆಗ ಆಸ್ಪತ್ರೆಗಳು ಮತ್ತು ವಿಮೆ ಕಂಪೆನಿಗಳು ಮಾತುಕತೆ ನಡೆಸಿ ಶುಲ್ಕ ಭರಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳುತ್ತವೆ. ಪ್ರಸ್ತುತ, ಪ್ರತಿಯೊಂದಕ್ಕೂ ಸರ್ಕಾರ ಮಧ್ಯಪ್ರವೇಶಿಸುತ್ತಿರುವ ಕಾರಣ ವಿಮೆ ಕಂಪೆನಿ ಮತ್ತು ಆಸ್ಪತ್ರೆಗಳ ನಡುವಿನ ತಾಕಲಾಟದಲ್ಲಿ ಬಡ ರೋಗಿಗಳು ತೊಂದರೆ ಅನುಭವಿಸುವಂತಾಗುತ್ತಿದೆ.

ಪ್ರತಿ ರೋಗಿಗೂ ಚಿಕಿತ್ಸಾ ವೆಚ್ಚ ಭರಿಸುವ ಸಾಮರ್ಥ್ಯ ಇರುತ್ತದೆಯೇ?

ಖಂಡಿತಾ ಇಲ್ಲ. ನಮ್ಮದು ಲಾಭದ ಉದ್ದೇಶವಿಲ್ಲದ ಆಸ್ಪತ್ರೆಯಾಗಿರುವ ಕಾರಣ ಬಹುತೇಕ ಎಲ್ಲಾ ರೋಗಿಗಳಿಗೂ ವಿನಾಯಿತಿ ಇಲ್ಲವೇ, ಬೇರೆ ರೀತಿಯ ನೆರವು ಸಿಗುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳನ್ನು ಜನರಲ್ ವಾರ್ಡ್‌ಗೆ ದಾಖಲಿಸಿದರೆ, ಕೆಲವರು ತಮಗೆ ಸ್ಪೆಷಲ್‌ ವಾರ್ಡ್‌ ಬೇಕು ಎಂದು ಪಟ್ಟುಹಿಡಿಯುತ್ತಾರೆ. ಆದರೆ ಅಲ್ಲಿನ ಸೌಕರ್ಯಗಳ ಆಧಾರದಲ್ಲಿ ಬಿಲ್‌ ಪಾವತಿಸಬೇಕಾದಾಗ ಅರೆಬರೆ ಪಾವತಿಸಿ ಹೊರಟುಹೋಗುತ್ತಾರೆ. ಸರ್ಕಾರ ಮತ್ತು ವಿಮೆ ಕಂಪೆನಿಗಳು ನಿಖರವಾದ ನಿಯಮಗಳನ್ನು ರೂಪಿಸಿದಲ್ಲಿ ಇಂತಹ ಗೊಂದಲಕ್ಕೆ ಅವಕಾಶವಿರುವುದಿಲ್ಲ.

ಪ್ರತಿಕ್ರಿಯಿಸಿ (+)