ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾನ್ಸರ್ ಗುಣವಾಗಿ ಹನ್ನೊಂದು ವರ್ಷವಾಯ್ತು...’

Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಾನು ಮತ್ತು ನನ್ನ ಪತ್ನಿ ರೇಖಾರಾಣಿ ಸೇರಿ ‘ನಂದಗೋಕುಲ’ ಧಾರಾವಾಹಿಯನ್ನು (ಯಶ್‌ ಮತ್ತು ರಾಧಿಕಾ ಅಭಿನಯಿಸಿದ್ದರು) ನಿರ್ಮಿಸುತ್ತಿದ್ದ ಸಮಯ. ನಾನು ಆಗ ತಾನೇ ತಮಿಳು ಸಿನಿಮಾದಲ್ಲಿ (‘ಉಲ್ಟಾಪಲ್ಟಾ’ದ ತಮಿಳು ಆವೃತ್ತಿ) ನಾಯಕ ನಟನಾಗಿಯೂ ಅಭಿನಯಿಸಿದ್ದೆ. ಜೊತೆಗೆ ಮುಂದಿನ ಚಿತ್ರಕ್ಕಾಗಿ ಡಯಟ್‌ ಮಾಡುತ್ತಿದ್ದೆ. ಅದೇ ಸಮಯಕ್ಕೆ ನನಗೆ ತುಂಬಾ ಸುಸ್ತು ಆಗತೊಡಗಿತು, ಸಣ್ಣಗಾದೆ. ಮುಖ ಮತ್ತು ದೇಹದ ಬಣ್ಣವೂ ಕಪ್ಪಾಗುತ್ತಾ ಬರುತ್ತಿತ್ತು. ಇದು ಡಯಟ್‌ನ ಪರಿಣಾಮ ಎಂದೇ ಭಾವಿಸಿದೆ. ಎಲ್ಲಿವರೆಗೆ ಅಂದರೆ ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಂಡು ಶೂಟಿಂಗ್‌ನಲ್ಲಿ ಮುಂದುವರಿಯುತ್ತಿದ್ದೆ.

‘ನಂದಗೋಕುಲ’ದ 200ನೇ ಸಂಚಿಕೆಯ ಸಂಭ್ರಮಕ್ಕಾಗಿ ಚಿತ್ರರಂಗದ ಹಲವಾರು ಮಂದಿಯನ್ನು ಆಹ್ವಾನಿಸಿದ್ದೆ. ಟಿ.ಎನ್.ಸೀತಾರಾಮ್‌ ಅವರೂ ಇದ್ದರು. ಮರುದಿನ ಅವರು ನನಗೆ ಫೋನ್‌ ಮಾಡಿ ‘ಯಾವುದಕ್ಕೂ ನೀವು ಒಮ್ಮೆ ಮಾಸ್ಟರ್‌ ಹೆಲ್ತ್‌ ಚೆಕಪ್‌’ ಮಾಡಿಸಿಕೊಂಡು ಬನ್ನಿ’ ಎಂದು ಸಲಹೆ ನೀಡಿದ್ರು. ಮೂರು ದಿನದ ನಂತರ ಆರೋಗ್ಯ ತಪಾಸಣೆ ಮಾಡಿಸಿಕೊಂಡೆ. ಅವತ್ತು ಸಂಜೆ ವೈದ್ಯರು ನನ್ನನ್ನು ಕರೆದು ‘ನಿಮಗೆ ಲ್ಯುಕೇಮಿಯಾ’ ಇದೆ ಎಂದರು.

ಆಗ ನನಗೆ ‘ಲ್ಯುಕೇಮಿಯಾ’ ಅಂದರೇನು ಎಂದು ಗೊತ್ತಿರಲಿಲ್ಲ. ಕಾರಲ್ಲಿ ಬರುತ್ತಿರುವಾಗ ರೇಖಾಳಿಗೆ ಫೋನ್‌ ಮಾಡಿ ಹೇಳಿದೆ. ಅವಳು ತಲೆಸುತ್ತಿ ಬಿದ್ದುಬಿಟ್ಟಳು. ಇಡೀ ಕುಟುಂಬವೇ ಮನೆಯಲ್ಲಿ ಸೇರಿತ್ತು. ಲ್ಯುಕೇಮಿಯಾ ಅನ್ನೋದು ರಕ್ತದಲ್ಲಿ ಅಸ್ಥಿಮಜ್ಜೆಯಲ್ಲಿ ಕಂಡುಬರುವ ಕ್ಯಾನ್ಸರ್‌ ಅಂತ ಯಾರೋ ವಿವರಿಸಿದ್ರು. ಉಳಿದದ್ದು ಚಿಕಿತ್ಸೆಯೊಂದೇ. ತಕ್ಷಣ, ರೇಖಾಳ ಆಪ್ತರಾದ ಡಾ.ಆಶಾ ಬೆನಕಪ್ಪ ಅವರ ಮೂಲಕ ಕಿದ್ವಾಯಿ ಆಸ್ಪತ್ರೆಯ ಡಾ.ಗೋವಿಂದಬಾಬು ಕಿದ್ವಾಯಿಯಲ್ಲಿ ಅಸ್ಥಿಮಜ್ಜೆಯ ಶಸ್ತ್ರಚಿಕಿತ್ಸೆ ಆಗಬೇಕು ಎಂದು ಸಲಹೆ ನೀಡಿದರು.

ಬೆನ್ನುಮೂಳೆಯಿಂದ ಅಸ್ಥಿಮಜ್ಜೆ ಸಂಗ್ರಹಿಸಿ ತಪಾಸಣೆ ಮಾಡಿದರು. ಅದರ ವರದಿಯಲ್ಲಿ, ನನಗೆ ಅಸ್ಥಿಮಜ್ಜೆಯ ಕ್ಯಾನ್ಸರ್‌ ಇರುವುದು ಖಚಿತವಾಯಿತು. ಆದರೆ ಕೀಮೊಥೆರಪಿಯ ಅಗತ್ಯವಿಲ್ಲ. ರಕ್ತದಲ್ಲಿ ಬಿಳಿ ಕಣಗಳ ಪ್ರಮಾಣ ಅಪಾಯಕಾರಿ ಮಟ್ಟ ತಲುಪಿದ್ದವು. 4ಸಾವಿರದಿಂದ 11 ಸಾವಿರದೊಳಗಿರಬೇಕಾದ ಬಿಳಿ ರಕ್ತಕಣಗಳು 4 ಲಕ್ಷಕ್ಕೆ ಏರಿತ್ತು. ಇದನ್ನು ನಿಯಂತ್ರಿಸದಿದ್ದರೆ ಹೊಟ್ಟೆಯಲ್ಲಿ ಗುಲ್ಮದ ಗಾತ್ರ ದೊಡ್ಡದಾಗುತ್ತದೆ. ಇದರಿಂದಾಗಿ ಊಟ ಮಾಡಲು ಆಗುವುದಿಲ್ಲ, ಮಾಡಿದರೂ ಭೇದಿಯಾಗುತ್ತದೆ ಎಂದು ಎಚ್ಚರಿಸಿದರು.

ಮೂರೇ ತಿಂಗಳಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು 7,000ಕ್ಕೆ ಇಳಿಸಿದರು. ಆಗ ತಿಂಗಳಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿ ಬರೀ ಮಾತ್ರೆಗಳಿಗೇ ಖರ್ಚಾಗುತ್ತಿತ್ತು. ಕಿದ್ವಾಯಿ ಆಸ್ಪತ್ರೆಯಲ್ಲಿ ರಿಯಾಯ್ತಿ ದರದಲ್ಲಿ ಔಷಧಿ ಸಿಕ್ಕಿದ್ದು ನನಗೆ ಅನುಕೂಲವಾಯಿತು. ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ಔಷಧಿ ನೀಡುವ ಮ್ಯಾಕ್ಸ್‌ ಪ್ರತಿಷ್ಠಾನ ನನಗೂ ಔಷಧಿ ನೀಡಿತು.

ಆರೇಳು ವರ್ಷ ನಿರಂತರವಾಗಿ ಅದೇ ಚಿಕಿತ್ಸೆ ಪಡೆದೆ. ಕಾಯಿಲೆ ನಿಯಂತ್ರಣಕ್ಕೆ ಬಂದಿತು. ಆದರೆ ಅಷ್ಟರೊಳಗೆ ಅಂದಾಜು ಒಂದು ಕೋಟಿ ರೂಪಾಯಿ ಖರ್ಚಾಯಿತು. ಇದಾಗಿ 11 ವರ್ಷ ಕಳೆದಿದೆ. ಆಗಿನಿಂದಲೂ ಆರು ತಿಂಗಳಿಗೊಮ್ಮೆ ನನ್ನ ರಕ್ತದ ಮಾದರಿಯನ್ನು ದೆಹಲಿಯ ಡಾಬರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿಗೆ ಕಳುಹಿಸಿ ರಕ್ತದ ತಪಾಸಣೆ ಮಾಡಿಸುತ್ತಿರುತ್ತೇನೆ. ಈಗ ಸಂಪೂರ್ಣ ಗುಣಮುಖನಾಗಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT