ಶುಕ್ರವಾರ, ಡಿಸೆಂಬರ್ 6, 2019
25 °C

ಆಗ ಕಠೋರ, ಈಗ ಸುಂದರ

Published:
Updated:
ಆಗ ಕಠೋರ, ಈಗ ಸುಂದರ

ನಾನು ಬೆಂಗಾಲಿ. ಆದರೆ ಹುಟ್ಟಿ ಬೆಳೆದದ್ದು ಮಲ್ಲೇಶ್ವರ ಮತ್ತು ಯಲಹಂಕದಲ್ಲಿ. ಓದಿದ್ದೂ ಇಲ್ಲೇ. ಆರನೇ ವಯಸ್ಸಿನಲ್ಲಿ ಹಾಡುವ ಹವ್ಯಾಸ ಬೆಳೆಯಿತು. ಅದು ನನ್ನಪ್ಪನಿಂದ ಬಂದ ಬಳುವಳಿ. 2014ರವರೆಗೆ ನನ್ನ ಬದುಕು ಸರಳವಾಗಿ, ಸುಂದರವಾಗಿ ಸಾಗುತ್ತಿತ್ತು. ನಾನಂತೂ ಓದು, ಸಂಗೀತ ಮತ್ತು ಚಾರ್ಟರ್ಡ್‌ ಅಕೌಂಟೆಂಟ್‌ ವೃತ್ತಿಯಲ್ಲಿ ಪುರುಸೊತ್ತಿಲ್ಲದಂತೆ ಓಡಾಡುತ್ತಿದ್ದೆ.

ಆಗ ನನಗೆ 25 ವರ್ಷ. ನನ್ನ ಎಡ ಸ್ತನದಲ್ಲಿ ಗೆಡ್ಡೆ ಇರುವುದು ಒಂದು ದಿನ ನನ್ನ ಅರಿವಿಗೆ ಬಂತು. ನನ್ನಂತಹ ಚುರುಕಿನ ಹುಡುಗಿಗೆ, ಅದೂ ಈ ವಯಸ್ಸಿಗೆ ಅಂಥಾದ್ದೇನೂ ಬರಲಾರದು ಎಂದೇ ಅಂದುಕೊಂಡಿದ್ದೆ. ಆದರೂ ಮೂರು ಬಾರಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡೆ. ಅದು ಕ್ಯಾನ್ಸರ್‌ ಗೆಡ್ಡೆ ಎಂಬುದು ಖಚಿತವಾಯಿತು.

ಅದಾಗಿ ಎರಡನೇ ದಿನಕ್ಕೇ ಶಂಕರ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿಬಿಟ್ಟೆ. ಚಿಕಿತ್ಸೆಗಳು ಶುರುವಾದವು. ಶಸ್ತ್ರಚಿಕಿತ್ಸೆಯೂ ನಡೆಯಿತು. 16 ಬಾರಿ ಕಿಮೋ ಥೆರಪಿ, 35 ಬಾರಿ ರೇಡಿಯೊ ಥೆರಪಿ ಆಯಿತು. ಒಟ್ಟು ಒಂದೂವರೆ ವರ್ಷ ಚಿಕಿತ್ಸೆ ಮುಂದುವರಿಯಿತು. ನನ್ನ ಅದೃಷ್ಟಕ್ಕೆ ರಕ್ತದಲ್ಲಿ ಯಾವುದೇ ರೀತಿಯ ಸೋಂಕು ಕಂಡು ಬಂದಿರಲಿಲ್ಲ.

ಕ್ಯಾನ್ಸರ್‌ ಇದೆ ಎಂಬುದೇ ಒಂದು ಆಘಾತವಾದರೆ, ಅಸಾಧ್ಯವಾದ ನೋವು ಮತ್ತು ಅವಮಾನಗಳನ್ನು ಸಹಿಸಿಕೊಳ್ಳುವುದು ಮತ್ತೊಂದು ಸವಾಲು. ನಮ್ಮ ಆತ್ಮಬಲವನ್ನೇ ಕುಗ್ಗಿಸುವಂತಹ ಪ್ರಕ್ರಿಯೆಗಳಿವು. 25ರ ಹರೆಯದಲ್ಲೇ ಕೂದಲು ಕಳೆದುಕೊಂಡು ತಲೆ ಬೋಳಾಗುವುದನ್ನು, ‘ಸ್ತನ ಕ್ಯಾನ್ಸರ್‌ ಅಂತೆ, ಆಕೆಗೆ ಕ್ಯಾನ್ಸರ್‌ ಬಂದಿದೆಯಂತೆ ಹೆಚ್ಚು ದಿನ ಬದುಕುವುದಿಲ್ಲ ಬಿಡು’ ಎಂಬಂತಹ ಚುಚ್ಚುಮಾತುಗಳನ್ನು, ನೋಟದಲ್ಲೇ ಅವಮಾನಿಸುವವರನ್ನು, ಅಣಕಿಸುವವರನ್ನು ಸಹಿಸಿಕೊಳ್ಳಬೇಕು.

ನನಗೆ ಚಿಕ್ಕ ವಯಸ್ಸಿನಿಂದಲೂ ದಟ್ಟವಾದ ಕೂದಲು ಇತ್ತು. ಗುಂಗುರು ಕೂದಲು ಉದುರುತ್ತಾ ಹೋಗುವಾಗ ಮನಸ್ಸು ಭಾರವಾಗುತ್ತಿತ್ತು. ಜನರ ಮನೋಭಾವ ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಹೇಳ್ತೀನಿ– ನನ್ನ ತಲೆ ಪೂರ್ತಿ ಬೋಳಾಗಿತ್ತು. ನಮ್ಮ ಅಪಾರ್ಟ್‌ಮೆಂಟ್‌ನ ಕಾವಲುಗಾರ ನನ್ನನ್ನು ವಿಚಿತ್ರವಾಗಿ ನೋಡಿದ. ಅಕ್ಕಪಕ್ಕದವರು ನನಗೇ ಕೇಳಿಸುವಂತೆ ಗೇಲಿ ಮಾಡಿದರು. ಅಬ್ಬಾ ಬದುಕು ಎಷ್ಟು ಕಠೋರವಾಗಿತ್ತೆಂದರೆ...

ಅದೇನೇ ಇದ್ದರೂ ಅಷ್ಟೂ ಒತ್ತಡದಿಂದ ಹೊರಬರಲೇಬೇಕಿತ್ತು. ಅದಕ್ಕೆ ಇದ್ದುದು ಒಂದೇ ಮಾರ್ಗ. ವಾಸ್ತವವನ್ನು ಸ್ವೀಕರಿಸುವುದು ಮತ್ತು ನನ್ನೊಳಗೆ ಸದೃಢವಾಗುವುದು. ನನ್ನ ಅಪ್ಪನಿಗೆ ಆಗ 71, ಅಮ್ಮನಿಗೆ 60. ಆದರೆ ಪ್ರತಿ ಕಿಮೋಥೆರಪಿಗಾಗಲಿ, ಯಾವುದೇ ಚಿಕಿತ್ಸೆಗಾಗಲಿ ಅವರಿಬ್ಬರೂ ನನ್ನೊಂದಿಗೆ ಬರುತ್ತಿದ್ದರು, ಒಂದಷ್ಟು ಸ್ನೇಹಿತರೂ ಹಾಜರಿರುತ್ತಿದ್ದರು. ಇವೆಲ್ಲವೂ ನನಗೆ ನೈತಿಕಸ್ಥೈರ್ಯ ತುಂಬುತ್ತಿದ್ದವು. ಶಂಕರ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು, ವಾರ್ಡ್‌ ಸಿಬ್ಬಂದಿ ಧೈರ್ಯ ತುಂಬುತ್ತಿದ್ದ ಮತ್ತು ಪ್ರೀತಿ ತೋರುತ್ತಿದ್ದ ರೀತಿಯೂ ಅದ್ಭುತವಾಗಿತ್ತು. ರೋಗಿಗಳಿಗೆ ಅಂತಹ ವಾತಾವರಣವೂ ಮುಖ್ಯ.

ಅಂತೂ ಇಂತೂ ಕ್ಯಾನ್ಸರ್‌ನಿಂದ ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ. ಈಗ ನನ್ನದೇ ಒಂದು ಸಣ್ಣ ಕಂಪೆನಿ ನಡೆಸುತ್ತಿದ್ದೇನೆ. ಇಬ್ಬರು ನನ್ನೊಂದಿಗೆ ಕೆಲಸ ಮಾಡುತ್ತಾರೆ. ‘ಪೋಸ್ಟ್‌ ಆಫೀಸ್ ಟೌನ್‌’ ಬ್ಯಾಂಡ್‌ನಲ್ಲಿ ಗಾಯಕಿಯಾಗಿ ಹಿಂದಿಗಿಂತಲೂ ಹೆಚ್ಚು ಸಕ್ರಿಯಳಾಗಿದ್ದೇನೆ. ಕಳೆದ ವರ್ಷ ಚೌಡಯ್ಯ ಸ್ಮಾರಕ ಭವನದಲ್ಲಿ ವಿಶ್ವ ಸಂಗೀತ ದಿನದಂದು ಅತ್ಯುತ್ತಮ ಕಾರ್ಯಕ್ರಮ ನೀಡಿದೆ. ಈಗಲೂ ಬ್ಯಾಂಡ್‌ಗಾಗಿ ಹಾಡು ಬರೆಯುತ್ತೇನೆ. ರಾಗ ಸಂಯೋಜಿಸಿ ಹಾಡುತ್ತೇನೆ. ಕ್ಯಾನ್ಸರ್‌ ಆಗಿತ್ತು ಎಂಬುದನ್ನು ಮರೆತು ಬದುಕನ್ನು ಆರೋಗ್ಯಕರ ದೃಷ್ಟಿಕೋನದಲ್ಲೇ ನೋಡುತ್ತೇನೆ.

ನಾನು ಯಾವುದೇ ವೇದಿಕೆಗೆ ಹೋದರೂ ‘ಕ್ಯಾನ್ಸರ್‌ ಗೆದ್ದು ಬಂದಿದ್ದೀನಿ, ಕ್ಯಾನ್ಸರ್‌ಗೆ ಹೆದರಬೇಕಾಗಿಲ್ಲ, ಅದಕ್ಕೆ ಚಿಕಿತ್ಸೆ ಇದೆ, ಕ್ಯಾನ್ಸರ್‌ ಬಂದವರೆಲ್ಲಾ ಸಾಯೋದಿಲ್ಲ’ ಎಂಬ ಸಂದೇಶವನ್ನು ಕೊಡುತ್ತಲೇ ಇರುತ್ತೇನೆ.

ಅಪರೂಪ ಗುಪ್ತಾ ಅವರ ಫೇಸ್‌ಬುಕ್‌ ಪುಟ: facebook.com/aparupa.gupta.7

ಪ್ರತಿಕ್ರಿಯಿಸಿ (+)