ಮಂಗಳವಾರ, ಡಿಸೆಂಬರ್ 10, 2019
20 °C

‘ಕ್ಯಾನ್ಸರ್ ನನಗೆ ಗುರು’

Published:
Updated:
‘ಕ್ಯಾನ್ಸರ್ ನನಗೆ ಗುರು’

ನಿಮ್ಮ ಆರೋಗ್ಯದ ಗುಟ್ಟೇನು?

ನಾನು ನಿತ್ಯ ಧ್ಯಾನ, ಯೋಗ ಮಾಡುತ್ತೇನೆ. ಪ್ರಯಾಣ ತುಸು ಹೆಚ್ಚು. ಎಂಥ ಒತ್ತಡ ಇದ್ದರೂ ಆಗಾಗ ವಿಶ್ರಾಂತಿ ಪಡೆದು ಹಸಿರು ಪರಿಸರದೊಂದಿಗೆ ಕಾಲಕಳೆಯುತ್ತೇನೆ. ಮನೆಯಲ್ಲಿರುವಾಗ ನಾಯಿಯ ಜೊತೆ ಸಮಯ ಕಳೆಯುತ್ತೇನೆ. ಕುಟುಂಬದೊಂದಿಗಿರುವ ಪ್ರತಿಕ್ಷಣವನ್ನು ಸಂಭ್ರಮಿಸುತ್ತೇನೆ. ಬರವಣಿಗೆ ನನ್ನ ಮೆಚ್ಚಿನ ಹವ್ಯಾಸ.

ಇತ್ತೀಚೆಗೆ ನಿಮ್ಮ ಕೆಲ ಕವಿತೆಗಳು ಪ್ರಕಟಗೊಂಡಿವೆ...

ನಾನು ಅನೇಕ ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ, ಯಾವುದೇ ಪುಸ್ತಕ ಪ್ರಕಟಿಸಿರಲಿಲ್ಲ. ಈ ವರ್ಷ ಪುಸ್ತಕವೊಂದನ್ನು ಬರೆದು ಮುಗಿಸಿದ್ದೇನೆ. ಈವರೆಗೂ ಬರೆದ ಕವಿತೆಗಳ ಸಂಗ್ರಹ ಹೊರತರುವ ಗುರಿಯೂ ಇದೆ. ಕ್ಯಾನ್ಸರ್ ಕುರಿತಂತೆ ಪುಸ್ತಕ ಬರೆಯಬೇಕು ಎಂದುಕೊಂಡಿದ್ದೇನೆ.

ನಿಮ್ಮನ್ನು ನೀವು ಕ್ಯಾನ್ಸರ್ ಪದವೀಧರೆ ಎಂದು ಕರೆದುಕೊಳ್ಳಲು ಏನು ಕಾರಣ?

ಕ್ಯಾನ್ಸರ್‌ಗೆ ನಾನು ಖಂಡಿತಾ ಧನ್ಯವಾದ ಅರ್ಪಿಸಬೇಕು. ಯಾವುದೇ ಪದವಿ, ವಿಶ್ವವಿದ್ಯಾಲಯಗಳು ಕಲಿಸದಷ್ಟು ಜೀವನ ಪಾಠವನ್ನು ಕ್ಯಾನ್ಸರ್ ಕಲಿಸಿದೆ. ಕ್ಯಾನ್ಸರ್ ಮೇಲೆ ನನಗೆ ಅಪಾರ ಪ್ರೀತಿ. ಇದರಿಂದಾಗಿ ನನ್ನ ಜೀವನಶೈಲಿ ಬದಲಾಯಿತು. ನನ್ನಲ್ಲಿರುವ ನಿಜವಾದ ಶಕ್ತಿ ಹೊರಬರಲು ಕಾರಣವಾಯಿತು. ಕ್ಯಾನ್ಸರ್‌ ನನಗೆ ಒಂದು ಪದವಿ ಇದ್ದಂತೆ, ಅದನ್ನು ಸಮರ್ಥವಾಗಿ ಸ್ವೀಕರಿಸಿರುವ ಕಾರಣಕ್ಕೆ ನಾನು ಕ್ಯಾನ್ಸರ್ ಪದವೀಧರೆ.

ಕ್ಯಾನ್ಸರ್‌ ಕುರಿತು ಭಾರತ ಮತ್ತು ವಿದೇಶಗಳಲ್ಲಿನ ದೃಷ್ಠಿಕೋನಗಳೇನು?

ಭಾರತದಲ್ಲಿ ಇಂದಿಗೂ ಕ್ಯಾನ್ಸರ್‌ ಕಾಯಿಲೆಯನ್ನು ಒಂದು ಶಾಪ, ಕಳಂಕ ಎಂದೇ ಭಾವಿಸಲಾಗುತ್ತದೆ. ಕ್ಯಾನ್ಸರ್‌ ಕುರಿತ ಅನೇಕ ತಪ್ಪು ಕಲ್ಪನೆಗಳು ಭಾರತೀಯರ ಮನದಲ್ಲಿ ಮನೆಮಾಡಿವೆ. ಕ್ಯಾನ್ಸರ್‌ಗೆ ತುತ್ತಾಗುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಈ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುವ ಪರಿಸ್ಥಿತಿ ಇದೆ. ಭಾರತೀಯರಿಗೆ ಕ್ಯಾನ್ಸರ್ ಕಾಯಿಲೆ ನಿರ್ವಹಿಸುವುದನ್ನು ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು, ಗಣ್ಯವ್ಯಕ್ತಿಗಳು ಹಾಗೂ ವೈದ್ಯರು ಗಮನ ನೀಡಬೇಕು. ವಿದೇಶಗಳಲ್ಲಿ ಕ್ಯಾನ್ಸರ್‌ ಸಹ ಇತರೆಲ್ಲ ಕಾಯಿಲೆಗಳಂತೆ ಒಂದು ಕಾಯಿಲೆ ಮಾತ್ರ.

ಕ್ಯಾನ್ಸರ್ ಕುರಿತು ಮುಕ್ತವಾಗಿ ಚರ್ಚಿಸುವುದು ಎಷ್ಟು ಅಗತ್ಯ?

ನನಗೆ ಕ್ಯಾನ್ಸರ್ ಇದೆ ಎಂದು ನಾನು ಮುಕ್ತವಾಗಿ ಹೇಳಿಕೊಂಡ ಕಾರಣ ನನಗೆ ಸಮಾಜದಲ್ಲಿ ಅಪಾರವಾದ ಪ್ರೀತಿ, ಪ್ರೋತ್ಸಾಹ ಸಿಕ್ಕಿತು. ನಾನು ನನ್ನೊಳಗೆ ಕೊರಗಿದ್ದರೆ, ಇಷ್ಟು ದಿನ ಬದುಕುವುದೇ ದುಸ್ತರವಾಗುತ್ತಿತ್ತು. ಮುಕ್ತವಾಗಿ ಹೇಳಿಕೊಳ್ಳುವುದೂ ಒಂದು ಧ್ಯಾನವಿದ್ದಂತೆ. ಇದು ಮಾನಸಿಕ ಆರೋಗ್ಯಕ್ಕೂ ನೆರವಾಗುತ್ತದೆ. ತಪ್ಪು ಕಲ್ಪನೆಗಳು ದೂರಾಗುತ್ತವೆ. ಉತ್ತಮ ಮಾಹಿತಿ ಹಂಚಿಕೆಯಾಗುತ್ತದೆ.

ಕ್ಯಾನ್ಸರ್ ರೋಗಿಗಳಿಗೆ ನಿಮ್ಮ ಸಂದೇಶ...

ಜೀವನದಲ್ಲಿ ನಂಬಿಕೆ ಇರಿಸಿಕೊಳ್ಳಿ. ಕ್ಯಾನ್ಸರ್‌ ಅನ್ನು ಪ್ರೀತಿಸಿ. ಇತರ ಕಾಯಿಲೆಗಳಿಗೆ ಹೋಲಿಸಿದರೆ ಇದು ಒಳ್ಳೆಯ ಕಾಯಿಲೆ. ಪ್ರೀತಿಪಾತ್ರರಿಂದ ಸಹಾಯ ಯಾಚಿಸಿ.

ಕ್ಯಾನ್ಸರ್ ಜಾಗೃತಿಯಲ್ಲಿ ಚಲನಚಿತ್ರಗಳ ಪಾತ್ರವೇನು?

ಸಮಾಜದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವಲ್ಲಿ ಚಲನಚಿತ್ರಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಬೇಸರದ ಸಂಗತಿ ಎಂದರೆ, ಬಹುತೇಕ ಭಾರತೀಯ ಚಿತ್ರಗಳು ಸಮಾಜದ ಸ್ಥಾಪಿತ ನಂಬಿಕೆ, ಸಿದ್ಧಾಂತಗಳಿಗೆ ಪೂರಕವಾಗಿರುತ್ತವೆ. ಕ್ಯಾನ್ಸರ್‌ನಿಂದ ನೆರಳುವವರ ಚಿತ್ರಣವನ್ನೇ ಕಟ್ಟಿಕೊಡುತ್ತವೆ. ಕ್ಯಾನ್ಸರ್‌ ಇರುವವರೂ ಸಾಮಾನ್ಯರಂತೆ ಬದುಕಲು ಸಾಧ್ಯವಿದೆ ಎಂಬ ಸಂದೇಶವನ್ನು ಗಟ್ಟಿನಿಲುವಿನೊಂದಿಗೆ ಪ್ರತಿಪಾದಿಸುವ ಚಿತ್ರಗಳು ನಿರ್ಮಾಣವಾಗಬೇಕು.⇒

**

ಕ್ಯಾನ್ಸರ್‌ಗೆ ಯಾವುದು ಮದ್ದು?

ನನ್ನ ಪ್ರಕಾರ ಜೀವನಪ್ರೀತಿಯೇ ಕ್ಯಾನ್ಸರ್‌ಗೆ ಮೊದಲ ಮದ್ದು. ಉತ್ತಮ ಪರಿಸರಕ್ಕೆ ಎಂಥ ಕಾಯಿಲೆಯನ್ನೂ ಗುಣಪಡಿಸುವ ಸಾಮರ್ಥ್ಯವಿದೆ. ನಿಸರ್ಗಕ್ಕಿರುವ ಅದಮ್ಯ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಾಲಿನ್ಯದಿಂದ ತುಳುಕುವ ನಗರಗಳಿಗಿಂದ ಹೊರಬಂದು ನಿಸರ್ಗದ ಜೊತೆ ಬೆರೆತು ಬಾಳುವುದು ಉತ್ತಮ ಆಯ್ಕೆ. ಉತ್ತಮ ಆಹಾರ ಸೇವನೆ, ವ್ಯಾಯಾಮ, ಯೋಗ ಹಾಗೂ ಒತ್ತಡಮುಕ್ತ ಬದುಕು ಕ್ಯಾನ್ಸರ್‌ ಗೆಲ್ಲಲು ಅತ್ಯಗತ್ಯ.

ಪ್ರತಿಕ್ರಿಯಿಸಿ (+)