ಬುಧವಾರ, ಡಿಸೆಂಬರ್ 11, 2019
15 °C

ರಾಜಸ್ಥಾನ– ಪಶ್ಚಿಮ ಬಂಗಾಳ ಫಲಿತಾಂಶ: ಎಚ್ಚರಿಕೆಯ ಗಂಟೆ

Published:
Updated:
ರಾಜಸ್ಥಾನ– ಪಶ್ಚಿಮ ಬಂಗಾಳ ಫಲಿತಾಂಶ: ಎಚ್ಚರಿಕೆಯ ಗಂಟೆ

ರಾಜಸ್ಥಾನದಲ್ಲಿ ವಿಧಾನಸಭೆಯ ಒಂದು ಮತ್ತು ಲೋಕಸಭೆಯ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು. ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಗಳಿಸಿದೆ. ಅದೂ ಭಾರೀ ಬಹುಮತದಿಂದ. ಅಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇದು ತೀವ್ರ ಮುಖಭಂಗ. ಆಡಳಿತ ವಿರೋಧಿ ಅಲೆ ಜೋರಾಗಿಯೇ ಇದೆ ಎನ್ನುವುದರ ಸೂಚನೆ.

ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಅಬ್ಬರದ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗಂತೂ ದೊಡ್ಡ ಹಿನ್ನಡೆ. ಈ ಗೆಲುವು ಕಾಂಗ್ರೆಸ್ಸಿನ ಪಾಲಿಗೆ ಸಹಜವಾಗಿಯೇ ಹುರುಪು ಹೆಚ್ಚಿಸಿದೆ. ಏಕೆಂದರೆ ಅಲ್ಲಿನ ವಿಧಾನಸಭೆಯ ಅವಧಿ ಈ ವರ್ಷಾಂತ್ಯಕ್ಕೆ ಮುಕ್ತಾಯವಾಗಲಿದ್ದು, ಸಾರ್ವತ್ರಿಕ ಚುನಾವಣೆ ನಡೆಯಬೇಕಾಗಿದೆ.

ಇದು ಮುಂದಿನ ದಿನಗಳ ರಾಜಕೀಯದ ದಿಕ್ಸೂಚಿಯೂ ಆಗಬಹುದು. ಏಕೆಂದರೆ ಈ ಮೂರೂ ಕ್ಷೇತ್ರಗಳು ಮುಂಚೆ ಬಿಜೆಪಿ ಕೈಯಲ್ಲಿದ್ದವು. ಅದನ್ನು ಕಾಂಗ್ರೆಸ್‌ ಕಸಿದುಕೊಂಡಿದೆ. ಅಲ್ಲದೆ ಕಾಂಗ್ರೆಸ್‌ನ ಈ ಗೆಲುವು ಆಕಸ್ಮಿಕವೇನಲ್ಲ. ಪಂಚಾಯಿತಿ, ಜಿಲ್ಲಾ ಪರಿಷತ್ತು ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಈ ಹಿಂದೆ ನಡೆದ ಉಪಚುನಾವಣೆಗಳಲ್ಲೂ ಅದು ಮೇಲುಗೈ ಸಾಧಿಸಿತ್ತು.

ಈ ಎಲ್ಲ ಸಾಧನೆಯಲ್ಲಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ, 40ರ ಆಸುಪಾಸಿನ ಸಚಿನ್‌ ಪೈಲಟ್‌ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ನಿರಂತರ ಪರಿಶ್ರಮವಂತೂ ಇದೆ. ಬಿಜೆಪಿ ಸೋಲಿನ ಹಿಂದೆ ‘ಪದ್ಮಾವತ್‌’ ಚಿತ್ರಕ್ಕೆ ಸಂಬಂಧಿಸಿದಂತೆ ರಜಪೂತರ ಆಕ್ರೋಶ, ಮೀಸಲಾತಿಗೆ ಸಂಬಂಧಪಟ್ಟಂತೆ ಗುಜ್ಜರ್‌ ಸಮುದಾಯದ ಕೋಪವೂ ಕೆಲಸ ಮಾಡಿದೆ ಎನ್ನುವ ವ್ಯಾಖ್ಯಾನಗಳೂ ಇವೆ.

ಗುಜರಾತ್‌ನಲ್ಲಿ ಪ್ರಯಾಸದ ಗೆಲುವು ಸಾಧಿಸಿದ ಬಿಜೆಪಿಯ ಪಾಲಿಗೆ ರಾಜಸ್ಥಾನದ ಫಲಿತಾಂಶ ಇನ್ನೊಂದು ತಲೆನೋವು ತಂದಿರುವುದಂತೂ ಸುಳ್ಳಲ್ಲ. ಎದುರಾಳಿಯ ಗೆಲುವನ್ನು ಬಿಜೆಪಿ ಹೇಗೆ ಅರಗಿಸಿಕೊಳ್ಳುತ್ತದೆ, ಕುಸಿಯುತ್ತಿರುವ ಬಲವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಆದರೆ ರಾಜಸ್ಥಾನದ ಗೆಲುವನ್ನು ಪೂರ್ಣವಾಗಿ ಸಂಭ್ರಮಿಸಲು ಕಾಂಗ್ರೆಸ್‌ಗೆ ಪಶ್ಚಿಮ ಬಂಗಾಳದ ಫಲಿತಾಂಶ ಅಡ್ಡಿಯಾಗಿದೆ. ಏಕೆಂದರೆ ಅಲ್ಲಿಯೂ ವಿಧಾನಸಭೆ ಮತ್ತು ಲೋಕಸಭೆಯ ಒಂದೊಂದು ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಆಡಳಿತಾರೂಢ ಟಿಎಂಸಿ ಎರಡೂ ಕಡೆ ಭರ್ಜರಿ ಜಯ ಸಾಧಿಸಿದೆ. ಲೋಕಸಭಾ ಕ್ಷೇತ್ರ ಅದರ ಕೈಯಲ್ಲಿಯೇ ಇತ್ತು. ಹೀಗಾಗಿ ಈ ಗೆಲುವು ಸಹಜ. ಆದರೆ ವಿಧಾನಸಭಾ ಕ್ಷೇತ್ರವನ್ನು ಅದು ಕಾಂಗ್ರೆಸ್‌ನಿಂದ ಕಸಿದುಕೊಂಡಿದೆ. ಅಷ್ಟೇ ಅಲ್ಲ. ಮತ ಗಳಿಕೆಯಲ್ಲಿ ಎರಡೂ ಕಡೆ ಕಾಂಗ್ರೆಸ್‌ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಠೇವಣಿಯನ್ನೂ ಕಳೆದುಕೊಂಡಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಆಡಳಿತ ನಡೆಸಿದ್ದ ಸಿಪಿಎಂ ಮೂರನೇ ಸ್ಥಾನಕ್ಕೆ ಹೋಗಿದೆ. ಹೀಗೇಕಾಯಿತು ಎಂದು ಅದು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಟಿಎಂಸಿಗೆ ಪೈಪೋಟಿ ಕೊಟ್ಟು ಎರಡನೇ ಸ್ಥಾನಕ್ಕೆ ಏರಿರುವುದು ಬಿಜೆಪಿ. ಇದರರ್ಥ ಅದು ಪಶ್ಚಿಮ ಬಂಗಾಳದಲ್ಲಿ ತನ್ನ ಸ್ಥಿತಿಯನ್ನು ಗಣನೀಯವಾಗಿ ಸುಧಾರಿಸಿಕೊಂಡಿದೆ. ಆದರೆ ರಾಜಸ್ಥಾನದಲ್ಲಿನ ಹೀನಾಯ ಸೋಲು ಈ ಸಾಧನೆಯನ್ನು ಮಂಕಾಗಿಸಿದೆ. ಒಟ್ಟಾರೆ ಎರಡೂ ರಾಜ್ಯಗಳ ಉಪ ಚುನಾವಣಾ ಫಲಿತಾಂಶಗಳು ಬಿಜೆಪಿ– ಕಾಂಗ್ರೆಸ್‌ ಎರಡಕ್ಕೂ ಎಚ್ಚರಿಕೆಯ ಪಾಠ.

ಪ್ರತಿಕ್ರಿಯಿಸಿ (+)