ಬುಧವಾರ, ಡಿಸೆಂಬರ್ 11, 2019
15 °C
ಭಾರತ ಮತ್ತು ಪಾಕಿಸ್ತಾನದಲ್ಲಿನ ಕುಕೃತ್ಯಕ್ಕೆ ಪ್ರತಿಕ್ರಿಯೆ

ಅತ್ಯಾಚಾರ ಪ್ರಕರಣ: ವಿಶ್ವಸಂಸ್ಥೆ ಕಳವಳ

Published:
Updated:
ಅತ್ಯಾಚಾರ ಪ್ರಕರಣ: ವಿಶ್ವಸಂಸ್ಥೆ ಕಳವಳ

ವಿಶ್ವಸಂಸ್ಥೆ : ಭಾರತ ಮತ್ತು ಪಾಕಿಸ್ತಾನದಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ನಡೆದಿರುವ ಅತ್ಯಾಚಾರ ಪ್ರಕರಣಗಳು ‘ಹೃದಯ ವಿದ್ರಾವಕ’ವಾಗಿವೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅವರ ವಕ್ತಾರ ಸ್ಟಿಫಾನ್‌ ಡುಜಾರಿಕ್‌ ಹೇಳಿದ್ದಾರೆ.

ನವದೆಹಲಿಯಲ್ಲಿ ಕಳೆದ ವಾರ 8 ತಿಂಗಳ ಮಗುವಿನ ಮೇಲೆ 28 ವರ್ಷದ ಸಹೋದರ ಸಂಬಂಧಿ ನಡೆಸಿದ ಅತ್ಯಾಚಾರ ಹಾಗೂ ಪಾಕಿಸ್ತಾನದಲ್ಲಿ ಕಳೆದ ತಿಂಗಳು ಸರಣಿ ಹಂತಕನೊಬ್ಬ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣಗಳನ್ನು ಉದ್ದೇಶಿಸಿ ಅವರು ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಮಹಿಳೆಯರು ಮತ್ತು ಬಾಲಕಿಯರನ್ನು ಹಿಂಸಿಸದೇ ಇರುವ ದೇಶಗಳು ಈ ಗ್ರಹದ ಮೇಲೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಎಲ್ಲ ದಿಕ್ಕುಗಳಲ್ಲೂ ಇಂತಹ ನಡವಳಿಕೆಯನ್ನು ನಾವು ಕಾಣುತ್ತೇವೆ’ ಎಂದು ಡುಜಾರಿಕ್‌ ಅಭಿಪ್ರಾಯಪಟ್ಟಿದ್ದಾರೆ.

‘ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ವಿಶ್ವಸಂಸ್ಥೆ ಮಾಡುತ್ತಿದೆ. ಹಲವಾರು ಕಾರ್ಯಕ್ರಮಗಳ ಮೂಲಕ, ವಿಶ್ವಸಂಸ್ಥೆ–ಮಹಿಳೆ, ಯುಎನ್‌ಎಫ್‌ಪಿಎ (ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ), ಯುನಿಸೆಫ್‌ (ವಿಶ್ವಸಂಸ್ಥೆಯ ಮಕ್ಕಳ ಕಲ್ಯಾಣ ನಿಧಿ) ಮತ್ತು ಇತರರ ಮೂಲಕ ಸರ್ಕಾರಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕೆಂಬ ಸಂದೇಶಗಳನ್ನು ಸಮಾಜಕ್ಕೆ ತಲುಪಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)