ಇ–ವೇ ಬಿಲ್‌: ದೋಷಮುಕ್ತ ವ್ಯವಸ್ಥೆ ನೀಡಲು ಸೂಚನೆ

7

ಇ–ವೇ ಬಿಲ್‌: ದೋಷಮುಕ್ತ ವ್ಯವಸ್ಥೆ ನೀಡಲು ಸೂಚನೆ

Published:
Updated:

ನವದೆಹಲಿ: ಇ–ವೇ ಬಿಲ್ ವ್ಯವಸ್ಥೆಯಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಯ ಬಗ್ಗೆ ವರದಿ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯವು ಜಿಎಸ್‌ಟಿಎನ್‌ಗೆ ಕೇಳಿದೆ.

‘ಪೂರ್ಣ ಪ್ರಮಾಣದಲ್ಲಿ ಮರು ಜಾರಿಗೆ ತರುವುದಕ್ಕೂ ಮುನ್ನವೇ ತಾಂತ್ರಿಕ ದೋಷಗಳನ್ನು ಬಗೆಹರಿಸುವಂತೆ ಜಿಎಸ್‌ಟಿಎನ್‌ಗೆ ಸೂಚನೆ ನೀಡಲಾಗಿದೆ’ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ತಿಳಿಸಿದ್ದಾರೆ.

‘ಜಿಎಸ್‌ಟಿಎನ್‌ ಅಧ್ಯಕ್ಷ ಎ.ಬಿ. ಪಾಂಡೆ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ತಾಂತ್ರಿಕ ದೋಷಕ್ಕೆ ಕಾರಣ ಏನು ಮತ್ತು ಅದನ್ನು ಬಗೆಹರಿಸಲು ಎಷ್ಟು ಸಮಯ ಬೇಕು ಎಂದು ಕೇಳಿದ್ದೇನೆ. ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಇ–ವೇ ಬಿಲ್‌ ಪರಿಚಯಿಸಲಾಗಿದೆ. ವ್ಯವಸ್ಥೆಯು ಸಂಪೂರ್ಣವಾಗಿ ಸಿದ್ಧವಾದ ಬಳಿಕ ಕೆಲವೇ ವಾರಗಳಲ್ಲಿ ಮತ್ತೆ ಜಾರಿಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

‘ಪ್ರಾಯೋಗಿಕ ಬಳಕೆಯಲ್ಲಿ ವ್ಯವಸ್ಥೆ ಉತ್ತಮವಾಗಿಯೇ ಕಾರ್ಯನಿರ್ವಹಿಸಿದೆ. ಆದರೆ ದುರದೃಷ್ಟವಶಾತ್‌ ಜಾಲತಾಣಕ್ಕೆ ಹೊರೆ ಹೆಚ್ಚಾಗಿದ್ದರಿಂದ ಸರ್ವರ್‌ ನಿಧಾನವಾಗಿದೆ. ಒಂದು ಗಂಟೆಗೆ 2 ರಿಂದ 3 ಲಕ್ಷ ಬಿಲ್‌ ಸೃಷ್ಟಿಯಾಗಿದೆ. ಈ ಹಂತದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣವೇ ಬಳಕೆಯನ್ನು ನಿಲ್ಲಿಸಲಾಯಿತು’ ಎಂದು ವಿವರಿಸಿದ್ದಾರೆ.

ಪೂರ್ವನಿಗದಿಯಂತೆ ದೇಶದಾದ್ಯಂತ ಫೆಬ್ರುವರಿ 1 ರಿಂದಲೇ ಇ–ವೇ ಬಿಲ್‌ ಜಾರಿಗೆ ಬರಬೇಕಿತ್ತು. ಆದರೆ ಬಿಲ್‌ ಸೃಷ್ಟಿಸುವಾಗ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಬಳಕೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಪ್ರಾಯೋಗಿಕ ಬಳಕೆಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕ ಬಳಕೆಯಲ್ಲಿ 28.4 ಲಕ್ಷ ಬಿಲ್‌ ಸೃಷ್ಟಿಯಾಗಿದೆ.

ಏನಿದು ಇ–ವೇ ಬಿಲ್‌: ₹ 50,000 ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸಲು ಇ–ವೇ ಬಿಲ್ ಕಡ್ಡಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry