ಬುಧವಾರ, ಡಿಸೆಂಬರ್ 11, 2019
22 °C

ಕಂಪನಿ ತೆರಿಗೆ: ಬೃಹತ್‌ ಉದ್ದಿಮೆಗಳ ಅತೃಪ್ತಿ

Published:
Updated:
ಕಂಪನಿ ತೆರಿಗೆ:  ಬೃಹತ್‌ ಉದ್ದಿಮೆಗಳ ಅತೃಪ್ತಿ

ನವದೆಹಲಿ: ಬಜೆಟ್‌ನಲ್ಲಿ ಕಾರ್ಪೊರೇಟ್‌ ತೆರಿಗೆಯನ್ನು ಎಲ್ಲರಿಗೂ ಅನ್ವಯಿಸಿ ಕಡಿತ ಮಾಡದಿರುವುದಕ್ಕೆ ಬೃಹತ್ ಉದ್ದಿಮೆ ಸಂಸ್ಥೆಗಳು ತಮ್ಮ ತೀವ್ರ ಅತೃಪ್ತಿ ದಾಖಲಿಸಿವೆ.

ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್ಎಂಇ) ಕೈಗಾರಿಕೆಗಳಿಗೆ ತೆರಿಗೆ ಪರಿಹಾರ ಒದಗಿಸಿರುವುದಕ್ಕೆ ವಾರ್ಷಿಕ ₹ 250 ಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ದಿಮೆಗಳು ತಮ್ಮ ತೀವ್ರ ಅಸಮಾಧಾನ ಹೊರಹಾಕಿವೆ. ಸರ್ಕಾರ ತಾನು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ತೆರಿಗೆ ಕಡಿತ ಮಾಡದಿರುವುದರಿಂದ ಭಾರತದ ಉದ್ದಿಮೆಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿವೆ.

ವರ್ಷಕ್ಕೆ ₹ 250 ಕೋಟಿಗಳಿಗಿಂತ ಕಡಿಮೆ ವಹಿವಾಟು ನಡೆಸುವ ಉದ್ದಿಮೆಗಳಿಗೆ ಕಂಪನಿ ತೆರಿಗೆಯನ್ನು 2018–19ರ ಬಜೆಟ್‌ನಲ್ಲಿ ಶೇ 30 ರಿಂದ ಶೇ 25ಕ್ಕೆ ಇಳಿಸಲಾಗಿದೆ. ₹ 250 ಕೋಟಿಗಳಿಗಿಂತ ಹೆಚ್ಚಿನ ವಹಿವಾಟು ನಡೆಸುವ ಕಾರ್ಪೊರೇಟ್‌ಗಳಿಗೆ ಶೇ 30ರಷ್ಟು ತೆರಿಗೆಯನ್ನೇ ಉಳಿಸಿಕೊಳ್ಳಲಾಗಿದೆ.

‘ಈ ತೆರಿಗೆ ಕಡಿತವು ತೆರಿಗೆ ಪಾವತಿಸುವ ಕಂಪನಿಗಳಲ್ಲಿ ಶೇ 99 ರಷ್ಟು ಪಾಲು ಹೊಂದಿರುವ ‘ಎಂಎಸ್‌ಎಂಇ’ಗಳಿಗೆ ಹೆಚ್ಚು ಲಾಭದಾಯಕವಾಗಿರಲಿದೆ’ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದರು.

‘ಶೇ 99ರಷ್ಟು ಎಂಎಸ್ಎಂಇಗಳು ತೆರಿಗೆ ಪಾವತಿಸುತ್ತಿದ್ದರೂ, ಪಾವತಿಯಾಗುವ ಒಟ್ಟಾರೆ ಕಾರ್ಪೊರೇಟ್‌ ತೆರಿಗೆಗಳಲ್ಲಿ ಈ ವಲಯದ ಪಾಲು ಕೇವಲ ಶೇ 1ರಷ್ಟು ಇದೆ’ ಎಂದು ಗೊದ್ರೇಜ್‌ ಸಮೂಹದ ಅಧ್ಯಕ್ಷ ಆದಿ ಗೊದ್ರೇಜ್‌ ಹೇಳಿದ್ದಾರೆ.

‘ಬಂಡವಾಳ ಹೂಡಿಕೆ ಉತ್ತೇಜಿಸಲು ಅಮೆರಿಕ, ಇಂಗ್ಲೆಂಡ್‌ ಮತ್ತು ಚೀನಾಗಳಲ್ಲಿ ಈ ತೆರಿಗೆ ತಗ್ಗಿಸಲಾಗಿದೆ. ಚೀನಾದಲ್ಲಿಯೂ ಇದು ಶೇ 25ರ ಮಟ್ಟದಲ್ಲಿ ಇದೆ. ನಮ್ಮಲ್ಲೂ ಹೀಗೆ ತೆರಿಗೆ ದರ ತಗ್ಗಿಸದಿದ್ದರೆ ಭಾರತವು ಜಾಗತಿಕವಾಗಿ ಸ್ಪರ್ಧಿಸುವಲ್ಲಿ ಹಿಂದೆ ಬೀಳಲಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಬರೀ ಎಂಎಸ್‌ಎಂಇಗಳು ಪಾವತಿಸುವ ತೆರಿಗೆಯಿಂದಷ್ಟೇ ಅರ್ಥವ್ಯವಸ್ಥೆ  ಮುನ್ನಡೆಸಲು ಸಾಧ್ಯವಾಗುವುದಿಲ್ಲ. ದೊಡ್ಡ ಕಾರ್ಪೊರೇಟ್‌ಗಳೂ ಗಮನಾರ್ಹ ಪ್ರಮಾಣದಲ್ಲಿ ತೆರಿಗೆ ಪಾವತಿಸುತ್ತವೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲಗೊಂಡಿದೆ’ ಎಂದು ಪ್ರಮುಖ ಕಂಪನಿಯ ಮುಖ್ಯಸ್ಥರೊಬ್ಬರು ಹೆಸರು ಬಹಿರಂಗಪಡಿಸದ ಷರತ್ತಿನ ಮೇಲೆ ತಮ್ಮ ಅತೃಪ್ತಿ ಹೊರಹಾಕಿದ್ದಾರೆ.

ಪ್ರತಿಕ್ರಿಯಿಸಿ (+)