ಶುಕ್ರವಾರ, ಡಿಸೆಂಬರ್ 13, 2019
27 °C

ನವೋದ್ಯಮಗಳಿಗೆ ನಿರಾಶೆ ತಂದ ಬಜೆಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವೋದ್ಯಮಗಳಿಗೆ ನಿರಾಶೆ ತಂದ ಬಜೆಟ್‌

ಕೇಂದ್ರ ಬಜೆಟ್‌ನಲ್ಲಿ ಅನೇಕ ಪರಿಹಾರ ಕ್ರಮಗಳು ಘೋಷಣೆಯಾಗಲಿವೆ ಎಂದು ಸಣ್ಣ ವ್ಯವಹಾರಸ್ಥರು ಹಾಗೂ ನವೋದ್ಯಮಿಗಳು ಭರವಸೆ ಇಟ್ಟಿದ್ದರು. ಕಾರ್ಪೊರೇಟ್ ತೆರಿಗೆ, ಜಿಎಸ್‌ಟಿ, ಟಿಡಿಎಸ್‌ (ಮೂಲದಲ್ಲೇ ತೆರಿಗೆ ಸಂಗ್ರಹಿಸುವ ) ಗಳಿಂದ ಹಿಡಿದು ನವೋದ್ಯಮಗಳಲ್ಲಿ ಭಾರತೀಯರು ಹೂಡುವ ಬಂಡವಾಳದ ಮೇಲೆ ಹಾಕುವ ತೆರಿಗೆ (ಏಂಜೆಲ್ ಟ್ಯಾಕ್ಸ್) ಮತ್ತು ಈ ಉದ್ಯಮಗಳಲ್ಲಿನ ನೌಕರರ ಆದಾಯ ತೆರಿಗೆ ಮಿತಿಯ ವಿವಿಧ ಶ್ರೇಣಿಯ (ಸ್ಲ್ಯಾಬ್) ಬದಲಾವಣೆ ಮಾಡಬೇಕು ಎಂಬುದೂ ಸೇರಿದಂತೆ ಈಡೇರಿಸಬೇಕಾದ ಬೇಡಿಕೆಗಳ ದೊಡ್ಡ ಪಟ್ಟಿಯೇ ಇತ್ತು. ಈ ನಿಟ್ಟಿನಲ್ಲಿ ಕಾರ್ಪೊರೇಟ್ ಟ್ಯಾಕ್ಸ್‌ಗಳನ್ನು ಕೆಲ ಉದ್ದಿಮೆಗಳಿಗೆ ಕಡಿಮೆ ಮಾಡಿರುವುದು ಸಿಹಿ ಸುದ್ದಿಯಾದರೆ, ನವೋದ್ಯಮದ ಬೇಡಿಕೆ ಸೇರಿದಂತೆ ಇತರೆ ಬೇಡಿಕೆಗಳನ್ನು ಪರಿಗಣಿಸದೇ ಇರುವುದು ನಿರಾಶೆ ತಂದಿದೆ.

ಕಾರ್ಪೊರೇಟ್ ತೆರಿಗೆಯ ದರ ಕಡಿತ ಮಾಡಿರುವುದು ದೊಡ್ಡ ಮಟ್ಟದ ನಿರಾಳತೆ ತಂದಿದೆ.  ₹ 250 ಕೋಟಿ ವರೆಗೆ ವಾರ್ಷಿಕ ವಹಿವಾಟು ನಡೆಸುವ ಕಂಪನಿಗಳಿಗೆ ವಿಧಿಸುತ್ತಿದ್ದ ಕಾರ್ಪೊರೇಟ್ ತೆರಿಗೆ ದರವನ್ನು ಶೇ 30ರಿಂದ ಶೇ 25 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ. ಇದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇಗಳು) ಪ್ರೋತ್ಸಾಹದಾಯಕ ಕ್ರಮವಾಗಲಿದೆ. ಇಷ್ಟು ಮೊತ್ತದ ವಾರ್ಷಿಕ ವಹಿವಾಟು ನಡೆಸುವ ಕಂಪನಿಗಳನ್ನೂ ತೆರಿಗೆ ರಿಯಾಯ್ತಿ ವ್ಯಾಪ್ತಿಯಲ್ಲಿ ತರುವ ಮೂಲಕ ಎಂಎಸ್‌ಎಂಇಗಳು ಹಾಗೂ ನವೋದ್ಯಮಗಳಿಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ.

‘ಏಂಜೆಲ್ ಟ್ಯಾಕ್ಸ್’ ದರ ಶೇ 30ರಷ್ಟು ದುಬಾರಿಯಾಗಿದ್ದರಿಂದ 2017ರ ಮೊದಲಾರ್ಧದಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿದ್ದ ಹೊಸ ಹೂಡಿಕೆದಾರರ (ಮೊದಲ ಬಾರಿಗೆ ಬಂಡವಾಳ ಹೂಡುವವರು) ಪೈಕಿ ಶೇ 53ರಷ್ಟು ಮಂದಿ ಹಿಂದೆ ಸರಿದಿದ್ದರು ಎಂದು ರಾಷ್ಟ್ರೀಯ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ಒಕ್ಕೂಟ (ನಾಸ್ಕಾಂ) ಸೇರಿದಂತೆ ವಿವಿಧ ಕೈಗಾರಿಕಾ ಸಂಘಟನೆಗಳು ಅಭಿಪ್ರಾಯಪಟ್ಟಿದ್ದವು. ಏಂಜೆಲ್ ಟ್ಯಾಕ್ಸ್‌ ರದ್ದುಪಡಿಸಿದ್ದರೆ ಏಂಜೆಲ್ ಹೂಡಿಕೆದಾರರರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದೂ ಪ್ರತಿಪಾದಿಸಿದ್ದವು. ಆದರೆ, ಬಜೆಟ್‌ನಲ್ಲಿ ಏಂಜೆಲ್ ಟ್ಯಾಕ್ಸ್‌ ರದ್ದು ಮಾಡದೇ ಇರುವುದು ಇವರೆಲ್ಲರ ನಿರೀಕ್ಷೆ ಹುಸಿಯಾಗಿದೆ.

ಈ ತೆರಿಗೆಯು ವಿದೇಶಿಯರಿಗೆ ಅನ್ವಯವಾಗದೇ ದೇಶೀಯ ಹೂಡಿಕೆದಾರರಿಗೆ ಮಾತ್ರ ಅನ್ವಯಿಸುವಂತೆ ಇರುವುದು ಮತ್ತೊಂದು ದೊಡ್ಡ ತೊಡಕಾಗಿದೆ. ನಮ್ಮದೇ ಆದ ಹೂಡಿಕೆ ಮಾಡಬೇಕು ಎಂಬ ಅಪೇಕ್ಷೆ ಇರುವ ದೇಶಿಯ ಹೂಡಿಕೆದಾರರಿಗೆ ಇದು ದಂಡನಾರ್ಹ ಕ್ರಮದಂತಿದೆ.

ಆದಾಯ ತೆರಿಗೆ ಕಾಯ್ದೆಯ ಭಾಗವಾಗಿ 2012ರ ಬಜೆಟ್‌ನಲ್ಲಿ ಏಂಜಲ್ ಟ್ಯಾಕ್ಸ್ ಅನ್ನು ಜಾರಿಗೊಳಿಸಲಾಯಿತು. ಏಂಜೆಲ್ ಹೂಡಿಕೆಯು ನವೋದ್ಯಮಗಳ ಕ್ಷೇತ್ರದಲ್ಲಿನ ಆರಂಭಿಕ ಹಂತದ ಹೂಡಿಕೆಯಾಗಿತ್ತು ಹಾಗೂ ಹೂಡಿದ ಬಂಡವಾಳ ವಾಪಸ್‌ ಬರುತ್ತದೋ ಇಲ್ಲವೋ ಎಂಬ ಆತಂಕದ ಹೂಡಿಕೆಯೂ ಅದಾಗಿರುತ್ತದೆ. ಹೀಗಾಗಿ, ಏಂಜೆಲ್ ಹೂಡಿಕೆದಾರರು ಹಾಗೂ ನವೋದ್ಯಮಿಗಳಿಗೆ ಈ ತೆರಿಗೆಯಿಂದ ವಿನಾಯ್ತಿ ನೀಡಬೇಕಾದ ಅಗತ್ಯವಿತ್ತು.

ಏಂಜೆಲ್ ಟ್ಯಾಕ್ಸ್ ರದ್ದು ಪಡಿಸುವ ಮೂಲಕ ನವೋದ್ಯಮಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸುವ ಅಪೇಕ್ಷೆಯನ್ನು ಹುಸಿಗೊಳಿಸುವ ಬದಲು, ಸಣ್ಣ ಮತ್ತು ಆರಂಭಿಕ ಹೂಡಿಕೆದಾರರಿಗೆ ಉತ್ತೇಜನ ನೀಡಲು ಅನುಕೂಲಕರ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಸರ್ಕಾರ ಕೈಗೊಳ್ಳಬಹುದಾಗಿತ್ತು.

ಏಂಜೆಲ್‌ ಟ್ಯಾಕ್ಸ್ ರದ್ದುಪಡಿಸುವ ಜತೆಗೆ ಟಿಡಿಎಸ್‌ ಹಾಗೂ ಜಿಎಸ್‌ಟಿ ದರ ಕಡಿತಗೊಳಿಸುವ ಹಾಗೂ ಉದ್ಯೋಗಿಗಳ ಆದಾಯ ತೆರಿಗೆ ಮಿತಿಯ ಮೊತ್ತವನ್ನು ಹೆಚ್ಚಿಸುವ ಕ್ರಮವನ್ನು ಕೈಗೊಳ್ಳಬೇಕಾಗಿತ್ತು. ಆದರೆ, ಬಜೆಟ್‌ನಲ್ಲಿ ಈ ಯಾವ ಸಂಗತಿಗಳೂ ಪ್ರಸ್ತಾಪವಾಗಿಲ್ಲ.

ಪ್ರತಿಯೊಂದು ಉದ್ಯಮಕ್ಕೂ ತನ್ನದೇ ಆದ ವ್ಯಾವಹಾರಿಕ ಗುರುತನ್ನು ನೀಡುವ ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಲಾಗಿದೆ. ಈ ವಿಷಯದಲ್ಲಿ ಗಂಭೀರ ಚಿಂತನೆಗಳು ನಡೆಯಲಿವೆ ಎಂಬ ಭರವಸೆಯೂ ಇದೆ.

ಆದರೆ, ಜಿಎಸ್‌ಟಿ ಜಾರಿ ಹಾಗೂ ನೋಟು ರದ್ದತಿಯ ಕ್ರಮಗಳು ಹಿಂದೆಂದೂ ಕಾಣದಂತಹ ದುಷ್ಪರಿಣಾಮಗಳನ್ನು ಉದ್ಯಮದ ಮೇಲೆ ಬೀರಿವೆ. 2015ರಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿದ್ದ ನವೋದ್ಯಮಗಳ ಬೆಳವಣಿಗೆಯ ದರ ಕಳೆದ ವರ್ಷ ಬಹುತೇಕ ಸ್ಥಗಿತಗೊಂಡಿತ್ತು. ಹೀಗಾಗಿ, ನವೋದ್ಯಮಗಳಿಗೆ ಉತ್ತೇಜನ ನೀಡಬೇಕಾದ ಕ್ರಮಗಳತ್ತ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ.

(ನಾಗರಾಜು. ಎಂ: ಆಸ್ತಿ ನಿರ್ವಹಿಸುವ ನವೋದ್ಯಮ ‘ರೆಂಟ್ ಪ್ರಾಪ್4ಯು’ದ ಸಿಇಒ)

ಪ್ರತಿಕ್ರಿಯಿಸಿ (+)