ಮಂಗಳವಾರ, ಡಿಸೆಂಬರ್ 10, 2019
20 °C
ಸ್ವಲ್ಪದರಲ್ಲೆ ಪಾರಾದ ಶಾಲಾ ಮಕ್ಕಳು

ಹೊತ್ತಿ ಉರಿದ ಮಿನಿ ಬಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊತ್ತಿ ಉರಿದ ಮಿನಿ ಬಸ್‌

ಹೊಸಪೇಟೆ: ಶಾಲಾ ಮಕ್ಕಳಿದ್ದ ಮಿನಿ ಬಸ್ಸಿಗೆ, ಶುಕ್ರವಾರ ಇಲ್ಲಿನ ಹೊರವರ್ತುಲ ರಸ್ತೆಯಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗನೇ ಉರಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.

‘ಇಳಕಲ್‌ ತಾಲ್ಲೂಕಿನ ವಜ್ಜಲ್‌ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 39 ಮಕ್ಕಳು ಹಂಪಿ ಪ್ರವಾಸಕ್ಕೆ ಬಂದಿದ್ದರು.  ಪ್ರವಾಸ ಮುಗಿಸಿಕೊಂಡು ರಾತ್ರಿ 8ಗಂಟೆ ಸುಮಾರಿಗೆ ಹಿಂತಿರುಗುತ್ತಿದ್ದಾಗ ಬಸ್ಸಿನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನ ಹಿಂದೆ ಬರುತ್ತಿದ್ದ ಜಿಂದಾಲ್‌ ಕಂಪನಿ ಬಸ್ಸಿನ ಚಾಲಕ ಅದನ್ನು ಗಮನಿಸಿದ್ದಾರೆ. ಕೂಡಲೇ ಓವರ್‌ಟೇಕ್‌ ಮಾಡಿ ಅದನ್ನು ನಿಲ್ಲಿಸಿದ್ದಾರೆ. ಬಸ್ಸಿನಲ್ಲಿದ್ದ ಎಲ್ಲ ಮಕ್ಕಳು, ನಾಲ್ವರು ಶಿಕ್ಷಕರು ಹಾಗೂ ಚಾಲಕ ಕೆಳಗಿಳಿದು ದೂರ ಹೋಗಿದ್ದಾರೆ. ಈ ವೇಳೆ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿಕೊಂಡು ಧಗಧಗನೆ ಉರಿದಿದೆ. ಬಸ್ಸಿನಲ್ಲಿದ್ದ ಮಕ್ಕಳ ಬಟ್ಟೆ ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

‘ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎನ್ನುವುದು ತಿಳಿದಿಲ್ಲ. ಬಸ್ಸಿನಲ್ಲಿ ಸಿಲಿಂಡರ್‌ ಕೂಡ ಇತ್ತು. ಅದೃಷ್ಟಕ್ಕೆ ಅದಕ್ಕೆ ಬೆಂಕಿ ಹೊತ್ತಿಕೊಂಡಿಲ್ಲ. ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿದೆ’ ಎಂದು ಹೇಳಿದರು.

ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಸುಮಾರು ಅರ್ಧಗಂಟೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಪ್ರತಿಕ್ರಿಯಿಸಿ (+)