ಯಾತ್ರೆ ನಂತರ ಸಮಾವೇಶಗಳ ಸರಮಾಲೆ

7
ವಿವಿಧ ಸಮುದಾಯಗಳನ್ನು ಸೆಳೆಯಲು ಬಿಜೆಪಿ ತಂತ್ರ

ಯಾತ್ರೆ ನಂತರ ಸಮಾವೇಶಗಳ ಸರಮಾಲೆ

Published:
Updated:

ನವದೆಹಲಿ: ವಿಧಾನಸಭೆ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಮೂರು ತಿಂಗಳಿಂದ ನಡೆಸುತ್ತಿರುವ ಪರಿವರ್ತನಾ ಯಾತ್ರೆ ಇದೇ 4ರಂದು ಕೊನೆಗೊಳ್ಳಲಿದ್ದು, ನಂತರವೂ ರಾಜ್ಯದಾದ್ಯಂತ ವಿವಿಧ ರೀತಿಯ ಸಮಾವೇಶ ಆಯೋಜಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ– ಪಂಗಡಗಳ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಸಮಾವೇಶ ಆಯೋಜಿಸುವಂತೆ, ಇತ್ತೀಚೆಗೆ ಪಕ್ಷದ ಹೈಕಮಾಂಡ್‌ ರಾಜ್ಯ ಮುಖಂಡರೊಂದಿಗೆ ಸಭೆ ನಡೆಸಿ ತೀರ್ಮಾನಿಸಿದೆ.

ಪರಿವರ್ತನಾ ಯಾತ್ರೆ ಮುಗಿಯುತ್ತಿದ್ದಂತೆಯೇ ಆಯಾ ಜಾತಿ, ಸಮುದಾಯಗಳ ಸಮಾವೇಶ ಆಯೋಜಿಸುವ ನಿಟ್ಟಿನಲ್ಲಿ ರೂಪು– ರೇಷೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಹೈಕಮಾಂಡ್‌ ಮೂಲಗಳು ಖಚಿತಪಡಿಸಿವೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ವಿಧಾನಸಭೆ ಚುನಾವಣೆಯ ಉಸ್ತುವಾರಿಗಳಾದ ಪ್ರಕಾಶ್‌ ಜಾವಡೇಕರ್‌, ಪೀಯೂಷ್‌ ಗೋಯಲ್‌, ಪಕ್ಷದ ರಾಜ್ಯ ಉಸ್ತುವಾರಿ ಪಿ.ಮುರಳೀಧರ ರಾವ್‌, ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರೊಂದಿಗೆ ಕಳೆದ ಭಾನುವಾರ ಸಭೆ ನಡೆಸಿ ಈ ಕುರಿತು ಚರ್ಚಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಮಾರನೇ ದಿನ ತಡರಾತ್ರಿವರೆಗೆ ರಾಜ್ಯ ಮುಖಂಡರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ, ಆರ್‌.ಅಶೋಕ್‌, ಅರವಿಂದ ಲಿಂಬಾವಳಿ ಮತ್ತಿತರರೊಂದಿಗೆ ಈ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ಅಂಬಿಗರ ಚೌಡಯ್ಯ ಸಮಾವೇಶ, ಹಡಪದ ಅಪ್ಪಣ್ಣ ಸಮಾವೇಶ ಹಾಗೂ ಬೀದರ್‌, ಧಾರವಾಡ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮರಾಠಾ ಸಮುದಾಯದವರನ್ನು ಸೆಳೆಯಲು ಛತ್ರಪತಿ ಶಿವಾಜಿ ಸಮಾವೇಶ ಆಯೋಜಿಸುವಂತೆಯೂ ನಿರ್ದೇಶನ ನೀಡಲಾಗಿದೆ.

ವಿಶೇಷವಾಗಿ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಕೋಲಾರ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿಯೇ ಸಮಾವೇಶ ಆಯೋಜಿಸುವಂತೆ ಶಾ ಸೂಚಿಸಿದ್ದಾರೆ.

ಸಂಸತ್‌ನ ಬಜೆಟ್‌ ಅಧಿವೇಶನವು ಏಪ್ರಿಲ್‌ ಮೊದಲ ವಾರ ಮುಕ್ತಾಯವಾಗಲಿದೆ. ನಂತರ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದ್ದು, ಅಷ್ಟರೊಳಗೆ ಸಮಾವೇಶಗಳನ್ನು ಪೂರ್ಣಗೊಳಿಸಬೇಕು ಎಂಬುದು ಹೈಕಮಾಂಡ್‌ ಆಶಯವಾಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖಂಡ ಕೆ.ಎಸ್‌. ಈಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry