ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಗೆ ಬಜೆಟ್‌ ಏಟು: ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹4.6 ಲಕ್ಷ ಕೋಟಿ ಇಳಿಕೆ

Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ : ದೇಶಿ ಷೇರುಪೇಟೆ ವಹಿವಾಟಿನ ಮೇಲೆ ಕೇಂದ್ರ ಬಜೆಟ್‌ನ ಪ್ರತಿಕೂಲ ಪರಿಣಾಮವು ಸತತ ಎರಡನೇ ದಿನವೂ ಮುಂದುವರೆದಿದ್ದು, ಹೂಡಿಕೆದಾರರ ಸಂಪತ್ತು ಹಠಾತ್ತಾಗಿ ₹ 4.6 ಲಕ್ಷ ಕೋಟಿಗಳಷ್ಟು ಕರಗಿ, ವಹಿವಾಟುದಾರರ ಪಾಲಿನ ‘ಶುಭ ಶುಕ್ರವಾರ’ವು ಕರಾಳ ದಿನವಾಗಿ ಪರಿಣಮಿಸಿತು.

ಷೇರುಪೇಟೆಗೆ ಅನ್ವಯಿಸುವ ಬಜೆಟ್‌ನಲ್ಲಿನ ತೆರಿಗೆ ಪ್ರಸ್ತಾವಗಳು ಹೂಡಿಕೆದಾರರ ಉತ್ಸಾಹ ಉಡುಗಿಸಿವೆ. ಷೇರುಗಳ ಬೆಲೆಗಳು ಇಸ್ಪೀಟ್‌ ಎಲೆಗಳಂತೆ ಪಟಪಟನೆ ಕುಸಿದು ಬಿದ್ದ ಕಾರಣ ಪೇಟೆಯ ಮಾರುಕಟ್ಟೆ ಮೌಲ್ಯವೂ ದಿಢೀರನೆ ₹ 148.54 ಲಕ್ಷ  ಕೋಟಿಗಳಿಗೆ ಕುಸಿಯಿತು.

ಹಿಂದಿನ ವಾರಗಳಲ್ಲಿ ದಿನಕ್ಕೊಂದು ಹೊಸ ದಾಖಲೆ ಬರೆಯುತ್ತ ಅಚ್ಚರಿ ಮೂಡಿಸಿದ್ದ ಸಂವೇದಿ ಸೂಚ್ಯಂಕವು ಈಗ ಬಜೆಟ್‌ ಪ್ರಸ್ತಾವಕ್ಕೆ ಬೆದರಿ ಸತತ ಎರಡು ದಿನ ಕುಸಿತ ದಾಖಲಿಸಿದೆ.

ಈ ಬೆಳವಣಿಗೆಗೆ ಸ್ವದೇಶಿ ಮತ್ತು ವಿದೇಶಿ ವಿದ್ಯಮಾನಗಳು ಕೊಡುಗೆ ನೀಡಿವೆ. ಜಪಾನ್‌, ಶಾಂಘೈ, ಹಾಂಕಾಂಗ್‌ ಮತ್ತು ದಕ್ಷಿಣ ಕೊರಿಯಾ ಷೇರುಪೇಟೆಗಳಲ್ಲಿಯೂ ಶುಕ್ರವಾರ ತೀವ್ರ ಕುಸಿತ ಕಂಡುಬಂದಿತ್ತು.

ಭಾರಿ ಕುಸಿತ: ಪೇಟೆಯ ವಹಿವಾಟು ಎರಡೂವರೆ ವರ್ಷಗಳ ಬಳಿಕ ಭಾರಿ ಕುಸಿತ ಕಂಡಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಶುಕ್ರವಾರ 840 ಅಂಶ ಕುಸಿದು, 35,067 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು. ಎರಡೂವರೆ ವರ್ಷಗಳಲ್ಲಿಯೇ ದಿನದ ವಹಿವಾಟಿನ ಗರಿಷ್ಠ ಕುಸಿತ ಇದಾಗಿದೆ. 2015ರ ಆಗಸ್ಟ್‌ 24 ರಂದು ಸೂಚ್ಯಂಕ 1,624 ಅಂಶಗಳಷ್ಟು ಭಾರಿ ಕುಸಿತ ಕಂಡಿತ್ತು.  ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 256 ಅಂಶ ಇಳಿಕೆ ಕಂಡು, 10,761 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಕುಸಿತದ ಕಾರಣಗಳು: ವಹಿವಾಟು ಗಣನೀಯವಾಗಿ ಕುಸಿತ ಕಾಣಲು ಹಲವಾರು ಕಾರಣಗಳಿವೆ.

ಬಂಡವಾಳ ಗಳಿಕೆ ತೆರಿಗೆ: 18 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಬಂಡವಾಳ ಗಳಿಕೆ ಮೇಲೆ ತೆರಿಗೆ (ಎಲ್‌ಟಿಸಿಜಿ) ವಿಧಿಸಿದೆ. ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಉಳಿಸಿಕೊಂಡಿರುವುದು ಪೇಟೆಯಲ್ಲಿ ತಲ್ಲಣ ಮೂಡಿಸಿದೆ. ಷೇರುಪೇಟೆಯಲ್ಲಿ ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ದೀರ್ಘಾವಧಿಯ ಬಂಡವಾಳ ಗಳಿಕೆ ಮೇಲೆ ಶೇ 10 ರಷ್ಟು ತೆರಿಗೆ ವಿಧಿಸಲಾಗಿದೆ. ₹ 1 ಲಕ್ಷ ಮೊತ್ತವನ್ನು ಮೀರುವ ದೀರ್ಘಾವಧಿಯ ಬಂಡವಾಳ ಗಳಿಕೆಗೆ ಶೇ 10 ರಷ್ಟು ತೆರಿಗೆ ಪಾವತಿಸುವುದು ದೊಡ್ಡ ವಹಿವಾಟಿನ ಹೂಡಿಕೆದಾರರಿಗೆ ಒಪ್ಪಿಗೆಯಾಗಿಲ್ಲ.

2018ರ ಜನವರಿ 31ರವರೆಗಿನ ಗಳಿಕೆಗೆ ಈ ತೆರಿಗೆ ಅನ್ವಯಿಸುವುದಿಲ್ಲ ಎಂದು ಹೇಳಿರುವುದು ಸಕಾರಾತ್ಮಕ ನಿರ್ಧಾರವಾಗಿದ್ದರೂ, ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿದೆ. ಷೇರು ಸಂಬಂಧಿತ ಮ್ಯೂಚುವಲ್ ಫಂಡ್‌ಗಳ ವರಮಾನ ವಿತರಣೆಯ ಮೇಲೂ ಶೇ 10 ರಷ್ಟು ತೆರಿಗೆ ವಿಧಿಸಲಾಗಿದೆ. ಈ ಎಲ್ಲ ಕ್ರಮಗಳು ಹೂಡಿಕೆದಾರರನ್ನು ನಿರುತ್ಸಾಹಗೊಳಿಸಿವೆ.

ವಿತ್ತೀಯ ಕೊರತೆ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ 3.2 ರಲ್ಲಿ ನಿಯಂತ್ರಿಸುವ ಅಂದಾಜು ಮಾಡಲಾಗಿತ್ತು. ಆದರೆ, ಬಜೆಟ್‌ನಲ್ಲಿ ವಿತ್ತೀಯ ಕೊರತೆ ನಿಯಂತ್ರಣದ ಅಂದಾಜನ್ನು ಶೇ 3.2 ರಿಂದ ಶೇ 3.5ಕ್ಕೆ ಏರಿಕೆ ಮಾಡಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಸಾಲದ ಹೊರೆ: ಕೇಂದ್ರ ಸರ್ಕಾರದ ಗರಿಷ್ಠ ಸಾಲದ ಹೊರೆಯು ಭಾರತದ ಮಾನದಂಡ ನವೀಕರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೇಟಿಂಗ್ ಸಂಸ್ಥೆ ಫಿಚ್‌ ಹೇಳಿರುವುದು ಕೂಡ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

‘ಬಜೆಟ್‌ನಲ್ಲಿ ಆರ್ಥಿಕ ಶಿಸ್ತನ್ನು ಬಲಿ ಕೊಟ್ಟಿರುವುದರಿಂದ ಷೇರುಪೇಟೆಯಲ್ಲಿ ಚಂಚಲ ವಹಿವಾಟಿಗೆ ಕಾರಣವಾಗಿದೆ. ಹೀಗಾಗಿ ಮುಂಬರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಕಠಿಣ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಮಾರುಕಟ್ಟೆ ಮುಖ್ಯಸ್ಥ ಆನಂದ್ ಜೇಮ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ದಿನದ ವಹಿವಾಟಿನಲ್ಲಿ ಬಜಾಜ್‌ ಆಟೊ ಷೇರುಗಳು ಶೇ 4.90 ರಷ್ಟು ಗರಿಷ್ಠ ಕುಸಿತ ಕಂಡರೆ, ಭಾರ್ತಿ ಏರ್‌ಟೆಲ್‌ ಷೇರು ಶೇ 4.62 ರಷ್ಟು ಇಳಿಕೆ ಕಂಡಿದೆ.

ಗುರುವಾರದ ವಹಿವಾಟಿನಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 358 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಹೂಡಿಕೆದಾರರು ₹ 1,099 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಅಲ್ಪಾವಧಿ ವಿದ್ಯಮಾನ
‘ಇದೊಂದು ಅಲ್ಪಾವಧಿ ವಿದ್ಯಮಾನವಾಗಿದೆ. ವಹಿವಾಟು ದಾರರು ಆತಂಕಪಡ ಬೇಕಾಗಿಲ್ಲ. ದೇಶದ ಆರ್ಥಿಕ ವೃದ್ಧಿ ಅಖಂಡವಾಗಿದೆ’ ಎಂದು ಹೇಳಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ  ಸುಭಾಷಚಂದ್ರ ಗರ್ಗ್‌ ಅವರು ಹೂಡಿಕೆದಾರರ ಆತಂಕ ಶಮನ ಮಾಡಲು ಮುಂದಾಗಿದ್ದಾರೆ.

ಬಜೆಟ್‌ಗೆ ಪೇಟೆಯ ಅವಿಶ್ವಾಸ ಮಂಡನೆ

‘ಕೇಂದ್ರದ ಬಜೆಟ್‌ ವಿರುದ್ಧ ಷೇರುಪೇಟೆಯು ಅವಿಶ್ವಾಸ ಮಂಡನೆ ಮಾಡಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

‘ಸಂಸದೀಯ ಭಾಷೆಯಲ್ಲಿ ಹೇಳುವುದಾದರೆ, ನರೇಂದ್ರ ಮೋದಿ ಅವರ ಬಜೆಟ್‌ಗೆ ಪೇಟೆಯು 800 ಅಂಶಗಳ ಅವಿಶ್ವಾಸ ಮಂಡನೆ ಮಾಡಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT