ಸೋಮವಾರ, ಡಿಸೆಂಬರ್ 9, 2019
22 °C
16 ವರ್ಷಗಳ ನಂತರ ಕಾಲೇಜು ಶಿಕ್ಷಣ ಇಲಾಖೆಯ ಅಧ್ಯಾಪಕರ ಹೋರಾಟಕ್ಕೆ ಸಿಕ್ಕ ಜಯ

‘ಗ್ರೂಪ್‌’–ಎ ಶ್ರೇಣಿ ಪಡೆದ ಬೋಧಕರು

ಎಸ್. ಸಂಪತ್ Updated:

ಅಕ್ಷರ ಗಾತ್ರ : | |

‘ಗ್ರೂಪ್‌’–ಎ ಶ್ರೇಣಿ ಪಡೆದ ಬೋಧಕರು

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಬೋಧಕರು (ಹಿರಿಯ ಶ್ರೇಣಿ, ಆಯ್ಕೆ ಶ್ರೇಣಿ) ಹಿಂದೆ ಹೊಂದಿದ್ದ ‘ಗ್ರೂಪ್‌–ಎ’ ಶ್ರೇಣಿಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ 2002ರಲ್ಲಿ ಹೊರಡಿಸಿದ್ದ ಆದೇಶದಿಂದ ಬೋಧಕರು ‘ಗ್ರೂಪ್‌–ಬಿ’ ಶ್ರೇಣಿಗೆ ಹಿಂಬಡ್ತಿ ಪಡೆದಿದ್ದರು. ಮರಳಿ ಪಡೆಯಲು 16 ವರ್ಷಗಳಿಂದ ಹೋರಾಟ ನಡೆಸಿದ್ದರು.

’ಯುಜಿಸಿ ವೇತನಶ್ರೇಣಿಗಳನ್ನು ಆಧರಿಸಿ ಬೋಧಕ ವೃಂದದ ಹುದ್ದೆಗಳನ್ನು ಪುನರ್‌ವರ್ಗೀಕರಿಸುವ ಕುರಿತು ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳುವವರೆಗೆ ಹಿರಿಯ ಮತ್ತು ಆಯ್ಕೆ ಶ್ರೇಣಿ ಉಪನ್ಯಾಸಕರನ್ನು ಗ್ರೂಪ್‌–ಎ ಶ್ರೇಣಿ ಎಂದು ಪರಿಗಣಿಸುವುದಾಗಿ’ ಸರ್ಕಾರ ಗುರುವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

‘ಈ ಬೋಧಕರನ್ನು ಗ್ರೂಪ್‌–ಬಿ ಶ್ರೇಣಿಗೆ ಸೇರಿದ ಅಧಿಕಾರಿಗಳು ಎಂದು ಪರಿಗಣಿಸಿ ಇಲಾಖೆ ಆಯುಕ್ತರು 2002ರ ಮೇ 8 ಮತ್ತು 13 ರಂದು ಹೊರಡಿಸಿದ್ದ ಪತ್ರ ಮತ್ತು ಪ್ರಾಂಶುಪಾಲರ (ಗ್ರೇಡ್‌–1) ವೃಂದಕ್ಕೆ ಪದೋನ್ನತಿ ನೀಡುವಾಗ ಮೀಸಲಾತಿ ನೀತಿಯನ್ನು ಅನ್ವಯಿಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದಿರುವುದಾಗಿ’ ಆದೇಶ ಉಲ್ಲೇಖಿಸಿದೆ. 

ಯಾರಿಗೆ ಅನುಕೂಲ: ಈ ಆದೇಶದಿಂದ ಕಾಲೇಜು ಶಿಕ್ಷಣ ಇಲಾಖೆಯ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 5,400 ಬೋಧಕರಿಗೆ ಶ್ರೇಣಿ ಬದಲಾಗುವುದರ ಜತೆಗೆ ಅವರು ಪಡೆಯುವ ಕೆಲ ಸೌಲಭ್ಯಗಳೂ ಏರಿಕೆಯಾಗಲಿವೆ.

‘ಬೋಧಕರ ಸಮೂಹ ವಿಮಾ ಯೋಜನೆ (ಜಿಐಎಸ್‌) ಮತ್ತು ಮರಣ ಅಥವಾ ನಿವೃತ್ತಿ ಉಪದಾನ ಮೊತ್ತ ಕೂಡ ಹೆಚ್ಚಲಿದೆ. ‘ಗ್ರೂಪ್‌ ಬಿ’ ಶ್ರೇಣಿಯ ಸಿಬ್ಬಂದಿಗೆ ಜಿಐಎಸ್‌ ಅಡಿ ₹ 1.80 ಲಕ್ಷ, ‘ಗ್ರೂಪ್‌ ಎ’ ಶ್ರೇಣಿಯವರಿಗೆ ₹ 2.40 ಲಕ್ಷ ಇದೆ’ ಎಂದು ಕರ್ನಾಟಕ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ (ಕೆಜಿಸಿಟಿಎ) ಡಾ. ಪ್ರಕಾಶ್‌ ಪ್ರತಿಕ್ರಿಯಿಸಿದರು.

‘ಗ್ರೂಪ್‌–ಎ’ ಶ್ರೇಣಿಯು ಕಾಲೇಜು ಬೋಧಕ ಹುದ್ದೆಯ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹೊಸದಾಗಿ ನೇಮಕವಾಗುವ ಬೋಧಕರು ಮುಂದಿನ ವೇತನ ಶ್ರೇಣಿಗೆ ಬಡ್ತಿ ಪಡೆದ (ಆರು ವರ್ಷದ) ಬಳಿಕ ಗ್ರೂಪ್‌–ಎ ಶ್ರೇಣಿ ಪಡೆಯಲಿದ್ದಾರೆ. ಅಲ್ಲಿಯವರೆಗೆ ಅವರು ಗ್ರೂಪ್‌–ಬಿ ಶ್ರೇಣಿಯಲ್ಲಿ ಮುಂದುವರೆಯುತ್ತಾರೆ’ ಎಂದು ಸಂಘದ ಕಾರ್ಯದರ್ಶಿ ಡಾ. ರಾಮಣ್ಣ ತಿಳಿಸಿದರು.

‘ಗ್ರೂಪ್‌–ಎ’ ಶ್ರೇಣಿ ಸಿಬ್ಬಂದಿಯ ವರ್ಗಾವಣೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಕವೇ ನಡೆಯುವುದರಿಂದ ಕಾಲೇಜು ಶಿಕ್ಷಣ ಇಲಾಖೆಯ ಹಸ್ತಕ್ಷೇಪ ತಪ್ಪುತ್ತದೆ ಎಂದೂ ಅವರು ವಿವರಿಸಿದರು.

ಕಾನೂನು ಹೋರಾಟ: 2002ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕೆಲ ಬೋಧಕರು ಕೆಎಟಿ ಮೊರೆ ಹೋದರು. 2009ರ ಜುಲೈನಲ್ಲಿ ಆದೇಶ ನೀಡಿದ ಕೆಎಟಿ ‘ಕಾಲೇಜು ಶಿಕ್ಷಣ ಇಲಾಖೆ ಹಿರಿಯ, ಆಯ್ಕೆ ಶ್ರೇಣಿ ಉಪನ್ಯಾಸಕರ ಹುದ್ದೆಗಳು ಮುಂಬಡ್ತಿಯ ಹುದ್ದೆಗಳಾಗಿವೆ’ ಎಂದು ಹೇಳಿತು.

ಕೆಎಟಿ ಆದೇಶವನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. 2014ರಲ್ಲಿ ತೀರ್ಪು ನೀಡಿದ ಹೈಕೋರ್ಟ್‌ ‘ಕೆಎಟಿ ಆದೇಶಕ್ಕೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಿತ್ತು.

**

ಯುಜಿಸಿ ವೇತನ ಶ್ರೇಣಿ ಜಾರಿಗೆ ಬರುವುದಕ್ಕೂ ಮುನ್ನ ರಾಜ್ಯ ವೇತನ ಶ್ರೇಣಿಗಳ ಅನುಸಾರ ಉಪನ್ಯಾಸಕ ಹುದ್ದೆ ‘ಬಿ’ ಶ್ರೇಣಿಯದ್ದಾಗಿತ್ತು. ರೀಡರ್‌ ಮತ್ತು ಪ್ರಾಧ್ಯಾಪಕರ ಹುದ್ದೆಗಳು ‘ಎ’ ಶ್ರೇಣಿಯ ಹುದ್ದೆಗಳಾಗಿದ್ದವು.

1986ರ ಯುಜಿಸಿ ವೇತನ ಶ್ರೇಣಿಗಳಲ್ಲಿ ಈ ಹುದ್ದೆಗಳನ್ನು ಕ್ರಮವಾಗಿ ಉಪನ್ಯಾಸಕರು, ಹಿರಿಯ ಶ್ರೇಣಿ ಉಪನ್ಯಾಸಕರು ಮತ್ತು ಆಯ್ಕೆ ಶ್ರೇಣಿ ಎಂದು ಮರು ಪದನಾಮ ಮಾಡಲಾಯಿತು. ಇದೇ ಪದನಾಮವನ್ನು 1996ರ ಯುಜಿಸಿ ವೇತನ ಶ್ರೇಣಿಗಳಲ್ಲೂ ಮುಂದುವರೆಸಲಾಯಿತು. 2006 ಮತ್ತು 2016ರ ಯುಜಿಸಿ ವೇತನ ಶ್ರೇಣಿಯಲ್ಲಿ ಇದನ್ನು ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು ಎಂದು ಉಲ್ಲೇಖಿಸಲಾಗಿದೆ.

 

ಪ್ರತಿಕ್ರಿಯಿಸಿ (+)