ಭಾನುವಾರ, ಡಿಸೆಂಬರ್ 8, 2019
25 °C

ಕಾರಿಗೆ ಬೆಂಕಿ: ತಾಯಿ, ಮಗು ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಿಗೆ ಬೆಂಕಿ: ತಾಯಿ, ಮಗು ಸಜೀವ ದಹನ

ಬೆಂಗಳೂರು: ವೈಟ್‌ಫೀಲ್ಡ್‌ನ ಬೋರ್‌ವೆಲ್ ರಸ್ತೆ ಬಳಿ ಕಾರಿಗೆ ಶುಕ್ರವಾರ ಬೆಂಕಿ ಹೊತ್ತಿಕೊಂಡಿದ್ದರಿಂದ ತಾಯಿ–ಮಗ ಇಬ್ಬರೂ ಸಜೀವ ದಹನವಾಗಿದ್ದಾರೆ.

ಬೆಳಗಾವಿಯ ನೇಹಾ ವರ್ಮ (30) ಹಾಗೂ ಪರಮ್ (4) ಮೃತರು. ಪತಿ ಲೋಕೇಶ್ ಜತೆ ಸುಮಧುರಾ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನೇಹಾ ವಾಸವಾಗಿದ್ದರು. ಅವರು ಸ್ವಂತ ಕಂಪನಿ ಹೊಂದಿದ್ದಾರೆ.

ಬೆಳಿಗ್ಗೆ 12 ಗಂಟೆ ಸುಮಾರಿಗೆ ಮಾರುತಿ ರಿಟ್ಜ್‌ ಕಾರಿನಲ್ಲಿ ಶಾಪಿಂಗ್‌ಗಾಗಿ ಹೊರಗೆ ಹೋಗಿದ್ದ ತಾಯಿ–ಮಗ, ಮಧ್ಯಾಹ್ನ 3.25ರ ಸುಮಾರಿಗೆ ಹಿಂದಿರುಗಿದ್ದರು. ಅಪಾರ್ಟ್‌ಮೆಂಟ್‌ ಸಮುಚ್ಚಯದ ನೆಲಮಹಡಿಯಲ್ಲಿ ಕಾರು ನಿಲ್ಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದೆ.

‘ಅದರಿಂದ ಆತಂಕಗೊಂಡ ಅವರಿಬ್ಬರು ಹೊರಗೆ ಬರಲು ಯತ್ನಿಸಿದ್ದಾರೆ. ಆದರೆ, ಕಾರಿನ ಲಾಕ್‌ಗಳು ಜಾಮ್ ಆಗಿದ್ದರಿಂದ

ಅದು ಸಾಧ್ಯವಾಗಿಲ್ಲ. ಕಾವಲುಗಾರರು ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ನೀರು ಎರಚಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅವರನ್ನು ರಕ್ಷಿಸಲು ಆಗಲಿಲ್ಲ’ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ ಎಂದು ವೈಟ್‌ಫೀಲ್ಡ್ ಪೊಲೀಸರು ತಿಳಿಸಿದರು.

ಶಾರ್ಟ್‌ ಸರ್ಕೀಟ್‌ನಿಂದಾಗಿ ಕಾರಿನ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಇಡೀ ಕಾರು ಸುಟ್ಟು ಕರಕಲಾಗಿತ್ತು. ಬೆಂಕಿ ನಂದಿಸಿದ ಸಿಬ್ಬಂದಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ ಎಂದರು.

2009ರ ಮಾದರಿಯ ಕಾರನ್ನು ಅವರು ಬಳಸುತ್ತಿದ್ದರು. ತಾಂತ್ರಿಕ ತೊಂದರೆಯಿಂದ ಎಲ್ಲ ಬಾಗಿಲುಗಳು ಬಂದ್ ಆಗಿರುವ ಸಾಧ್ಯತೆ ಇದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿ ವರದಿ ನೀಡಿದ ಬಳಿಕ ಅವಘಡಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)