ಶುಕ್ರವಾರ, ಡಿಸೆಂಬರ್ 13, 2019
27 °C
ಮಧ್ಯಪ್ರದೇಶದಲ್ಲಿ ಸಿಕ್ಕಿಬಿದ್ದ ಮುಖಂಡ l ನಗರದಲ್ಲಿ ಮೂವರಿಗೆ ಗುಂಡೇಟು l ಪೊಲೀಸ್ ಇಲಾಖೆಗೆ ಮುಜುಗರ ತಂದಿದ್ದ ಪ್ರಕರಣ

ಹಲ್ಲೆ ನಡೆಸಿ ರೈಫಲ್ ಕದ್ದೊಯ್ದಿದ್ದ ‘ಭಿಲ್’ ಗ್ಯಾಂಗ್ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲ್ಲೆ ನಡೆಸಿ ರೈಫಲ್ ಕದ್ದೊಯ್ದಿದ್ದ ‘ಭಿಲ್’ ಗ್ಯಾಂಗ್ ಸೆರೆ

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ರೈಫಲ್ ಕಿತ್ತುಕೊಂಡು ಹೋಗಿದ್ದ ಮಧ್ಯಪ್ರದೇಶದ ‘ಭಿಲ್’ ಬುಡಕಟ್ಟು ಜನಾಂಗದ ಮುಖಂಡನನ್ನು ಬಂಧಿಸಿರುವ ಈಶಾನ್ಯ ವಿಭಾಗದ ಪೊಲೀಸರು, ಯಲಹಂಕದಲ್ಲಿ ಅಡಗಿದ್ದ ಆತನ ಸೋದರರು ಹಾಗೂ ಇಬ್ಬರು ಸಹಚರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಕಳ್ಳತನ ಮಾಡಲು ಜ.18ರ ನಸುಕಿನಲ್ಲಿ (ಸಮಯ 2.10) ಕೊಡಿಗೆಹಳ್ಳಿಯ ಟಾಟಾನಗರಕ್ಕೆ ಬಂದಿದ್ದ ಆರೋಪಿಗಳು, ಸ್ಥಳಕ್ಕೆ ಬಂದಿದ್ದ ಗಸ್ತು ಪೊಲೀಸರ ಮೇಲೆ ಕಲ್ಲು ತೂರಿ ರೈಫಲ್ ಕಸಿದುಕೊಂಡು ಹೋಗಿದ್ದರು. ಇದು ಇಲಾಖೆಗೆ ಮುಜುಗುರ ಉಂಟಾಗುವಂತೆ ಮಾಡಿತ್ತು. ಕರ್ತವ್ಯಲೋಪ ಆರೋಪದಡಿ ಇನ್‌ಸ್ಪೆಕ್ಟರ್, ಎಎಸ್‌ಐ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳೂ ಅಮಾನತಾಗಿದ್ದರು. ಈ ಪ್ರಕರಣವನ್ನು ಭೇದಿಸಲು ಡಿಜಿಪಿ 15 ದಿನಗಳ ಗಡುವು ನೀಡಿದ್ದರು.

ಆರೋಪಿಗಳ ಪತ್ತೆಗೆ ಈಶಾನ್ಯ ವಿಭಾಗದ ಡಿಸಿಪಿ ಎಸ್‌.ಗಿರೀಶ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳು ರಚನೆಯಾಗಿದ್ದವು. ಅಲ್ಲದೆ, ವಿಭಾಗದ 70ಕ್ಕೂ ಹೆಚ್ಚು ಸಿಬ್ಬಂದಿ ರೈಫಲ್ ಹುಡುಕಾಟದಲ್ಲಿ ತೊಡಗಿದ್ದರು. ನಾಲ್ಕು ಜೆಸಿಬಿಗಳನ್ನು ಬಳಸಿ, ಕೊಡಿಗೆಹಳ್ಳಿ ಸುತ್ತಮುತ್ತಲ ರಾಜಕಾಲುವೆಗಳಲ್ಲೆಲ್ಲ ಶೋಧ ನಡೆಸಿದ್ದರು. ಕಾಲುವೆ ಸ್ವಚ್ಛವಾಗಿದ್ದು ಬಿಟ್ಟರೆ, ರೈಫಲ್ ಮಾತ್ರ ಸಿಕ್ಕಿರಲಿಲ್ಲ.

ಸೆರೆಸಿಕ್ಕ ಕಿಂಗ್‌ಪಿನ್: ಮಧ್ಯಪ್ರದೇಶದ ದಾರ್‌ ಜಿಲ್ಲೆಯ ಭಗೋಲಿ ಗ್ರಾಮದಲ್ಲಿ ಭಿಲ್ ಸಮುದಾಯದ ಮುಖಂಡ ರಾಯ್‌ಸಿಂಗ್‌ನನ್ನು (35) ಬಂಧಿಸಿದ ಪೊಲೀಸರು, ಗುರುವಾರ ರಾತ್ರಿ ಆತನನ್ನು ನಗರಕ್ಕೆ ಕರೆತಂದರು. ವಿಚಾರಣೆ ನಡೆಸಿದಾಗ ತನ್ನ ಸಹಚರರು ಯಲಹಂಕ ಉಪನಗರದ ಕೆಂಪ‍ನ ಹಳ್ಳಿಯಲ್ಲಿ ಅಡಗಿರುವುದಾಗಿ ಹೇಳಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಕರೆದುಕೊಂಡು ಶುಕ್ರವಾರ ನಸುಕಿನಲ್ಲಿ  (ಸಮಯ 3.45) ಅಲ್ಲಿಗೆ ತೆರಳಿದ್ದಾರೆ.

‌ಮೂವರಿಗೆ ಗುಂಡೇಟು: ಪಾಳು ಮನೆಯೊಂದರಲ್ಲಿ ಅಡಗಿದ್ದ ರಾಯ್‌ಸಿಂಗ್‌ನ ತಮ್ಮಂದಿರಾದ ಅಜಂ ಭಾಯ್‌ಸಿಂಗ್ (25), ಅಬು ಭಾಯ್‌ಸಿಂಗ್ (21), ಸಹಚರರಾದ ಜಿತೇನ್‌ ರೇಮಸಿಂಗ್ ಪಲಾಶೆ (19) ಹಾಗೂ ಸುರೇಶ್ ಕೋದ್ರಿಯಾ ಮೆಹರ್ (19) ಅವರು ಪೊಲೀಸರನ್ನು ನೋಡುತ್ತಿದ್ದಂತೆಯೇ ಅವರತ್ತ ಕಲ್ಲು ತೂರಿದ್ದಾರೆ. ವಶಕ್ಕೆ ಪಡೆಯಲು ತೆರಳಿದ್ದ ವಿದ್ಯಾರಣ್ಯಪುರ ಠಾಣೆಯ ಇನ್‌ಸ್ಪೆಕ್ಟರ್‌ ರಾಮಮೂರ್ತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ಈ ಹಂತದಲ್ಲಿ ರಾಮಮೂರ್ತಿ ಹಾಗೂ ಪಿಎಸ್‌ಐ ಅಣ್ಣಯ್ಯ ಅವರು ಆತ್ಮರಕ್ಷಣೆಗಾಗಿ ಅವರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಅಬು ಹೊರತುಪಡಿಸಿ ಮೂವರ ಕಾಲಿಗೆ ಗುಂಡೇಟು ಬಿದ್ದಿದೆ. ಇದರಿಂದ ಹೆದರಿದ ಅಬು, ಕಲ್ಲು ತೂರುವುದನ್ನು ನಿಲ್ಲಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಗಾಯಗೊಂಡ ಮೂವರೂ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸ ಗ್ಯಾಂಗ್, ಸುಳಿವಿರಲಿಲ್ಲ: ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ‘ಇಷ್ಟು ದಿನ ಇರಾನಿ, ಬವಾರಿಯಾ, ರಾಮ್‌ಜೀ ಹಾಗೂ ಓಜಿಕುಪ್ಪಂ ಗ್ಯಾಂಗ್‌ಗಳು ನಗರದಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದವು. ಮಧ್ಯಪ್ರದೇಶದ ‘ಭಿಲ್ ಬುಡಕಟ್ಟು ಗ್ಯಾಂಗ್’ ಕೂಡ ರಾಜಧಾನಿಯಲ್ಲಿ ಕೃತ್ಯ ಎಸಗುತ್ತಿದೆ ಎಂಬ ಸಂಗತಿ ಗೊತ್ತಾಗಿದ್ದು ಇದೇ ಮೊದಲು’ ಎಂದು ಹೇಳಿದರು.

‘ಭಗೋಲಿ ಗ್ರಾಮದಲ್ಲಿ ಭಿಲ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು ನೂರು ಮನೆಗಳಿದ್ದು, ಎಲ್ಲರೂ ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶ, ಕೇರಳ, ತಮಿಳುನಾಡು, ರಾಜ್ಯದ ಬೆಂಗಳೂರು, ಮೈಸೂರು, ತುಮಕೂರು, ಮಂಗಳೂರು ಹಾಗೂ ಉಡುಪಿಯ ನೂರಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಹೊಸ ಗ್ಯಾಂಗ್ ಆದ ಕಾರಣ ರಾಜ್ಯದ ಪೊಲೀಸರಿಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.’

‘ಈಗ ಗ್ಯಾಂಗ್‌ನ ಕೀಲುರೇಲ್ ಸಿಂಗಾರ, ಮಡ್ಯ ಬೋಂಗು ಮೆಹರ ಹಾಗೂ ದೀತ್ಯಾ ರೇಮಸಿಂಗ್ ತಲೆಮರೆಸಿಕೊಂಡಿದ್ದಾರೆ. ಎಸಿಪಿ ಪ್ರಭಾಕರ್ ಬಾರ್ಕಿ ನೇತೃತ್ವದ ತಂಡವು ಮಧ್ಯಪ್ರದೇಶದಲ್ಲಿ ಅವರ ಶೋಧ ಮುಂದುವರಿಸಿದೆ. ಆಶ್ರಯ, ಊಟೋಪಚಾರ ಸೇರಿದಂತೆ ಆರೋಪಿಗಳಿಗೆ ನೆರವು ನೀಡಿದ್ದ ನಗರದ ಹಮೀದ್ ಹಾಗೂ ಅಫ್ರೋಜ್ ಅವರನ್ನೂ ಬಂಧಿಸಿದ್ದೇವೆ’ ಎಂದು ಹೇಳಿದರು.

ಕಡಪದಲ್ಲಿ ಸಿಕ್ತು ಸುಳಿವು: ‘ಆರೋಪಿಗಳು ರೈಫಲ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆ ದೃಶ್ಯ ಹಾಗೂ ಪ್ರಕರಣದ ವಿವರವನ್ನು ರಾಜ್ಯದ ಎಲ್ಲ ಠಾಣೆಗಳಿಗೂ ಹಾಗೂ ನೆರೆ ರಾಜ್ಯದ ಪೊಲೀಸರಿಗೂ ರವಾನಿಸಿದೆವು. ಆಗ ಮೂರು ವರ್ಷಗಳ ಹಿಂದೆ ಆಂಧ್ರಪ್ರದೇಶದ ಕುಪ್ಪಂ, ವಿಜಯವಾಡ ಹಾಗೂ ಕಡಪದಲ್ಲೂ ಒಂದು ಗ್ಯಾಂಗ್ ಇದೇ ರೀತಿ ಕಾರ್ಯಾಚರಣೆ ನಡೆಸಿದ್ದ ಸಂಗತಿ ಗೊತ್ತಾಯಿತು’ ಎಂದು ತನಿಖಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೂಡಲೇ ಸಿಬ್ಬಂದಿಯ ತಂಡ ಆಂಧ್ರಕ್ಕೆ ತೆರಳಿತು. ಪೊಲೀಸರಿಂದ ಬಂದೂಕು ಕಸಿದುಕೊಂಡಿದ್ದ ಪ್ರಕರಣದಲ್ಲಿ ಹಿಂದೆ ಬಂಧಿಸಲಾಗಿದ್ದ ರಾಯ್‌ಸಿಂಗ್‌ನ ಫೋಟೊವನ್ನು ಕಡಪ ಪೊಲೀಸರು ನಮ್ಮ ತಂಡಕ್ಕೆ ಕೊಟ್ಟರು.’

‘ಆತನ ಪೂರ್ವಾಪರ ಸಂಗ್ರಹಿಸಿಕೊಂಡು, ಖಚಿತತೆಗಾಗಿ ಫೋಟೊವನ್ನು ಮಧ್ಯಪ್ರದೇಶ ಪೊಲೀಸರಿಗೆ ಕಳುಹಿಸಿದೆವು. ಆಗ ಅವರು, ‘ಈತ ರಾಯ್‌ಸಿಂಗ್. ಬಿಲ್ ಸಮುದಾಯದ ಮುಖಂಡ. ಕಳ್ಳತನ ಮಾಡುವುದೇ ಈತನ ವೃತ್ತಿ. ಬಂಧಿಸಲು ತೆರಳಿದರೆ ಕಲ್ಲು ತೂರಿ ಪರಾರಿಯಾಗುತ್ತಾನೆ’ ಎಂಬ ಮಾಹಿತಿ ಕೊಟ್ಟರು. ಕೂಡಲೇ ಸಂಪಿಗೆಹಳ್ಳಿ ಇನ್‌ಸ್ಪೆಕ್ಟರ್ ಅಂಜನ್‌ಕುಮಾರ್ ನೇತೃತ್ವದ ತಂಡವನ್ನು ಮಧ್ಯಪ್ರದೇಶಕ್ಕೆ ಕಳುಹಿಸಲಾಯಿತು’ ಎಂದರು.

ಅಲ್ಲೂ ಗುಂಡಿನ ದಾಳಿ: ಸ್ಥಳೀಯ ಪೊಲೀಸರು, ಪಕ್ಕದ ಗ್ರಾಮದ ನಿವಾಸಿಗಳ ನೆರವಿನಿಂದ ರಾಯ್‌ಸಿಂಗ್‌ನನ್ನು ಹಿಡಿಯುವಲ್ಲಿ ಯಶಸ್ವಿಯಾದ ತಂಡ, ಉಳಿದ ಆರೋಪಿಗಳನ್ನು ವಶಕ್ಕೆ ಪಡೆಯಲು ಮರುದಿನ ಮತ್ತೆ ಗ್ರಾಮಕ್ಕೆ ನುಗ್ಗಿತ್ತು. ಆಗ ಅಲ್ಲಿನ ನಿವಾಸಿಗಳು ಕಲ್ಲು ತೂರಲು ಪ್ರಾರಂಭಿಸಿದ್ದರು. ಆಗ ಮಧ್ಯಪ್ರದೇಶ ಪೊಲೀಸರೇ ಅವರತ್ತ ಗುಂಡು ಹಾರಿಸಿದ್ದರು. ಅವು ಯಾರಿಗೂ ತಗುಲಲಿಲ್ಲ ಎಂದು ಗೊತ್ತಾಗಿದೆ.

‘ಭಿಲ್‌’ ಸಮುದಾಯದಲ್ಲಿ ರಾಕ್ಷಸರೂ ಇದ್ದಾರೆ, ರಕ್ಷಕರೂ ಇದ್ದಾರೆ!

ದೇಶದ ಬುಡಕಟ್ಟುಗಳ ಜನಸಂಖ್ಯೆಯಲ್ಲಿ ಭಿಲ್ಲರು 2ನೇ ಸ್ಥಾನದಲ್ಲಿ ಇದ್ದಾರೆ. ಇವರನ್ನು ‘ಭಿಲಾಲ’ ಹಾಗೂ ‘ಭಿಲ್ ಗರಾಸಿಯಾ’ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಇವರೆಲ್ಲ ಇಸ್ರೆಲ್‌ನಿಂದ ವಲಸೆ ಬಂದು ಮಧ್ಯಪ್ರದೇಶದ ಭಗೋಲಿ ಹಾಗೂ ಜಬುವಾ ಎಂಬ ಗ್ರಾಮಗಳಲ್ಲಿ ನೆಲೆಯೂರಿದ್ದಾರೆ ಎನ್ನುತ್ತಾರೆ ಪೊಲೀಸರು.

‘ಭಗೋಲಿ ಗ್ರಾಮದ ವಾಸಿಗಳೆಲ್ಲ ಇದೇ ದಂಧೆಯಲ್ಲಿ ತೊಡಗಿದ್ದರೆ, ಇವರಿಗೆ ವಿರುದ್ಧವಾಗಿ ಜಬುವಾ ಬುಡುಕಟ್ಟು ವಾಸಿಗಳು ನಿಲ್ಲುತ್ತಾರೆ. ರಾಯ್‌ಸಿಂಗ್‌ನನ್ನು ಆ ಗ್ರಾಮದಿಂದ ಕರೆತರಲು ನಮಗೆ ಜಬುವಾ ನಿವಾಸಿಗಳೇ ನೆರವಾದರು’ ಎಂದು ಪೊಲೀಸರು ಹೇಳಿದ್ದಾರೆ.

ಎಸ್‌ಐ ತಲೆ ಕಡಿದಿದ್ದರು: 2011ರಲ್ಲಿ ಕಳ್ಳತನ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲು ಸ್ಥಳೀಯ ಪಿಎಸ್‌ಐ ಭಗೋಲಿ ಗ್ರಾಮಕ್ಕೆ ಹೋಗಿದ್ದರು. ಆಗ ಸಮುದಾಯದ ಎಲ್ಲರೂ ಒಟ್ಟಾಗಿ ಗಲಾಟೆ ಪ್ರಾರಂಭಿಸಿದ್ದರು.

ಆದರೂ, ಆತನನ್ನು ಬಂಧಿಸಲು ಮುಂದಾಗಿದ್ದಕ್ಕೆ ಮಚ್ಚಿನಿಂದ ಆ ಪಿಎಸ್‌ಐನ ತಲೆಯನ್ನೇ ಕತ್ತರಿಸಿದ್ದರು. ಈ ಪ್ರಕರಣದ ಬಳಿಕ ‘ಎಲ್ಲ ಪೊಲೀಸರು ಕರ್ತವ್ಯದ ವೇಳೆ ರಿವಾಲ್ವರ್ ಇಟ್ಟುಕೊಳ್ಳುವುದು ಕಡ್ಡಾಯ’ ಎಂದು ಎಸ್ಪಿ ಆದೇಶ ಹೊರಡಿಸಿದ್ದರು. ಪಿಎಸ್‌ಐ ಹತ್ಯೆ ಬಳಿಕ ಆ ಗ್ರಾಮಕ್ಕೆ ಕಾಲಿಡುವುದಕ್ಕೂ ಪೊಲೀಸರು ಹೆದರುತ್ತಿದ್ದರು.

ವರ್ಷದಲ್ಲಿ 18 ಎನ್‌ಕೌಂಟರ್: ಇವರ ಉಪಟಳ ಹೆಚ್ಚಾಗಿದ್ದರಿಂದ, ಹಲ್ಲೆಗೆ ಮುಂದಾದರೆ ಎನ್‌ಕೌಂಟರ್ ಮಾಡುವಂತೆ ಎಸ್ಪಿ ಆದೇಶಿಸಿದರು. 2006ರ ಒಂದೇ ವರ್ಷದಲ್ಲಿ ಗ್ರಾಮದ 18 ಮಂದಿ ಎನ್‌ಕೌಂಟರ್‌ಗೆ ಬಲಿಯಾದರು. ಇದಕ್ಕೆ ಮಾನವ ಹಕ್ಕುಗಳ ಆಯೋಗ ಅಸಮಾಧಾನ ವ್ಯಕ್ತಪಡಿಸಿತ್ತು. ಆಗ ಸಂಸದರೊಬ್ಬರು ಸರ್ಕಾರದ ಮೇಲೆ ಒತ್ತಡ ಹೇರಿ ಆ ಎಸ್ಪಿಯನ್ನು ವರ್ಗ ಮಾಡಿಸಿದ್ದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾಗಿ ತನಿಖಾಧಿಕಾರಿಗಳು ಹೇಳಿದರು.

ಕಲ್ಲು ತೂರಿ, ಬಾಣ ಬಿಡುತ್ತಾರೆ: ಈ ಗ್ರಾಮದ ಪ್ರತಿ ಮನೆಯಲ್ಲೂ ಕಳ್ಳರಿದ್ದಾರೆ. ಹಲವು ತಂಡಗಳಾಗಿ ವಿವಿಧೆಡೆ ಕಾರ್ಯಾಚರಣೆಗೆ ತೆರಳುವ ಪುರುಷರು, ಮನೆ ಬೀಗ ಮುರಿದು ನಗ–ನಾಣ್ಯ ದೋಚುತ್ತಾರೆ. ಹೀಗೆ ತಂದ ಒಡವೆಗಳನ್ನು ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಮಹಿಳೆಯರ ಕೆಲಸ. ಒಂದು ವೇಳೆ ಪೊಲೀಸರು ಗ್ರಾಮಕ್ಕೆ ನುಗ್ಗಿದರೆ, ಅವರತ್ತ ಕಲ್ಲು ತೂರುತ್ತಾರೆ.

ವಾಪಸ್ ಹೋಗದಿದ್ದರೆ, ಬಾಣಗಳನ್ನೂ ಬಿಡುತ್ತಾರೆ ಎಂದು ಪೊಲೀಸರು ತಿಳಿಸಿದರು.

ಜಬುವಾ ಹೇಗೆ ಭಿನ್ನ: ದಾರ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಇರುವುದು 15 ಮಂದಿ ಸಿಬ್ಬಂದಿ ಮಾತ್ರ. ಅವರೆಲ್ಲರೂ ತಮ್ಮ ಮಾಹಿತಿದಾರರನ್ನಾಗಿ ಜಬುವಾ ಗ್ರಾಮದವರನ್ನೇ ನೇಮಿಸಿಕೊಂಡಿದ್ದಾರೆ.

‘2017ರ ಏಪ್ರಿಲ್‌ನಲ್ಲಿ ಜಮ್ಮು–ಕಾಶ್ಮೀರದಲ್ಲಿ ಕರ್ತವ್ಯನಿರತ ಸಿಆರ್‌ಪಿಎಫ್‌ ಯೋಧನ ಮೇಲೆ ಕಾಶ್ಮೀರಿ ಯುವಕರು ಕಲ್ಲು ತೂರಿದ್ದರು. ಅದನ್ನು ಖಂಡಿಸಿ ಗ್ರಾಮದಲ್ಲೇ ಪ್ರತಿಭಟನೆ ನಡೆಸಿದ್ದ ಈ ಸಮುದಾಯ, ‘ಕಾಶ್ಮೀರದ ಕಲ್ಲು ತೂರಾಟಗಾರರಿಗೆ ಕಲ್ಲಿನ ಮೂಲಕವೇ ಉತ್ತರ ಕೊಡುತ್ತೇವೆ. ಈ ಮೂಲಕ ದೇಶಸೇವೆ ಮಾಡಲು ಅನುವು ಮಾಡಿಕೊಡಿ. ಸೈನಿಕರ ಪಾಡು ನೋಡಿದರೆ

ರಕ್ತ ಕುದಿಯುತ್ತದೆ’ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಿದ್ದರು. ಆ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುವಂತೆಯೂ ಕೋರಿದ್ದರು.’

‘ಹೀಗೆ ಜಬುವಾ ಗ್ರಾಮದ ಭಿಲ್ ಸಮುದಾಯ ದೇಶದ ಭದ್ರತೆ ವಿಚಾರದಲ್ಲಿ ಪ್ರತಿ ಬಾರಿಯೂ ಹೋರಾಟ ನಡೆಸುತ್ತ ಬಂದಿದೆ. ಈ ಗ್ರಾಮದ ನಿವಾಸಿಗಳ ಮೂಲಕವೇ ರಾಯ್‌ಸಿಂಗ್‌ನ ದಿನಚರಿ ತಿಳಿದುಕೊಂಡೆವು. ಆತ ಮಾಂಸ ಮಾರಾಟಕ್ಕೆ ಪ್ರತಿದಿನ ಬೆಳಿಗ್ಗೆ ಗ್ರಾಮದಿಂದ ಹೊರಬರುತ್ತಾನೆ ಎಂಬ ಮಾಹಿತಿ ಸಿಕ್ಕಿತು. ಎರಡು ದಿನ ಕಾದು, ಬುಧವಾರ ಬೆಳಿಗ್ಗೆ ವಶಕ್ಕೆ ಪಡೆದುಕೊಂಡೆವು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

**

ರೈಫಲ್ ಪೊದೆಯಲ್ಲಿ ಎಸೆದಿದ್ದರುಆರೋಪಿಗಳು ತಾವು ಅಡಗಿದ್ದ ಕೆಂಪನಹಳ್ಳಿಯ ಪಾಳು ಮನೆಯ ಪಕ್ಕದ ಪೊದೆಯಲ್ಲೇ ರೈಫಲ್ ಎಸೆದಿದ್ದರು. ಅದನ್ನು ಹಾಗೂ ಯಲಹಂಕ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳವು ಮಾಡಿದ್ದ 100 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

**

‘ಗೋಫಾನ್’ ಪ್ರಯೋಗ

‘ಭಿಲ್ಲ ಜನಾಂಗದವರು ಹಗ್ಗಕ್ಕೆ ಕಲ್ಲು ಕಟ್ಟಿ, ಅದನ್ನು ತಿರುಗಿಸಿ ಗುರಿಯ ಮೇಲೆ ದಾಳಿ ಮಾಡುತ್ತಾರೆ. ಮೊದಲು ಬೇಟೆ ಸಂದರ್ಭಗಳಲ್ಲಿ ಮಾತ್ರ ಪಾಲಿಸುತ್ತಿದ್ದ ರೂಢಿ ಇದು. ಆದರೆ, ಈಗ ತಮ್ಮನ್ನು ಹಿಡಿಯಲು ಬರುವ ಪೊಲೀಸರ ಮೇಲೂ ಇದೇ ಅಸ್ತ್ರ ಪ್ರಯೋಗಿಸುತ್ತಿದ್ದಾರೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

‘ಇವರು ಹಗ್ಗದ ಕವಣೆಯಲ್ಲಿಟ್ಟು ತಮ್ಮ ಗುರಿಯತ್ತ ಕಲ್ಲು ಬೀಸಿದರೆಂದರೆ, ನೂರು ಮೀಟರ್‌ನಷ್ಟು ದೂರದವರೆಗೂ ಕಲ್ಲು ಅಷ್ಟೇ ಬಿರುಸಾಗಿ ಹೋಗಿ ಗುರಿಯನ್ನು ತಾಗುತ್ತದೆ. ಆ ಸಾಧನಕ್ಕೆ ಇವರು ‘ಗೋಫಾನ್’ ಎನ್ನುತ್ತಾರೆ. ಪ್ರತಿಬಾರಿ ಕಳ್ಳತನಕ್ಕೆ ತೆರಳುವಾಗಲೂ ಬ್ಯಾಗ್‌ನಲ್ಲಿ ಕಲ್ಲುಗಳನ್ನು ತುಂಬಿಕೊಂಡೇ ಹೋಗುತ್ತಾರೆ. ಕೊಡಿಗೆಹಳ್ಳಿಯಲ್ಲಿ ಕಾನ್‌ಸ್ಟೆಬಲ್‌ಗಳ ಮೇಲೆ ದಾಳಿ ನಡೆಸಿದ್ದೂ ಇದೇ ಮಾದರಿಯಲ್ಲಿ’ ಎಂದು ಹೇಳಿದರು.

**

ಬಸ್‌ಗಳಲ್ಲೇ ಓಡಾಟ

‘ರೈಲಿನಲ್ಲಿ ಹೋದರೆ, ನಿಲ್ದಾಣಗಳಲ್ಲಿ ಸಿಬ್ಬಂದಿ ನಮ್ಮನ್ನು ತಪಾಸಣೆಗೆ ಒಳಪಡಿಸುವ ಸಾಧ್ಯತೆ ಇರುತ್ತದೆ. ಆದರೆ, ಬಸ್‌ಗಳಲ್ಲಿ ಯಾರೂ ಪರಿಶೀಲಿಸುವುದಿಲ್ಲ. ಹೀಗಾಗಿ ನಾವು ಎಲ್ಲೇ ಹೋದರೂ ಸ್ಲೀಪರ್‌ ಕೋಚ್ ಬಸ್‌ಗಳಲ್ಲೇ ಪ್ರಯಾಣಿಸುತ್ತೇವೆ’ ಎಂದು ರಾಯ್‌ಸಿಂಗ್ ಹೇಳಿಕೆ ನೀಡಿದ್ದಾಗಿ ಪೊಲೀಸರು ತಿಳಿಸಿದರು.

‘ನಿರ್ಜನ ಪ್ರದೇಶಗಳಲ್ಲಿರುವ ಒಂಟಿ ಮನೆಗಳಲ್ಲಿ ನಾವು ಕಳ್ಳತನ ಮಾಡುವುದಿಲ್ಲ. ಕಾರಣ, ಅಂಥ ಮನೆಯಲ್ಲಿ ಯಾರೂ ಬೆಲೆ ಬಾಳುವ ವಸ್ತುಗಳನ್ನು ಇಟ್ಟು ಹೋಗುವುದಿಲ್ಲ. ಹಗಲು ವೇಳೆ ಪ್ರತಿಷ್ಠಿತ ರಸ್ತೆಯಗಳಲ್ಲೇ ತಿರುಗಾಡಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತೇವೆ. ರಾತ್ರಿ ಬೀಗ ಮುರಿದು ಆ ಮನೆಗಳಲ್ಲಿ ಕಳ್ಳತನ ಮಾಡುತ್ತೇವೆ’ ಎಂದು ರಾಯಸಿಂಗ್‌ ಹೇಳಿಕೆ ಕೊಟ್ಟಿದ್ದಾನೆ.

**

ಇಲಾಖೆಗೆ ಸವಾಲಾಗಿದ್ದ ಪ್ರಕರಣವನ್ನು ಭೇದಿಸಿರುವ ತನಿಖಾ ತಂಡಕ್ಕೆ ₹ 2 ಲಕ್ಷ ಬಹುಮಾನ ನೀಡಲಾಗುವುದು

      –ಟಿ.ಸುನೀಲ್ ಕುಮಾರ್, ಪೊಲೀಸ್ ಕಮಿಷನರ್

 

 

ಪ್ರತಿಕ್ರಿಯಿಸಿ (+)