ಗ್ರಾಮ ಮಟ್ಟದಲ್ಲಿ ಪಡಿತರ ಜಾಗೃತ ಸಮಿತಿ

7

ಗ್ರಾಮ ಮಟ್ಟದಲ್ಲಿ ಪಡಿತರ ಜಾಗೃತ ಸಮಿತಿ

Published:
Updated:

ಮಂಗಳೂರು: ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಗ್ರಾಮ ಮಟ್ಟದ ಪಡಿತರ ಜಾಗೃತ ಸಮಿತಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಸಮಿತಿಯಲ್ಲಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಪಂಚಾಯಿತಿ ಸದಸ್ಯರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಸಾಮಾನ್ಯ ವರ್ಗದ ತಲಾ ಒಬ್ಬ ಸದಸ್ಯರು ಇರಲಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಈ ಸಮಿತಿಯ ಅಧಿಕಾರ ಅವಧಿ ಮೂರು ವರ್ಷದ್ದಾಗಿದೆ ಎಂದರು.

ಪ್ರತಿ ತಿಂಗಳು 7 ನೇ ತಾರೀಖಿಗೆ ಪಡಿತರ ಚೀಟಿದಾರರ ಸಭೆ ಆಹಾರ ಅದಾಲತ್ ನಡೆಸಲಿದೆ. ಅಲ್ಲದೇ ಬಯೋಮೆಟ್ರಿಕ್ ಸರಿಹೊಂದದೇ ಇದ್ದರೆ, ಈ ಸಮಿತಿಯ ಸದಸ್ಯರ ಬಯೋಮೆಟ್ರಿಕ್ ಪಡೆದು, ಇತ್ಯರ್ಥ ಮಾಡಲಾಗುವುದು ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಗೆ ಪಡಿತರ ಸಾಮಗ್ರಿ ಬಂದಾಗ, ಆ ಚಲನ್‌ಗೆ ಈ ಸಮಿತಿ ಅಧ್ಯಕ್ಷರ ಸಹಿ ಪಡೆಯಬೇಕು. ಮೂರು ತಿಂಗಳಿಗೊಮ್ಮೆ ತಾಲ್ಲೂಕು ಮಟ್ಟದಲ್ಲಿ ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳಿಗೆ ತರಬೇತಿ ನೀಡಲಾಗುವುದು. ಈ ಎಲ್ಲ ಕಾರ್ಯಗಳಿಗೆ ಸಮಿತಿ ಸದಸ್ಯರಿಗೆ ಗೌರವಧನ ನೀಡಲಾಗುವುದು ಎಂದು ತಿಳಿಸಿದರು.

ಆಗಸ್ಟ್‌ನಲ್ಲಿ ಆಹಾರ ಮಾಸ: ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಆಹಾರ ಮಾಸವನ್ನು ನಡೆಸಲಾಗುವುದು. ಇದರಲ್ಲಿ ಹೆಸರು ಸೇರ್ಪಡೆ, ಕಡಿತಗೊಳಿಸುವುದು ಸೇರಿದಂತೆ ಪಡಿತರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಅನಿಲ ಭಾಗ್ಯ ಯೋಜನೆಯಡಿ ತಿಂಗಳಿಗೆ 1.5 ಲಕ್ಷದಂತೆ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಹೀಗಾಗಿ ಮೂರು ತಿಂಗಳಲ್ಲಿ ಎಲ್ಲ ಅರ್ಜಿದಾರರಿಗೆ ಅಡುಗೆ ಅನಿಲ ಸೌಕರ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಉಜ್ವಲ ಯೋಜನೆಯಡಿ ಆಗಿರುವ ತಾರತಮ್ಯ ನಿವಾರಿಸಲು ಅನಿಲ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಬಿಪಿಎಲ್ ಪಡಿತರ ಚೀಟಿ ಇದ್ದು, ಅಡುಗೆ ಅನಿಲ ಸಂಪರ್ಕ ಇಲ್ಲದ ಪ್ರತಿಯೊಬ್ಬರಿಗೂ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಸಾವಿನಲ್ಲಿ ರಾಜಕೀಯ ಸರಿಯಲ್ಲ

ಸಂತೋಷ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವ ಖಾದರ್, ಸಾವನ್ನು ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಇದನ್ನು ಖಂಡಿಸುತ್ತೇವೆ. ನೈಜ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ಆದರೆ, ಪ್ರತಿಯೊಂದು ಸಾವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಪಕ್ಷಗಳಿಗೆ ಶೋಭೆ ತರುವಂಥದ್ದಲ್ಲ ಎಂದರು. ‘ಮುಖ್ಯಮಂತ್ರಿ ನನ್ನ ಮನೆಗೆ ಔತಣಕೂಟಕ್ಕೆ ಬಂದಿರುವುದನ್ನೇ ರಾಜಕೀಯ ವಿಷಯವಾಗಿ ಮಾತನಾಡುತ್ತಿರುವುದು ಸರಿಯಲ್ಲ’ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಇದುವರೆಗೆ ಯಾರ ಮನೆಗಾದರೂ ಭೇಟಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ‘ನಮ್ಮ ಸೈನಿಕರ ಹತ್ಯೆ ಆಗುತ್ತಿರುವಾಗ ದೇಶದ್ರೋಹಿ ನವಾಜ್ ಷರೀಫ್ ಮನೆಗೆ ಹೋಗಿ ಪ್ರಧಾನಿ ಚಹಾ ಕುಡಿದು ಬರುತ್ತಾರೆ. ಆದರೆ, ಹುತಾತ್ಮರಾದ ಸೈನಿಕರ ಮನೆಗೆ ಭೇಟಿ ಕೊಡಲು ಇವರಿಗೆ ಸಮಯವಿಲ್ಲ’ ಎಂದು ತಿರುಗೇಟು ನೀಡಿದರು. ‘ನನ್ನ ಮನೆಗೆ ಸಿಎಂ ಔತಣಕೂಟಕ್ಕೆ ಬಂದಿದ್ದನ್ನು ಪ್ರಶ್ನಿಸುವವರು, ಪ್ರಧಾನಿಯ ನಡೆಯನ್ನು ಏಕೆ ಪ್ರಶ್ನಿಸುತ್ತಿಲ್ಲ’ ಎಂದು ಕೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry