ಬುಧವಾರ, ಡಿಸೆಂಬರ್ 11, 2019
26 °C

ಭ್ರಷ್ಟಾಚಾರಕ್ಕೆ ಸಮಾಜದ ಪೋಷಣೆ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರಕ್ಕೆ ಸಮಾಜದ ಪೋಷಣೆ: ವಿಷಾದ

ಮಂಗಳೂರು: ಹಣ ಮತ್ತು ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಸಮಾಜದಿಂದಾಗಿಯೇ ಇಂದು ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಹೇಳಿದರು.

ಕೆನರಾ ಆರ್ಥೋಪಿಡಿಕ್‌ ಸೊಸೈಟಿ ಆಶ್ರಯದಲ್ಲಿ ನಗರದ ಫಾದರ್‌ ಮುಲ್ಲರ್ಸ್‌ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಆರ್ಥೋಪಿಡಿಕ್‌ ಅಸೋಸಿಯೇಶನ್‌ನ 42 ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ರಂಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದು ವ್ಯಕ್ತಿಯ ತಪ್ಪಲ್ಲ. ಭ್ರಷ್ಟಾಚಾರ ಮೂಲಕ ಹಣ, ಅಧಿಕಾರ ಗಳಿಸುವವರನ್ನು ಸಮಾಜ ಗೌರವಿಸುತ್ತಿದೆ. ಇದೇ ಭ್ರಷ್ಟಾಚಾರ ಮೂಲ ಬೇರು ಎಂದು ಹೇಳಿದರು.

‘ನಾವು ಚಿಕ್ಕವರಿದ್ದಾಗ ಸಣ್ಣ ತಪ್ಪು ಮಾಡಿದರೂ, ಪಾಲಕರು, ಶಿಕ್ಷಕರು ಶಿಕ್ಷೆ ನೀಡುತ್ತಿದ್ದರು. ಆದರೆ, ಶಾಲೆಗಳಲ್ಲಿ ಶಿಕ್ಷೆ ನೀಡುವುದೇ ಇಂದು ಅಪರಾಧವಾಗಿದೆ’ ಎಂದ ಅವರು, ಒಂದು ಹಂತಕ್ಕೆ ತಲುಪಿದ ಮೇಲೆ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿ ದೆಸೆಯಲ್ಲಿಯೇ ಮೌಲ್ಯಗಳನ್ನು ಬೆಳೆಸಬೇಕು ಎಂದರು.

‘ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ಮಸೂದೆ ಜಾರಿಗೆ ತರುವ ಮೂಲಕ ವೈದ್ಯರನ್ನೇ ವಿಭಜಿಸುವ ಕೆಲಸಕ್ಕೆ ಕೈಹಾಕಿದ್ದು, ಅದನ್ನು ಬಹಿರಂಗವಾಗಿಯೇ ವಿರೋಧಿಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈದ್ಯರ ಹಿತಾಸಕ್ತಿಗೆ ವಿರುದ್ಧವಾಗಿ ಜಾರಿಗೆ ತರುವ ಕಾಯ್ದೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುತ್ತೇನೆ’ ಎಂದು ತಿಳಿಸಿದರು.

ಕರ್ನಾಟಕ ಆರ್ಥೋಪಿಡಿಕ್‌ ಅಸೋಸಿಯೇಶನ್ ಅಧ್ಯಕ್ಷ ಡಾ. ಅಜಿತ್‌ಕುಮಾರ್ ಎಂ. ಅಧ್ಯಕ್ಷತೆ ವಹಿಸಿದ್ದರು. ಫಾದರ್ ಮುಲ್ಲರ್‌ ಚಾರಿಟಬಲ್‌ ಇನ್‌ಸ್ಟಿಟ್ಯೂಶನ್‌ ನಿರ್ದೇಶಕ ರೆ.ಫಾ. ರಿಚರ್ಡ್‌ ಕುವೆಲ್ಲೊ, ನಿಟ್ಟೆ ಸ್ವಾಯತ್ತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ್‌ ಶೆಟ್ಟಿ, ಇಂಡಿಯನ್‌ ಆರ್ಥೋಪಿಡಿಕ್‌ ಅಸೋಸಿಯೇಶನ್‌ ನಿಯೋಜಿತ ಅಧ್ಯಕ್ಷ ಡಾ. ರಾಜೇಶ್‌ ಮಲ್ಹೋತ್ರಾ, ಡಾ. ಶರತ್‌ ಕೆ. ರಾವ್‌, ಡಾ. ಪುರುಷೋತ್ತಮ್‌ ವಿ.ಜೆ., ಡಾ. ವಿಷ್ಣು ಪ್ರಭು ವೇದಿಕೆಯಲ್ಲಿದ್ದರು.

ಹಿರಿಯ ಎಲುಬು–ಕೀಲು ತಜ್ಞರನ್ನು ಸನ್ಮಾನಿಸಲಾಯಿತು. ಕರ್ನಾಟಕ ಆರ್ಥೋಪಿಡಿಕ್‌ ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಡಾ. ಎಡ್ವರ್ಡ್‌ ಎಲ್‌. ನಝರತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದ ಸಂಚಾಲನ ಸಮಿತಿ ಅಧ್ಯಕ್ಷ ಡಾ. ಕೆ. ರಘುವೀರ್‌ ಅಡಿಗ ಸ್ವಾಗತಿಸಿದರು.

* * 

ಜೈಲಿಗೆ ಹೋಗಿ ಬರುವ ಭ್ರಷ್ಟರಿಗೆ ಹಾರ ಹಾಕಿ ಸನ್ಮಾನಿಸಲಾಗುತ್ತಿದೆ. ಮೆರವಣಿಗೆ ಮಾಡಲಾಗುತ್ತಿದೆ. ಇದೆಲ್ಲವೂ ಸಮಾಜದ ತಪ್ಪೇ ಹೊರತು ವ್ಯಕ್ತಿಯ ತಪ್ಪಲ್ಲ.

ನ್ಯಾ.ಸಂತೋಷ್‌ ಹೆಗ್ಡೆ ನಿವೃತ್ತ ಲೋಕಾಯುಕ್ತ

ಪ್ರತಿಕ್ರಿಯಿಸಿ (+)