ಖಾಲಿ ಹುದ್ದೆ ರದ್ದತಿಗೆ ವಿರೋಧ

7

ಖಾಲಿ ಹುದ್ದೆ ರದ್ದತಿಗೆ ವಿರೋಧ

Published:
Updated:

ಮೈಸೂರು: ಐದು ವರ್ಷಗಳಿಂದ ಖಾಲಿ ಉಳಿದಿರುವ ಹುದ್ದೆಗಳನ್ನು ರದ್ದು ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಈ ಮೂಲಕ ನಿರುದ್ಯೋಗ ಹೋಗಲಾಡಿಸುವ ಆಶ್ವಾಸನೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಈ ಭರವಸೆ ಈಡೇರಿಲ್ಲ ಎಂದು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಹುತೇಕ ಬ್ಯಾಕ್‌ಲಾಗ್ ಹುದ್ದೆಗಳೇ ಖಾಲಿ ಉಳಿದಿವೆ. ಇವುಗಳ ಭರ್ತಿಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಆದರೆ ಆಳುವ ವರ್ಗಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಖಾಲಿ ಉಳಿದಿರುವ ಹುದ್ದೆ ರದ್ದು ಮಾಡುವುದರಿಂದ ದಲಿತ ಸಮುದಾಯಕ್ಕೆ ಮೋಸ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬೆಲೆ ಏರಿಕೆಗೆ ಕಡಿವಾಣ ಹಾಕುವುದಾಗಿ ನೀಡಿದ ಭರವಸೆ ಕೂಡ ಹುಸಿಯಾಗಿದೆ. ತೈಲ ಬೆಲೆಯ ನಿತ್ಯ ಪರಿಷ್ಕರಣೆಗೆ ಅವಕಾಶ ನೀಡುವ ಮೂಲಕ ಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಗಗನಮುಖಿಯಾಗುತ್ತಲೇ ಇವೆ ಎಂದು ದೂರಿದರು.

ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬ್ಯಾರಲ್‌ವೊಂದರ ಬೆಲೆ ₹ 8,470 ಇತ್ತು. ಈ ಬೆಲೆ ಈಗ ₹ 4,200ಕ್ಕೆ ಕುಸಿದಿದೆ. ಆದರೂ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳಲ್ಲಿ ಇಳಿಕೆಯಾಗಿಲ್ಲ. ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ತೈಲ ಬೆಲೆ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದುರ್ಬಲ ಆರ್ಥಿಕ ನೀತಿಗಳು ಭಾರತೀಯರನ್ನು ಸಂಕಷ್ಟಕ್ಕೆ ದೂಡುತ್ತಿವೆ ಎಂದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಭೀಮನಹಳ್ಳಿ ಸೋಮೇಶ್‌, ಜಿಲ್ಲಾ ಸಂಯೋಜಕ ಶಿವಮಹಾದೇವ್‌, ಯುವ ಘಟಕದ ಅಧ್ಯಕ್ಷ ಸೋಸಲೆ ಸಿದ್ದರಾಜು, ನಗರ ಘಟಕದ ಅಧ್ಯಕ್ಷ ಪ್ರತಾಪ್‌, ಅನಂತ್‌ ಜಯದೇವ ಇದ್ದರು.

* * 

ಖಾಲಿ ಹುದ್ದೆಗಳನ್ನು ರದ್ದು ಮಾಡುವಂತೆ ಕೇಂದ್ರ ಹಣಕಾಸು ಇಲಾಖೆ ಸೂಚನೆ ನೀಡಿದೆ. ನಿರುದ್ಯೋಗಿ ಯುವ ಸಮೂಹ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ

ಪ್ರಭುಸ್ವಾಮಿ

ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಎಸ್‌ಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry