ಉಡುಪಿ ಜನರಿಗೆ 24 ಗಂಟೆ ಕುಡಿಯುವ ನೀರು ಸಿಗಲಿದೆ: ಪ್ರಮೋದ್ ಮಧ್ವರಾಜ್

7

ಉಡುಪಿ ಜನರಿಗೆ 24 ಗಂಟೆ ಕುಡಿಯುವ ನೀರು ಸಿಗಲಿದೆ: ಪ್ರಮೋದ್ ಮಧ್ವರಾಜ್

Published:
Updated:

ಉಡುಪಿ: ವಾರಾಹಿ ನೀರು ತರುವ ಮೂಲಕ ಉಡುಪಿ ಜನರಿಗೆ ವರ್ಷದ 365 ದಿನ ಹಾಗೂ ದಿನದ 24 ಗಂಟೆ ಕುಡಿಯುವ ನೀರು ಪೂರೈಸಲಾಗುವುದು. ಇದಕ್ಕಾಗಿ ಈಗಾಗಲೇ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ವಾರಾಹಿ ಕುಡಿಯುವ ನೀರಿನ ಯೋಜನೆಯ ಸಾಮಾಜಿಕ ಪರಿಣಾಮವನ್ನು ಚರ್ಚಿಸಲು ಶುಕ್ರವಾರ ಕರೆದಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಉಡುಪಿಯ ಜನರಿಗೆ ದಿನದ 24 ಗಂಟೆ ವಿದ್ಯುತ್ ಹಾಗೂ ನೀರು ನೀಡುವ ವಾಗ್ದಾನ ನೀಡಲಾಗಿತ್ತು. ಅದರಂತೆ ಈಗಾಗಲೇ ವಿದ್ಯುತ್ ನೀಡಲಾಗುತ್ತಿದೆ. ಸ್ವರ್ಣ ನದಿ ಬಳಕೆ ಸಾಧ್ಯವಾಗದ ಕಾರಣ ವಾರಾಹಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ಜಾರಿಯಾಗುವ ವಿರೋಧಗಳು ಬರುವುದು ಸಹಜ, ಅವೆಲ್ಲವನ್ನೂ ಮಾತುಕತೆಯ ಮೂಲಕ ಬಗೆಹರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡ್ಸೆಂಪ್ ಯೋಜನೆಯಲ್ಲಿ ₹370 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಅನುಷ್ಠಾನವಾಗಲಿದೆ. ಮೊದಲ ಹಂತದಲ್ಲಿ ಯೋಜನೆ ಸಾಧ್ಯವಿಲ್ಲ ಎಂದು ಸರ್ಕಾರದ ಮಟ್ಟದಲ್ಲಿ ತಿರಸ್ಕರಿಲಾಗಿತ್ತು. ಆದರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮೇಶ್ ಅವರಿಗೆ ಮನವಿ ಮಾಡುವ ಮೂಲಕ ಒಪ್ಪಿಗೆ ಪಡೆಯಲಾಯಿತು.

ಯೋಜನೆಯ ಜಾರಿಯ ಪ್ರತಿ ಹಂತದ ಮಾಹಿತಿ ನಗರಸಭೆ ಅಧಿಕಾರಿಗಳಿಗೂ ಇರಬೇಕು. ಕುಡ್ಸೆಂಪ್ ಯೋಜನಾಧಿಕಾರಿಗಳು ತಮಗೆ ಬೇಕಾದಂತೆ ಜಾರಿಗೊಳಿಸಿ ಹೋದರೆ ಮುಂದೆ ಬರುವ ಸಮಸ್ಯೆಯನ್ನು ನಗರಸಭೆ ಎದುರಿಸಬೇಕಾಗುತ್ತದೆ. ಆದ್ದರಿಂದ ಅವರಿಗೆ ನಗರಸಭೆಯಲ್ಲೇ ಕಚೇರಿ ವ್ಯವಸ್ಥೆ ಮಾಡಿ ಅವರಿಂದ ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ. ಸಮನ್ವಯತೆಯಿಂದ ಕೆಲಸ ಮಾಡಿ ಎಂದರು.

ಸ್ವರ್ಣ ಎರಡನೇ ಹಂತದ ಯೋಜನೆ ಜಾರಿ ಮಾಡುವಾಗಲೇ ವಾರಾಹಿ ನೀರು ತರುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆಗಲೇ ಈ ಯೋಜನೆ ಜಾರಿ ಮಾಡಿದ್ದರೆ ಜನರು ತೊಂದರೆ ಅನುಭವಿಸಬೇಕಾಗಿರಲಿಲ್ಲ. ಆಗ ಭಾವನಾತ್ಮಕವಾಗಿ ಯೋಚಿಸಿದ ಕಾರಣ ಸ್ವರ್ಣ ಎರಡನೇ ಹಂತ ಜಾರಿಯಾಯಿತು ಎಂದು ಅವರು ಹೇಳಿದರು.

ಯೋಜನೆ ಬಗ್ಗೆ ಮಾಹಿತಿ ನೀಡಿದ ಉಪಯೋಜನೆ ಸಮನ್ವಯಾಧಿಕಾರಿ ಪ್ರಭಾಕರ ಶರ್ಮಾ, ಈ ಯೋಜನೆಗಾಗಿ ಈಗಾಗಲೇ ಒಂದು ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ಮೂರು ಪ್ಯಾಕೇಜ್‌ ಮಾಡಲಾಗಿದೆ. ನೀರನ್ನು ಬಜೆಗೆ ತರುವುದು, ಬಜೆಯಲ್ಲಿ ಶುದ್ಧೀಕರಣ ಮಾಡುವುದು ಹಾಗೂ ವಿತರಣೆ ಇದರಲ್ಲಿ ಸೇರಿವೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಹಾಗೂ ಅಮೃತ್ ಯೋಜನೆಯಲ್ಲಿ ಒಟ್ಟು ₹370 ಕೋಟಿ ವೆಚ್ಚದಲ್ಲಿ ಇದು ಜಾರಿಯಾಗಲಿದೆ. ಇದರಲ್ಲಿ ₹338 ಕೋಟಿ ಕುಡಿಯುವ ನೀರು ಹಾಗೂ ₹38 ಕೋಟಿ ಒಳಚರಂಡಿ ಕಾಮಗಾರಿಗೆ ಬಳಸಲಾಗುವುದು ಎಂದರು.

ಈ ಯೋಜನೆಗೆ ಭೂ ಸ್ವಾಧೀನದ ಅವಶ್ಯಕತೆ ಸಹ ಬೀಳಬಹುದು, ಆದ್ದರಿಂದ ಜನರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಅದೇ ಕಾರಣಕ್ಕೆ ಸಾಮಾಜಿಕ ಪರಿಣಾಮದ ಅಧ್ಯಯನ ಸಹ ಮಾಡಲಾಗುತ್ತಿದೆ. ಈ ಯೋಜನೆ ಜಾರಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿಯೂ ಒಂದು ಸಮಿತಿ ರಚನೆಯಾಗಲಿದೆ. ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಿ ಅವರು ಮಾಹಿತಿ ಪಡೆಯುವರು. ಅವರು ಸಹ ಸಲಹೆ ಸೂಚನೆ ನೀಡುವರು. ಕಾರ್ಯಕ್ರಮ ಜಾರಿ ಘಟಕ ಸಹ ಕಾರ್ಯನಿರ್ವಹಿಸಲಿದೆ ಎಂದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಕಮಿಷನರ್ ಡಿ. ಮಂಜುನಾಥಯ್ಯ ಇದ್ದರು.

* * 

ದೊಡ್ಡ ಯೋಜನೆಗಳು ಜಾರಿಯಾಗುವಾಗ ಭಯ, ಅಸೂಯೆಯ ಕಾರಣಕ್ಕೆ ವಿರೋಧ ವ್ಯಕ್ತವಾಗುವುದು ಸಹಜ. ಅಂತಹ ಸಂದರ್ಭದಲ್ಲಿ ಜನರ ಮನವೊಲಿಸಬೇಕು.

ಪ್ರಮೋದ್ ಮಧ್ವರಾಜ್, ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry