ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ: ಚತುಷ್ಪಥ ಕಾಮಗಾರಿ ವಿಳಂಬ

Last Updated 3 ಫೆಬ್ರುವರಿ 2018, 5:15 IST
ಅಕ್ಷರ ಗಾತ್ರ

ಪಡುಬಿದ್ರಿ: ಸುರತ್ಕಲ್‌ನಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಶೇ 90 ಪೂರ್ಣಗೊಂಡಿದ್ದು, ಪಡುಬಿದ್ರಿಯ ಮೂರು ಕಿ.ಮೀ. ರಸ್ತೆ ಇನ್ನೂ ನಿರ್ಮಾಣ ಆಗದ ಕಾರಣ ಈ ಭಾಗದ ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಪಡುಬಿದ್ರಿಯಲ್ಲಿ ಗರಿಗೆದರಿದ್ದ ಹೆದ್ದಾರಿ ಹಾಗೂ ಬೈಪಾಸ್ ವಿವಾದಕ್ಕೆ ಜಿಲ್ಲಾಡಳಿತ ತೆರೆ ಎಳೆದು ಹೆದ್ದಾರಿಯಲ್ಲಿಯೇ ಚತುಷ್ಪಥ ಕಾಮಗಾರಿ ನಡೆಸಲು ಸೂಚಿಸಿತ್ತು. ಜಿಲ್ಲಾಡಳಿತದ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿದ್ದ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲು ಹಲವು ತಿಂಗಳು ಕಳೆದವು. ಕಾಮಗಾರಿಯ ಗುತ್ತಿಗೆ ವಹಿಸಿಕೊಂದ್ದ ನವಯುಗ ಕಂಪೆನಿ ಆರ್ಥಿಕ ಸಮಸ್ಯೆಯ ನೆಪವೊಡ್ಡಿ ಕಾಮಗಾರಿ ನಿರ್ವಹಿಸಲು ಮೀನಮೇಷ ಎಣಿಸುತ್ತಿದೆ.

ಕಳೆದ ಮಳೆಗಾಲ ಆರಂಭದ ಒಂದು ತಿಂಗಳ ಮೊದಲು ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು–ಕಲ್ಸಂಕ ಬಳಿ ಕಾಮಿನಿ ಹೊಳೆ ತೋಡಿಗೆ ಅಡ್ಡಲಾಗಿ ನಿರ್ಮಿಸಬೇಕಿದ್ದ ಕಿರು ಸೇತುವೆ ಕಾಮಗಾರಿಯನ್ನು ಆರಂಭಿಸಿತ್ತು. ಕಾಮಗಾರಿ ಆರಂಭಗೊಂಡ ಒಂದು ತಿಂಗಳ ನಂತರ ಮುಂಗಾರು ಆರಂಭವಾಗಿ ಹೊಳೆಯಲ್ಲಿ ನೀರು ತುಂಬಿಕೊಂಡಿತು. ಹಾಗಾಗಿ, ಕಾಮಗಾರಿ ಸ್ಥಗಿತಗೊಂಡಿತ್ತು. ಮಳೆಗಾಲದ ಬಳಿಕ ಅಂದರೆ 2017ರ ನವೆಂಬರ್‌ನಲ್ಲಿ ಮತ್ತೆ ಸೇತುವೆ ಕಾಮಗಾರಿ ಆರಂಭವಾದರೂ, ಇದೀಗ ಕುಂಟುತ್ತಾ ಸಾಗಿದೆ.

ಪಡುಬಿದ್ರಿ ಪ್ರದೇಶದಲ್ಲಿ ತಲೆ ಎತ್ತಿರುವ ಬೃಹತ್ ಉದ್ದಿಮೆಗಳಿಗೆ ಬರುವ ಘನ ವಾಹನಗಳ ಸಂಚಾರಕ್ಕೆ ಪ್ರಮುಖ ರಸ್ತೆಯಾಗಿರುವ ಈ ಭಾಗದ ಜಂಕ್ಷನ್ ಕಾರ್ಕಳ-ಕುದುರೆಮುಖ ರಾಜ್ಯ ಹೆದ್ದಾರಿಯನ್ನೂ ಸಂಪರ್ಕಿಸುತ್ತದೆ. ಕಾಮಗಾರಿ ವಿಳಂಬದಿಂದಾಗಿ ಈ ಭಾಗದಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ.

ಗೊಂದಲದಲ್ಲಿದ್ದೇವೆ: ಕುಂದಾಪುರ ದಿಂದ ಸುರತ್ಕಲ್‌ವರೆಗಿನ ಚತುಷ್ಪಥ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದರೂ ಪಡುಬಿದ್ರಿಯಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ನಾವು ಯಾವ ರೀತಿ ಕಟ್ಟಡ ಮಾಡಬೇಕೆಂಬ ಗೊಂದಲದಲ್ಲಿದ್ದೇವೆ. ಪಡುಬಿದ್ರಿ ಪೇಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ನಾವೆಲ್ಲರೂ ಸಂತ್ರಸ್ಥರು. ಅಭಿವೃದ್ಧಿಯ ದೃಷ್ಟಿಯಲ್ಲಿ ರಸ್ತೆ ವಿಸ್ತರಣೆ ಆಗುವುದಕ್ಕೆ ಆಕ್ಷೇಪವಿಲ್ಲ. ಜಾಗವನ್ನು ಬಿಟ್ಟುಕೊಟ್ಟು ನಮ್ಮ ಕಟ್ಟಡಗಳನ್ನು ತೆರವು ಮಾಡಿ 6 ತಿಂಗಳುಗಳು ಕಳೆದಿವೆ. ಈ ತನಕ ಹೆದ್ದಾರಿ ಕಾಮಗಾರಿಗಳು ಮಾತ್ರ ಪ್ರಗತಿಯಾಗಿಲ್ಲ ಎಂದು ಹೆದ್ದಾರಿ ಸಂತ್ರಸ್ತ ವೈ. ಸುಕುಮಾರ್ ತಿಳಿಸಿದರು.

ಪಡುಬಿದ್ರಿಯಲ್ಲಿ ಭೂಸ್ವಾಧೀನದಲ್ಲಿ ಒಂದು ಭಾಗದ ಜನರಿಗೆ ಅನ್ಯಾಯವಾಗಿದೆ. ಈಗಿರುವ ರಸ್ತೆಯ ಮಧ್ಯಭಾಗದಿಂದ ಸರಿಸಮವಾಗಿ ಎರಡೂ ಕಡೆಗಳಲ್ಲಿ ಭೂಮಿ ವಶಪಡಿಸಿಕೊಳ್ಳಬೇಕಿತ್ತು. ಆದರೆ ಇಲ್ಲಿ ಅದು ಆಗಲಿಲ್ಲ. ಊರಿಗೆ ಒಳ್ಳೆಯದಾಗಬಹುದು ಎಂದು ಜಾಗ ಬಿಟ್ಟು ಕೊಟ್ಟಿದ್ದೇವೆ. ಅದು ಈಗ ಊರಿಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶೀಘ್ರ ಕಾಮಗಾರಿ ಮುಗಿಸಲು ಸೂಚನೆ

ಪಡುಬಿದ್ರಿಯ 2 ಕಿ.ಮೀ. ರಸ್ತೆ ಕಾಮಗಾರಿ ವಿಳಂಬವಾಗಿದೆ. ಗುತ್ತಿಗೆ ವಹಿಸಿದ್ದ ನವಯುಗ ಕಂಪೆನಿ ಹಾಗೂ ಪ್ರಾಧಿಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ ಅವರು ಆರ್ಥಿಕ ಸಂಕಷ್ಟ ಇರುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೂ ವರದಿ ಸಲ್ಲಿಸಲಾಗಿದೆ ಎನ್ನುತ್ತಾರೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT