ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಠಿ ಪ್ರಹಾರ: ತನಿಖೆಗೆ ಬಿಜೆಪಿ ಆಗ್ರಹ

Last Updated 3 ಫೆಬ್ರುವರಿ 2018, 6:39 IST
ಅಕ್ಷರ ಗಾತ್ರ

ಬೀದರ್: ಜನವರಿ 30 ರಂದು ನಡೆದ ಬೀದರ್‌ ಬಂದ್‌ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿ ಜಿಲ್ಲಾ ಸಮನ್ವಯ ಸಮಿತಿ ಸಭೆ ಆಗ್ರಹಿಸಿದೆ.

ಬಂದ್‌ ವೇಳೆ ಶಾಂತಿಯುತ ಪ್ರತಿಭಟನೆ ನಡೆಯುತ್ತಿತ್ತು. ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು. ಕೆಲ ಕಿಡಿಗೇಡಿಗಳು ಪ್ರತಿಭಟನಾಕರರ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಪೊಲೀಸರು ಕಿಡಿಗೇಡಿಗಳನ್ನು ಬಂಧಿಸದೆ ಅಮಾಯಕ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ ಪಕ್ಷದ ಕಾರ್ಯಕರ್ತರಿಗೆ ಗಾಯ ಮಾಡಿದ್ದಾರೆ ಎಂದು ಸಭೆಯಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಕಾನೂನು ಬಾಹಿರವಾಗಿ ಮನಬಂದಂತೆ ಅಮಾಯಕ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆ ಕುರಿತು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಯಾಗಬೇಕು.

ಅಮಾಯಕ ಪ್ರತಿಭಟನಾಕಾರರ ಮೇಲೆ ಹೂಡಲಾದ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು. ಕೇಂದ್ರ ಗೃಹ ಸಚಿವ ರಾಜನಾಥಸಿಂಗ್‌ ಅವರನ್ನು ಭೇಟಿ ಮಾಡಿ ಬಂದ್‌ ವೇಳೆ ನಡೆಸಿದ ಲಾಠಿ ಪ್ರಹಾರ ಘಟನೆಯನ್ನು ಎಲ್ಲ ದಾಖಲೆಗಳೊಂದಿಗೆ ಮನವರಿಕೆ ಮಾಡಲು ತೀರ್ಮಾನಿಸಲಾಯಿತು.

ಫೆಬ್ರುವರಿ 4 ರಂದು ಬೆಂಗಳೂರಿನಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ನಾಲ್ಕು ಸಾವಿರ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆದೊಯ್ಯಲು ತೀರ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಶಾಸಕ ಪ್ರಭು ಚವ್ಹಾಣ್‌, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ತುಗಾಂವಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಾಬುರಾವ ಕಾರಬಾರಿ, ಸೋಮನಾಥ ಪಾಟೀಲ, ಈಶ್ವರಸಿಂಗ್ ಠಾಕೂರ, ಜಯಕುಮಾರ ಕಾಂಗೆ, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಬಾಬುವಾಲಿ, ರಾಜ್ಯ ಎಸ್.ಸಿ. ಮೋರ್ಚಾದ ಉಪಾಧ್ಯಕ್ಷ ಬಸವರಾಜ ಆರ್ಯ, ಪ್ರಮುಖರಾದ ಶಿವರಾಜ ಗಂದಗೆ, ಪದ್ಮಾಕರ ಪಾಟೀಲ, ಡಿ.ಕೆ. ಸಿದ್ರಾಮ, ಉಪೇಂದ್ರ ದೇಶಪಾಂಡೆ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT