37 ಸಾವಿರ ವಿದ್ಯಾರ್ಥಿಗಳಿಗೆ ‘ಪಾಸಿಂಗ್‌ ಪ್ಯಾಕೇಜ್‌’

7

37 ಸಾವಿರ ವಿದ್ಯಾರ್ಥಿಗಳಿಗೆ ‘ಪಾಸಿಂಗ್‌ ಪ್ಯಾಕೇಜ್‌’

Published:
Updated:
37 ಸಾವಿರ ವಿದ್ಯಾರ್ಥಿಗಳಿಗೆ ‘ಪಾಸಿಂಗ್‌ ಪ್ಯಾಕೇಜ್‌’

ಕಲಬುರ್ಗಿ: ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆಯ ದಡ ತಲುಪಿಸಲು ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮುಂದಾಗಿದೆ. ಅದಕ್ಕಾಗಿ ‘ಪಾಸಿಂಗ್‌ ಪ್ಯಾಕೇಜ್‌’ ಹೆಸರಿನ ಯೋಜನೆ ಕಾರ್ಯಕತಗೊಳಿಸುತ್ತಿದೆ.

ಓದಿನಲ್ಲಿ ಹಿಂದಿದ್ದು, ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ರಾಗಬಹುದಾದ ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಈ ಭಾಗದ ಆರು ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ ಇಂತಹ 37 ಸಾವಿರ ವಿದ್ಯಾರ್ಥಿಗಳ ಪಟ್ಟಿ ಮಾಡಲಾಗಿದೆ.

‘2017– 18ನೇ ಸಾಲಿನ ಎಸ್.ಎಸ್‌.ಎಲ್‌.ಸಿ. ಪರೀಕ್ಷಾ ವಿದ್ಯಾರ್ಥಿಗಳಿಗೆ ಪಾಸಿಂಗ್‌ ಪ್ಯಾಕೇಜ್‌’ ಹೆಸರಿನಲ್ಲಿ ಅಧ್ಯಯನ ಸಾಮಗ್ರಿ ಮುದ್ರಿಸಿ ಪೂರೈಸಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವಷ್ಟರ ಮಟ್ಟಿಗೆ ಅವರಿಗೆ ತರಬೇತಿ ನೀಡಿ ಸನ್ನದ್ಧಗೊಳಿಸಲಾಗುತ್ತಿದೆ.

‘ಎಸ್ಸೆಸ್ಸೆಲ್ಸಿಗೆ ಬರುವವರೆಗೆ ವಿದ್ಯಾರ್ಥಿಗಳಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಬಹುಪಾಲು ವಿದ್ಯಾರ್ಥಿಗಳ ಪಾಲಿಗೆ ಇದು ಅಗ್ನಿ ಪರೀಕ್ಷೆಯಂತೆ. ನಕಲು ಮಾಡಿಯಾದರೂ ಪರೀಕ್ಷೆಯಲ್ಲಿ ಪಾಸಾಗಬೇಕು ಎಂಬ ಮನೋಭಾವ ಕೆಲ ಮಕ್ಕಳು, ಶಿಕ್ಷಕರು ಹಾಗೂ ಪಾಲಕರಲ್ಲಿ ಬೆಳೆದಿದೆ. ನಕಲು ಮುಕ್ತ ಪರೀಕ್ಷೆ ನಡೆಸಬೇಕು. ಎಲ್ಲ ವಿಷಯಗಳಲ್ಲಿ ಕನಿಷ್ಠ ಶೇ 35ರಷ್ಟು ಅಂಕಗಳನ್ನು ಪಡೆಯುವಷ್ಟರ ಮಟ್ಟಿಗೆ ಈ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಬೇಕು ಎಂಬುದು ಈ ಯೋಜನೆಯ ಮಹತ್ವಾಕಾಂಕ್ಷೆ’ ಎನ್ನುತ್ತಾರೆ ಎಚ್‌ಕೆಆರ್‌ಡಿಬಿಯ ಶೈಕ್ಷಣಿಕ ಸಲಹೆಗಾರ ಎನ್‌.ಬಿ.ಪಾಟೀಲ.

240 ಪುಟದ ಪುಸ್ತಕ: ‘ಹಿಂದಿನ ಐದು ವರ್ಷಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಈ ಪುಸ್ತಕ ಗಮನವಿಟ್ಟು ಅಧ್ಯಯನ ಮಾಡಿದರೆ ಕನಿಷ್ಠ ಶೇ 40ರಷ್ಟು ಅಂಕ ಪಡೆಯಲು ಸಾಧ್ಯವಿದೆ.

ಕನ್ನಡ ಮತ್ತು ಉರ್ದು ಮಾಧ್ಯಮಕ್ಕೆ ಪ್ರತ್ಯೇಕ ಪುಸ್ತಕಗಳಿವೆ. 240 ಪುಟದ ಈ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿಸಿದ್ದು, ಒಂದು ಪುಸ್ತಕಕ್ಕೆ ಅಂದಾಜು ₹100 ವೆಚ್ಚ ಮಾಡಲಾಗಿದೆ’ ಎನ್ನುತ್ತಾರೆ ಈ ಪುಸ್ತಕ ರಚಿಸಿರುವ ಸಂಪನ್ಮೂಲ ವ್ಯಕ್ತಿಗಳು.

 ‘2018ರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 1.44 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲರಿಗೂ ಈ ಪುಸ್ತಕ ಕೊಡುವುದಿಲ್ಲ. ಈಗಾಗಲೇ ಗುರುತಿಸಿರುವಂತೆ  ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರ ಈ ಪುಸ್ತಕ ಕೊಡುತ್ತೇವೆ’ ಎನ್ನುತ್ತಾರೆ ಪಾಟೀಲ.

‘ಇಡೀ ಪುಸ್ತಕವನ್ನು ಮಂಡಳಿಯ ವೆಬ್‌ಸೈಟ್‌ www.hkrdb.kar.nic.in ನಲ್ಲಿ ಅಪ್‌ಲೋಡ್‌ ಮಾಡಿದ್ದು, ಆಸಕ್ತ ಖಾಸಗಿ ಶಾಲೆಗಳವರು/ ವಿದ್ಯಾರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದು’ ಎನ್ನುವುದು ಅವರ ವಿವರಣೆ.

2018ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಬಹುದಾದ ವಿದ್ಯಾರ್ಥಿಗಳು

ಜಿಲ್ಲೆ ಕನ್ನಡ ಮಾಧ್ಯಮ ಉರ್ದು ಮಾಧ್ಯಮ

ಬಳ್ಳಾರಿ 5,000 100

ಬೀದರ್‌ 4,000 675

ಕಲಬುರ್ಗಿ 5,500 890

ಕೊಪ್ಪಳ 3,800 60

ರಾಯಚೂರು 4,200 175

ಯಾದಗಿರಿ 2,500 100

ಒಟ್ಟು 25,000 2,000

 

(ಆಧಾರ: ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿಯ ಹೆಚ್ಚುವರಿ ಆಯುಕ್ತರ ಕಚೇರಿ)

ಅಂಕಿ ಅಂಶ

2,752

ಒಟ್ಟು ಪ್ರೌಢ ಶಾಲೆಗಳು

1.44 ಲಕ್ಷ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry