ಶುಕ್ರವಾರ, ಡಿಸೆಂಬರ್ 6, 2019
26 °C

‘ಆಂಗ್ಲಭಾಷೆ ಒಲವು; ಸರ್ಕಾರಿ ಶಾಲೆಗೆ ಕುತ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆಂಗ್ಲಭಾಷೆ ಒಲವು; ಸರ್ಕಾರಿ ಶಾಲೆಗೆ ಕುತ್ತು’

ಸೋಮವಾರಪೇಟೆ: ‘ಕನ್ನಡ ಭಾಷೆಯಲ್ಲಿ ಕಲಿತ ಹಲವರು ಮಾಡಿರುವ ಸಾಧನೆಗಳು ನಮ್ಮ ಕಣ್ಣ ಮುಂದೆ ಇದ್ದರೂ, ಆಂಗ್ಲ ವ್ಯಾಮೋಹಕ್ಕೆ ಬಲಿಯಾಗಿರುವುದರಿಂದ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ವಿಷಾದಿಸಿದರು.

ಸಮೀಪದ ನೇರುಗಳಲೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವತಿಯಿಂದ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ದಶಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹಾಗೂ ಉತ್ತಮ ಶಿಕ್ಷಕರ ಕೊರತೆಯೂ ಶಾಲೆಗಳ ಅವನತಿಗೆ ಕಾರಣವಾಗಿದೆ. ವಿದ್ಯಾರ್ಥಿಗಳು ನೂತನ ಆವಿಷ್ಕಾರಗಳಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಜನ ಪಡೆಯಬೇಕು. ರಾಷ್ಟ್ರ ನಿರ್ಮಾಣ ಕಾರ್ಯದತ್ತ ಯುವ ಜನಾಂಗ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪ್ರಾಕೃತಿಕ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಭೂಮಿ ಮಾನವನ ಆಸೆಗಳನ್ನು ಪೂರೈಸಲು ಶಕ್ತವಾಗಿದೆಯೇ ವಿನಾ ದುರಾಸೆಯನ್ನಲ್ಲ ಎಂಬದನ್ನು ಮನಗಾಣಬೇಕು’ ಎಂದು ಕಿವಿಮಾತು ಹೇಳಿದರು.

ಶನಿವಾರಸಂತೆ ವಿಘ್ನೇಶ್ವರ ಶಾಲೆಯ ಅಧ್ಯಾಪಕ ಜಯಕುಮಾರ್ ಮಾತನಾಡಿ, ‘ಶಾಲೆಗಳಿಂದ ಸಮಾನತೆ ಉಳಿದಿವೆ. ಇಲ್ಲಿ ಎಲ್ಲರೂ ಸಮಾನರೇ ಆಗಿದ್ದಾರೆ. ದೇಶದ ಪವಿತ್ರ ಗ್ರಂಥ ಸಂವಿಧಾನವಾಗಿದ್ದು, ಅದಕ್ಕೆ ಬದ್ಧರಾಗಿ ಎಲ್ಲರೂ ಜೀವಿಸಬೇಕಿದೆ’ ಎಂದರು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯವಾಗಿದ್ದು, ಜವಾಬ್ದಾರಿ ಅರಿಯಬೇಕಿದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ಎ.ಎಚ್. ತಿಮ್ಮಯ್ಯ, ಉಪಾಧ್ಯಕ್ಷ ದಿವಾಕರ್, ಸದಸ್ಯೆ ಲೀಲಾವತಿ, ಸುಜಾತಾ ಚಂಗಪ್ಪ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಕರಾದ ಲೀಲಾವತಿ, ಇಬ್ರಾಹಿಂ, ಉಮೇಶ್ವರ್, ಸುನೀತಾ, ರತ್ನಾಕರ, ತೇಜಾಕ್ಷಿ, ಆಸಿಯಾ ಭಾನು, ಚಂದ್ರಾವತಿ ಅವರುಗಳನ್ನು ದಶಮಾನೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)