ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ ಜಯ: ನಾಲ್ಕನೇ ಬಾರಿ ವಿಶ್ವ ಚಾಂಪಿಯನ್ ಆದ ಭಾರತ

Last Updated 3 ಫೆಬ್ರುವರಿ 2018, 17:38 IST
ಅಕ್ಷರ ಗಾತ್ರ
ADVERTISEMENT

ಮೌಂಟ್‌ ಮೌಂಗನೂಯಿ, ನ್ಯೂಜಿಲೆಂಡ್‌: ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ, ಭಾರತ ತಂಡ ನಾಲ್ಕನೇ ಬಾರಿ ವಿಶ್ವ ಚಾಂಪಿಯನ್ ಆದಂತಾಗಿದೆ.

ಆರಂಭಿಕ ಆಟಗಾರ ಮನ್‌ಜೋತ್ ಕಾಲ್ರಾ ಭರ್ಜರಿ ಶತಕದ (101 – 102 ಎಸೆತ, 8 ಬೌಂಡರಿ ಮತ್ತು 3 ಸಿಕ್ಸರ್) ನೆರವಿನಿಂದ, ಆಸ್ಟ್ರೇಲಿಯಾ ನೀಡಿದ್ದ 217 ರನ್‌ ಗುರಿ ಬೆನ್ನತ್ತುವುದು ಭಾರತಕ್ಕೆ ಸುಲಭಸಾಧ್ಯವಾಯಿತು. 38.5 ಓವರ್‌ಗಳಲ್ಲಿ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ವಿಜಯದ ನಗೆ ಬೀರಿತು.

ಭಾರತಕ್ಕೆ ಉತ್ತಮ ಆರಂಭ: ಭಾರತದ ಇನ್ನಿಂಗ್ಸ್ ಆರಂಭವಾಗಿ ಕೆಲವೇ ಓವರ್‌ಗಳಾಗುವಷ್ಟರಲ್ಲಿ ಮಳೆಯ ಕಾರಣಕ್ಕೆ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ನಂತರ ಪಂದ್ಯ ಆರಂಭವಾದಾಗ ನಾಯಕ ಪೃಥ್ವಿ ಶಾ (29) ಮತ್ತು ಕಾಲ್ರಾ (101) ಉತ್ತಮ ಬ್ಯಾಟಿಂಗ್ ನಡೆಸಿದರು. ಹಾರ್ವಿಕ್ ದೇಸಾಯಿ 47 ರನ್ (61 ಎಸೆತ) ಗಳಿಸಿ ಕಾಲ್ರಾಗೆ ಉತ್ತಮ ಸಾಥ್ ನೀಡಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಆರಂಭಿಕರಾದ ಜೇಕ್‌ ಎಡ್ವರ್ಡ್ಸ್ ಹಾಗೂ ಮ್ಯಾಕ್ಸ್‌ ಬ್ರಯಾಂಟ್‌ ಉತ್ತಮ ಆರಂಭ ಒದಗಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 32 ರನ್ ಪೇರಿಸಿದರು. ಈ ಹಂತದಲ್ಲಿ ಬ್ರಯಾಂಟ್ (14) ಅವರನ್ನು ಹೊರದಬ್ಬಿದ ಇಶಾನ್‌ ಪೊರೆಲ್‌ ಆಸೀಸ್‌ಗೆ ಮೊದಲ ಆಘಾತ ನೀಡಿದರು.

(ಭರ್ಜರಿ ಶತಕದ ಮೂಲಕ ಭಾರತ ತಂಡದ ಗೆಲುವಿಗೆ ನೆರವಾದ ಮನ್‌ಜೋತ್ ಕಾಲ್ರಾ ಬ್ಯಾಟಿಂಗ್ ವೈಖರಿ)

ಭಾರತದ ಪರ ಉತ್ತಮ ಬೌಲಿಂಗ್ ನಡೆಸಿದ ಇಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಗರ್‌ಕೊಟಿ ಮತ್ತು ಅನುಕುಲ್ ರಾಯ್ ತಲಾ 2 ವಿಕೆಟ್ ಪಡೆದು ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸುವುದನ್ನು ತಡೆದರು.

ಆಸ್ಟ್ರೇಲಿಯಾ ತಂಡ 47.2 ಓವರ್‌ಗಳಲ್ಲಿ 216 ರನ್‌ಗಳಿಗೆ ಆಲ್‌ಔಟ್ ಆಗಿತ್ತು.

ಅನುಕುಲ್ ರಾಯ್‌ಗೆ ಅಗ್ರ ಪಟ್ಟ: ಜೊನಾಥನ್ ಅವರನ್ನು ಔಟ್ ಮಾಡುವ ಮೂಲಕ ಸ್ಪಿನ್ನರ್ ಅನುಕುಲ್ ರಾಯ್ 2018ರ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಏರಿದರು.

ನಾಲ್ಕನೇ ಬಾರಿ ಚಾಂಪಿಯನ್: 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಫೈನಲ್ನಲ್ಲಿ ಜಯ ಗಳಿಸುವ ಮೂಲಕ ಭಾರತ ತಂಡ ನಾಲ್ಕನೇ ಬಾರಿ ಚಾಂಪಿಯನ್ ಆದಂತಾಗಿದೆ. ಈ ಹಿಂದೆ, 2002ರಲ್ಲಿ (ಮಹಮ್ಮದ್ ಕೈಫ್‌ ನಾಯಕತ್ವ), 2008ರಲ್ಲಿ (ವಿರಾಟ್ ಕೊಹ್ಲಿ ನಾಯಕತ್ವ), ಮತ್ತು 2012ರಲ್ಲಿ (ಉನ್ಮುಕ್ತ್ ಚಾಂದ್ ನಾಯಕತ್ವ) 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಚಾಂಪಿಯನ್ ಆಗಿದೆ.

ಟೂರ್ನಿಯ ಆರಂಭದಿಂದಲೇ ಉತ್ತಮ ಆಟ: ಆಸ್ಟ್ರೇಲಿಯಾವನ್ನು 100 ರನ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ ಭಾರತ ನಂತರ ಪಪುವಾ ನ್ಯೂಗಿನಿ ಮತ್ತು ಜಿಂಬಾಬ್ವೆ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 131 ರನ್‌ಗಳಿಂದ ಮತ್ತು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 203 ರನ್‌ಗಳಿಂದ ಮಣಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT