ಲಕ್ಷ್ಮೀನಾರಾಯಣ ಸ್ವಾಮಿ ರಥೋತ್ಸವ

7

ಲಕ್ಷ್ಮೀನಾರಾಯಣ ಸ್ವಾಮಿ ರಥೋತ್ಸವ

Published:
Updated:

ಕೊಳ್ಳೇಗಾಲ: ನಗರದ ಕಾವೇರಿ ರಸ್ತೆಯಲ್ಲಿ 12ನೇ ಶತಮಾನದಲ್ಲಿ ಚೋಳ ಅರಸರಿಂದ ಸ್ಥಾಪಿಸಲಾದ, ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀ ನಾರಾಯಣ ಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯವನ್ನು ತಳಿರು ತೋರಣ ಗಳಿಂದ, ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತು. ವಿವಿಧ ಕಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕ ರಾಘವನ್ ಅವರು ಪೂಜೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ತಂದು ನಂತರ ರಥದಲ್ಲಿಡಲಾಯಿತು. ಭಕ್ತರು ಜೈಕಾರ ಕೂಗುತ್ತಾ ರಥವನ್ನು ಎಳೆದರು. ರಾಜಬೀದಿಯಲ್ಲಿ ಸಾಗಿದ ರಥ ದೇವಾಲಯ ಬೀದಿ ಮೂಲಕ ಬಂದು ಮೂಲ ಸ್ಥಾನ ಸೇರಿತು. ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಹೂವು ಹಣ್ಣು ಎಸೆದು, ಕೈಮುಗಿದರು.

ನೆರೆ ಹೊರೆಯ ಗ್ರಾಮ, ಪಟ್ಟಣಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಅವರಿಗೆ ಸ್ಥಳೀಯ ನಿವಾಸಿಗಳು ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿದರು.

ಶಾಸಕ ಎಸ್.ಜಯಣ್ಣ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ನಗರಸಭೆ ಅಧ್ಯಕ್ಷ ಶಾಂತರಾಜು ಸೇರಿದಂತೆ ಅನೇಕ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಿಪಿಐ ರಾಜಣ್ಣ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.

ನೀರಿನ ತೊಟ್ಟಿಯಲ್ಲಿ ಸಿಲುಕಿದ ಚಕ್ರ

ರಥ ಎಳೆಯುವ ವೇಳೆ ಅದರ ಚಕ್ರ ನೀರಿನ ತೊಟ್ಟಿಗೆ ಸಿಲುಕಿದ್ದರಿಂದ ರಥ ಬಲಭಾಗಕ್ಕೆ ವಾಲಿಕೊಂಡು ಭಕ್ತರಲ್ಲಿ ಆತಂಕ ಮೂಡಿಸಿತು. ತಕ್ಷಣ ಪೊಲೀಸರು ಜೆ.ಸಿ.ಬಿ ಯಂತ್ರದ ಮೂಲಕ ರಥವನ್ನು ಮೇಲಕ್ಕೆತ್ತಿ ಮುಂದೆ ಸಾಗುವಂತೆ ಮಾಡಿದರು. ಇದರಿಂದಾಗಿ ರಥೋತ್ಸವ ಅರ್ಧಗಂಟೆ ತಡವಾಗಿ ಮುಕ್ತಾಯಗೊಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry