ಬುಧವಾರ, ಡಿಸೆಂಬರ್ 11, 2019
15 °C

ಶಿಕ್ಷಕರು ಸಮಾಜ ಜ್ಞಾನದ ಭಾಗವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರು ಸಮಾಜ ಜ್ಞಾನದ ಭಾಗವಾಗಲಿ

ಚಿಕ್ಕಬಳ್ಳಾಪುರ: ‘ಇವತ್ತಿನ ಶಿಕ್ಷಕರು ಸಮಾಜದ ಜ್ಞಾನದ ಭಾಗವಾಗುತ್ತಿಲ್ಲ. ಅದು ನಮ್ಮ ಮುಖ್ಯ ಕೊರತೆಯಾಗಿದೆ. ಎಲ್ಲಿಯವರೆಗೂ ಶಿಕ್ಷಕರು ಸಮಾಜದ ಜ್ಞಾನದ ಭಾಗವಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮಲ್ಲಿನ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ’ ಎಂದು ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ಅಭಿಪ್ರಾಯಪಟ್ಟರು.

ಜಿಲ್ಲಾ ದಶಮಾನೋತ್ಸವ ಪ್ರಯುಕ್ತ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶಿಕ್ಷಣ ಮತ್ತು ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಶಿಕ್ಷಕರು ಬದಲಾವಣೆ ಪ್ರಕ್ರಿಯೆಗೆ ಒಳಪಡುವ ಅಗತ್ಯವಿದೆ’ ಎಂದರು

‘ನಾವು ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದೇವೆ. ವಿದ್ಯಾರ್ಥಿಗಳು ಏಕೆ ನಮ್ಮ ಮೇಲೆ ವಿಶ್ವಾಸವಿಡುತ್ತಿಲ್ಲ. ಎನ್ನುವ ಬಗ್ಗೆ ಶಿಕ್ಷಕರು ಇವತ್ತು ಯೋಚಿಸಬೇಕು. ಎಲ್ಲಿ ಸೋಲುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತಮ ಮಾದರಿಗಳನ್ನು ಇಟ್ಟುಕೊಂಡು ಸದಾ ಅಧ್ಯಯನಶೀಲರಾಗಬೇಕು. ಪ್ರಾಥಮಿಕ ಶಾಲೆಯಲ್ಲಿ ಓದುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ’ ಎಂದು ಪ್ರತಿಪಾದಿಸಿದರು.

‘ಸರ್ಕಾರ ಇವತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಅದರಂತೆ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಬೋಧನೆಯಲ್ಲಿ ತೊಡಗಿಕೊಳ್ಳಬೇಕಿದೆ. ಸರ್ಕಾರ ಕೂಡ ಶಿಕ್ಷಕರಿಗೆ ವಹಿಸುವ ಬೋಧಕೇತರ ಕೆಲಸಗಳನ್ನು ಕಡಿಮೆ ಮಾಡಬೇಕು. ಶಿಕ್ಷಕರು ಇವತ್ತು ಯಾವುದಕ್ಕೂ ಮಾದರಿಯಾಗಬೇಕಿತ್ತೋ ಅದಕ್ಕೆ ಆಗುತ್ತಿಲ್ಲ. ಯಾವುದಕ್ಕೆ ಆಗುತ್ತಿದ್ದಾರೆ ಎನ್ನುವ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಎಸ್.ತುಕಾರಾಂ ಮಾತನಾಡಿ, ‘ಅಂಬೇಡ್ಕರ್ ಅವರು ಸ್ವಾಭಿಮಾನಕ್ಕಾಗಿ ಶಿಕ್ಷಣ ಕೊಡಲು ಹೊರಟರು. ಮಹಾತ್ಮಾ ಗಾಂಧೀಜಿ ಅವರು ಸ್ವಾವಲಂಬನೆಗೋಸ್ಕರ ಶಿಕ್ಷಣ ಕೊಡಲು ಹೊರಟರು. ಒಂದು ಸಮಾಜಕ್ಕೆ ಸ್ವಾಭಿಮಾನ ಮತ್ತು ಸ್ವಾವಲಂಬನೆ ಎರಡೂ ಮುಖ್ಯ. ಇಬ್ಬರೂ ಮಹನೀಯರ ಆಶಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇವತ್ತು ಶಿಕ್ಷಣದ ಜತೆ ನೈತಿಕತೆ ಕೂಡ ಬೆಳೆಯಬೇಕು’ ಎಂದು

ಹೇಳಿದರು.

‘ನೀತಿಯಿಲ್ಲದ ಶಿಕ್ಷಣದಿಂದ ಲಾಭವಿಲ್ಲ. ಆದ್ದರಿಂದ ಹೆಚ್ಚೆಚ್ಚು ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುವುದು ಬೇಡ. ಈಗಿರುವ ಶಿಕ್ಷಕರೆ ಸಾಕು. ಅವರು ಕಾಯಾ, ವಾಚಾ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಈ ಜಿಲ್ಲೆಯನ್ನಾಗಲಿ, ರಾಜ್ಯವನ್ನಾಗಲಿ ಉತ್ತಮವಾಗಿ ಬೆಳೆಸಬಹುದು. ಶಿಕ್ಷಕರು ಕೇವಲ ಪಾಠ ಮಾಡಿದರೆ ಸಾಲದು ಹೃದಯವಂತರಾಗಿ ಮಕ್ಕಳಿಗೆ ಪಾಠ ಮಾಡಬೇಕು’ ಎಂದು ತಿಳಿಸಿದರು.

ಚಿಂತಕ ಸ.ರಘುನಾಥ್ ಮಾತನಾಡಿ, ‘ನಮ್ಮಲ್ಲಿ ತೆಲುಗು ಮತ್ತು ಕನ್ನಡ ಭಾಷಾ ಬಾಂಧವ್ಯ ತುಂಬಾ ಚೆನ್ನಾಗಿದೆ. ಅದೇ ಮರಾಠಿ ಸಂದರ್ಭದಲ್ಲಿ ಇಲ್ಲಿರುವ ನಂಬಿಕೆ, ವಿಶ್ವಾಸಗಳು ಇಲ್ಲ. ಇಲ್ಲಿನ ಸಾಮರಸ್ಯ ಉಳಿದೆಡೆ ಮಾದರಿಯಾಗಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಕರು ತಾಯಿಯ ಕಾಳಜಿ ಇಟ್ಟುಕೊಂಡು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಣ ಕೊಡಬೇಕು. ಸೇವೆಯನ್ನು ಕೇವಲ ಜ್ಞಾನಾಕಾಂಕ್ಷೆಯಿಂದ ಮಾತ್ರ ಮಾಡುವುದಲ್ಲ. ಪ್ರಾಮಾಣಿಕತೆಯಿಂದ ಮಾಡಬೇಕು’

ಎಂದರು.

ಶಿಕ್ಷಣ ತಜ್ಞ ಪ್ರೊ.ಕೋಡಿ ರಂಗಪ್ಪ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಲ್ಲಿಯೇ ಚಿಕ್ಕಬಳ್ಳಾಪುರದಲ್ಲಿ ಪಂಚಮ ಶಾಲೆ ಇತ್ತು. ಸಾಮಾಜಿಕ ನ್ಯಾಯಕ್ಕಾಗಿ ದಿನ ದಲಿತರಿಗೆ ಅಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಜಿಲ್ಲೆಯವರೇ ಆದ ವಿಶ್ವೇಶ್ವರಯ್ಯ ಮತ್ತು ಎಚ್.ನರಸಿಂಹಯ್ಯ ಅವರು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ತೋರಿದರು. ಅದನ್ನು ನಾವು ಉಳಿಸಿಕೊಂಡು ಜಿಲ್ಲೆಯನ್ನು ಶೈಕ್ಷಣಿಕವಾಗಿ ಮೇಲೆ ತೆಗೆದುಕೊಂಡು ಹೋಗಬೇಕು. ಬರೀ ಶೈಕ್ಷಣಿಕವಾಗಿ ಎತ್ತಿದರೆ ಸಾಲದು ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಕೂಡ ಮೇಲೆ ಬರಬೇಕಾಗಿದೆ’ ಎಂದು ಹೇಳಿದರು.

ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್‌.ರಘು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಣ್ಣರೆಡ್ಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜನಾರ್ಧನ್, ಜಾನಪದ ತಜ್ಞ ಜಿ.ಶ್ರೀನಿವಾಸಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್, ಬಾಗೇಪಲ್ಲಿ ತಹಶೀಲ್ದಾರ್ ಮೊಹಮ್ಮದ್ ಅಸ್ಲಂ, ವಿಷ್ಣುಪ್ರಿಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)