ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್‌ ಕಡ್ಡಾಯ: ಖರೀದಿ ಭರಾಟೆ

Last Updated 3 ಫೆಬ್ರುವರಿ 2018, 9:02 IST
ಅಕ್ಷರ ಗಾತ್ರ

ಗದಗ: ಉರಿಬಿಸಿಲು, ಸೆಕೆ, ತಲೆಭಾರ, ಸಂಚಾರ ದಟ್ಟಣೆ ಇಲ್ಲ, ಚಿಕ್ಕನಗರ ಹೀಗೆ ನೂರೆಂಟು ಸಬೂಬು ಹೇಳಿ, ಹೆಲ್ಮೆಟ್‌ ಧರಿಸದೆ, ಗದುಗಿನ ರಸ್ತೆಗಳಲ್ಲಿ ನಿರಾತಂಕವಾಗಿ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಈ ಬಾರಿ ಹೆಲ್ಮೆಟ್‌ ಕಡ್ಡಾಯದ ಬಿಸಿ ಸ್ವಲ್ಪ ಜೋರಾಗಿಯೇ ತಟ್ಟಿದೆ.

ಹಿಂದೆಯೂ ನಗರದಲ್ಲಿ ಹೆಲ್ಮೆಟ್‌ ಕಡ್ಡಾಯ ಕಾರ್ಯಾಚರಣೆ ನಡೆದಿತ್ತು. ಆದರೆ, ಈಗಿನಷ್ಟು ಬಿಗಿ ಇರಲಿಲ್ಲ. ವಾರದ ನಂತರ ಮತ್ತೆ ಪರಿಸ್ಥಿತಿ ಯಥಾಸ್ಥಿತಿಗೆ ಮರಳುತ್ತಿತ್ತು. ಆದರೆ, ಈ ಬಾರಿ ಸವಾರರ ಲೆಕ್ಕಾಚಾರ ತಲೆಕೆಳಗಾಗಿದೆ. ಪೊಲೀಸರ ಕಾರ್ಯಾಚರಣೆ ಒಂದು ವಾರ ಕಳೆದರೂ ಶಕ್ತವಾಗಿ ಮುಂದುವರಿದಿದೆ.

ನಗರದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಸಹಿತ ಸುರಕ್ಷಿತ ಚಾಲನೆಯ ಶಿಸ್ತನ್ನು ಕಲಿಸಿಯೇ ಸಿದ್ಧ ಎಂದು ಸಂಚಾರ ಪೊಲೀಸರು ರಸ್ತೆಗೆ ಇಳಿದಿದ್ದಾರೆ. ಪರಿಣಾಮ, ಒಂದು ವಾರದಲ್ಲೇ ₹2.50 ಲಕ್ಷ ದಂಡ ವಸೂಲಿಯಾಗಿದೆ. ಅಷ್ಟೇ ಅಲ್ಲ, ಸವಾರರು ಹೆಲ್ಮೆಟ್‌ ಖರೀದಿಸಲೇಬೇಕಾದ ಮತ್ತು ಅದನ್ನು ಹಾಕಿಕೊಂಡು ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಈ ಪರಿಸ್ಥಿತಿಯ ಲಾಭ ಪಡೆಯುವಂತೆ ಈಗ ನಗರದಾದ್ಯಂತ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ತಾತ್ಕಾಲಿಕ ಹೆಲ್ಮೆಟ್‌ ಅಂಗಡಿಗಳು ಪ್ರಾರಂಭವಾಗಿದೆ. ರಸ್ತೆ ಬದಿಯ ಹಣ್ಣಿನ ಅಂಗಡಿಗಳು, ತರಕಾರಿ ಅಂಗಡಿಗಳು, ಕಿರಾಣಿ ಅಂಗಡಿಯಲ್ಲೂ ಹೆಲ್ಮೆಟ್‌ ಲಭಿಸುತ್ತಿದೆ. ಐಎಸ್‌ಐ ಗುರುತು ಇರುವ, ಇಲ್ಲದ, ₹100ರಿಂದ ₹2 ಸಾವಿರ ಮೌಲ್ಯದ ವರೆಗಿನ ತರಹೇವಾರಿ ಹೆಲ್ಮೆಟ್‌ಗಳು ಬಿಸಿ ದೋಸೆಯಂತೆ ಬಿಕರಿಯಾಗುತ್ತಿವೆ.

ನಗರದ ಭೂಮರಡ್ಡಿ ವೃತ್ತ, ಹಳೆ ಡಿ.ಸಿ. ಕಚೇರಿ, ಮಹೇಂದ್ರಕರ್‌ ವೃತ್ತ, ಬ್ಯಾಂಕ್‌ ರಸ್ತೆ, ಸ್ಟೇಷನ್ ರಸ್ತೆ, ಭೀಷ್ಮಕೆರೆ ಎದುರಿನ ರಸ್ತೆ, ಕಿತ್ತೂರು ಚನ್ನಮ್ಮ ವೃತ್ತ, ಮುಳಗುಂದ ನಾಕಾ, ಹೆಲ್ತ್‌ ಕ್ಯಾಂಪ್‌, ಬೆಟಗೇರಿ ಬಸ್‌ ನಿಲ್ದಾಣ ಸಮೀಪದಲ್ಲಿ ತಾತ್ಕಾಲಿಕ ಹೆಲ್ಮೆಟ್‌ ಮಳಿಗೆಗಳು ತಲೆ ಎತ್ತಿವೆ. ಇಲ್ಲಿ ಖರೀದಿ ಭರಾಟೆಯೂ ಜೋರಾಗಿದೆ.

ಪೂರ್ತಿ ತಲೆ, ಕಿವಿ ಮುಚ್ಚುವ, ತಲೆ ಭಾಗ ಮಾತ್ರ ಮುಚ್ಚುವ, ನೆತ್ತಿ, ಕುತ್ತಿಗೆ ಭಾಗ ಮಾತ್ರ ಮುಚ್ಚುವ, ಅರ್ಧ ಮುಖ ಕಾಣುವ, ಗಾಳಿ ಸಂಚಾರಕ್ಕೆ ಅವಕಾಶ ಇರುವ, ಧೂಳು ನಿಯಂತ್ರಣ ವ್ಯವಸ್ಥೆ ಹೊಂದಿರುವ, ಬೆವರು ನಿಯಂತ್ರಿಸುವ, ಫುಲ್‌ ಮಾಸ್ಕ್‌, ಹಾಪ್‌ ಮಾಸ್ಕ್‌ ಹೆಲ್ಮೆಟ್‌ಗಳು ಗಮನ ಸೆಳೆಯುತ್ತಿವೆ.

ಸವಾರರು ತಮ್ಮ ವಾಹನದ ಬಣ್ಣವನ್ನು ಹೋಲುವ ತಮ್ಮ ಅಭಿರುಚಿಗೆ ತಕ್ಕಂತಹ ಹೆಲ್ಮಟ್‌ಗಳನ್ನು ಚೌಕಾಸಿ ಮಾಡಿ ಖರೀದಿಸಿ, ತಲೆಗೆ ಸಿಕ್ಕಿಸಿಕೊಂಡು ಖುಷಿಯನ್ನೂ, ಸ್ವಲ್ಪ ಕಿರಿಕಿರಿಯನ್ನೂ ಅನುಭವಿಸುತ್ತಿದ್ದಾರೆ. ಐಎಎಸ್‌ಐ ಗುರುತು ಇರುವ ಹೆಲ್ಮೆಟ್‌ ಕಡ್ಡಾಯವಾಗಿರುವುದರಿಂದ ಹೆಚ್ಚಿನವರು ಗುಣಮಟ್ಟ ಪರೀಕ್ಷಿಸಿ ಖರೀದಿಸುತ್ತಿದ್ದಾರೆ.

‘ಐಎಸ್‍ಐ ಗುರುತು ಇರುವ ಹೆಲ್ಮೆಟ್‌ ₹500ರಿಂದ ₹2 ಸಾವಿರವರೆಗೆ ದರ ಇದೆ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಿಂದ ತಂದು ಮಾರಾಟ ಮಾಡುತ್ತಿದ್ದೇವೆ’ ಎಂದು ರಸ್ತೆ ಬದಿಯಲ್ಲಿ ಹೆಲ್ಮೆಟ್‌ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಮಂಜುನಾಥ ಪೊಲೀಸಗೌಡರ, ಅಕ್ಷಯ ಕಂಪ್ಲಿ ಹೇಳಿದರು.

‘ನಗರದಲ್ಲಿ ಯಾವುದೇ ಪ್ರಮುಖ ಹೆಲ್ಮೆಟ್‌ ಮಾರಾಟ ಮಳಿಗೆ ಇಲ್ಲ. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ತಂದು ಮಾರುತ್ತಿದ್ದೇವೆ. ಹೆಲ್ಮೆಟ್ ಕಡ್ಡಾಯ ಆಗಿರುವುದರಿಂದ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಮೊದಲು ವಾರದಲ್ಲಿ ಸರಾಸರಿ 1 ಹೆಲ್ಮೆಟ್‌ ಮಾರಾಟ ಆಗುತ್ತಿತ್ತು. ಈಗ ಪ್ರತಿದಿನ 40ರಿಂದ 50 ಹೆಲ್ಮೆಟ್‌ಗಳು ಬಿಕರಿಯಾಗುತ್ತಿವೆ’ ಎಂದು ಹೆಲ್ಮೆಟ್‌ ವ್ಯಾಪಾರಿ ಕೆ.ವಿನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.

* * 

ಹೆಲ್ಮೆಟ್ ಕಡ್ಡಾಯ. ಜೀವಹಾನಿ ತಡೆಯುವುದು ಇದರ ಮುಖ್ಯ ಉದ್ದೇಶ. ಜತೆಗೆ ಸಂಚಾರ ನಿಯಮ ಪಾಲಿಸುವ ಶಿಸ್ತನ್ನು ಸವಾರರಿಗೆ ಕಲಿಸುವ ಪ್ರಯತ್ನ ನಡೆಯುತ್ತಿದೆ
ಕೆ.ಸಂತೋಷಬಾಬು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT