ಭಾನುವಾರ, ಡಿಸೆಂಬರ್ 8, 2019
24 °C

ಫೆ.6 ಅಂತರರಾಷ್ಟ್ರೀಯ ಸ್ತ್ರೀ ಜನನಾಂಗ ಊನ ವಿರೋಧಿ ದಿನ; #endFGM –ವಿಶ್ವಸಂಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೆ.6 ಅಂತರರಾಷ್ಟ್ರೀಯ ಸ್ತ್ರೀ ಜನನಾಂಗ ಊನ ವಿರೋಧಿ ದಿನ; #endFGM –ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಫೆಬ್ರುವರಿ 6ರಂದು ಅಂತರರಾಷ್ಟ್ರೀಯ ಎಫ್‌ಜಿಎಂ ವಿರೋಧಿ ದಿನವಾಗಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಈ ಕ್ರೂರ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ಹೆಣ್ಣಿನ ಜನನಾಂಗದ ಛೇದನ (ಫೀಮೇಲ್ ಜೆನೈಟಲ್ ಮ್ಯುಟಿಲೇಷನ್ –ಎಫ್‌ಜಿಎಂ/FGM =Female Genital Mutilation) ಮಾಡುವ ಆಚರಣೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಈ ದಿನ ಆಚರಿಸಲಾಗುತ್ತಿದೆ.

ಈ ಪದ್ಧತಿ ಹಲವೆಡೆ ಇಂದಿಗೂ ಇದ್ದು, ಜಾಗತಿಕವಾಗಿ ಕನಿಷ್ಠ 20 ಕೋಟಿ ಜನ ಹುಡುಗಿಯರು ಮತ್ತು ಮಹಿಳೆಯರು ಜನನಾಂಗದ ಊನಗೊಳಿಸುವಿಕೆಯ ಎಫ್‌ಜಿಎಂನಂಥ ಆಚರಣೆಗೆ ಒಳಗಾಗಿದ್ದಾರೆ. ಪ್ರಸ್ತುತ ಇದೇ ಪ್ರವೃತ್ತಿ ಮುಂದುವರಿದರೆ 2030ರ ವೇಳೆಗೆ 1.5 ಕೋಟಿಗೂ ಹೆಚ್ಚು ಹುಡುಗಿಯರು ಈ ಆಚರಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಎಫ್‌ಜಿಎಂ ಅಂತ್ಯಗೊಳಿಸಲು ನಿಮ್ಮ ಧ್ವನಿ ಎತ್ತಿ ಎಂದು ವಿಶ್ವಸಂಸ್ಥೆ #endFGM ಟ್ಯಾಗ್‌ನೊಂದಿಗೆ ಟ್ವೀಟ್‌ ಮಾಡಿದೆ.

ಏನಿದು ಎಫ್‌ಜಿಎಂ? ಪೂರಕ ಮಾಹಿತಿ
ಧರ್ಮ, ದೇವರು, ಸಂಸ್ಕೃತಿ ಹೆಸರಲ್ಲಿ ಮಹಿಳೆಯರನ್ನು ಅಂಕೆಯಲ್ಲಿಡುವಲ್ಲಿ ಆಚರಿಸಿಕೊಂಡ ಪದ್ಧತಿ ಎಫ್‌ಜಿಎಂ.

ಸರಹದ್ದುಗಳನ್ನು ಸೃಷ್ಟಿಸಿ ಹೆಣ್ಣನ್ನು ಹದ್ದು­ಬಸ್ತಿನಲ್ಲಿ­ಡುವಂತಹ ಮೌಲ್ಯವ್ಯವಸ್ಥೆ ಪದೇ ಪದೇ ತಲೆ ಎತ್ತುತ್ತಲೇ ಇರುತ್ತದೆ. ಅನೇಕ ಸಂದ­ರ್ಭ­ಗಳಲ್ಲಿ ಇದು ನಯವಾಗಿರುತ್ತದೆ, ಸೂಕ್ಷ್ಮ­ವಾ­ಗಿರುತ್ತದೆ. ಮತ್ತೆ ಕೆಲವೆಡೆ, ವಿಧ್ಯುಕ್ತ ಆಚರಣೆಗಳ ನೆಪದಲ್ಲಿ ಹೆಣ್ಣಿನ ಬದುಕನ್ನೇ ಆವರಿಸಿ­ಕೊಳ್ಳು ತ್ತದೆ. ಇಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ಘೋರವಾದದ್ದು ಎಂದರೆ  ಹೆಣ್ಣಿನ ಜನನಾಂಗದ ಛೇದನ (ಎಫ್‌ಜಿಎಂ).

ಬ್ರಿಟನ್‌ನಲ್ಲಿ ಈ ಸಂಪ್ರದಾಯಕ್ಕೆ ನಿಷೇಧ­ವಿದ್ದರೂ ಅಲ್ಲಿನ ಕಪ್ಪು ಸಮುದಾಯ­ದವರು ತಮ್ಮ ಹೆಣ್ಣುಮಕ್ಕಳನ್ನು ಆಫ್ರಿಕಾಗೆ ಕರೆ­ದೊಯ್ದು ಈ ವಿಕೃತ ಸಂಪ್ರದಾಯ ಪಾಲಿಸುತ್ತಿ­ರುವುದು ಮಾನವ ಹಕ್ಕುಗಳನ್ನು ದೊಡ್ಡದಾಗಿ ಪ್ರತಿಪಾದಿಸುವ ರಾಷ್ಟ್ರವಾದ ಬ್ರಿಟನ್‌ಗೆ ತಲೆ­ನೋವಾಗಿತ್ತು.

ಸೊಮಾಲಿಯದ ರೂಪದರ್ಶಿಯ ಆತ್ಮಕತೆಯನ್ನು ಆಧರಿಸಿದ ‘ಮರುಭೂಮಿಯ ಹೂ’ ಎಂಬ ಚಿತ್ರ­ ಮಹಿಳೆಯ ಯೋನಿಯನ್ನು ಹೊಲಿಯುವ (FGM) ಕೆಟ್ಟ ಸಂಪ್ರದಾಯದ ಕುರಿತಾದದ್ದು. ಹೆಣ್ಣನ್ನು ಇಂತಹ ಹಿಂಸೆಗೆ ಒಳಪಡಿಸಿ, ಕ್ರೂರವಾಗಿ ಆಕೆಯನ್ನು ನಿಯಂತ್ರಿ­ಸುವ ಆಚರಣೆಯ ಕುರಿತು ಸೊಮಾಲಿಯಾದ ರೂಪದರ್ಶಿ ವಾರಿಸ್‌ ಡೆರಿ ಎಂಬಾಕೆ ಧ್ವನಿ ಎತ್ತಿ ಮಾತನಾಡಿದ್ದಳು. ವಿಶ್ವಸಂಸ್ಥೆಯಲ್ಲಿಯೂ ಆಕೆ ಇದನ್ನು ಹೇಳುವುದು ಸಾಧ್ಯವಾಯಿತು. ಆ ಮೂಲಕ ಸಾವಿರಾರು ವರ್ಷಗಳ ಈ ಆಚರಣೆ  ಹೊರಜಗತ್ತಿಗೆ ಗೊತ್ತಾಯಿತು.

ಮೂರ್ನಾಲ್ಕು ವರ್ಷದ ಹೆಣ್ಣುಮಗುವಿನ ಯೋನಿಯ ಸಂವೇದಿ ಭಾಗವನ್ನು ಮತ್ತು ಯೋನಿ ತುಟಿಗಳನ್ನು ಕತ್ತರಿಸಿ ಹೊಲಿಯಲಾ­ಗುತ್ತದೆ. ಮೂತ್ರ ವಿಸರ್ಜನೆಯಾಗಲು ಮತ್ತು ಮುಟ್ಟಿನ ರಕ್ತ ಹೋಗಲು ಒಂದು ಚಿಕ್ಕ ರಂಧ್ರವನ್ನಷ್ಟೇ ಉಳಿಸಲಾಗುತ್ತದೆ. ಈ ಆಚರಣೆಯ ಮೂಲಕ ಹೆಣ್ಣಿನ ಶೀಲವನ್ನು ಕಾಪಾಡುವ ಕೆಟ್ಟ ಪದ್ಧತಿ ಇಂಡೋನೇಷಿಯಾ, ಸೊಮಾಲಿಯಾ, ಇಥಿಯೋಪಿಯಾ, ನೈಜೀರಿಯಾ, ಲ್ಯಾಟಿನ್‌ ಅಮೆರಿಕ ಮುಂತಾದ ಕಡೆಗಳಲ್ಲಿದೆ.

ಭಾರತದಲ್ಲಿ ದಾವೂದಿ ಬಹುರಾ ಎಂಬ ಇಸ್ಮಾಯಿಲಾ ಸೆಕ್ಟ್‌ನ ಜನಾಂಗದಲ್ಲಿ ಈ ಆಚರಣೆ ಇರುವುದು ಬೆಳಕಿಗೆ ಬಂದಿತ್ತು. ಈ ರೀತಿ ಹೊಲಿಗೆ ಹಾಕಿದ ನಂತರ ಮೂತ್ರ ವಿಸರ್ಜನೆಗೆ ತುಂಬ ಹೊತ್ತು ಬೇಕಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ನಿಧಾನವಾಗಿ ಸ್ರಾವವಾಗುವುದರಿಂದ ಹೊಟ್ಟೆ­ನೋವು ಮತ್ತಿತರ ಕಾಯಿಲೆಗಳು ಬರುತ್ತವೆ. ಇದೊಂದು ಅಮಾನವೀಯ ಆಚರಣೆ. ಮಹಾರಾಷ್ಟ್ರ, ಗುಜರಾತ್‌ ಮತ್ತು ರಾಜಸ್ಥಾನದ ಕಡೆ ಈ ಆಚರಣೆ ಇದ್ದರೂ ಇದನ್ನು ಅಪರಾಧ ಎನ್ನಲು ಯಾವುದೇ ಕಾನೂನು ಇಲ್ಲ. ಇಂತಹ ಅನೇಕ ದೌರ್ಜನ್ಯ­ಗಳನ್ನು ಹೆಣ್ಣು ಮೌನವಾಗಿ ಸಹಿಸಿಕೊಳ್ಳುವು­ದನ್ನು ಬಿಟ್ಟು ಅದರ ವಿರುದ್ಧ ಧ್ವನಿಯೆತ್ತಿ ಮಾತನಾಡಬೇಕಿದೆ.

* ಇವನ್ನೂ ಓದಿ...
‘ಅದು ಹಾಗೇ’ ಎನ್ನದೆ ಅರಸಬೇಕಿದೆ ‘ಹೊಸ ಉತ್ತರ’
ಮಹಿಳೆಯನ್ನು ಕ್ರೂರವಾಗಿ ನಿಯಂತ್ರಿಸುವ ಎಫ್‌ಜಿಎಂ

ಪ್ರತಿಕ್ರಿಯಿಸಿ (+)