ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದ ಪಡ್ಡೆದಿನಗಳು

Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮುಖದ ಮೇಲಿನ ಗಾಂಭೀರ್ಯದ ಬಿಗಿ ರೇಖೆಗಳನ್ನು ಸಡಿಲಿಸುವ, ತುಟಿಯ ಮೇಲೆ ನಸುನಗುವನ್ನು ಮೂಡಿಸುವ ಲಘು ಬರಹಗಳ ಸಂಕಲನವಿದು. ಇದುವರೆಗೆ ಗಂಭೀರ ಚಿಂತಕರಾಗಿ, ವಿಮರ್ಶಕರಾಗಿ, ಕಥೆಗಾರರಾಗಿಯೂ ರಾಜೇಂದ್ರ ಚೆನ್ನಿ ಪರಿಚಿತರು. ಆದರೆ ಅವರೊಳಗೆ ಇರುವ ತುಂಟ ಹುಡುಗನೊಬ್ಬನನ್ನು ಪರಿಚಯಿಸುವ ಬರಹಗಳು ಈ ಪುಸ್ತಕದಲ್ಲಿವೆ. ಇವು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣರೂಪದಲ್ಲಿ ಪ್ರಕಟವಾಗಿದ್ದವು.

‘ಈ ಲೇಖನಗಳನ್ನು ಬರೆಯುವಾಗ ಅನ್ನಿಸಿದ ಖುಷಿ ನನಗೆ ಇನ್ನಾವ ಬರಹದಿಂದಲೂ ಅನ್ನಿಸಲಿಲ್ಲ’ ಎಂದು ಚಿನ್ನಿ ಅವರೇ ಮೊದಲ ಮಾತಿನಲ್ಲಿ ಹೇಳಿಕೊಂಡಿದ್ದಾರೆ. ಅವರಿಗೆ ಸಿಕ್ಕ ಖುಷಿಯನ್ನು ಓದುಗರಿಗೂ ದಾಟಿಸುವುದೇ ಈ ಬರಹಗಳ ಅನನ್ಯ ಗುಣ ಎನ್ನಬಹುದು.

ಹಾಸ್ಯ ಬರಹವೂ ಅಲ್ಲದ, ಲಲಿತಪ್ರಬಂಧವೂ ಅಲ್ಲದ ಅವೆರಡರ ‘ಹಗುರತನ’ವನ್ನೂ ಇಲ್ಲಿನ ಬರಹಗಳು ಮೈಗೂಡಿಸಿಕೊಂಡಿವೆ. ಆರಾಮವಾಗಿ ಓದಿಸಿಕೊಂಡು ಹೋಗುವ, ಎಲ್ಲರ ಕಾಲೇಜಿನ ಪಡ್ಡೆ ದಿನಗಳನ್ನೂ ನೆನಪಿಸುವ ಶಕ್ತಿ ಈ ಪುಸ್ತಕಕ್ಕಿದೆ.

1972ರಿಂದ 76ರವರೆಗೆ ತಾವು ಧಾರವಾಡದಲ್ಲಿ ಕಳೆದ ಹರೆಯದ ಕಾಲೇಜು ದಿನಗಳ ಅನುಭವಗಳಿಗೆ ಲೇಖಕರು ಅಕ್ಷರರೂಪ ನೀಡಿದ್ದಾರೆ. ಸಾಮಾನ್ಯವಾಗಿ ಇಂಥ ನೆನಪುಗಳ ಕುರಿತ ಬರವಣಿಗೆ ಒಂದೋ ಘಟನೆಗಳ ಸರಮಾಲೆಯ ನಿರೂಪಣೆಯ ರೂಪದಲ್ಲಿರುತ್ತದೆ. ಇಲ್ಲವೇ ಬರಿಯ ಅಂದಿನ ಕಾಲದ ವಿವರಗಳಿಂದ ಕಿಕ್ಕಿರಿದಿರುತ್ತದೆ. ಆದರೆ ಇಲ್ಲಿ ಚೆನ್ನಿ ಅವರು ಅವೆರಡನ್ನೂ ಹದವಾಗಿ ಬೆರೆಸಿದ್ದಾರೆ. ಆದ್ದರಿಂದಲೇ ಇಲ್ಲಿನ ಬಹುತೇಕ ಬರಹಗಳು ಮುಗಿದರೂ ಮುಗಿದಂತೆನಿಸುವುದಿಲ್ಲ. ಮುಗಿಸಬೇಕು ಎಂಬ ಹಟದಲ್ಲಿ ಮುಗಿಸಿದಂತೆ ತೋರುವುದಿಲ್ಲ. ಸುಮ್ಮನೇ ಪಕ್ಕ ಕೂತುಕೊಂಡು ಹಳೆಯ ನೆನಪುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವಾಗಿನ ಹೊರಳುಗಳಂತೆ, ಒಂದು ಲೇಖನಕ್ಕೆ ಇನ್ನೊಂದು ಖೋ ಕೊಟ್ಟುಕೊಂಡು ಹೋಗುತ್ತವೆ.

ಓದುಗರನ್ನು ನಗಿಸಲೇಬೇಕು ಎಂಬ ಜಿದ್ದಿಗೆ ಬಿದ್ದು ಆದದ್ದನ್ನು ಅತಿಶಯಗೊಳಿಸುವ ಗೋಜು, ತಾನ್ಯಾವುದೋ ಘನ ಗಂಭೀರ ಮಹತ್ವದ ಸಾಂಸ್ಕೃತಿಕ ದಾಖಲೆ ಮಾಡುತ್ತಿದ್ದೇನೆ ಎಂಬ ಬಿಮ್ಮುಗಳಿಂದ ತಪ್ಪಿಸಿಕೊಂಡಿರುವುದರಿಂದಲೇ ಈ ಕೃತಿಗೊಂದು ಮಂದಹಾಸದ ಸಹಜ ಲಯ ಮತ್ತು ಜೀವಂತಿಕೆಯ ನಳನಳಿಕೆಯ ಗುಣ ತಂತಾನೆಯೇ ದೊರೆತಿದೆ. ಹಾಗಾಗಿಯೇ ಬೇಂದ್ರೆ, ಮನ್ಸೂರ, ಹೇಮಾಮಾಲಿನಿಯಂಥವರೂ ಸುರಳೀತವಾಗಿ ಇಲ್ಲಿ ಸುತ್ತಿಸುಳಿಯುತ್ತಿರುತ್ತಾರೆ.

ಗುಜ್ಜಾರಪ್ಪ ಅವರ ರೇಖಾಚಿತ್ರಗಳೂ ಈ ಕೃತಿಯನ್ನು ಇನ್ನಷ್ಟು ಆಪ್ತಗೊಳಿಸುವಂತಿವೆ. ಆರಾಮವಾಗಿ ಒಂದೇ ಗುಕ್ಕಿಗೆ ಓದಿ ಮುಗಿಸಿ ಮುದಗೊಳ್ಳಬಹುದಾದ ಪುಸ್ತಕವಿದು.

ಒಳಪುಟದಲ್ಲಿ ಉಲ್ಲೇಖಿಸಿರುವ ‘ಅಲ್ಲೇ ಸುತ್ತಾಡತಾವ ನಮ್ಮ ಖ್ಯಾಲಾ/ ಎಲ್ಲಿ ಹೋದಾವೋ ಗೆಳೆಯಾ ಆ ಕಾಲಾ’ ಎಂಬ ಸಾಲುಗಳು ಲೇಖಕನ ಮನಸಲ್ಲಿಯಷ್ಟೇ ಅಲ್ಲ, ಈ ಪುಸ್ತಕ ಓದಿ ಬದಿಗಿಟ್ಟ ಓದುಗರ ಮನಸಲ್ಲಿಯೂ ರಿಂಗಣಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT