ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟರಗಾಳಿಯಿಂದ ಹೊರಬಂದ ಸೈನಿಕ..!

Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಧಾರವಾಡದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ವಿದ್ಯಾಭ್ಯಾಸ ಮುಗಿಸಿ 1992ರಲ್ಲಿ ಗಡಿ ಭದ್ರತಾ ಪಡೆ ಸೇರಿದ್ದ ಹನುಮಂತಪ್ಪನಿಗೆ ಚಿಕ್ಕಂದಿನಿಂದಲೂ ದೇಶಸೇವೆಯ ಉತ್ಕಟ ಹಂಬಲ. ಆತನ ಧೈರ್ಯ ಮತ್ತು ಸಾಹಸದ ಬಗ್ಗೆ ಬೆಟಾಲಿಯನ್‌ನ ಹಿರಿಯರಿಗಂತೂ ಭಾರಿ ವಿಶ್ವಾಸ. ಸ್ವಲ್ಪ ಕಾಲ ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡಿದ ನಂತರ ದೇಶದ ಕೆಲವು ನಕ್ಸಲ್‌ ಪೀಡಿತ ಪ್ರದೇಶಗಳ ಕಾರ್ಯಾಚರಣೆಗಳಲ್ಲೂ ಪಾಲ್ಗೊಂಡ. ಆಮೇಲೆ ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯಲ್ಲೂ ಭಾಗಿಯಾಗಿದ್ದ. ಸುಮಾರು 15 ವರ್ಷ ಬಿಎಸ್‌ಎಫ್‌ನಲ್ಲಿ ದುಡಿದ ಹನುಮಂತಪ್ಪ ಹಲವು ಗುಂಡೇಟುಗಳನ್ನೂ ತಿಂದಿದ್ದ. ದೇಶವೇ ಕುಟುಂಬ ಎಂದು ಭಾವಿಸಿದ್ದ ಆತನಲ್ಲಿ ಕೆಚ್ಚೆದೆಯ ಕಿಚ್ಚಿಗೆ ಯಾವತ್ತೂ ಬರವಿರಲಿಲ್ಲ.

ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗವಾಗುತ್ತಲೇ ಇದ್ದುದರಿಂದ ಆತನ ಕುಟುಂಬ ಧಾರವಾಡದಲ್ಲೇ ನೆಲೆಸಿತ್ತು. ಹೆಂಡತಿ, ಒಬ್ಬ ಮಗ ಮತ್ತು ಮಗಳ ಸಂಸಾರಕ್ಕೆ ಏನೂ ಕೊರತೆಯಿರಲಿಲ್ಲ.

2015ರ ಶರತ್‌ಋತುವಿನ ದಿನಗಳವು. ಅಕ್ಟೋಬರ್ ತಿಂಗಳು. ಹನುಮಂತಪ್ಪನ ಹೆಂಡತಿ ಮನೆಯಲ್ಲಿ ಗ್ಯಾಸ್‌ ಸ್ಟೌ ಹಚ್ಚುತ್ತಿದ್ದಾಗ ಸಿಲಿಂಡರ್‌ ಸ್ಫೋಟಗೊಂಡಿತು. ಅಗ್ನಿ ಕ್ಷಣಾರ್ಧದಲ್ಲಿ ಆಕೆಯನ್ನು ಆಪಾದಮಸ್ತಕ ಆವರಿಸಿತು. ಆಕೆ ಸಹಾಯಕ್ಕಾಗಿ ಬೊಬ್ಬಿಡುತ್ತಿದ್ದರೆ ಮನೆಯ ಹೊರಗಿನಿಂದ ಓಡಿ ಬಂದ ಅವಳ 13 ವರ್ಷದ ಮಗ ಪುನೀತ್‌ ಕೂಡಾ  ಚೀರತೊಡಗಿದ. ಗದ್ದಲ ಕೇಳಿ ಅಕ್ಕಪಕ್ಕದವರು ಜಮಾಯಿಸಿ, ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು. ಮಧ್ಯಪ್ರದೇಶದಲ್ಲಿ ಬಿಎಸ್‌ಎಫ್‌ ಹೆಡ್‌ ಕ್ವಾರ್ಟ್ರಸ್‌ನಲ್ಲಿದ್ದ ಹನುಮಂತಪ್ಪನಿಗೆ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು.

ಕೂಡಲೇ ಧಾರವಾಡಕ್ಕೆ ದೌಡಾಯಿಸಿದ. ಕೆಲ ದಿನಗಳ ನಂತರ ಹೆಂಡತಿ ನರಳಿ–ನರಳಿ ಸಾವನ್ನಪ್ಪಿದಳು. ಇಬ್ಬರ ಮಕ್ಕಳ ಪಾಲನೆ–ಪೋಷಣೆ ಆತನನ್ನು ಚಿಂತೆಗೀಡು ಮಾಡಿತು. ಸ್ವಲ್ಪದಿನ ಧಾರವಾಡದಲ್ಲೇ ತಂಗಿದ ಹನುಮಂತಪ್ಪ ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಪೆಟ್ಟಿಗೆ ತುತ್ತಾದ.

ತನ್ನ ತಾಯಿ ಬೆಂಕಿಯಲ್ಲಿ ಬೇಯುತ್ತಿದ್ದ ದೃಶ್ಯಕ್ಕೆ ಸಾಕ್ಷಿಯಾಗಿದ್ದ ಮಗ ಪುನೀತ್‌ ಮಾನಸಿಕ ಖಿನ್ನತೆಗೆ ತುತ್ತಾಗಿದ್ದ. ರಾತ್ರಿ ನಿದ್ರೆಯಲ್ಲಿ ತಾಯಿಯನ್ನು ಕನವರಿಸುತ್ತಾ ದಿಢೀರನೇ ಎದ್ದು ಬೆಂಕಿ, ಬೆಂಕಿ ಎಂದು ಚೀರುತ್ತಾ ಓಡಿ ಹೋಗುತ್ತಿದ್ದ. ಹನುಮಂತಪ್ಪ ಅಕ್ಷರಶಃ ಕಂಗಾಲಾದ. ಇದನ್ನು ತಪ್ಪಿಸಲು ರಾತ್ರಿ ಮಲಗುವಾಗ ಅವನ ಕಾಲಿಗೆ ಸರಪಳಿ ಬಿಗಿಯತೊಡಗಿದ. ಪುನೀತ್‌ಗೆ ನಿಮ್ಹಾನ್ಸ್‌ನಲ್ಲಿ (ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ) ಚಿಕಿತ್ಸೆ ಕೊಡಿಸಲಾರಂಭಿಸಿದ.  ಈ ಪಡಿಪಾಟಲಿನಲ್ಲಿ ಮಗಳು ಗೌರಿಯ ದೇಖರೇಖಿ ಸಾಧ್ಯವಾಗದೆ ಆಕೆಯನ್ನು ತಾಯಿಯ ಮನೆಗೊಯ್ದು ಬಿಟ್ಟ.

ಈ ಅನಿರೀಕ್ಷಿತ ಬೆಳವಣಿಗೆಗಳಿಂದ ಜರ್ಜರಿತನಾಗಿದ್ದ ಹನುಮಂತಪ್ಪನಿಗೆ 2016ರಲ್ಲಿ ಹೃದಯಾಘಾತವಾಯಿತು. ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾದ ಆತನಿಗೆ ವೈದ್ಯರು, ‘ಇನ್ನು ಮುಂದೆ ನೀನು ಶ್ರಮದಾಯಕ ಕೆಲಸ ಮಾಡಕೂಡದು’ ಎಂದು ಕಟ್ಟಪ್ಪಣೆ ಮಾಡಿದರು.

ಈ ಸ್ಥಿತಿಯಲ್ಲಿದ್ದ ಹನುಮಂತಪ್ಪನನ್ನು ಬೆಂಗಳೂರಿನ ‘ಲೋ ಮೆಡಿಕಲ್‌ ಕ್ಯಾಟಗರಿ’ ಸ್ಥಾನಕ್ಕೆ ವರ್ಗಾವಣೆ ಮಾಡಲಾಯಿತು. ಹೆಚ್ಚು ಕಠಿಣವಾದ ಕೆಲಸಗಳಿಲ್ಲದ ಕಚೇರಿ ಕೆಲಸದಲ್ಲಿ ಆತನನ್ನು ನಿಯೋಜಿಸಿ ಡೈರೆಕ್ಟರ್ ಜನರಲ್ ಆದೇಶಿಸಿದರು.

ಇನ್ನೇನು ದುಃಖದ ದಿನಗಳನ್ನು ಮುಗಿಸುತ್ತಿದ್ದೇನೆ ಎಂದುಕೊಳ್ಳುತ್ತಿದ್ದ ಹನುಮಂತಪ್ಪನಿಗೆ ಮತ್ತೊಂದು ಕಷ್ಟದ ಗಳಿಗೆ ಎದುರಾಗಿತ್ತು. ಆತನನ್ನು ಪಂಜಾಬ್ ಗಡಿ ಪ್ರದೇಶಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು.

ಒಂದೆಡೆ ನಿಮ್ಹಾನ್ಸ್‌ನಲ್ಲಿ ಮಗನಿಗೆ ಮಾನಸಿಕ ಚಿಕಿತ್ಸೆ, ಮತ್ತೊಂದೆಡೆ ತಾಯಿಯ ಮನೆಯಲ್ಲಿ ಓದುತ್ತಿರುವ ಗೌರಿ, ಕೈಕೊಟ್ಟಿರುವ ಆರೋಗ್ಯ, ಈಗ ಎದುರಾಗಿರುವ ವರ್ಗಾವಣೆ ಆದೇಶ, ಹನುಮಂತಪ್ಪನಿಗೆ ದಿಕ್ಕು ತೋಚದಂತಾಯಿತು.

ತನ್ನ ದುಃಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ವಿನಂತಿಸಿದ. ‘ದಯವಿಟ್ಟು ಇನ್ನೊಂದು ವರ್ಷ ಕರ್ನಾಟಕದಲ್ಲೇ ಇರಲು ಅನುವು ಮಾಡಿಕೊಡಿ’ ಎಂದ. ಆದರೆ, ಅವರ ಮನಸ್ಸು ಕರಗಲಿಲ್ಲ. ‘ನೀನು ಪಂಜಾಬ್‌ಗೆ ಹೋಗಲೇಬೇಕು. ಇಲ್ಲವಾದರೆ ಸೇವೆಯಿಂದ ವಜಾ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಹನುಮಂತಪ್ಪ ಆಪ್ತ ಸ್ನೇಹಿತರ ಬಳಿ ಕಷ್ಟ ಹಂಚಿಕೊಂಡ. ಆಗ ಅವನ ಸಹವರ್ತಿ ಬಿಎಸ್ಎಫ್ ಕಮಾಂಡೆಂಟ್‌ ಒಬ್ಬರು ಈತನನ್ನು ನನ್ನ ಬಳಿಗೆ ಕಳುಹಿಸಿದರು.

ದಾಖಲೆಗಳ ಸಮೇತ ಬಂದ ಹನುಮಂತಪ್ಪನಿಗೆ ‘ನೋಡೋಣ ದೇವರಿದ್ದಾನೆ, ಧೈರ್ಯವಾಗಿರಿ, ಚಿಂತಿಸಬೇಡಿ’ ಎಂದೆ. ಆತನ ಜೊತೆ ಬಂದಿದ್ದ ಮಗ ಪುನೀತ್‌ ನನ್ನನ್ನು ನೋಡಿ, ‘ಅಂಕಲ್‌ ನಾನೂ ದೊಡ್ಡವನಾದ ಮೇಲೆ ನಿಮ್ಮ ಹಾಗೆ ವಕೀಲನಾಗಿ ನ್ಯಾಯಕ್ಕಾಗಿ ಹೋರಾಡುತ್ತೇನೆ’ ಎಂದ..!! ಆ ಪುಟ್ಟ ಕಂದನ ಮಾತು ನನ್ನ ಜವಾಬ್ದಾರಿಯನ್ನು ನನಗರಿವಿಲ್ಲದೆಯೇ ಹೆಚ್ಚಿಸಿತು.

ರಿಟ್‌ ಅರ್ಜಿ ವಿಚಾರಣೆಗೆ ಬಂತು. ನ್ಯಾಯಮೂರ್ತಿಗಳ ಮುಂದೆ ಸೇನಾನಿ ಹನುಮಂತಪ್ಪನ ದುರಂತ ಕಥೆಯನ್ನು ಸಾದ್ಯಂತವಾಗಿ ತೆರೆದಿಟ್ಟೆ. ಆದರೆ, ಬಿಎಸ್‌ಎಫ್‌ ಪರ ವಕೀಲರು, ‘ಹನುಮಂತಪ್ಪನನ್ನು ಲೋ ಮೆಡಿಕಲ್ ಕ್ಯಾಟಗರಿ ಸ್ಥಾನದಲ್ಲಿ ನಿಯೋಜಿಸಲಾಗಿದೆ. ಪಂಜಾಬ್ ಗಡಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಇದೆ. ಆತ ಕೂಡಲೇ ಅಲ್ಲಿಗೆ ಹೋಗಲು ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ನಾನು, ‘ಸ್ವಾಮಿ ಸೇನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯೋಧರಿದ್ದಾರೆ. ಹನುಮಂತಪ್ಪ ಅಲ್ಲಿಗೆ ಹೋಗದಿದ್ದರೆ ಯಾವುದೇ ನಷ್ಟವಾಗುವುದಿಲ್ಲ. ಒಂದು ವರ್ಷದ ನಂತರ ಬೇಕಾದರೆ ಆತ ಸೇನೆ ಸೂಚಿಸಿದ ಯಾವುದೇ ಜಾಗಕ್ಕಾದರೂ ಹೋಗಲು ಸಿದ್ಧನಿದ್ದಾನೆ. ವರ್ಗಾವಣೆ ಆದೇಶಕ್ಕೆ ತಡೆ ನೀಡಿ’ ಎಂದೆ. ಸೇವಾ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಆ ವಾರವಿಡೀ ಹನುಮಂತಪ್ಪ ನನ್ನ ಮನಸ್ಸು, ಆಲೋಚನೆಗಳನ್ನು ಆಕ್ರಮಿಸಿದ್ದ.

ಮುಂದಿನ ವಿಚಾರಣೆಯಲ್ಲಿ, ‘ಸರ್ಕಾರಿ ಅಧಿಕಾರಿಗಳಿಗೆ ಅಂಗವಿಕಲ ಮಕ್ಕಳಿದ್ದರೆ ಅಂತಹವರನ್ನು ವರ್ಗಾವಣೆ ಮಾಡುವಂತಿಲ್ಲ’ ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ನ್ಯಾಯಪೀಠಕ್ಕೆ ಒಪ್ಪಿಸಿದೆ. ಆದರೆ, ಬಿಎಸ್‌ಎಫ್ ಪರ ವಕೀಲರು, ‘ಈ ರೀತಿ ಸಡಿಲಬಿಟ್ಟರೆ ಇಂತಹುದೇ ಸಬೂಬು ಹೇಳಿಕೊಂಡು ಮತ್ತಷ್ಟು ಸೈನಿಕರು ಕೋರ್ಟ್‌ಗೆ ಬರುತ್ತಾರೆ’ ಎಂದು ಆಕ್ಷೇಪಿಸಿದರು. ನ್ಯಾಯಮೂರ್ತಿಗಳು ಈ ವಾದಕ್ಕೆ ಸಂತುಷ್ಟರಾದಂತೆ ಕಂಡು ಬರುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನಾನು, ‘ಸ್ವಾಮಿ, ಇನ್ನೊಂದು ದಿನ ಸಮಯ ಕೊಡಿ’ ಎಂದು ವಿನಂತಿಸಿದೆ.

24 ಗಂಟೆಯೊಳಗೆ ನಾನು ಏನಾದರೂ ಒಂದು ದಾರಿ ಹುಡುಕಲೇಬೇಕಿತ್ತು. ನನ್ನ ಕಣ್ಣೆದುರಿಗೆ ಹನುಮಂತಪ್ಪನ ಕುಟುಂಬದ ಒದ್ದಾಟ ಕುಣಿಯುತ್ತಿತ್ತು. ಅಂದು ರಾತ್ರಿ 3.30 ಆದರೂ ನಿದ್ರೆ ಹತ್ತಿರ ಸುಳಿದಿರಲಿಲ್ಲ. ಎದ್ದು ಬಾಲ್ಕನಿಗೆ ಹೋಗಿ ಕೆಳಗೆ ನೋಡುತ್ತಾ ನಿಂತಿದ್ದೆ. ತಂಪಾದ ಗಾಳಿಯಲ್ಲಿ ಒಂದು ಗಿಡದ ಬುಡದಲ್ಲಿ ಕಪ್ಪೆಯೊಂದು ಮೌನವಾಗಿ ಕುಳಿತಿದ್ದುದು ಕಾಣಿಸಿತು. ತದೇಕಚಿತ್ತದಿಂದ ಅದನ್ನೇ ಒಂದೈದು ನಿಮಿಷ ಗಮನಿಸಿದೆ. ಮನಸ್ಸಿನ ಯಾವುದೊ ಮೂಲೆಯಿಂದ ಸಮಾಧಾನದ ಅಲೆಯೊಂದು ಮೃದುವಾಗಿ ಹೊರಬಂದು ಅಪ್ಪಳಿಸಿದಂತಾಯಿತು. ಹೌದು, ಕಪ್ಪೆ ನನ್ನ ಪ್ರಶ್ನೆಗೆ ಉತ್ತರ ಹೇಳುತ್ತಿದೆ ಎಂಬುದು ದೃಢವಾಯಿತು. ಕಣ್ಣಲ್ಲೇ ಕಪ್ಪೆಗೊಂದು ಕೃತಜ್ಞತೆ ಹೇಳಿ ಬಂದು ನಿದ್ರೆಗೆ ಜಾರಿದೆ!.

ಬೆಳಿಗ್ಗೆ ಕೋರ್ಟ್‌ನಲ್ಲಿ ಮತ್ತೆ ಎಲ್ಲವನ್ನೂ ಭಿನ್ನವಿಸಿದೆ. ‘ಹನುಮಂತಪ್ಪ ದೇಶಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಾನೆ. ವರ್ಗಾವಣೆಗೆ ಒಂದು ವರ್ಷದ ಮಟ್ಟಿಗೆ ಮಾತ್ರ ತಡೆ ಕೇಳುತ್ತಿದ್ದಾನೆ. ಕೇಂದ್ರ ಗೃಹ ಇಲಾಖೆಯ ಒಂದು ಅಧ್ಯಯನದ ಪ್ರಕಾರ ಸೇನಾ ಬೆಟಾಲಿಯನ್‌ಗಳಲ್ಲಿ ಬಿಎಸ್‌ಎಫ್‌ ಸೈನಿಕರೇ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಆ ಪರಿಸ್ಥಿತಿ ಹನುಮಂತಪ್ಪನಿಗೂ ಬಾರದಿರಲಿ’ ಎಂದು ಭಿನ್ನವಿಸಿದೆ.

ಆದರೆ, ನ್ಯಾಯಮೂರ್ತಿಗಳು ಇದನ್ನು ಒಪ್ಪಲಿಲ್ಲ. ‘ಇನ್ನೇನಾದರೂ ಹೇಳುವುದಿದೆಯೇ‘ ಎಂದರು. ‘ಎರಡು ನಿಮಿಷ ಅವಕಾಶ ಕೊಟ್ಟರೆ ನನ್ನ ವಾದ ಪೂರ್ಣ ಮಾಡುತ್ತೇನೆ’ ಎಂದು ನನ್ನ ಕಡೆಯ ಅಸ್ತ್ರದ ಕಥೆ ಶುರು ಮಾಡಿದೆ. ‘ಶ್ರೀರಾಮಚಂದ್ರ ವನವಾಸಕ್ಕೆ ತೆರಳಿದ ಸಂದರ್ಭದಲ್ಲಿ ಕಾಡಿನ ಜನರು ಅವನನ್ನು ಆನಂದಿಂದ ತಮ್ಮ ಪ್ರದೇಶಕ್ಕೆ ಕರೆದೊಯ್ದರು. ಕಾಡಿನ ಜನರ ಸ್ವಾಗತ ಸವಿಯುತ್ತಾ ನಿಂತ ರಾಮ, ತನ್ನ ಕೈಯ್ಯಲ್ಲಿದ್ದ ಬಾಣವನ್ನು ನೆಲಕ್ಕೆ ನೆಟ್ಟಿದ್ದ. ಬಾಣದ ಮೊನೆ ನೆಲದಲ್ಲಿ ಊರಿದ್ದ ಜಾಗದಲ್ಲೇ ಕಪ್ಪೆಯೊಂದು ಇತ್ತು. ತನಗರಿವಿಲ್ಲದೆಯೇ ರಾಮ ಆ ಕಪ್ಪೆಯ ಮೇಲೆ ಬಾಣದ ಮೂಲಕ ತನ್ನ ಭಾರವನ್ನು ಚೆಲ್ಲಿದ್ದ. ಬಾಣ ನಿಧಾನವಾಗಿ ಕಪ್ಪೆಯ ದೇಹದೊಳಕ್ಕೆ ಇಳಿಯುತ್ತಿತ್ತು. ಆದರೂ, ತುಟಿ ಕಚ್ಚಿಕೊಂಡು ನೋವನ್ನು ನುಂಗಿ ಕುಳಿತಿತ್ತು. ಸ್ವಲ್ಪ ಹೊತ್ತಾದ ಬಳಿಕ ಜನರ ಪ್ರೀತಿ ಮತ್ತು ಹಾರೈಕೆ ಸ್ವೀಕರಿಸಿದ ರಾಮ, ಬಾಣವನ್ನು ಮೇಲೆತ್ತಲು ಹೋದರೆ ಮೊನೆಗೆ ಕಪ್ಪೆ ತಗುಲು ಹಾಕಿಕೊಂಡಿತ್ತು. ರಕ್ತ ದಳದಳ ಇಳಿಯುತ್ತಿತ್ತು. ಇದನ್ನು ಕಂಡ ರಾಮ ದಂಗಾದ. ‘ಅಯ್ಯೊ, ನಾನೇನು ಮಾಡಿಬಿಟ್ಟೆ’ ಎಂದು ಮಮ್ಮಲ ಮರುಗಿದ. ಕೆಳಗೆ ಬಗ್ಗಿ ಕಪ್ಪೆಯನ್ನು ಹಿಡಿದೆತ್ತಿ ಮರುಕದ ದನಿಯಲ್ಲಿ ‘ಯಾಕೆ ಹೀಗೆ ಮಾಡಿದೆ, ನಾನು ನಿನ್ನನ್ನು ಗಮನಿಸಲಿಲ್ಲ. ಬಾಣವನ್ನು ನೆಲಕ್ಕೆ ಊರಿದಾಗ ನೀನು ನನ್ನನ್ನು ಎಚ್ಚರಿಸಬಹುದಿತ್ತಲ್ಲವೇ. ದಯವಿಟ್ಟು ಕ್ಷಮಿಸು’ ಎಂದು ಶುಶ್ರೂಷೆಗೆ ಮುಂದಾದ.

ಕಪ್ಪೆ ನೋವಿನಲ್ಲೇ ಹೇಳಿತು, ‘ರಾಮಾ, ನೀನೇ ನನ್ನ ದೇವರು. ಕಷ್ಟ ಬಂದಾಗಲೆಲ್ಲಾ ನಾನು ನಿನ್ನನ್ನೇ ನೆನೆಯುತ್ತೇನೆ. ಆದರೆ, ಆ ಶ್ರೀರಾಮನೇ ಸ್ವತಃ ನನಗೆ ಬಾಣದಿಂದ ಚುಚ್ಚುತ್ತಿರುವಾಗ ನಾನು ಯಾರನ್ನು ತಾನೇ ಸಹಾಯಕ್ಕೆ ಯಾಚಿಸಲಿ’ ಎಂದು ಕೇಳಿತು!. ರಾಮ ಆವಾಕ್ಕಾದ.

‘ಸ್ವಾಮಿ, ನಮ್ಮ ಹನುಮಂತಪ್ಪನದೂ ಇವತ್ತು ಇದೇ ಸ್ಥಿತಿಯಾಗಿದೆ. ಮುಂದಿನ ಎಲ್ಲವನ್ನೂ ನಿಮ್ಮ ವಿವೇಚನೆಗೆ ಬಿಟ್ಟಿದ್ದೇನೆ’ ಎಂದು ಹೇಳಿ ಕೈಮುಗಿದು ನನ್ನ ಕುರ್ಚಿಯಲ್ಲಿ ಕುಳಿತುಬಿಟ್ಟೆ.

ನನ್ನ ದೃಷ್ಟಾಂತ ವಿವರಣೆಗೆ ನ್ಯಾಯಮೂರ್ತಿಗಳು ಎರಡು ನಿಮಿಷ ಮೌನಕ್ಕೆ ಜಾರಿದರು.

ನಂತರ ‘ನಾನೂ ಒಂದು ಕಥೆ ಹೇಳುತ್ತೇನೆ ಕೇಳಿ’ ಎಂದರು.

‘ಒಂದು ಊರಿನಲ್ಲಿ ಒಬ್ಬ ಸನ್ಯಾಸಿ. ಏನೇ ಆದರೂ ದೇವರೇ ತನ್ನನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಆತನದ್ದು. ಹೀಗೇ ಇರಲಾಗಿ ಮಳೆಗಾಲದಲ್ಲಿ ಒಂದು ದಿನ ಆ ಊರಿಗೆ ಭಾರಿ ಪ್ರವಾಹ ಬಂತು. ಜನರು ಸುರಕ್ಷಿತ ಸ್ಥಳಕ್ಕೆ ಧಾವಿಸತೊಡಗಿದರು. ಆದರೆ, ಈ ಸನ್ಯಾಸಿ ‘ಮಾತ್ರ ನಾನು ಎಲ್ಲಿಗೂ ಬರೋದಿಲ್ಲ. ಆ ದೇವರು ನನ್ನನ್ನು ಕಾಪಾಡುತ್ತಾನೆ’ ಎಂದು ಎತ್ತರದ ಮರ ಏರಿ ಕುಳಿತ. ಪ್ರವಾಹ ಹೆಚ್ಚುತ್ತಲೇ ಹೋಯಿತು. ಸುರಕ್ಷಿತ ಸ್ಥಳಕ್ಕೆ ಧಾವಿಸುತ್ತಿದ್ದ ಜನರು ಕುದುರೆ, ದೋಣಿಗಳಲ್ಲಿ ಪಾರಾಗಿ ಪ್ರಾಣ ಉಳಿಸಿಕೊಂಡರು. ಊರಿನ ಮುಖ್ಯಸ್ಥ ಈ ಸನ್ಯಾಸಿಯನ್ನೂ ಕರೆದ. ಆದರೆ ಸನ್ಯಾಸಿ ಬರಲೊಪ್ಪಲಿಲ್ಲ. ‘ದೇವರು ನನ್ನನ್ನು ಕಾಪಾಡುತ್ತಾನೆ. ನೀವು ಹೋಗಿ’ ಎಂದ. ಹೆಲಿಕಾಪ್ಟರ್‌ಗಳಲ್ಲೂ ಜನರನ್ನು ಸ್ಥಳಾಂತರಿಸಲಾಯಿತು. ಆಗಲೂ ಸನ್ಯಾಸಿಯನ್ನು ಕರೆದಾಗ ಬರಲೊಪ್ಪಲಿಲ್ಲ. ಪ್ರವಾಹ ಹೆಚ್ಚಾಗಿ ಸನ್ಯಾಸಿ ಸತ್ತೇ ಹೋದ. ಸತ್ತವನು ಸೀದಾ  ಸ್ವರ್ಗ ತಲುಪಿದ. ಅಲ್ಲಿ ದೇವರ ಜೊತೆ ಕ್ಯಾತೆ ತೆಗೆದ. ‘ನಾನು ನಿನ್ನನ್ನು ಎಷ್ಟೊಂದು ನಂಬಿದ್ದೆ. ಆದರೆ, ನೀನು ಕಾಪಾಡಲು ಬರಲೇ ಇಲ್ಲವಲ್ಲ’ ಎಂದು ದೂರಿದ.

ದೇವರು ಸನ್ಯಾಸಿಯನ್ನು ಕಡೆಗಣ್ಣಲ್ಲಿ ನೋಡುತ್ತಾ, ‘ಅಯ್ಯೊ ಬೆಪ್ಪಾ, ನಾನು ನಿನಗೆ ಕುದುರೆ, ದೋಣಿ, ಹೆಲಿಕಾಪ್ಟರ್‌ಗಳನ್ನೆಲ್ಲಾ ಕಳುಹಿಸಿಕೊಟ್ಟೆ. ಆದರೆ, ನೀನು ಯಾರ ಮಾತಿಗೂ ಕಿವಿಗೊಡಲಿಲ್ಲ. ಮರದ ಮೇಲೆಯೇ ಉಳಿದೆ. ನನ್ನನ್ನು ಅರ್ಥವೇ ಮಾಡಿಕೊಳ್ಳಲಿಲ್ಲ’ ಎಂದ!

ಇಷ್ಟು ಹೇಳಿದ ನ್ಯಾಯಮೂರ್ತಿಗಳು ‘ಅರ್ಥವಾಯಿತೇ’ ಎಂದು ಕೇಳಿ ಮುಗುಳ್ನಕ್ಕರು. ನಾನು ಉತ್ತರಿಸಲಿಲ್ಲ. ಅವರ ಮಾರ್ಮಿಕ ಸಂದೇಶ ನನಗೆ ಅರಿವಾಗಿತ್ತು. ತೀರ್ಪು ಪ್ರಕಟವಾದಾಗ ಹನುಮಂತಪ್ಪನಿಗೆ ನ್ಯಾಯ ಸಿಕ್ಕಿತ್ತು.

‘ಮಗನ ಚಿಕಿತ್ಸೆ ಸಂಪೂರ್ಣ ಆಗುವತನಕ ಹನುಮಂತಪ್ಪನ ವರ್ಗಾವಣೆ ಮಾಡಬಾರದು’ ಎಂದು ಆದೇಶಿಸಲಾಗಿತ್ತು...!!

(ಹೆಸರುಗಳನ್ನು ಬದಲಾಯಿಸಲಾಗಿದೆ)

ಎಚ್‌. ಸುನಿಲ್‌ ಕುಮಾರ್‌, ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT