ಶುಕ್ರವಾರ, ಡಿಸೆಂಬರ್ 13, 2019
27 °C

ಪೋರ್ಚುಗೀಸರ ನೆಚ್ಚಿನ ಬಂದರು ವಸಾಯಿ ಫೋರ್ಟ್ ಇಂದು ಹೀಗಿದೆ!

ಶ್ರೀನಿವಾಸ ಜೋಕಟ್ಟೆ Updated:

ಅಕ್ಷರ ಗಾತ್ರ : | |

ಪೋರ್ಚುಗೀಸರ ನೆಚ್ಚಿನ ಬಂದರು ವಸಾಯಿ ಫೋರ್ಟ್ ಇಂದು ಹೀಗಿದೆ!

ಮುಂಬೈ ಮಹಾನಗರದಿಂದ ಉತ್ತರಕ್ಕೆ ಸುಮಾರು ಐವತ್ತು ಕಿ.ಮೀ. ದೂರದಲ್ಲಿರುವ ವಸಾಯಿಗಾಂವ್‌ನ ಐತಿಹಾಸಿಕ ಕೋಟೆಯನ್ನು ವೀಕ್ಷಿಸುವ ಸಂದರ್ಭವೊಂದು ನನಗೆ ಒದಗಿ ಬಂದಿತ್ತು. ವಸಾಯಿಯಲ್ಲೇ ಕಳೆದ ಹತ್ತು ವರ್ಷಗಳಿಂದ ವಾಸ್ತವ್ಯ ಇದ್ದರೂ ನನಗೆ ವಸಾಯಿ ಕೋಟೆಯನ್ನು ವೀಕ್ಷಿಸುವುದಕ್ಕೆ ಇತ್ತೀಚೆಗಷ್ಟೇ ಸಾಧ್ಯವಾಯಿತು.

ನನ್ನ ಮನೆಗೆ ಹತ್ತಿರದ ಬಂಧುಗಳು ಬಂದ ಸಂದರ್ಭದಲ್ಲಿ ಅವರನ್ನು ವಸಾಯಿ ಕಿಲಾ (ವಸಾಯಿ ಕೋಟೆ) ಸುತ್ತಾಡಿಸಿ ಬರುವ ಅವಕಾಶವೊಂದು ಅನಿರೀಕ್ಷಿತವಾಗಿ ಒದಗಿ ಬಂದಿತ್ತು.

ವಸಾಯಿಯ ಪಶ್ಚಿಮದ ಈ ಕೋಟೆಗೆ ಐತಿಹಾಸಿಕ ಮಹತ್ವವಿದೆ. ಈ ಕೋಟೆಯಲ್ಲಿ ಮೊದಲಿಗೆ ಗುಜರಾತ್‌ನ ಸುಲ್ತಾನರ ಆಡಳಿತವಿತ್ತು. ನಂತರ ಪೋರ್ಚುಗೀಸರು, ಮರಾಠರು, ಬ್ರಿಟಿಷರು ಈ ಕೋಟೆಯನ್ನು ಆಳಿದರು. ಕೋಟೆಯ ವಿಶೇಷತೆ ಎಂದರೆ ಇಲ್ಲಿಂದ ಪಶ್ಚಿಮ ಸಮುದ್ರ ತೀರದ ಮೇಲೆ ಪೂರ್ಣ ನಿಗಾ ಇರಿಸಬಹುದಾಗಿತ್ತು. ಇದರ ಬಳಕೆಯನ್ನು ಬಂದರು ರೂಪದಲ್ಲಿಯೂ ಮಾಡಲಾಗಿತ್ತು. ಸ್ವಾತಂತ್ರ್ಯದ ನಂತರ ಭಾರತೀಯ ಪುರಾತತ್ವ ವಿಭಾಗವು ಈ ಕೋಟೆಯನ್ನು ತನ್ನ ಅಧಿಕಾರ ವ್ಯಾಪ್ತಿಗೆ ಪಡೆದಿದ್ದು ರಾಷ್ಟ್ರೀಯ ಸ್ಮಾರಕದ ದರ್ಜೆ ನೀಡಲಾಗಿದೆ.

ಇಷ್ಟೊಂದು ಪ್ರಾಮುಖ್ಯ ಪಡೆದಿರುವ ವಸಾಯಿ ಪಶ್ಚಿಮದಲ್ಲಿರುವ ಈ ರಾಷ್ಟ್ರೀಯ ಸ್ಮಾರಕವನ್ನು ವೀಕ್ಷಿಸಲು ಅಂದು ರಿಕ್ಷಾ ಹಿಡಿದೆವು. ರೈಲ್ವೆ ಸ್ಟೇಷನ್‌ನಿಂದ ನೂರು ರೂಪಾಯಿ ಎಂದ ಡ್ರೈವರ್. ಸರಿ ಎಂದು ನಾವೆಲ್ಲಾ ಆಟೊ ಏರಿದೆವು. ಸುಮಾರು ಇಪ್ಪತ್ತೈದು - ಮೂವತ್ತು ನಿಮಿಷ ವಸಾಯಿಗಾಂವ್ ತಲುಪಲು ದಾರಿ ಇದೆ.

‘ಎಲ್ಲಿ ಇಳಿಯುತ್ತೀರಿ?’ ಎಂದ ರಿಕ್ಷಾ ಡ್ರೈವರ್. ‘ಪ್ರವೇಶ ದ್ವಾರದಲ್ಲಿ ಇಳಿಯುತ್ತೇವೆ’ ಎಂದರೆ ಆತ- ‘ಇಲ್ಲಿ ಹಲವು ಪ್ರವೇಶದ್ವಾರಗಳಿವೆ. ಟಿಕೇಟು ಕೂಡಾ ಇಲ್ಲ. ಹಲವು ಸ್ಥಳಗಳು ಲವರ್ ಸ್ಪಾಟ್‌ಗಳಾಗುತ್ತಿವೆ. ಕೇಳುವವರೇ ಇಲ್ಲದಂತಹ ಸ್ಥಿತಿ ಇದೆ...’ ಇತ್ಯಾದಿ ಹೇಳಿದಾಗ ಒಂದು ಕ್ಷಣ ಕಸಿವಿಸಿಯಾಯಿತು. ಕೊನೆಗೆ ಬೀಚ್ ಬಳಿಯ ಪ್ರವೇಶ ದ್ವಾರದಲ್ಲಿ ಇಳಿದೆವು.

ಇತಿಹಾಸ ನೋಡಿದರೆ ವಸಾಯಿಗಾಂವ್ ಉಲ್ಲಾಸ್ ನದಿಯ ತೀರದಲ್ಲಿರುವ ಊರು. ಇದನ್ನು ವಸಾಯಿ ಬಸೀನ್ ಎಂದೂ ಕರೆಯುತ್ತಾರೆ. ಹಾಗೆ ನೋಡಿದರೆ ಈ ವಸಾಯಿ ಕೋಟೆಯ ಇತಿಹಾಸ ಹೆಚ್ಚು ಪುರಾತನ ಆಗಿಲ್ಲ. ಈ ಜಲದುರ್ಗ ತನ್ನ ಕಾಲದಲ್ಲಿ ಮಹತ್ವ ಪಡೆದಿತ್ತು. ಇದು ದೊಡ್ಡ ವ್ಯಾಪಾರ ಕೇಂದ್ರವೂ ಆಗಿತ್ತು. ಗುಜರಾತ್‌ನ ಸುಲ್ತಾನ್ ಬಹದ್ದೂರ್ ಶಾಹ 1532ರಲ್ಲಿ ಈ ಕ್ಷೇತ್ರಕ್ಕೆ ಕೋಟೆಯ ರೂಪವನ್ನು ನೀಡಿದ್ದರು.

ಅತ್ತ ವ್ಯಾವಹಾರಿಕ ದೃಷ್ಟಿಯಿಂದಲೂ ಇದರ ಮೇಲೆ ಪೋರ್ಚುಗೀಸರ ಕಣ್ಣಿತ್ತು. ಅವರು ಸೇನೆಯ ಸಹಾಯದಿಂದ ಕೊನೆಗೂ ಇದನ್ನು ವಶಪಡಿಸಿಕೊಂಡರು ಮತ್ತು ಗುಜರಾತ್‌ನ ಸುಲ್ತಾನ್‌ನ ಜೊತೆ ಡಿಸೆಂಬರ್ 23, 1534ರಲ್ಲಿ ಒಪ್ಪಂದ ಮಾಡಿಕೊಂಡರು. ಹಾಗೂ ಮುಂಬೈ ಸಹಿತ ಎಲ್ಲಾ ತೀರಗಳನ್ನೂ ವಶಪಡಿಸಿಕೊಂಡರು. ನಂತರ ಪೋರ್ಚುಗೀಸರು ವ್ಯಾಪಾರ ಚಟುವಟಿಕೆಗಳ ಮುಖ್ಯ ಕೇಂದ್ರವನ್ನಾಗಿಸಿದರು. ಹಾಗೂ ಸುರಕ್ಷೆಯ ದೃಷ್ಟಿಯಿಂದ ನಾಲ್ಕೂ ಕಡೆ 11 ಬುರುಜು ನಿರ್ಮಿಸಿದ್ದರು.

ಈ ಕೋಟೆ 109 ಎಕರೆ ಭೂಮಿಯಲ್ಲಿ ವಿಸ್ತರಿಸಿದೆ. 2014ರಲ್ಲಿ ಉತ್ಖನನಗೈದ ಸಂದರ್ಭದಲ್ಲಿ ಪೋರ್ಚುಗೀಸ್ ಕಾಲದ ಅನೇಕ ವಸ್ತುಗಳು ಸಿಕ್ಕಿದ್ದವು. ಕೆಲವು ಭೂಮಿಯ ಒಳಗಡೆ ಹೂತು ಹೋಗಿದ್ದವು. ಈ ಕೋಟೆಯೊಳಗೆ ಐದು ಚರ್ಚ್‌ಗಳಿದ್ದುವು. ಎರಡು ಚರ್ಚ್ ಜಮೀನು ಒಳಗೆ ಹೂತು ಹೋಗಿವೆ. ಮೂರು ಚರ್ಚ್‌ಗಳ ಅವಶೇಷಗಳು ಕಾಣುತ್ತವೆ. ಪೋರ್ಚುಗೀಸ್ ರಾಜಕುಮಾರಿಯ ವಿವಾಹ ಇಂಗ್ಲೆಂಡ್ ರಾಜಕುಮಾರನ ಜೊತೆ 1665ರಲ್ಲಿ ನಡೆಯಿತು. ಕನ್ಯಾದಾನ ರೂಪದಲ್ಲಿ ಮುಂಬೈಯ ದ್ವೀಪ ಸಮೂಹ, ಅಕ್ಕಪಕ್ಕದ ಕ್ಷೇತ್ರಗಳು ಬ್ರಿಟಿಷರಿಗೆ ಹಸ್ತಾಂತರಿಸಲ್ಪಟ್ಟವು.

ಈ ಕೋಟೆ ನಿರಂತರವಾಗಿ  ಇನ್ನೂರು ವರ್ಷಗಳ ತನಕ ಅಧಿಕಾರದಲ್ಲಿತ್ತು.

ಮರಾಠ ರಾಜ ಬಾಜೀರಾವ್ ಪೇಶ್ವೆಯ ಸಹೋದರನಾದ ಚಿಮಾಜಿ ಅಪ್ಪಾ ಅವರು 1739ರಲ್ಲಿ ಇದನ್ನು ತಮ್ಮ ವಶಕ್ಕೆ ಪಡೆದರು. ಈ ಯುದ್ಧದಲ್ಲಿ ಭವನಗಳು - ಚರ್ಚ್‌ಗಳಿಗೆ ಹಾನಿಯಾಗಿತ್ತು. ಭಾರೀ ಲೂಟಿ ನಡೆಯಿತು. ಚರ್ಚ್‌ನ ಗಂಟೆಗಳನ್ನು ಆನೆಗಳ ಮೂಲಕ ಸಾಗಿಸಲಾಯಿತು. 1801ರಲ್ಲಿ ಬಾಜೀರಾವ್ ದ್ವಿತೀಯ ಅವರ ನಿರಂಕುಶ ಆಡಳಿತದಿಂದ ಬೇಸತ್ತು ಯಶವಂತ ರಾವ್ ಹೋಳ್ಕರ್ ಬಂಡಾಯವೆದ್ದರು. ಈ ಕಾಳಗದಲ್ಲಿ ಬಾಜೀರಾವ್ ದ್ವಿತೀಯ ಪರಾಜಿತರಾದರು. ಹಾಗೂ ವಸಾಯಿ ಕೋಟೆಯೊಳಗೆ ಆಶ್ರಯ ಪಡೆದರು. ಕೆಲವು ಕಾಲ ವಸಾಯಿ ಕೋಟೆಗೆ ಬಾಜೀಪುರ ಎಂಬ ಹೆಸರೂ ಇತ್ತು. 1802 ರಲ್ಲಿ ಬಾಜೀರಾವ್ ದ್ವಿತೀಯ ಮತ್ತು ಬ್ರಿಟಿಷರ ನಡುವೆ ಬಸೀನ್ ಒಪ್ಪಂದ ನಡೆಯಿತು. ಬಾಜೀರಾವ್ (ದ್ವಿತೀಯ)ನನ್ನು ಮತ್ತೆ ಪೇಶ್ವೆಯ ಕುರ್ಚಿಯಲ್ಲಿ ಕೂರಿಸುವ ವಚನವನ್ನು ಬ್ರಿಟಿಷರು ನೀಡಿದರು. ಆದರೆ ಕುಟಿಲ ಬುದ್ಧಿಯ ಬ್ರಿಟಿಷರು ವಸಾಯಿ ಕೋಟೆಯ ಸಂಪೂರ್ಣ ತೀರದಲ್ಲಿ ತಮ್ಮದೇ ಅಧಿಕಾರವನ್ನು ಪಡೆದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಇದೀಗ ಪುರಾತತ್ವ ಇಲಾಖೆ ಇದನ್ನು ನೋಡಿಕೊಳ್ಳುತ್ತಿದೆ.

ನಾವು ಸೆಪ್ಟೆಂಬರ್ ತಿಂಗಳಿನಲ್ಲಿ ವೀಕ್ಷಿಸಲು ಹೋದ ಕಾರಣ ಅಲ್ಲಿ ವಿಪರೀತ ಹುಲ್ಲಿನ ರಾಶಿಗಳಿದ್ದವು. ಹಿಂಬದಿಯ ಪ್ರವೇಶ ದ್ವಾರದಿಂದ ನಾವು ಒಳನುಗ್ಗಿದ್ದೆವು.

ಬೀಚ್ ಬಳಿ ಒಂದು ಪೊಲೀಸ್ ವ್ಯಾನ್ ನಿಂತಿತ್ತು. ಅದು ಪ್ರವೇಶದ್ವಾರವೆಂದು ಯಾರೂ ಊಹಿಸದಂತಹ ದೃಶ್ಯವಿತ್ತು. ಒಳಹೋಗುವುದೋ - ಬಿಡುವುದೋ ಎಂಬ ಗೊಂದಲ ಆವರಿಸಿದ್ದರೂ ದೂರದಲ್ಲಿ ಕೆಲವರು ಹೋಗುತ್ತಿರುವುದನ್ನು ಕಂಡು ನಾವೂ ಒಳಗಡೆ ಹೋದೆವು. ಎಲ್ಲೆಡೆಯೂ ಶಿಥಿಲಗೊಂಡ ಭವನಗಳು. ಅದರ ಮಾಳಿಗೆ ಹತ್ತಿ ಮೇಲೇರಿದರೆ ಅಲ್ಲಲ್ಲಿ ಯುವ ಜೋಡಿಗಳ ಗುಸುಗುಸು ಮಾತುಗಳು ಮೆಲುದನಿಯಲಿ ಕೇಳುತ್ತಿತ್ತು. ನಿರ್ಜನ ಕ್ಷೇತ್ರದಲ್ಲೂ ಈ ಜೋಡಿಗಳ ತಿರುಗಾಟ ಒಂದು ಕ್ಷಣಕ್ಕೆ ವಿಸ್ಮಯವನ್ನು ಉಂಟುಮಾಡದೆ ಇರಲಾರದು.

ವಸಾಯಿ ಕೋಟೆಯ ಉತ್ಖನನ ಮತ್ತು ಸಂರಕ್ಷಣಾ ಮೇಲ್ವಿಚಾರಣೆ ಹುದ್ದೆಯಲ್ಲಿದ್ದ ಕೈಲಾಶ್‌ನಾಥ್ ಅನುಸಾರ ಇಲ್ಲಿ ಉತ್ಖನನದ ಸಮಯ ಮೊಘಲರಿಂದ ಹಿಡಿದು ಇಂಗ್ಲಿಷರ ಕಾಲದ ತನಕ ಸಾಮಗ್ರಿಗಳು ಸಿಕ್ಕಿದ್ದವು. ಐದು ಕಿಲೋದಿಂದ 40 ಕಿಲೋ ತನಕ ತೂಕವಿರುವ ತೋಪುಗಳ ಅವಶೇಷಗಳು ದೊರಕಿದ್ದವು. ಪೋರ್ಚುಗೀಸರು ಬಳಸುತ್ತಿದ್ದ ಪಿಂಗಾಣಿ ಪಾತ್ರೆಗಳೂ ಜೀರ್ಣಾವಸ್ಥೆಯಲ್ಲಿ ಕಂಡು ಬಂದಿದ್ದವು. ಹೆಚ್ಚಿನವು 18ನೇ ಶತಮಾನದ ವಸ್ತುಗಳು. ಮರಾಠರ ಆಡಳಿತಾವಧಿಯ ವಸ್ತುಗಳು.

ಇಲ್ಲಿನ ಕೋಟೆಗಳು ಮೂರು ಕಡೆ ಸಮುದ್ರದಿಂದ ಸುತ್ತುವರಿದಿವೆ. ಪೋರ್ಚುಗೀಸರ ಕಾಲದಲ್ಲೋ ಅಥವಾ ನಂತರವೋ ಸುನಾಮಿ ಬಂದು ಇಲ್ಲಿನ ಅನೇಕ ಭವನಗಳು ನಾಶವಾಗಿರುವ ಸಾಧ್ಯತೆಗಳನ್ನೂ ಊಹಿಸಲಾಗಿದೆ. ಆದರೆ ಅದು ಸ್ಪಷ್ಟವಿಲ್ಲ. ಭೂಕುಸಿತವೂ ಆಗಿರಬಹುದಾಗಿದೆ. ಸುಮಾರು ನಾಲ್ಕೂವರೆ ಕಿ.ಮೀ. ಕಲ್ಲಿನ ಗೋಡೆಗಳಿದ್ದುವು. 11 ದುರ್ಗ, ಬುರುಜು ಹಾಗೂ ಕೋಟೆಗೆ ಎರಡು ಬೃಹತ್ ಗೇಟುಗಳಿದ್ದುವು. ಇದರೊಳಗೆ ನೀರಿನ ಟ್ಯಾಂಕ್, ಶಸ್ತ್ರಾಗಾರ, ಇತ್ಯಾದಿಗಳ ಜೊತೆ ತರಕಾರಿ ಮತ್ತು ಫಸಲು ಬರುವ ಬೆಳೆಗಳನ್ನು ಬೆಳೆಸುವುದಕ್ಕೂ ವ್ಯವಸ್ಥೆಗಳಿದ್ದುವು.

ವಸಾಯಿ ತಾಲ್ಲೂಕಿನಲ್ಲಿ ಎರಡು ಹಳೆಯ ಕೋಟೆಗಳಿವೆ. ಇವು ಬ್ರಿಟಿಷ್ ಕಾಲಕ್ಕಿಂತ ಹಳೆಯವು. ಇವೆರಡರ ನಡುವೆ ಹತ್ತು ಕಿ.ಮೀ. ಅಂತರವಿದೆ. ಒಂದು - ವಸಾಯಿ ಕೋಟೆ, ಎರಡು- ಅರ್ನಾಲಾ ಕೋಟೆ.

ಒಂದೊಮ್ಮೆ ಥಾಣೆ ಜಿಲ್ಲೆಯ ಬಸೀನ್ ಫೋರ್ಟ್ ಈಗ ವಸಾಯಿ ಕೋಟೆ ಎಂಬ ಹೆಸರಿನಿಂದ ಖ್ಯಾತಿ. ಈ ಕೋಟೆಯ ಶಿಲಾ ಲೇಖನಗಳೂ, ಶಿಲಾ ಶಾಸನಗಳು, ದ್ವಾರಗಳು ಘಾಟಕ್‌ಗಳು, ಕುಸುರಿ ಕೆಲಸಗಳು ಬಹಳ ಆಕರ್ಷಕವಾಗಿವೆ.

ಒಂದೊಮ್ಮೆ ಪೋರ್ಚುಗೀಸರು ನಾಲ್ಕೂ ಕಡೆ ಭದ್ರವಾದ ಗೋಡೆಗಳನ್ನು, ದ್ವಾರಗಳನ್ನು, ನಿರ್ಮಾಣ ಮಾಡಿದ್ದಲ್ಲದೆ ಚಿಕ್ಕ ಚಿಕ್ಕ ಕೋಟೆಗಳನ್ನೂ ಇದರಲ್ಲಿ ನಿರ್ಮಿಸಿದ್ದರು. ನಂತರ ವಸಾಯಿ ಸುಮಾರು 150 ವರ್ಷ (ಒಂದೂವರೆ ಶತಮಾನಗಳಷ್ಟು) ಸಮೃದ್ಧಿಯ ಪ್ರತೀಕ ಎನಿಸಿತ್ತು. ಪೋರ್ಚುಗೀಸರು ಮಹತ್ವದ್ದಾದ ವಸತಿ ಗೃಹ, ಚರ್ಚ್, ಅನಾಥಾಲಯಗಳನ್ನು ಇಲ್ಲಿ ಕಟ್ಟಿಸಿದರು. ಆವಾಗ ನೌಕಾ ಪಡೆಯೂ ಪೋರ್ಚುಗೀಸರ ಅಧೀನದಲ್ಲಿತ್ತು. ಆದರೆ 1739ರಲ್ಲಿ ಮರಾಠ ರಾಜ ಪೇಶ್ವೆ ಬಾಜೀರಾವ್‌ನ ಸಹೋದರ ಚಿಮಾಜೀ ಅಪ್ಪಾ ಈ ಕೋಟೆಯ ಮೇಲೆ ವಿಜಯ ಸಾಧಿಸಿದರು.

ಯಾವಾಗ 1802 ರಲ್ಲಿ ಪೇಶ್ವೆ ಬಾಜೀರಾವ್ ದ್ವಿತೀಯ ವಸಾಯಿ ಒಪ್ಪಂದವನ್ನು ಮಾಡಿಕೊಂಡರೋ ಅನಂತರ ವಸಾಯಿಯ ಕೋಟೆ, ಶಹರದಲ್ಲಿ ಪೂರ್ಣರೂಪದಿಂದ ಇಂಗ್ಲಿಷರ ಪ್ರಭುತ್ವ ಕಾಣಿಸಿತು.

ಇಲ್ಲಿರುವ ಕಸ್ಟಮ್‌ ಕಾಲೊನಿಯನ್ನು ಭಾರತೀಯ ಪುರಾತತ್ವ ಇಲಾಖೆ ತನ್ನ ಅಧಿಕಾರಕ್ಕೆ ಪಡೆಯುವ ಮೊದಲೇ ನಿರ್ಮಿಸಲಾಗಿದೆ. ಈ ಕಾಲೊನಿ ಬಳಿ ಪ್ರಾಚೀನ ಹನುಮಾನ್ ಮಂದಿರ, ದೀಪಸ್ತಂಭ ಇದೆ. ಇದರ ಪಕ್ಕದಲ್ಲಿ ಸೇಂಟ್ ಫ್ರಾನ್ಸಿಸ್ ಚರ್ಚ್ ಇದೆ. ಇದು ಕಬ್ರಿಸ್ಥಾನವೂ ಹೌದು. ಪೋರ್ಚುಗೀಸ್ ಕಾಲದ ಈ ಕಬ್ರಿಸ್ಥಾನದಲ್ಲಿ ಮೃತರ ಶಿಲಾಫಲಕಗಳನ್ನು ಕಾಣಬಹುದು.

‘ಮುಂಬೈಯಲ್ಲಿ ಎಲ್ಲಿದ್ದೀರಿ?’ ಅಂತ ಯಾರಾದರೂ ಕೇಳಿದರೆ ವಸಾಯಿಯಲ್ಲಿ ಅನ್ನುತ್ತೇನೆ. ‘ಹಾಗಿದ್ದರೆ ಪೋರ್ಚುಗೀಸ್ ಕಾಲದ ವಸಾಯಿ ಕೋಟೆ ನಿಮಗೆ ಹತ್ತಿರವೇ? ನಮಗೂ ಒಮ್ಮೆ ಕಾಣಬೇಕು’ ಅನ್ನೋ ಮಾತು ಅನೇಕ ಸಲ ನಾನು ಕೇಳಿಸಿಕೊಂಡಿದ್ದೆ. ಆದರೆ ಇನ್ನು ಯಾರಾದರೂ ಈ ರೀತಿ ಹೇಳಿದರೆ ‘ಸದ್ಯ ಅದನ್ನು ವೀಕ್ಷಿಸಲು ಹೋಗಬೇಡಿ. ನಿಮ್ಮ ಕಲ್ಪನೆಗೆ ಧಕ್ಕೆ ಬರಬಹುದು’ ಅಂತ ದಾಕ್ಷಿಣ್ಯವಿಲ್ಲದೆ ಹೇಳಬಹುದೇನೋ!

ಪ್ರತಿಕ್ರಿಯಿಸಿ (+)