ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರಿಗಾಗಿ ಅರಣ್ಯದಲ್ಲಿ ಎಎನ್‌ಎಫ್‌ ಶೋಧ

ಹಣ, ಅಕ್ಕಿ ಸಂಗ್ರಹಿಸಿ ಕಾಡಿನೊಳಕ್ಕೆ ಹೊರಟ ಶಸ್ತ್ರಸಜ್ಜಿತರು
Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮಡಿಕೇರಿ: ಶಂಕಿತ ನಕ್ಸಲರು ಶುಕ್ರವಾರ ರಾತ್ರಿ ಭೇಟಿ ನೀಡಿದ್ದ ಕೊಡಗು– ದಕ್ಷಿಣ ಕನ್ನಡ ಜಿಲ್ಲೆಯ ಗಡಿಗ್ರಾಮಗಳ ಅರಣ್ಯದಲ್ಲಿ ಶನಿವಾರ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಹಾಗೂ ಜಿಲ್ಲಾ ಪೊಲೀಸರು ಶೋಧ ನಡೆಸಿದರು.

ಜಿಲ್ಲೆಯ ಗಡಿಪ್ರದೇಶ ಕೊಯಿನಾಡು ವ್ಯಾಪ್ತಿಯಲ್ಲಿ ಶಸ್ತ್ರಸಜ್ಜಿತ ಮೂವರು ಪುರುಷರು ಕಾಣಿಸಿಕೊಂಡು ಕೆಲವು ಮನೆಗಳಿಗೆ ಭೇಟಿ ನೀಡಿ ಆತಂಕ ಮೂಡಿಸಿದ್ದರು. ಸ್ಥಳೀಯರ ಮಾಹಿತಿ ಆಧರಿಸಿ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಮಾರ್ಗದರ್ಶನದಲ್ಲಿ ಎರಡು ಪ್ರತ್ಯೇಕ ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿರುವ ಸಿಬ್ಬಂದಿ ಅರಣ್ಯದೊಳಕ್ಕೆ ನಕ್ಸಲರು ಹೊರಟ ಮಾರ್ಗದಲ್ಲಿ ಮುಂದೆ ಸಾಗಿದರು. ಇಡೀ ದಿವಸ ಶೋಧ ನಡೆಸಿದರೂ ಸುಳಿವು ಲಭಿಸಿಲ್ಲ.

ಶುಕ್ರವಾರ ರಾತ್ರಿ 8ರ ಸುಮಾರಿಗೆ ಕೊಯಿನಾಡು ಅರಣ್ಯದಂಚಿನ ನಿವಾಸಿ ಶಂಕಪ್ಪ ನಿವಾಸಕ್ಕೆ ಮೂವರು ಭೇಟಿ ನೀಡಿ ₹2,700, ಅಕ್ಕಿ, ಖಾರದ ಪುಡಿ ಸಂಗ್ರಹಿಸಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ರಾತ್ರಿಯೇ ಡಿವೈಎಸ್‌ಪಿ ಸುಂದರರಾಜ್‌ ನೇತೃತ್ವದಲ್ಲಿ ಪೊಲೀಸರು ಹಾಗೂ ಎಎನ್‌ಎಫ್‌ ಸಿಬ್ಬಂದಿ ಹುಡುಕಾಟ ನಡೆಸಿದರು.

‘ಮೂವರ ಬಳಿಯೂ ಬಂದೂಕುಗಳಿದ್ದವು. ಜತೆಗೆ, ಬ್ಯಾಗ್‌ ಸಹ ಇತ್ತು. ಹಸಿರು ಬಣ್ಣದ ಮಿಲಿಟರಿ ಬಟ್ಟೆ ತೊಟ್ಟಿದ್ದರು. ಶಂಕಪ್ಪ ಅಲ್ಲದೇ ಕುಡಿಯರ ಕಿಟ್ಟ, ನಾಗವೇಣಿ, ನಳಿನಾಕ್ಷಿ ಅವರ ಮನೆಗೂ ಭೇಟಿ ಕೊಟ್ಟು ಅಕ್ಕಿ, ಅಡುಗೆ ಸಾಮಗ್ರಿ ಬೇಕೆಂದು ಕೇಳಿದರು. ಮನೆಯಲ್ಲಿ ಅಕ್ಕಿ ಇರಲಿಲ್ಲ. ಸಮೀಪದ ಅಂಗಡಿಯಿಂದ ತಂದುಕೊಡುವಂತೆ ಅವರೇ ಹಣ ಕೊಟ್ಟರು. ಬೆದರಿಕೆ ಹಾಕಿದ್ದರಿಂದ ಎಲ್ಲ ಸಾಮಗ್ರಿ ತಂದುಕೊಟ್ಟೆವು. ಬಳಿಕ ಅರಣ್ಯದೊಳಕ್ಕೆ ಪ್ರವೇಶ ಪಡೆದು ಸುಬ್ರಹ್ಮಣ್ಯದ ಕಡೆಗೆ ತೆರಳಿದರು’ ಎಂದು ನಿವಾಸಿಯೊಬ್ಬರು ತಿಳಿಸಿದರು.

ಬೆದರಿಕೆ: ‘ನಾವು ನಕ್ಸಲರು. ಪೊಲೀಸರಿಗೆ ಮಾಹಿತಿ ನೀಡಿದರೆ ಜೀವ ತೆಗೆಯುವುದಾಗಿ ಬೆದರಿಕೆಯೊಡ್ಡಿದ್ದಾರೆ’ ಎಂದೂ ನಿವಾಸಿಗಳು ಮಾಹಿತಿ ನೀಡಿದರು.

ಗಡಿಗ್ರಾಮದಲ್ಲಿ ಆತಂಕ: ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ನಕ್ಸಲರ ಸುಳಿವು ಇರಲಿಲ್ಲ. ಈಗ ನಕ್ಸಲರು ಪ್ರತ್ಯಕ್ಷವಾಗಿದ್ದು ಅರಣ್ಯದಂಚಿನ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಶಿರಾಡಿ ಗ್ರಾಮದ ಮಿತ್ತಮಜಲಿಗೆ ಜ.16ರಂದು ಭೇಟಿ ನೀಡಿದ್ದ ಮೂವರು ಶಸ್ತ್ರಸಜ್ಜಿತರು, ‘ನಾವು ನಕ್ಸಲರು’ ಎಂದು ಹೇಳಿಕೊಂಡಿದ್ದರು. ಬಳಿಕ ಎಎನ್‌ಎಫ್‌ ಸಿಬ್ಬಂದಿ ಎರಡು ದಿನಗಳ ಕಾಲ ರಕ್ಷಿತ ಅರಣ್ಯದಲ್ಲಿ ಶೋಧ ನಡೆಸಿದ್ದರು. ಅವರೇ ಈ ಕಡೆಗೆ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ವಿಕ್ರಂಗೌಡ: ಕೊಯಿನಾಡಿಗೆ ಬಂದಿದ್ದವರಲ್ಲಿ ಪೊಲೀಸರಿಗೆ ಬೇಕಾಗಿರುವ ಉಡುಪಿಯ ವಿಕ್ರಂಗೌಡ ತಂಡದಲ್ಲಿದ್ದ ಎಂಬ ಮಾಹಿತಿ ಸಿಕ್ಕಿದೆ. ಎಎನ್‌ಎಫ್‌ ಸಿಬ್ಬಂದಿ ಆತನ ಫೋಟೊವನ್ನು ಸ್ಥಳೀಯರಿಗೆ ತೋರಿಸಿದಾಗ ಖಚಿತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

***

ನಕ್ಸಲರೇ ಅಥವಾ ಬೇಟೆಗಾರರೇ ಎಂಬುದು ದೃಢಪಟ್ಟಿಲ್ಲ. ಸ್ಥಳೀಯರ ಮಾಹಿತಿ ಆಧರಿಸಿ ಅರಣ್ಯದಲ್ಲಿ ಶೋಧ ನಡೆಸಲಾಗುತ್ತಿದೆ.
– ಪಿ.ರಾಜೇಂದ್ರ ಪ್ರಸಾದ್‌, ಎಸ್‌ಪಿ, ಕೊಡಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT