ಭಾನುವಾರ, ಡಿಸೆಂಬರ್ 8, 2019
25 °C

ಗಂಟಿಚೋರರ ತುಡುಗು ದೈವಗಳು

Published:
Updated:
ಗಂಟಿಚೋರರ ತುಡುಗು ದೈವಗಳು

ಬಿದ್ದೀಯಬೇ ಮುದುಕಿ ಬಿದ್ದೀಯಬೆ

ಬುಟ್ಟಿಯಲಿ ಪತ್ತಲಿಟ್ಟಿ

ಅದನು ಉಟ್ಟ ಹೊತ್ತೊಳು ಜೋಕಿ;

ಕೆಟ್ಟ ಗಂಟಿ ಚೌಡೇರು ಬಂದು

ಉಟ್ಟುದ್ದನ್ನೆ ಕದ್ದಾರ ಜೋಕಿ

ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ...

-ಶಿಶುನಾಳ ಷರೀಫ

ಹೀಗೆ ಸಂತ ಶಿಶುನಾಳ ಶರೀಫರು ತಮ್ಮ ‘ಬಿದ್ದೀಯಬೇ ಮುದುಕಿ’ ಎಂಬ ತತ್ವ ಪದದಲ್ಲಿ ‘ಕೆಟ್ಟಗಂಟಿ ಚೌಡೇರು ಎಂಬ ಪದ ಬಳಸಿ ಮುದುಕಿಯನ್ನು ಎಚ್ಚರಿಸುತ್ತಾರೆ. ಶಿಗ್ಗಾಂವ ಸಮೀಪದ ಶಿಶುವಿನಾಳ ಭಾಗದ ಬಾಲೆಹೊಸೂರಿನಲ್ಲಿ ಇನ್ನೂರು ಮನೆಗಳಿರುವ ಗಂಟಿಚೋರರೇ ಈ ಉಲ್ಲೇಖಿತರು. ಹುಲುಗೂರು (ಹುಲುಗುರ ಸಂತಿ) ಕೂಡ ಇಲ್ಲಿಗೆ ಹೊಂದಿಕೊಂಡಂತಿದೆ. ಶರೀಫರು ಬಳಸಿದ ‘ಗಂಟಿ ಚೌಡೇರು ಎನ್ನುವ ಪದ ‘ಚೌಡಿ ಎಂಬ ಶಕ್ತಿದೇವತೆಯದೋ ಅಥವಾ ಚೋರ, ಚೌರೇರು ಚೌಡೇರು ಎನ್ನುವ ಜನಬಳಕೆ ಪದವೋ ಖಚಿತವಾಗುವುದಿಲ್ಲ. ಅಂತೆಯೇ ಈ ಸಮುದಾಯದ ‘ಪಾಪನೋರು ಕುಲಮೂಲವನ್ನು ಬೆನ್ನತ್ತಿದರೆ, ಕನ್ನಡದ ವಡ್ಡಾರಾಧನೆ ಕೃತಿಯ ‘ವಿದ್ಯೂಚ್ಚೋರನೆಂಬ ರಿಷಿಯ ಕಥೆಯ ‘ಚೋರ ಎನ್ನುವ ಪದಕ್ಕೂ ಈ ಸಮುದಾಯಕ್ಕೂ ನಂಟಿದೆ.

ಹೀಗೆ ತುಡುಗುತನವನ್ನೆ ಕುಲವೃತ್ತಿಯನ್ನಾಗಿಸಿಕೊಂಡಿದ್ದ ‘ಗಂಟಿಚೋರ್’ ಸಮುದಾಯವೊಂದು ಉತ್ತರ ಕರ್ನಾಟಕದಲ್ಲಿದೆ. ಸದ್ಯಕ್ಕೆ ಪರಿಶಿಷ್ಟ ಜಾತಿಯ ಈ ಸಮುದಾಯ ಬಹಳ ಹಿಂದೆಯೇ ಕಳ್ಳತನ ವೃತ್ತಿಯಿಂದ ವಿಮುಖವಾಗಿ, ಶಿಕ್ಷಣ ಪಡೆದು, ಜಾಗೃತಗೊಂಡು ನಾಗರಿಕ ವೃತ್ತಿಗಳಲ್ಲಿ, ಸರ್ಕಾರಿ ನೌಕರಿಗಳಲ್ಲಿ ಹೊಸ ಅಸ್ಮಿತೆ ಪಡೆಯುತ್ತಿದೆ. ಅಂತೆಯೇ ಬಹುಸಂಖ್ಯಾತ ಕಡುಬಡವರೂ ದಿನಗೂಲಿಯಲ್ಲಿ ಜೀವನ ನಡೆಸಿದ್ದಾರೆ. ಅವರ ಕುಲಚರಿತ್ರೆ, ಸಮುದಾಯದ ನೆನಪುಗಳನ್ನು ಕೆದಕಿದರೆ ತುಡುಗುತನದ ನೂರಾರು ಕಥೆಗಳು ರಮ್ಯವಾಗಿ ಗರಿಬಿಚ್ಚುತ್ತವೆ. ಇಂತಹ ಕಥೆಗಳಲ್ಲಿ ಅವರ ಕಳ್ಳತನಕ್ಕೆ ಧೈರ್ಯ ತುಂಬಿ ಮುನ್ನುಗ್ಗುವಂತೆ ಮಾಡುವ ದೈವಗಳ ನಂಟೂ ಕುತೂಹಲಕಾರಿಯಾಗಿದೆ. ಇವು ನಿಜಕ್ಕೂ ಗಂಟಿಚೋರರ ತುಡುಗು ದೈವಗಳು.

ಯಾವುದೇ ಬುಡಕಟ್ಟು ತಮ್ಮ ಕುಲವೃತ್ತಿಯ ಜತೆ ದೈವಗಳನ್ನು ಹೆಣೆದುಕೊಂಡಿರುತ್ತವೆ. ಮುಂದುವರಿದು ವೃತ್ತಿಗುರುತುಗಳೇ ದೈವಗಳಾಗುತ್ತವೆ. ಹಾಗಾಗಿಯೇ ಗಂಟಿಚೋರರ ‘ತುಡುಗು’ ಅಥವಾ ಕಳವಿನ ಮೂಲವೃತ್ತಿಯ ಜತೆಗೂ ದೈವಗಳು ಬೆಸೆದುಕೊಂಡಿವೆ. ಇವರ ದೈವಗಳು ತುಡುಗಿನಲ್ಲಿ ಪಾಲು ಪಡೆದಿವೆ, ಕಳವಿನ ಸರಕುಗಳಿಂದಲೇ ಗುಡಿಕಟ್ಟಿಸಿಕೊಂಡಿವೆ. ಕಳ್ಳತನ ಮಾಡಲು ಬೆನ್ನುತಟ್ಟಿ ಧೈರ್ಯ ತುಂಬಿವೆ. ಇಂತಹ ಕೆಲವು ಕುತೂಹಲಕಾರಿ ಕಥನಗಳು ಇಲ್ಲಿವೆ. ಇವು ಸಮುದಾಯವೊಂದು ಕಟ್ಟಿಕೊಳ್ಳುವ ದೈವದ ಸಹಜತೆಗೆ ಸಂಕೇತದಂತಿವೆ.

ಗಂಟಿಚೋರರ ಆರಾಧನಾ ಪದ್ಧತಿ ಮತ್ತು ಆಚರಣೆಗಳನ್ನು ನೋಡಿದರೆ ಇವರು ಶಾಕ್ತಪಂಥಕ್ಕೆ ಸೇರಿದವರು. ಮೂಲತಃ ಯುದ್ಧದೇವತೆಯಾದ ಕಾಳಿ ಆರಾಧನೆಯ ಕಾರಣ ಹಿಂದೆ ಸೈನಿಕ ಸಮುದಾಯವಾಗಿದ್ದ ಬಗ್ಗೆ ಹಲವು ಪುರಾವೆಗಳಿವೆ.

ಯುದ್ಧದ ಸಂದರ್ಭಕ್ಕೆ ಆರಾಧನೆಗೊಳ್ಳುತ್ತಿದ್ದ ವಿಜಯಲಕ್ಷ್ಮಿ, ಐಶ್ವರ್ಯಲಕ್ಷ್ಮಿಯರೂ ರಾಯಭಾಗ ಸಮೀಪದ ಶಾಹು ಪಾರ್ಕ್, ಗೋಕಾಕ್ ಫಾಲ್ಸ್ ಮೊದಲಾದ ಕಡೆ ಲಕ್ಷ್ಮಿ, ಲಕ್ಕವ್ವನಾಗಿ ಪೂಜೆಗೊಳ್ಳುತ್ತಾರೆ. ಹಾಗಾಗಿ ಕಳವಿನ ಧೈರ್ಯಕ್ಕೆ ಕಾಳಿಯೂ, ಯಶಸ್ಸಿಗೆ ಲಕ್ಷ್ಮಿಯೂ ಕಾಯುತ್ತಾಳೆಂದು ಈ ಸಮುದಾಯ ಅಚಲವಾಗಿ ನಂಬುತ್ತದೆ.

ಹನುಮಂತ ದೇವರಿಗೆ ಮಡ್ಡಿಗಿ ಕಳವು

ಈ ಮೊದಲೇ ಹೇಳಿದಂತೆ ಬಾಲೆಹೊಸೂರು ಗಂಟಿಚೋರರು ಹೆಚ್ಚಿರುವ ಊರು. ಈ ಊರಿನಲ್ಲಿ ತುಡುಗು ಮಾಡಲು ಹೋಗುವ ಮೊದಲು ಹನುಮಂತನಲ್ಲಿ ಪ್ರಸಾದ (ಹೂ) ಕೇಳುತ್ತಿದ್ದರು. ಹನುಮಪ್ಪನ ವಿಗ್ರಹದ ಮೇಲಿಂದ ಉದುರುವ ಪ್ರಸಾದವನ್ನು ಆಧರಿಸಿ ಒಳ್ಳೆಯದೋ, ಕೆಟ್ಟದ್ದೊ ಎನ್ನುವ ಲೆಕ್ಕಾಚಾರ ಮಾಡಿ ಕಳ್ಳತನ ಹಿಡಿಯುತ್ತಿದ್ದರು. ಇಂತಹ ಗಂಟಿಚೋರರ ಇಷ್ಟದೈವ ಹನುಮಂತನ ಗುಡಿ ಕಟ್ಟಲು ಸಮುದಾಯದವರು ಮುಂದಾದರು. ಅಂತೆಯೇ ಕಳವು ಮಾಡಿದ ಇಟ್ಟಿಗಿ, ಕಲ್ಲು, ಮಣ್ಣುಗಳಿಂದಲೇ ಕಟ್ಟಡ

ಮೇಲೇರಿ ಮಾಳಿಗೆವರೆಗೂ ಬಂತು.

ಆಗ ಮಾಳಿಗೆಗೆ ಮಡ್ಡಿಗಿ (ಮರದ ತೊಲೆ ಕಂಬಗಳು) ಇರಲಿಲ್ಲ. ಇದೇ ಸಂದರ್ಭಕ್ಕೆ ಸವಣೂರಿನ ನವಾಬ ದೊಡ್ಡದಾದ ವಾಡೆಯೊಂದನ್ನು ಕಟ್ಟಿಸಲು ಮಡ್ಡಿಗಿಯನ್ನು ಕಲಾತ್ಮಕವಾಗಿ ಕೆತ್ತಿಸಿಟ್ಟ ವಿಷಯ ತಿಳಿಯಿತು. ಕೂಡಲೆ ಇವುಗಳನ್ನು ಎಗರಿಸಬೇಕೆಂದು ನಿರ್ಧರಿಸಿದರು. ಅಂದು ರಾತ್ರಿ ಹತ್ತಿಪ್ಪತ್ತು ಎತ್ತಿನ ಗಾಡಿಯಲ್ಲಿ ಸವಣೂರಿಗೆ ಹೋಗಿ ಮಡ್ಡಿಗಿಯನ್ನು ಕದ್ದು ತಂದು, ರಾತ್ರೋರಾತ್ರಿ ಗುಡಿಗೆ ಮಡ್ಡಿಗಿ ಏರಿಸಿ ಮೇಲುಮುದ್ದೆ ಹಾಕಿ ಮುಗಿಸಿಬಿಟ್ಟರು.

ಮರುದಿನ ಸವಣೂರಿನ ನವಾಬ ಈ ವಿಷಯ ತಿಳಿದು ಕಂಗಾಲಾದ. ಬಂಡಿಗಳ ಜಾಡು ಹಿಡಿದು ಬಂದವರು ಬಾಲೆಹೊಸೂರು ಹನುಮಂತನ ಗುಡಿ ಮುಂದೆ ನಿಂತರು. ಗುಡಿ ಮೇಲಿನ ಮಡ್ಡಿಗಿಯು ಇವರನ್ನು ನೋಡಿ ಕಿಲಕಿಲ ನಕ್ಕಂತಾಯಿತು. ದೇವರ ಗುಡಿಯಾದ್ದರಿಂದ ಕಿತ್ತೊಯ್ಯುವುದು ಸರಿಯಲ್ಲವೆಂದೂ, ಗಂಟಿಚೋರರ ಹನುಮನನ್ನು ಎದುರುಹಾಕಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲವೆಂದೂ ನವಾಬನ ಕಡೆಯವರು ವಾಪಸಾದರು. ಇದರ ಸೇಡು ತೀರಿಸಿಕೊಳ್ಳಲು ವಾಪಸು ಹೋಗುವಾಗ ಕಣಗಳಲ್ಲಿರುವ ಮರ ಮುಟ್ಟು, ಹೊಲದ ಬೆಳೆಗಳು, ಸೊಪ್ಪಿನ ಬಣವೆ ಹೀಗೆ ಕೈಗೆ ಸಿಕ್ಕದ್ದನ್ನೆಲ್ಲ ದೋಚಿಕೊಂಡು ಹೋದರಂತೆ. ಈಗಲೂ ಬಾಲೆಹೊಸೂರು ಹನುಮಂತನ ದೇವಸ್ಥಾನದಲ್ಲಿ ಸವಣೂರು ನವಾಬರ ಮಡ್ಡಿಗಿ ಕಲಾತ್ಮಕವಾಗಿ ಕಣ್ಮನ ಸೆಳೆಯುವಂತಿವೆ. ಅಂತೆಯೇ ನವಾಬನ ದೌಲತ್ತನ್ನು ಕೆಣಕುತ್ತಿರುವಂತೆ ಕಾಣುತ್ತಿದೆ.

ಕಳ್ಳರ ಪಾರು ಮಾಡಿದ ದ್ಯಾಮವ್ವನ ಕಥೆ

ಕಳವಿನಲ್ಲಿ ಸಿಕ್ಕಿಹಾಕಿಕೊಂಡವರಿಗೆ ನೆರವಾದ ದೇವಿಯ ಕಥೆಯಿದು. ಗಂಟಿಚೋರರ ನಾಲ್ಕುಜನ ನಿರಂತರವಾಗಿ ತುಡುಗು ಮಾಡುತ್ತಾ ಜನರಿಗೆ ತಲೆನೋವಾಗಿದ್ದರಂತೆ. ಎಷ್ಟೇ ಕಾವಲಿದ್ದರೂ ತುಂಬಾ ಚಾಕಚಕ್ಯತೆಯಿಂದ ಕಳವು ಮಾಡುತ್ತಿದ್ದರು. ಹೀಗೆ ಪ್ರಸಿದ್ಧಿ ಹೊಂದಿದ ಇವರನ್ನು ಸುತ್ತಮುತ್ತಣ ಹಳ್ಳಿಗಳಲ್ಲಿ ತುಡುಗರೆಂದು ಗುರುತಿಸುತ್ತಿದ್ದರು. ತುಡುಗು ಮಾಡಿ ಸಿಕ್ಕರೆ ಜನರೆಲ್ಲಾ ಸೇರಿ ಧರ್ಮದೇಟು ಹಾಕುತ್ತಿದ್ದರು. ಅಷ್ಟಾಗಿಯೂ ಇವರು ಕಳವು ಬಿಟ್ಟಿರಲಿಲ್ಲ. ಹೀಗಿರುವಾಗ ಒಂದು ದಿನ ದೂರದ ಹಳ್ಳಿಯೊಂದರ ಜಾತ್ರೆಗೆ ಕಳವು ಮಾಡಲು ಹೋಗಿ ಸಿಕ್ಕಿಬಿದ್ದರು. ಊರವರು ಕೋಣನ ಜತೆ ದೇವಿಗೆ ಬಲಿ ಕೊಡಬೇಕೆಂದು ಇವರನ್ನು ದೊಡ್ಡ ವಾಡೆಯಲ್ಲಿ ಅಡಗಿಸಿಟ್ಟರು.

ಇವರೋ ಸಿಟ್ಟಾಗಿ ಆಕ್ರೋಶದಿಂದ ದ್ಯಾಮವ್ವನಿಗೆ ‘ನಮ್ಮನ್ನ ಕೋಣನ ಜತೆ ಬಲಿ ಕೊಡ್ತೀವಿ ಅಂತ ಊರವರು ಕೂಡಿಟ್ಟಾರ, ನೀನು ದೊಡ್ಡಾಕಿ, ನೀ ಬಂದು ನಮ್ಮನ್ನ ಕಾಪಾಡಬೇಕು, ಇಲ್ಲಾಂದ್ರ ನಾವು ಬಲಿಯಾಗ್ತೀವಿ, ನಮ್ಮನ್ನ ಉಳಿಸೋದು ಬಿಡೋದು ನಿನಗ ಬಿಟ್ಟಿದ್ದು ಎಂದು ಜೋರು ಗದರುಹಾಕಿ ಮಲಗಿದರು.

ಹೀಗಿರುವಾಗ ಭಯಗೊಂಡ ದ್ಯಾಮವ್ವ ಕನಸಲ್ಲಿ ಬಂದು ‘ಈ ವಾಡೆಯ ಬಾಗಿಲು ತೆಗಿತೀನಿ, ಊರ ಹೊರಗೆ ಒಂದು ಹುಡೇವು ಇದೆ. ಅದನ್ನ ಹತ್ತಿ ಅಲ್ಲಿಂದ ಕೆಳಗ ಹಾರಿರಿ. ಅಲ್ಲಿ ಆನೆಯ ಲದ್ದಿ ಇರುತ್ತೆ, ನಿಮಗೆ ಪೆಟ್ಟಾಗುವುದಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ಊರು ಸೇರಿರಿ ಎಂದು ಮಾಯವಾದಳು. ತಡಬಡಿಸಿ ಎದ್ದವರೇ ವಾಡೆಯಿಂದ ತಪ್ಪಿಸಿಕೊಂಡು ಹುಡೇವನ್ನು ಹತ್ತಿ ಒಬ್ಬೊಬ್ಬರೇ ಕೆಳಕ್ಕೆ ಹಾರಿದರು. ಹೀಗಿರುವಾಗ ಒಬ್ಬ ಕತ್ತಲಲ್ಲಿ ನೆಲದ ಮೇಲಕ್ಕೆ ಜಿಗಿದು ನಡೆಯಲಾರದೆ ಕೂರುತ್ತಾನೆ. ಉಳಿದವರು ಅವನನ್ನು ಅಲ್ಲಿಯೇ ಕೂರಿಸಿ ಗೋವಿನ ಸೊಪ್ಪಿನಿಂದ ಮುಚ್ಚಿ, ಯಾರದೋ ಮನೆಯ ಆಕಳೊಂದನ್ನು ತಂದು ಅದರ ಮೇಲೆ ಅವನನ್ನು ಕೂರಿಸಿಕೊಂಡು ಊರು ತಲುಪಿದರಂತೆ. ಈ ದೇವಿಯೆ ಇದೀಗ ಬಾಲೆಹೊಸೂರಿನಲ್ಲಿ ಪೂಜೆಗೊಳ್ಳುವ ದ್ಯಾಮವ್ವ. ಹೀಗಾಗಿ ಈ ಊರಿನವರೆ ಕಥೆಯ ನಾಯಕರು. ಇದು ಸಮುದಾಯದ ವೃತ್ತಿಯನ್ನು ಬೆಂಬಲಿಸಿ ಪಾರು ಮಾಡುವ ಪವಾಡದ ಕತೆಯಾಗಿದೆ. ಅಂತೆಯೇ ದ್ಯಾಮವ್ವ ತಮ್ಮನ್ನು ಪೊರೆಯುತ್ತಾಳೆ ಎಂಬ ನಂಬಿಕೆಯನ್ನೂ ಇವರಲ್ಲಿ ಬಲಗೊಳಿಸಿದೆ. ಹೀಗೆ ತುಡುಗು ಮಾಡಲು ಹೋದಾಗ ರಕ್ಷಿಸಿದ ಹನುಮಂತನ ಕಥೆಗಳೂ ಇವೆ.

ಯಲ್ಲಮ್ಮನ ಪದಕ ಶಕುನ

ಹನುಮಂತನ ಹೂ ಪ್ರಸಾದದಂತೆ ಈ ಸಮುದಾಯದವರು ತುಡುಗಿಗೆ ಮೊದಲು ಯಲ್ಲಮ್ಮನ ಪದಕ ಶಕುನ ಕೇಳುವ ನಂಬಿಕೆಯೂ ಇತ್ತು. ಇದರಲ್ಲಿ ಹೆಣ್ಣುದೈವದ ಶಕ್ತಿಯ ಮೇಲೆ ಅತೀವ ನಂಬಿಕೆ ಇಟ್ಟ ಈ ಸಮುದಾಯದ ಹಿರಿಯರು ಹನುಮಂತನನ್ನು ಎಲ್ಲಮ್ಮನ ಅಣ್ಣನೆಂದು ಭಾವಿಸುತ್ತಾರೆ. ಹೀಗಾಗಿ ಈ ಇಬ್ಬರಲ್ಲೂ ಶಕುನ ಕೇಳುವ ನಂಬಿಕೆಯನ್ನು ಉಳಿಸಿಕೊಂಡಿದ್ದರು. ಈ ಶಕುನದ ಕ್ರಮವೆಂದರೆ, ಜಳಕ ಮಾಡಿಕೊಂಡು, ಕೊರಳಲ್ಲಿರುವ ಯಲ್ಲಮ್ಮನ ಪದಕ ಹಾಕಿಕೊಂಡು, ಪೂಜೆ ಪುನಸ್ಕಾರ ಮಾಡಿ ತೂಗಬೇಕು. ಅದು ಯಾವ ಕಡೆಗೆ ತೋರಿಸುತ್ತದೆಯೋ ಆ ದಿಕ್ಕಿಗೆ ಕಳ್ಳತನಕ್ಕೆ ಹೋಗುವುದು.

ಸಾಮಾನ್ಯವಾಗಿ ಪ್ರತಿ ಗಂಟಿಚೋರರ ಮನೆಯಲ್ಲಿ ಯಲ್ಲಮ್ಮನನ್ನು ಹೊತ್ತವರಿದ್ದರು. ಈ ಶಕುನದ ಸಂದರ್ಭದಲ್ಲಿ ಹೀಗೆ ದೇವಿ ಹೊತ್ತವರೇ ಬಂದು ಯಲ್ಲಮ್ಮನ ಪೂಜೆ ಮಾಡಿ, ಪದಕ ತೂಗುವಿಕೆಯನ್ನು ಬಿಡಿಸಿ ಹೇಳುತ್ತಿದ್ದರು. ಈ ದಿಕ್ಕಿಗೆ ಹೋದರೆ ದೇವಿ ಕಾಯುತ್ತಾಳೆ ಎಂಬುದನ್ನು ವಿವರಿಸುತ್ತಿದ್ದರು. ಇದು ಕೂಡ ತುಡುಗು ಮಾಡಲು ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತಿತ್ತು.

ಕದ್ದು ತಂದ ಪೀರಲದೇವರು

ಮೊಹರಮ್ಮಿನ ‘ಪೀರಲದೇವರ ಜತೆಗೂ ಗಂಟಿಚೋರರ ಗಾಢ ಸಂಬಂಧವಿದೆ. ಇವರ ತುಡುಗು ವೃತ್ತಿಯ ಜತೆ ಮೊಹರಂ ತಳುಕು ಹಾಕಿಕೊಂಡ ಕಥೆಯೊಂದಿದೆ. ರಾಯಭಾಗ ತಾಲ್ಲೂಕಿನ ಹಂದಿಗುಂದ ಗ್ರಾಮದ ಗಂಟಿಚೋರರ ಕುಟುಂಬವೊಂದು ಹಿಂದೆ ಬನಹಟ್ಟಿಗೆ ತುಡುಗು ಮಾಡಲು ಹೋದಾಗ ಒಡವೆಗಳಿರಬೇಕೆಂದು ಭಾವಿಸಿ ಮನೆಯೊಂದರಲ್ಲಿ ‘ಪೆಟ್ಟಿಗೆಯನ್ನು ಕದ್ದು ತರುತ್ತಾರೆ. ಹೀಗೆ ಕದ್ದ ಪೆಟ್ಟಿಗೆಯನ್ನು ಬಿಚ್ಚಿ ನೋಡಲಾಗಿ ಅದರಲ್ಲಿ ಮೊಹರಂ ದೇವರುಗಳಿರುತ್ತದೆ.

ಹೀಗಾಗಿ ಕದ್ದವರು ತಪ್ಪಾಯಿತೆಂದು ಭಾವಿಸಿ, ಅದನ್ನು ಕಳವು ಮಾಡಿದ ಮನೆಗೋಗಿ ವಾಪಸು ತೆಗೆದುಕೊಳ್ಳುವಂತೆ ಕೇಳುತ್ತಾರೆ. ಆದರೆ ಮನೆಯವರು ‘ನೀವು ತುಡುಗು ಮಾಡಿದರೂ, ಈ ದೇವರುಗಳು ನಿಮಗೆ ಒಲಿದಿವೆ. ಹಾಗಾಗಿ ನೀವೇ ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಬೇರೆ ದಾರಿ ಕಾಣದೆ ದೇವರ ಪೆಟ್ಟಿಗೆಯನ್ನು ತರುವಾಗ ಊರಿಗೆ ಒಯ್ಯುವುದು ಬೇಡವೆಂದು ಬಾವಿಯೊಂದಕ್ಕೆ ಎಸೆದು ಮುಂದೆ ಸಾಗುತ್ತಾರೆ. ಆ ಕ್ಷಣ ಅವರಿಗೆಲ್ಲ ಕಣ್ಣು ಮಂಜಾಗಿ ಕತ್ತಲಾವರಿಸುತ್ತದೆ. ಇದಕ್ಕೆ ಹೆದರಿ ದೇವರ ಪೆಟ್ಟಿಗೆಯನ್ನು ಬಾವಿಯಿಂದ ಮೇಲೆತ್ತಿಕೊಂಡು ತಮ್ಮ ಊರಿಗೆ ಒಯ್ದು ಸ್ಥಾಪಿಸಿ ಗುಡಿ ಕಟ್ಟುತ್ತಾರೆ. ಅಂದಿನಿಂದ ಈ ತನಕ ಈ ಮನೆಯವರೇ ಮೊಹರಂಅನ್ನು ಆಚರಿಸುತ್ತಾ ಬಂದಿದ್ದಾರೆ.

ಹೀಗೆ ಗಂಟಿಚೋರರ ತುಡುಗು ವೃತ್ತಿಗೆ ಜೊತೆಯಾದ ದೈವಗಳು ಪ್ರಾದೇಶಿಕವಾಗಿ ಹಲವಿವೆ. ಈ ಎಲ್ಲಾ ದೈವಗಳ ಜತೆಗೂ ಕಳವಿನ ನಂಟಿರುವ ಕಥೆಗಳನ್ನು ಈ ಸಮುದಾಯ ರೋಚಕವಾಗಿ ಹೇಳುತ್ತದೆ. ನಾಗರಿಕ ಜಗತ್ತು ದೈವಗಳನ್ನು ಗುಡಿಗಳಲ್ಲಿರಿಸಿ ಭಯಭಕ್ತಿಯಲ್ಲಿ ಮೌಢ್ಯವನ್ನು ಹೊತ್ತು ತಿರುಗಿದರೆ, ಗಂಟಿಚೋರರು ದೈವಗಳನ್ನು ತಮ್ಮ ಕಸುಬಿಗೆ ಜೊತೆಯಾಗಿ ಕರೆದೊಯ್ಯುತ್ತಾರೆ, ದೈವಗಳೂ ಇವರ ತುಡುಗುತನದಲ್ಲಿ ಎಚ್ಚರವಿದ್ದು ಕಾಯುತ್ತವೆ. ಅಂತೆಯೇ ಶಕುನ ತಪ್ಪಿ ಸಿಕ್ಕಿಕೊಂಡರೆ ಅದೇ ದೈವಗಳು ಇವರಿಂದ ಬೈಸಿಕೊಂಡೂ ತೆಪ್ಪಗಿರುತ್ತವೆ. ಹೀಗೆ ‘ದೇವರೂ ನಮ್ಮಂತೆ’ ಎನ್ನುವ ಸಹಜ ಒಡನಾಟವೆ ಇಂತಹ ಜನಸಾಮಾನ್ಯರ ದೈವ.

ಪ್ರತಿಕ್ರಿಯಿಸಿ (+)