ಶುಕ್ರವಾರ, ಡಿಸೆಂಬರ್ 6, 2019
26 °C

ಪ್ರೇಮದ ಮೂಲಸೆಲೆ ಬತ್ತದಿರಲಿ...

Published:
Updated:
ಪ್ರೇಮದ ಮೂಲಸೆಲೆ ಬತ್ತದಿರಲಿ...

ನಮ್ಮನ್ನು ನಾವು ಪ್ರೀತಿಸಬೇಕು. ನಾವು, ನಮ್ಮ ಸ್ವಭಾವ, ನಮ್ಮ ನೋಟ, ನಮ್ಮ ಮಾಟ, ನಮ್ಮ ಮುಖ... ನಮ್ಮ ಕೂದಲು, ನಮ್ಮ ದೇಹ... ಎಲ್ಲವನ್ನೂ ನಾವು ಪ್ರೀತಿಸಬೇಕು. ಇಷ್ಟಕ್ಕೂ ನಾವೆಂದರೆ ನಮ್ಮ ದೇಹದ ಮೂಲಕವೇ ಪರಿಚಯವಾಗುವುದಿಲ್ಲವೇ? ನಮ್ಮ ದೇಹ ನಮ್ಮ ಆತ್ಮದ ಬಾಡಿಗೆ ಮನೆ ಇದ್ದಂತೆ! ಇರುವಷ್ಟು ದಿನವೂ ಈ ಮನೆಯನ್ನು ಶುದ್ಧವಾಗಿರಿಸಿಕೊಳ್ಳಬೇಕು.

ನಮ್ಮನ್ನು ಪ್ರೀತಿಸುವುದೆಂದರೆ ನಮ್ಮನ್ನೇ ನಾವು ಒಮ್ಮೆ ತಬ್ಬಿಕೊಳ್ಳಬೇಕು. ನಾನಂದ್ರೆ ನನಗಿಷ್ಟ ಅಂತ ಹೇಳಿಕೊಳ್ಳಬೇಕು. ಈ ನುಡಿಗಳು ನಮ್ಮ ಸುತ್ತ ಸಕಾರಾತ್ಮಕ ಚಿಂತನೆಗಳ ತರಂಗಗಳನ್ನು ಸೃಷ್ಟಿಸುತ್ತವೆ. ನಮ್ಮೊಳಗೆ ನಾವಿದ್ದಾಗ ಯಾವುದೇ ನಕಾರಾತ್ಮಕ ಅಂಶಗಳು ನಮ್ಮತ್ತ ಸುಳಿಯುವುದಿಲ್ಲ.

ಇಷ್ಟಕ್ಕೂ ನಾವೆಲ್ಲ ಖುಷಿಯಾಗಿರಬೇಕು. ಪ್ರತಿಯೊಬ್ಬರೂ. ಪ್ರತಿದಿನವೂ. ನಮ್ಮನ್ನು ನಾವು ಸಂತೈಸಿಕೊಳ್ಳುವುದು ಸುಲಭದ ಕೆಲಸ.

ನಮ್ಮನ್ನೇ ನಾವು ಅಕ್ಕರೆಯಿಂದ ನೋಡಿಕೊಳ್ಳಬೇಕು.

ಜೀವನದಲ್ಲಿ ನಾವು ನಮ್ಮನ್ನೇ ಮರೆತುಹೋಗುತ್ತೇವೆ. ಮರೆಯುವಂತೆ ಜೀವನ ಮಾಡುತ್ತದೆಯೇ? ಇಲ್ಲ. ಜೀವನಪ್ರೀತಿ ನಮ್ಮೊಳಗಿನ ಸಮಾಧಾನವನ್ನು ಕಾಪಾಡಿಕೊಳ್ಳುವುದಾಗಿದೆ. ನಮ್ಮೊಳಗೆ ಸಂತಸದ ಸರೋವರವನ್ನು ಹುಟ್ಟುಹಾಕುವುದಾಗಿದೆ. ಆ ಸರೋವರದ ಅಲೆಗಳು ಅಗಲಗಲ ಹರಡಿದಂತೆ ನಮ್ಮ ಸಂತಸದ ವ್ಯಾಪ್ತಿಯೂ ಹೆಚ್ಚುತ್ತ ಹೋಗುತ್ತದೆ.

ಆರೋಗ್ಯಕರವಾಗಿರುವುದು, ಸಂತಸದಿಂದಿರುವುದು ಎರಡೂ ನಮ್ಮ ಹಕ್ಕಾಗಿದೆ. ನನ್ನ ಪ್ರಕಾರ ಅಧ್ಯಾತ್ಮ ಎನ್ನುವುದು ಅನುಭವ. ಅನುಭವ ಎಂದರೆ ಐಕ್ಯ ಆಗುವುದು. ನಮ್ಮ ಸುತ್ತಲಿನ ಪರಿಸರದಲ್ಲಿ ನಾವೊಂದಾಗುವುದು. ನಮ್ಮ ವೃತ್ತಿಯಲ್ಲಿ ನಾವು ಮುಳುಗೇಳುವುದು. ನಮ್ಮ ಬಂಧು ಬಾಂಧವರ ನಡುವೆ ಒಂದಾಗುವುದು... ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬಂತೆ... ಐಕ್ಯ ಆಗುವುದು. ಅದೇ ನಮ್ಮ ಗುರುವಾಗುತ್ತದೆ. ಈ ಸ್ವಯಂ ಗುರುವಿನ ಅನುಭವವೇ ಅಧ್ಯಾತ್ಮ.

ನನ್ನ ಅರಿವೇ ನನಗೆ ಗುರುವಾಯಿತು. ನಾನೇನು ಎನ್ನುವ ಅರಿವೂ ನನಗೆ ಗುರುವಾಯಿತು. ನಾನು ದೇವರು ಎಂದರೆ ನಿಮಗೆಲ್ಲ ಅಹಂಕಾರವೆನಿಸಬಹುದು. ನಾವೆಲ್ಲರೂ ದೇವರು. ದೇವರ ಎಲ್ಲ ತಪ್ಪುಗಳನ್ನೂ ಸ್ವೀಕರಿಸಿ, ಒಪ್ಪಿಕೊಳ್ಳುವುದಿಲ್ಲವೇ? ಆರಾಧಿಸುವುದಿಲ್ಲವೇ? ಹಾಗೆಯೇ ನಮ್ಮನ್ನು ನಾವು ಒಪ್ಪಿಕೊಳ್ಳಬೇಕು. ನಮ್ಮ ತಪ್ಪುಗಳನ್ನೂ. ನಮ್ಮಂತೆಯೇ ಉಳಿದವರನ್ನೂ.

ನಾನು ಪತ್ರಿಕೋದ್ಯೋಗ ಬಿಟ್ಟಿದ್ದು 1984ರಲ್ಲಿ. ಬರವಣಿಗೆಯನ್ನು ಬಿಡಲಿಲ್ಲ. ಉದ್ಯೋಗವನ್ನು ಮಾತ್ರ ಬಿಟ್ಟಿದ್ದು. ಜನಜೀವನ ಸ್ವಾಸ್ಥ್ಯಮಯವಾಗಿರಲು ಫಿಟ್‌ನೆಸ್‌ ಕುರಿತು ಬರೆಯಲಾರಂಭಿಸಿದೆ. ಕಾಯ ಮತ್ತು ಕಾಯಕದ ನಡುವಿನ ಲಯ ಶ್ರುತಿ ಒಂದೇ ಆಗಿರುವಂತೆ ಮಾಡುವುದು ಅತಿ ಮುಖ್ಯವಾಗಿದೆ. ನಾನು ಅನುಭವದ ಮಾರ್ಗವನ್ನು ಅನುಸರಿಸಿದೆ. ಶಾಲನ್‌ ಅಕ್ಷರದ ಮಾರ್ಗ ಅನುಸರಿಸಿದರು. ಅವರು ಓದುತ್ತಿದ್ದರು. ಅಧ್ಯಾತ್ಮವನ್ನು ಅಧ್ಯಯನ ಮಾಡುತ್ತಿದ್ದರು.

ನಮ್ಮಿಬ್ಬರ ನಡುವೆ ಒಂದು ಅಲಿಖಿತ ಒಪ್ಪಂದವೇರ್ಪಟ್ಟಿತ್ತು. ಅವರು ಓದಿದ್ದನ್ನು ನನ್ನೊಂದಿಗೆ ಹಂಚಿಕೊಳ್ಳುವಂತಿಲ್ಲ. ಚರ್ಚಿಸುವಂತಿಲ್ಲ. ನಾನು ನನ್ನ ಉಸಿರನ್ನು ಗಮನಿಸುತ್ತಲೇ ಪ್ರಕೃತಿಯೊಂದಿಗೆ ಒಂದಾಗುವುದನ್ನು ಕಲಿತಿದ್ದೆ.  ನಾನು ಉಸಿರಿನೊಳಗೆ ದೈವಿಕತೆಯನ್ನು ಕಂಡೆ. ಅವರಿಗೆ ಅಕ್ಷರ ಗುರುವಾಯಿತು. ನನಗೆ ಅನುಭವ ಗುರುವಾಯಿತು. ಈ ದೈವಿಕಯಾನದ ಮುಖ್ಯ ತಿರುವೆಂದರೆ ನನ್ನ ಕನಸು.

ಅದೊಂದು ದಿನ ಹಲ್ಲುನೋವಿನಿಂದ ಬಳಲುತ್ತಿದ್ದೆ. 1988 ಅಥವಾ 90ರ ಅಂಚಿನ ವರ್ಷಗಳು. ಆಗಲೇ ಚಿಕಿತ್ಸೆಗೆ 25 ಸಾವಿರ ಖರ್ಚಾಗುವುದು ಎಂದು ಹೇಳಿದ್ದರು. ಅದು ನಮಗೆ ದೊಡ್ಡ ಮೊತ್ತವೇ ಆಗಿತ್ತು. ಅದನ್ನು ಹೊಂದಿಸುವುದು ಹೇಗೆಂದು ಯೋಚಿಸುತ್ತಲೇ ನಿದ್ದೆ ಹೋಗಿದ್ದೆ. ಅದೊಂಥರ ಕನಸು ಮತ್ತು ಅರೆ ಎಚ್ಚರದ ಸ್ಥಿತಿ. ಸುತ್ತಲೂ ಬೆಳಗು. ಶಾಂತ ಸರೋವರ. ಇದ್ದಕ್ಕಿದ್ದಂತೆ ನನ್ನಜ್ಜಿ ಕಂಡರು. ಅವರು ಹಲ್ಲುನೋವು ವಾಸಿಯಾಗುತ್ತದೆ ಎಂದು ಹೇಳಿದರು. ನಂತರ ಅಮ್ಮ, ಅಪ್ಪ ಕಂಡರು. ಅವರು ಸಹ ನನ್ನೊಟ್ಟಿಗೆ ಮಾತನಾಡಿದರು. ನಾನು ಎಲ್ಲವನ್ನೂ ಕೇಳುತ್ತಿದ್ದೆ. ಆ ಶಾಂತ ಪರಿಸರ ನನ್ನೊಳಗೂ ಶಾಂತಿಯ ತನ್ನ ಅಲೆಗಳನ್ನು ಹರಡುತ್ತಿತ್ತು. ಇದು ಅನನ್ಯ ಅನುಭವವಾಗಿತ್ತು. ಆ ಅನುಭವಕ್ಕೆ ಅಕ್ಷರದ ರೂಪ ಕೊಡುವುದು ಅಸಾಧ್ಯವೆಂದೇ ಎನಿಸಿತ್ತು. ಒಂದೆರಡಲ್ಲ ಮೂರು ದಿನ ಕಳೆದರೂ ನಾನದೇ ಶಾಂತಸರೋವರದಲ್ಲಿ ಮಿಂದೇಳುತ್ತಿದ್ದೆ. ಕೆಲವೊಮ್ಮೆ ಹೀಗೆ ಕಳೆದುಹೋಗುವುದು ನನ್ನ ಅಭ್ಯಾಸವಾಗಿತ್ತು. ಆದರೆ ಇದನ್ನು ಶಾಲನ್‌ ಜೊತೆಗೆ ಹಂಚಿಕೊಳ್ಳಲೇಬೇಕೆನಿಸಿತು.

ಒಂದು ಸುಂದರ ಬೆಳಗು. ಶಾಲನ್‌ಗೆ ಈ ಅನುಭವ ಹೇಳಲೇಬೇಕೆಂಬ ತುಡಿತ ಹೆಚ್ಚಾಗಿತ್ತು. ಆದರೆ ಆತಂಕದ ಒಂದೆಳೆ ನನ್ನನ್ನು ಕಾಡುತ್ತಿತ್ತು. ಶಾಲನ್‌ ಸುಮ್ಮನೆ ನಕ್ಕುಬಿಟ್ಟರೆ... ಈ ಅನನ್ಯ ಅನುಭವ ಕೇವಲ ಅರೆ ಎಚ್ಚರ ಸ್ಥಿತಿಯ ಸ್ವಪ್ನವೆಂದು ಬಿಟ್ಟರೆ ಅದನ್ನು ಸಹಿಸುವುದು ಹೇಗೆ? ಇರಲಿ... ಅನುಭವವಂತೂ ಸತ್ಯ. ಅದರಿಂದ ಅದಮ್ಯವಾದ, ಅಮಿತವಾದ ಶಾಂತಿ ಮನದೊಳಗೆ ಸೃಷ್ಟಿಯಾಗಿದೆ. ಇದನ್ನು ಹಂಚಿಕೊಂಡರಾಯಿತು ಎಂದು ನಿರ್ಧರಿಸಿದೆ.

ಇಡೀ ಕನಸನ್ನು ಯಾವುದೇ ಭಾವೋದ್ವೇಗವಿಲ್ಲದೇ ಶಾಲನ್‌ಗೆ ಹೇಳಿದೆ. ಶಾಲನ್‌ ಕಣ್ಣಲ್ಲಿ ಅಚ್ಚರಿ, ಆನಂದ ಎರಡೂ ಕಂಡುಬಂದವು. ನನಗದು ಸೋಜಿಗವೆನಿಸಿತು. ತಕ್ಷಣವೇ ಪ್ರಶ್ನೆಯೊಂದು ತೂರಿಬಂದಿತ್ತು... ನೀನು ಕನಸಲ್ಲಿ ಕಂಡಿರುವ ನಿನ್ನ ಅಪ್ಪ, ಅಮ್ಮನ ವಯಸ್ಸು ಎಷ್ಟಾಗಿತ್ತು? 30–35 ಎಂದೆ. ಅಜ್ಜಿಯದ್ದೂ... ಅಚ್ಚರಿ ಪಡುವ ಸ್ಥಿತಿ ನನ್ನದಾಗಿತ್ತು. ಅವರಿಗೂ 35...

ಶಾಲನ್‌ ಆಗ ವಿವರಿಸಿದರು ಈ ಅನನ್ಯ ಅನುಭವದಲ್ಲಿ ಸಂದೇಶವಾಹಕರಾಗಿ ಬಂದದ್ದು ನನ್ನ ಬಂಧುಗಳು. ಅಲ್ಲಿಂದ ನನ್ನ ದೈವಿಕ ಯಾನ, ಅಧ್ಯಾತ್ಮ ಪಯಣ ಒಂದೇ ನಿಟ್ಟಿನಲ್ಲಿ ಹೆಜ್ಜೆ ಹಾಕತೊಡಗಿದವು. ಅನುಭವ, ಅರಿವು, ಅಕ್ಷರ... ಇದು ಮೊದಲ ಹಂತವಾಗಿತ್ತು. ನಂತರ ಅಕ್ಷರ, ಅನುಭವ, ಅರಿವು... ಇದು ಎರಡನೇ ಹಂತವಾಯಿತು. ನಂತರ ಅದೇ ಒಂದು ಚಕ್ರವಾಗಿ ಬದಲಾಯಿತು. ನಾವು ಅನುಭವದಲ್ಲಿ ಬಂಡವಾಳ ಹೂಡಬೇಕು. ಬಂಡವಾಳದಿಂದ ಅನುಭವ ಪಡೆಯುವುದಲ್ಲ. ಅನುಭವವೇ ಬಂಡವಾಳವಾಗಬೇಕು. ಅನುಭವ ಗಳಿಕೆಯೇ ನಿಜವಾದ ಗಳಿಕೆ.

ನಮ್ಮ ಸುತ್ತಲಿನ ಜನರಿಗೆ ಅಗತ್ಯವಿರುವುದು ಅನುಭವಗಳ ಬಂಡವಾಳ. ರಾತ್ರೋರಾತ್ರಿ ಬದಲಾವಣೆಯಾಗಿದ್ದಲ್ಲ. ಆದರೆ ಬರವಣಿಗೆಗಳು ಥೆರಪಿಯಾಗಬಲ್ಲವು ಎಂದೆನಿಸಿದ್ದೇ ಒಂದಷ್ಟು ಪ್ರತಿಕ್ರಿಯೆಗಳು ಬಂದಮೇಲೆ. ಅಧ್ಯಾತ್ಮ ಯಾನ ದೈವೀಯಾನವಾಗಿದ್ದು ಇನ್ನೊಂದು ತಿರುವಿನಿಂದ.

ಅದು 1990ರಲ್ಲಿ  ಲಾಮಾ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಕೇವಲ ಹತ್ತು ನಿಮಿಷಗಳ ಅನುಮತಿ. ನಾವಿಬ್ಬರೂ ಭೇಟಿಯಾದೆವು. ಲಾಮಾ ವಿನೀತರಾಗಿದ್ದರು. ಅವರ ಮುಂದೆ ನಾವೂ ವಿನಯದಿಂದ ನಿಂತಿದ್ದೆವು. ಈ ಎರಡೂ ಕಡೆಯ ಸಮರ್ಪಣಾ ಭಾವ ನಮ್ಮ ನಡುವೆಯೊಂದು ಸೇತುಬಂಧ ಕಲ್ಪಿಸಿತು. ದಲೈ ಲಾಮಾ ಭರತ್‌ ಕೈಯನ್ನು ತಮ್ಮೆದೆಗೆ ಒತ್ತಿಕೊಂಡು ನಡೆಯತೊಡಗಿದರು. ಆ ಕ್ಷಣದಲ್ಲಿ ಅದಮ್ಯ ಪ್ರೀತಿ, ಸ್ನೇಹ, ಗೌರವ, ಸ್ವೀಕೃತಿಯಂಥ ಎಲ್ಲ ಸಕಾರಾತ್ಮಕ ಶಕ್ತಿಗಳ ಸಂಚಲನವಾದಂತೆ ಎನಿಸತೊಡಗಿತು.

ನಾವಿಬ್ಬರೂ ಮಗು ಬೇಡವೆಂದು ತೀರ್ಮಾನಿಸಿದ್ದೆವು. ಪ್ರೀತಿ ಜಗದಗಲ, ಮುಗಿಲಗಲ ಹರಡಬೇಕು. ಪ್ರೀತಿ ಕಾಳಜಿಯಾಗಬೇಕೆ ಹೊರತು ಮೋಹವಲ್ಲ. ಅದೇ ಕಾರಣಕ್ಕೆ ಮಕ್ಕಳು ಬೇಡವೆಂದು ತೀರ್ಮಾನಿಸಿದೆವು.  ನಾವೆಲ್ಲ ಮಕ್ಕಳಂತೆಯೇ ಇರಬೇಕು. ಜನರ ಕುರಿತು, ಬಂಧು ಬಾಂಧವರ ಕುರಿತು, ಸ್ನೇಹಿತರ ಕುರಿತು ಯಾವುದೇ ತೀರ್ಮಾನಕ್ಕೆ ಬರಕೂಡದು. ಆಗ ಸ್ವೀಕಾರ, ತಿರಸ್ಕಾರ, ಸೇಡು ಮುಂತಾದ ನಕಾರಾತ್ಮಕ ಅಂಶಗಳು ಸುಳಿಯುವುದಿಲ್ಲ.

ದೈನಂದಿನ ಚಟುವಟಿಕೆಗಳಲ್ಲಿ ನಡಿಗೆ, ಓಟ, ವ್ಯಾಯಾಮ ಇವೆಲ್ಲವನ್ನೂ ಒಳಗೊಂಡಾಗ ನಾವು ಹಗುರಾಗುತ್ತೇವೆ. ಇದು ಕೇವಲ ತೂಕದ ಬಗೆಗಿನ ಮಾತಲ್ಲ. ಆ ಹಗುರತನ ಅನುಭವಕ್ಕೆ ಬರುತ್ತದೆ. ಕಾಯ ಮತ್ತು ಕಾಯಕಗಳ ನಡುವಿನ ಪ್ರೀತಿ ಇನ್ನೂ ಹೆಚ್ಚಿನದನ್ನು ಪಡೆಯಲು ಮನ ತುಡಿಯುತ್ತದೆ. ನಮ್ಮಲ್ಲಿ ಈ ಲಯ ಸಾಧಿಸಿದಾಗ ಜೀವನಕ್ಕೆ ಒಂದು ಶ್ರುತಿ ಬಂತು. ಉಸಿರಾಟವನ್ನು ಗಮನಿಸುತ್ತಲೇ ಇಡೀ ಬ್ರಹ್ಮಾಂಡದೊಂದಿಗೆ ಒಂದಾಗತೊಡಗಿದೆವು.

ಚಿಟ್ಟೆ ಹುಟ್ಟಿರುವುದೇ ಹಾರುವುದಕ್ಕೆ... ದುಂಬಿ ಹುಟ್ಟಿರುವುದೇ ಮಕರಂದ ಹೀರಲು, ಜೇನು ಹುಟ್ಟಿರುವುದೇ ಗೂಡು ಕಟ್ಟಿಕೊಂಡಿರಲು ಎಂಬಂತೆ ಇಡೀ ಸೃಷ್ಟಿಯ ಜೀವಜಗತ್ತು ತನಗಂಟಿಸಿದ ಕಾಯಕದಲ್ಲಿ ಸಂತಸದಿಂದಿರುತ್ತವೆ. ಆನಂದಮಯವಾಗಿರುತ್ತವೆ.

ಸೃಷ್ಟಿಯ ಈ ಮೂಲ ಗುಣವಿದೆಯಲ್ಲ, ನೀವು ಮಾಡುತ್ತಿರುವ ಕೆಲಸವನ್ನು ಕೇವಲ ಹೊಟ್ಟೆಪಾಡಿಗೆ ಎಂದುಕೊಳ್ಳಬಾರದು. ನಿಮಗೆ ಆ ಕೌಶಲ ಇರುವುದರಿಂದಲೇ ಆ ಕೆಲಸದಲ್ಲಿರುವಿರಿ. ಆ ಕೆಲಸಕ್ಕೆ ನಿಮ್ಮ ಅಗತ್ಯವಿದೆ ಎಂಬ ಭಾವ ಒಡಮೂಡಬೇಕು. ಅದಾಗ ಕಾಯಕವಾಗುತ್ತದೆ. ನಿಮ್ಮ ಕಾಯ ಆನಂದಿಸುವ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ಮನಸು ತಾನೇ ಪ್ರಫುಲ್ಲವಾಗುತ್ತದೆ.

ಪ್ರಫುಲ್ಲ ಮನಸು ತನ್ನನ್ನು ತಾನೇ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಂಡರೂ ಅದು ಧ್ಯಾನವಾಗಿ ಪರಿವರ್ತನೆ ಆಗುತ್ತದೆ. ಇದು ಸಾಧನೆಯ ಇನ್ನೊಂದು ಹಂತ.

ಮುಂದಿನ ಹಂತವೆಂದರೆ ಈ ಹುಮ್ಮಸ್ಸು, ಸಂತಸ ನಿಮ್ಮೊಳಗೇ ಆನಂದಿಸುವಂತಾಗಬೇಕು. ಈ ಆನಂದಮಯ ಸ್ಥಿತಿ ಸ್ಥಿರವಾಗುತ್ತದೆ. ಸುಸ್ಥಿರವಾಗುತ್ತಲೇ ಹೋಗುತ್ತದೆ. ದಿನಗಳೆದಂತೆ ಮನಸು ಇನ್ನೂ ಹೆಚ್ಚಿನದನ್ನು ಬಯಸತೊಡಗುತ್ತದೆ. ಇದು ಬೆಳೆಯುವ, ಪ್ರಗತಿಯಾಗುವ ಲಕ್ಷಣ. ಹಪಹಪಿಸುವುದಲ್ಲ... ಸಾಧನೆಗಾಗಿ ತಪಿಸುವುದಲ್ಲ. ತಪ ಆಗಬೇಕು.

ನಮ್ಮ ಜೀವನ ಇರುವುದೇ ಆನಂದಿಸಲು. ಇರುವುದೊಂದೇ ಅವಕಾಶ ನಮ್ಮ ಪಾಲಿಗೆ. ನಮ್ಮ ಪಾಲಿನ ಈ ದೇಹಕ್ಕೆ. ಅದಕ್ಕೂ ಸಕಲ ಸೌಕರ್ಯವನ್ನು ನೀಡುತ್ತ, ಸ್ವಚ್ಛ ಮತ್ತು ಶುದ್ಧವಾಗಿರಿಸಿಕೊಳ್ಳುತ್ತ, ಒಳಹೊರಗನ್ನು ಪರಿಶುದ್ಧವಾಗಿಸಿಕೊಳ್ಳುತ್ತ ಸಾಗುವುದೇ ಜೀವನ. ನಮ್ಮ ಹುಟ್ಟು, ಹುಟ್ಟಿನ ಮೂಲ ಪ್ರೀತಿಸೆಲೆಯೇ ಆಗಿದೆ. ಅದನ್ನು ಹಂಚುವುದು ಮತ್ತು ಅನುಭವಿಸುವುದೇ ಜೀವನಪ್ರೀತಿ.

–ಭರತ್‌ ಮತ್ತು ಶಾಲನ್‌ ಸವೂರ್‌

ಪ್ರತಿಕ್ರಿಯಿಸಿ (+)