ಬುಧವಾರ, ಡಿಸೆಂಬರ್ 11, 2019
20 °C
ಅಸ್ಸಾಂನಲ್ಲಿ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ

ಭಾರಿ ಆರ್ಥಿಕ ಸುಧಾರಣೆ, ಆಡಳಿತಕ್ಕೆ ಚುರುಕು: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ಭಾರಿ ಆರ್ಥಿಕ ಸುಧಾರಣೆ, ಆಡಳಿತಕ್ಕೆ ಚುರುಕು: ಮೋದಿ

ಗುವಾಹಟಿ : ಕೇಂದ್ರದ ಎನ್‌ಡಿಎ ಸರ್ಕಾರ ನಾಲ್ಕು ವರ್ಷಗಳಲ್ಲಿ ದೊಡ್ಡ ಪ್ರಮಾಣದ ಸುಧಾರಣೆ ತಂದಿದ್ದು, ಆಡಳಿತ ಯಂತ್ರದ ಕಾರ್ಯವೈಖರಿಗೆ ಚುರುಕು ಮುಟ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಕೈಗೊಂಡ ಹಲವು ಕ್ರಾಂತಿಕಾರಕ ಆರ್ಥಿಕ ಸುಧಾರಣೆಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ಹೂಡಿಕೆಗೆ ಅತ್ಯಂತ ಪ್ರಶಸ್ತ ತಾಣವಾಗಿ ಹೊರಹೊಮ್ಮಿದೆ. ಕಳೆದ ಹಣಕಾಸು ವರ್ಷದಲ್ಲಿ ₹3.84 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ)  ಹರಿದು ಬಂದಿದೆ ಎಂದರು.

ಅಸ್ಸಾಂ ಸರ್ಕಾರ ಆಯೋಜಿಸಿರುವ ಎರಡು ದಿನಗಳ ‘ಜಾಗತಿಕ ಹೂಡಿಕೆದಾರರ ಸಮಾವೇಶ’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ನಿಗದಿತ ಅವಧಿಯೊಳಗೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮ ಮತ್ತು ಯೋಜನೆ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಈಶಾನ್ಯ ರಾಜ್ಯಗಳು ಮತ್ತು ಅಲ್ಲಿಯ ಜನರ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಭಾರತದ ಬೆಳವಣಿಗೆಯ ಕಥೆಗೆ ಮತ್ತಷ್ಟು ವೇಗ ದೊರೆಯಲಿದೆ ಎಂದರು.

ಈಶಾನ್ಯ ರಾಜ್ಯಗಳ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ‘ಆ್ಯಕ್ಟ್‌ ಈಸ್ಟ್‌ ಪಾಲಿಸಿ‘ ಜಾರಿಗೆ ತಂದಿದೆ. ಈ ನೀತಿ ಆಸಿಯಾನ್‌ ರಾಷ್ಟ್ರಗಳೊಂದಿಗೆ ಈಶಾನ್ಯ ರಾಜ್ಯಗಳ ಸಂಪರ್ಕ ಹೆಚ್ಚಿಸುವ ಜತೆಗೆ ಅಭಿವೃದ್ಧಿಗೂ ಮುನ್ನುಡಿ ಬರೆಯಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಅಸ್ಸಾಂ ಇದೇ ಮೊದಲ ಬಾರಿಗೆ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದು, ಆಸಿಯಾನ್‌ ರಾಷ್ಟ್ರಗಳ ಜತೆ ವಾಣಿಜ್ಯ ಸಂಬಂಧಕ್ಕೆ ನಾಂದಿ ಹಾಡಲಿದೆ ಎಂದು ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಹೇಳಿದರು.

ಭೂತಾನ್‌ ಪ್ರಧಾನಿ ಲಯೊಂಚೆನ್ ಶೆರಿಂಗ್ ತೊಬ್ಗೆ, ಅರುಣಾಚಲ ಪ್ರದೇಶ, ಮಣಿಪುರದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, 16 ರಾಷ್ಟ್ರಗಳ ರಾಯಭಾರಿಗಳು ಮತ್ತು ಹೈಕಮಿಷನರ್‌, ಆರ್‌ಐಎಲ್‌ ಅಧ್ಯಕ್ಷ ಮುಕೇಶ್‌ ಅಂಬಾನಿ, ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ವೇದಿಕೆಯಲ್ಲಿದ್ದರು.

**

ಈಶಾನ್ಯ ರಾಜ್ಯಗಳು ಭಾರತದ ಅಭಿವೃದ್ಧಿಯ ನವಚಾಲಕ ಶಕ್ತಿಯಾಗಲಿವೆ

– ನರೇಂದ್ರ ಮೋದಿ, ಪ್ರಧಾನಿ

ಪ್ರತಿಕ್ರಿಯಿಸಿ (+)