ನನ್ನ ಮೊದಲ ಎರಡು ಸಂಪಾದನೆಗಳು

7

ನನ್ನ ಮೊದಲ ಎರಡು ಸಂಪಾದನೆಗಳು

Published:
Updated:

1957-58ನೆಯ ಸಾಲಿನಲ್ಲಿ ನಾನು ಮೈಸೂರಿನ ಹಾರ್ಡ್ವಿಕ್ ಮಾಧ್ಯಮಿಕ ಶಾಲೆಯ ಏಳನೆಯ ತರಗತಿಯಲ್ಲಿ ಓದುತ್ತಿದ್ದೆ. ಅಂದಿನ ದಿನಗಳಲ್ಲಿ ಶಾಲೆಯ ಓದಿನ ಜೊತೆಗೆ ಕ್ರೀಡೆಗೂ ಉತ್ತಮ ವಾತಾವರಣವಿತ್ತು. ಫುಟ್ಬಾಲ್ ಆಟ ಮತ್ತು ಆಟೋಟಗಳಲ್ಲಿ ಹಾರ್ಡ್ವಿಕ್ ಶಾಲೆ ನಗರದಲ್ಲಿ ಸಾಕಷ್ಟು ಮುಂದಿತ್ತು. ಆ ಪ್ರಭಾವವೂ ಒಂದು ಕಾರಣವಾಗಿ ನಾನು ಒಬ್ಬ ಸಾಧಾರಣ ಫುಟ್ಬಾಲ್ ಆಟಗಾರನೂ, ಅದರ ಘನ ಅಭಿಮಾನಿಯೂ ಆಗಿ ಪರಿವರ್ತನೆಗೊಂಡೆ.

ಆ ಶಾಲೆಯಲ್ಲಿ ಒಬ್ಬರು ಡ್ರಿಲ್ ಟೀಚರ್ ಇದ್ದರು. ಅವರ ಹೆಸರು ಸಿಂಗ್ ಎಂದು ಕೊನೆಗೊಳ್ಳುತ್ತಿತ್ತು. ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ-ವಾತ್ಸಲ್ಯ ಹೊಂದಿದ್ದ ಅವರು ಪ್ರತಿ ಶನಿವಾರ ಬೆಳಿಗ್ಗೆ ನಮಗೆ ಡ್ರಿಲ್ ತರಗತಿ ತೆಗೆದುಕೊಳ್ಳುತ್ತಿದ್ದರು.

ಡ್ರಿಲ್ ಮಾಡಿಸುವುದರ ಜೊತೆಗೆ, ಶಾಲೆಯ ಮುಂದಿದ್ದ ವಿಶಾಲ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ ಏರ್ಪಡಿಸುತ್ತಿದ್ದರು. ಪ್ರತಿ ಮೂರು ವಿದಾರ್ಥಿಗಳಿಗೊಂದರಂತೆ ತಂಡ ರಚಿಸಿ 400 ಮೀಟರ್‌ ಓಟ ಓಡಿಸುತ್ತಿದ್ದರು. ಆ ಪೈಕಿ ಮೊದಲು ಗುರಿ ತಲುಪಿದವನಿಗೆ ಒಂದು ಆಣೆ, ಎರಡನೆಯವನಿಗೆ ಅರ್ಧ ಆಣೆ ಮತ್ತು ಮೂರನೆಯವನಿಗೆ ಮೂರು ಕಾಸು ಬಹುಮಾನವನ್ನು ತಮ್ಮ ಕಿಸೆಯಿಂದ ಕೊಟ್ಟು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.

ನಾನು ಇದ್ದ ತಂಡದಲ್ಲಿ ಇದ್ದ ಇನ್ನಿಬ್ಬರೆಂದರೆ - ವಿನ್ಸ್ಟನ್ ಉರುಫ್ ವಿನ್ನಿ ಮತ್ತು ಎಚ್.ಆರ್. ನಾಗರಾಜ. ಸ್ಪರ್ಧೆಯಲ್ಲಿ ಓಡಿದಾಗ ವಿನ್ನಿ ಮೊದಲು ಗುರಿಮುಟ್ಟಿ ಒಂದು ಆಣೆ ಪಡೆದ, ನಾಗರಾಜ ಎರಡನೆಯವನಾಗಿ ಅರ್ಧ ಆಣೆ ಪಡೆದ ಮತ್ತು ಮೂರನೆಯವನಾದ ನನಗೆ ಮೂರುಕಾಸು ಬಂದಿತು. ಯಾವ ಅಭ್ಯಾಸವೂ ಇಲ್ಲದೆ ಬಹು ಆತಂಕದಿಂದಲೇ ನಾನು ಓಡಿದ್ದೆ. ಆ ದಿನಕ್ಕೆ ಆ ಮೂರು ಕಾಸು ಬಹು ಹೆಮ್ಮೆಯ ಸಂಗತಿಯಾಯಿತು. ಆ ನೆನಪು ಇಂದಿಗೂ ಹಸಿರಾಗಿದೆ. ಹಾಗೆಯೇ, ಡ್ರಿಲ್ ಟೀಚರ್‌ ಸಿಂಗ್ ಅವರ ಬಗ್ಗೆ ಗೌರವವೂ ಇದೆ. ಸಿಂಗ್ ಟೀಚರ್, ವಿದ್ಯಾರ್ಥಿಗಳ ಬಗ್ಗೆ ಹೊಂದಿದ್ದ ಪ್ರೀತಿ ಮತ್ತು ವಿಶ್ವಾಸ ಎಂದೂ ಮರೆಯಲಾಗದು.

‘ಪ್ರಜಾವಾಣಿ’ಯ ₹ 15 ಸಂಭಾವನೆ: 1965ನೆಯ ಇಸವಿ. ಗೌರಿ ಹಬ್ಬದ ದಿನ. ಮೈಸೂರಿನ ಕೃಷ್ಣಮೂರ್ತಿಪುರದ ನಮ್ಮ ಬಾಡಿಗೆ ಮನೆಯ ನನ್ನ ಕಿರಿದಾದ ರೂಮಿನಲ್ಲಿ ಪುಸ್ತಕ ಓದುತ್ತ ಕುಳಿತಿದ್ದೆ. ಆಗ ನನ್ನ ತಮ್ಮ ಓಡೋಡಿ ಬಂದು ‘ನಿನಗೊಂದು ಮನಿ ಆರ್ಡರ್ ಬಂದಿದೆ’ ಅಂದ. ನನಗೆ ಆಶ್ಚರ್ಯವಾಯಿತು. ಒಂದಿಷ್ಟು ಸಂತೋಷವೂ ಆಯಿತು. ‘ಯಾರು ನನಗೆ ಎಂ.ಓ ಕಳಿಸಿರಬಹುದು? ಯಾಕಾಗಿ?’ ಎಂಬ ಪ್ರಶ್ನೆಗಳು ಉದ್ಭವಿಸಿದವು. ಪೋಸ್ಟ್ ಮ್ಯಾನ್ ಬಳಿ ಹೋದೆ. ನನ್ನನ್ನು ಕಾಣುತ್ತಿದ್ದ ಹಾಗೆ ಆತ ‘ದೊರೆಸ್ವಾಮಿ ಅಂದ್ರೆ ನೀವೆನಾ?’ ಅಂತ ಕೇಳಿದ. ‘ಹೌದು’ ಅಂದೆ. ‘ನಿಮಗೆ ಹದಿನೈದು ರೂಪಾಯಿ ಎಂ.ಓ ಬಂದಿದೆ. ಪ್ರಜಾವಾಣಿಯಿಂದ’ ಅಂದ. ತಕ್ಷಣಕ್ಕೆ ಯಾಕೆಂದು ಹೊಳೆಯಲಿಲ್ಲ.

ಪೋಸ್ಟ್‌ ಮ್ಯಾನ್ ನೀಡಿದ ಎಂ.ಓ ಫಾರಂ ಪಡೆದು ಆತ ಹೇಳಿದಲ್ಲಿ ಸಹಿ ಮಾಡಿ, ನೀಡಿದ 15 ರೂಪಾಯಿ ಮತ್ತು ಹರಿದುಕೊಟ್ಟ ಫಾರಂನ ತುದಿಕಾಗದ ಪಡೆದೆ. ಅದರಲ್ಲಿ ಬರೆದಿದ್ದ ‘ಬಾಲಭಾರತಿಯಲ್ಲಿ ಪ್ರಕಟವಾದ ನಿಮ್ಮ ಮಕ್ಕಳ ಕವನ ....ದ ಬಾಬ್ತು 15 ರೂಪಾಯಿ ಸಂಭಾವನೆ ನೀಡಿದೆ’ ಎಂಬುದನ್ನು ಓದಿದಾಗ ಆ ಹಣ ನನಗೆ ಬಂದಿದ್ದು ಏಕೆ ಎಂಬುದು ಗೊತ್ತಾಯಿತು.

ಹಾಗೆಯೇ, ಪ್ರಕಟವಾದ ಬರಹಕ್ಕೆ ಹಣವನ್ನೂ ಕೊಡುತ್ತಾರೆ ಎಂಬುದು ಕೂಡ ಆಗಲೇ ತಿಳಿದದ್ದು. ಆ ಹಣ ಬರಿಗೈಯಲ್ಲಿದ್ದ ನನ್ನ ನೆರವಿಗೆ ಬಂದಿತಲ್ಲದೆ, ಇದು ನನ್ನ ಹಣ ಎಂಬ ಹೆಮ್ಮೆಗೂ ಕಾರಣವಾಯಿತು. ನಮ್ಮ ವಠಾರದಲ್ಲಿ ಅದೊಂದು ಸುದ್ದಿಯೂ ಆಯಿತು. (ಆದರೆ, ನನ್ನ ಬರಹದ ಮೂಲ ಸೆಲೆಯಾಗಿದ್ದ, ನಮ್ಮ ವಠಾರದಲ್ಲೇ ವಾಸವಾಗಿದ್ದ, ಪ್ರೀತಿಯ ತಂಗಿಯೇ ಆಗಿದ್ದ ಪುಟ್ಟ ಬಾಲಕಿ ಆರ್. ಭಾರತಿ ಮುಂಬೈಗೆ ಆಗಷ್ಟೇ ಸ್ಥಳಾಂತರವಾಗಿದ್ದರಿಂದ ಬೇಸರವೂ ಆಯಿತು.) ಇದು ಬರವಣಿಗೆಯ ಮೂಲಕ ಬಂದ ನನ್ನ ಮೊದಲ ಸಂಪಾದನೆ. ಇಂದಿಗೂ ನನ್ನ ಮನಃಪಟಲದಲ್ಲಿ ನಾಟಿ ನಿಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry