ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಶಾ ಆಪ್ತ ತುಮಕೂರಿನಲ್ಲಿ ಠಿಕಾಣಿ

ತುಮಕೂರಿನಲ್ಲೂ ಗುಜರಾತ್‌, ಉತ್ತರ ಪ್ರದೇಶ ಮಾದರಿಯಲ್ಲಿ ಚುನಾವಣಾ ತಯಾರಿ
Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಬಿಜೆಪಿಯ ಚುನಾವಣಾ ತಯಾರಿ ಬಿರುಸು ಪಡೆದುಕೊಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಆಪ್ತ ಕಲ್ಮೇಶ್‌ ಶರ್ಮಾ ಅವರನ್ನು ಜಿಲ್ಲೆಗೆ ಕಳುಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಂದು ವಾರದ ಹಿಂದೆ ನಗರಕ್ಕೆ ಬಂದಿರುವ ಕಲ್ಮೇಶ್‌ ಇಲ್ಲಿಯೇ ಮನೆ ಮಾಡಿದ್ದಾರೆ. ಪ್ರತಿ ದಿನ ಜಿಲ್ಲೆಯ ಪಕ್ಷದ ಚುನಾವಣಾ ತಯಾರಿ ಬೆಳವಣಿಗೆಳು, ನಾಯಕರ ಸಭೆಗಳು, ಜಿಲ್ಲೆಯ ಸಮಸ್ಯೆಗಳಿಗೆ ಪಕ್ಷದ ನಾಯಕರು ಸ್ಪಂದಿಸುತ್ತಿರುವ ರೀತಿ, ಹೋರಾಟ, ಸಂಘಟನೆಯ ವಿವರಗಳನ್ನು ನೇರ ಶಾ ಅವರಿಗೆ ರವಾನಿಸುತ್ತಿದ್ದಾರೆ.

ಗುಜರಾತ್, ಉತ್ತರ ಪ್ರದೇಶದಲ್ಲಿ ಗೆಲ್ಲಲು ಅನುಸರಿಸಿದ ತಂತ್ರಗಳನ್ನೇ ರಾಜ್ಯದಲ್ಲೂ ಅನುಸರಿಸಲಾಗುತ್ತಿದೆ. ಇದನ್ನೇ ಜಿಲ್ಲೆಯಲ್ಲೂ ಪಾಲಿಸಬೇಕಾಗಿದೆ. ಶಾ ಅವರ ನಿರ್ದೇಶನ, ಸೂಚನೆಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ, ಇಲ್ಲವೇ ಎಂಬ ಬಗ್ಗೆ ಕಣ್ಗಾವಲು ಇಡಲು ಕಲ್ಮೇಶ್‌ ಅವರನ್ನು ಜಿಲ್ಲೆಗೆ ಕಳುಹಿಸಲಾಗಿದೆ.

’ಮೇಲ್ನೋಟಕ್ಕೆ ಅಬ್ಬರದ ಪ್ರಚಾರ ಇಲ್ಲದಿದ್ದರೂ ಚುನಾವಣೆಯ ತಯಾರಿ ಗುಪ್ತಗಾಮಿನಿಯಾಗಿದೆ. ಬೂತ್ ಸಶಕ್ತೀಕರಣ, ನವಶಕ್ತಿ, ಒನ್‌ ಬೂತ್ ಟೆನ್‌ ಯೂತ್‌, ಪೇಜ್‌ ಪ್ರಮುಖ್ ಸಮಿತಿಗಳನ್ನು ರಚಿಸುವ ಹೊಣೆಗಾರಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ 2645 ಬೂತ್‌ಗಳಲ್ಲೂ ಈ ನಾಲ್ಕು ಸಮಿತಿಗಳನ್ನು ರಚಿಸಬೇಕಾಗಿದೆ. ಈಗಾಗಲೇ ಈ ಕೆಲಸ ಆರಂಭಗೊಂಡಿದೆ’ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಕೆ.ಶ್ರೀನಿವಾಸ್‌ ತಿಳಿಸಿದರು.

’ತುಮಕೂರು ಗ್ರಾಮಾಂತರ, ತಿಪಟೂರು, ಶಿರಾ, ತುರುವೇಕೆರೆ, ತುಮಕೂರು ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕೆಲಸಗಳು ಉತ್ತಮವಾಗಿವೆ. ಶೇ 50ರಷ್ಟು ಗುರಿ ಸಾಧಿಸಲಾಗಿದೆ. ಆದರೆ ಉಳಿದ ಕ್ಷೇತ್ರಗಳಲ್ಲಿ ಗುರಿ ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ’  ಎಂದು ಹೇಳಿದರು.

‘ನವಶಕ್ತಿ’ ಸಮಿತಿಯಲ್ಲಿ ತಲಾ ಒಬ್ಬರು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಒಬ್ಬ ಮಹಿಳೆ ಇರುವುದು ಕಡ್ಡಾಯವಾಗಿದೆ. ಇದರಲ್ಲಿ ಒಂಬತ್ತು ಜನರು ಇರಬೇಕು. ಬೂತ್ ಸಶಕ್ತೀಕರಣ ಸಮಿತಿಯಲ್ಲಿ  13 ಜನರನ್ನು ಸದಸ್ಯರನ್ನಾಗಿ ಮಾಡಬೇಕು. ಇದರಲ್ಲಿ ಒಬ್ಬರು ಪ್ರಮುಖ್‌ ಇರಲಿದ್ದಾರೆ’ ಎಂದರು.

ಚುನಾವಣಾ ಆಯೋಗ ನೀಡಿರುವ ಮತದಾರರ ಕರಡು ಪ್ರತಿಯನ್ನು ವಿಧಾನಸಭಾವಾರು  ಸಂಗ್ರಹಿಸಲಾಗಿದೆ. ಪ್ರತಿ ಪುಟದಲ್ಲಿ 13 ಮತದಾರರ ಹೆಸರು ಇರಲಿದೆ. ಪ್ರತಿ ಪುಟಕ್ಕೆ ಒಬ್ಬರು ’ಪೇಜ್‌ ಪ್ರಮುಖ್‌’  ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

‍ಪ್ರತಿ ಮತದಾರರ ವಿಳಾಸ, ಅವರ ಕುಟುಂಬದ ವಿಳಾಸ, ಪ್ರತಿ ಮತದಾರರ ಮೊಬೈಲ್‌ ಸಂಖ್ಯೆ, ಒಂದು ಕುಟುಂಬದಲ್ಲಿ ಎಷ್ಟು ಜನರು  ಮತದಾರರು ಇದ್ದಾರೆ. ಅವರಲ್ಲಿ ಎಷ್ಟು ಮಂದಿ ಯಾವ ಪಕ್ಷದ ಪರ ಒಲವು ಹೊಂದಿದ್ದಾರೆ, ಬಿಜೆಪಿ ಪರ ಎಷ್ಟು ಮಂದಿ ಇದ್ದಾರೆ. ಇವರಲ್ಲಿ ಎಷ್ಟು ಮಂದಿಯನ್ನು ಪಕ್ಷದ ಪರ ಒಲವು ಮೂಡುವಂತೆ ಮಾಡಬಹುದು ಎಂಬ ಎಲ್ಲ ವಿವರಗಳನ್ನು ’ಪೇಜ್‌ ಪ್ರಮುಖ್‌’ ಸಂಗ್ರಹಿಸಿ ಎಲ್ಲವನ್ನೂ ಅಂಕಿ– ಅಂಶಗಳ ಆಧಾರದ ಮೇಲೆ ವರದಿ ನೀಡುತ್ತಿದ್ದಾರೆ. ಈ ವರದಿಯನ್ನು ಕಲ್ಮೇಶ್‌ ನೇರ ಅಮಿತ್ ಷಾ ಅವರಿಗೆ ರವಾನಿಸುತ್ತಿದ್ದಾರೆ.

ಬೈಕ್‌ ಇರುವವರಿಗೆ ಹುಡುಕಾಟ

ಪ್ರತಿ ಬೂತ್ ವಾರು ‘ಒನ್ ಬೂತ್ ಟೆನ್‌ ಯೂತ್‌’ ಸಮಿತಿ ರಚಿಸಬೇಕಾಗಿದೆ. ಈ ಸಮಿತಿಯಲ್ಲಿ ಬೈಕ್‌ ಇರುವ ಮೂವರು ಇರಲೇಬೇಕಾಗಿದೆ. ಇದಕ್ಕಾಗಿ ಬೈಕ್‌ ಇರುವ ಯುವಕರನ್ನು ಪಕ್ಷದ ಮುಖಂಡರು ಹುಡುಕುತ್ತಿದ್ದಾರೆ.

’ಬೈಕ್‌ ಇದ್ದವರನ್ನು ಚುನಾವಣಾ ಸಂದರ್ಭದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಇಂಥವರ ಹುಡುಕಾಟ ನಡೆದಿದೆ. ಇದಕ್ಕಾಗಿ ಎಲ್ಲ ಕಡೆ ಸಭೆ ನಡೆಸಲಾಗುತ್ತಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಸ್ಲಿಮ್‌ ಪ್ರಾಬಲ್ಯದ ಕಡೆ ಸಮಸ್ಯೆ

ಹೆಚ್ಚು ಮುಸ್ಲಿಮರೇ ಇರುವ ಬೂತ್ ಗಳಲ್ಲಿ ಪಕ್ಷದ ಚುನಾವಣಾ ಕಾರ್ಯಸೂಚಿಯನ್ನು ಜಾರಿಗೆ ತರಲು  ಸಾಧ್ಯವಾಗುತ್ತಿಲ್ಲ. ಬೂತ್ ಸಮಿತಿ ರಚಿಸಲೇ ಕಾರ್ಯಕರ್ತರು ಸಿಗುತ್ತಿಲ್ಲ. ಕೆಲವು ಕಡೆ ಸಿಕ್ಕರೂ ಸಮಿತಿಗೆ ಬೇಕಾದಷ್ಟು ಸಂಖ್ಯೆಯಲ್ಲಿ ಸಿಕ್ಕಿಲ್ಲ. ಸಮಿತಿ ರಚಿಸಲು ಜಿಲ್ಲಾ ಘಟಕದ ಮುಖಂಡರು ಹೆಣಗಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT