ಬುಧವಾರ, ಡಿಸೆಂಬರ್ 11, 2019
16 °C

ಪ್ರೇಮಿಗಳ ದಿನದಂದು ಮೂರು ಬೋಗಿ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೇಮಿಗಳ ದಿನದಂದು ಮೂರು ಬೋಗಿ ಹಸ್ತಾಂತರ

ಬೆಂಗಳೂರು: ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಡೆಡ್‌ (ಬಿಇಎಂಎಲ್‌) ಸಂಸ್ಥೆಯು ಪ್ರೇಮಿಗಳ ದಿನಾಚರಣೆಯಂದು (ಫೆ 14) ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಮೂರು ಬೋಗಿಗಳನ್ನು ಹಸ್ತಾಂತರಿಸಲಿದೆ.

ಆದರೆ, ಈ ಬೋಗಿಗಳು ಪ್ರಯಾಣಕ್ಕೆ ಲಭ್ಯವಾಗಲು ಇನ್ನೂ ಒಂದು ತಿಂಗಳು ಕಾಯಬೇಕು.

ಈಗ ಸಂಚರಿಸುತ್ತಿರುವ ರೈಲುಗಳು ಮೂರು ಬೋಗಿಗಳನ್ನು ಹೊಂದಿವೆ. ದಟ್ಟಣೆ ಅವಧಿಯಲ್ಲಿ ರೈಲುಗಳು ತುಂಬಿರುತ್ತವೆ. ಬೋಗಿಗಳ ಒಳಗೆ ಕಾಲಿಡಲೂ ಪ್ರಯಾಣಿಕರು ತ್ರಾಸ ಪಡಬೇಕಾದ ಪರಿಸ್ಥಿತಿ ಇರುತ್ತದೆ. ಪ್ರತಿ 4 ನಿಮಿಷಕ್ಕೊಂದು ರೈಲು ಸಂಚಾರವಿದ್ದರೂ ಪ್ರಯಾಣಿಕರ ದಟ್ಟಣೆ ಕಡಿಮೆ ಆಗುತ್ತಿಲ್ಲ. ಹಾಗಾಗಿ ಮೆಟ್ರೊ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ನಿಗಮವು ನಿರ್ಧರಿಸಿತ್ತು.

ನಿಗಮವು ಒಟ್ಟು 150 ಹೊಸ ಬೋಗಿಗಳನ್ನು ಖರೀದಿಸಲು ಬಿಇಎಂಎಲ್‌ ಜೊತೆ 2017ರ ಮಾರ್ಚ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ₹ 1,421 ಕೋಟಿ ಮೊತ್ತದ ಈ ಒಪ್ಪಂದದ ಪ್ರಕಾರ ಸಂಸ್ಥೆಯು 2019ರ ಡಿಸೆಂಬರ್‌ ಒಳಗೆ ಅಷ್ಟೂ ಬೋಗಿಗಳನ್ನು ನಿಗಮಕ್ಕೆ ಪೂರೈಸಬೇಕಿದೆ.

ಬಿಇಎಂಎಲ್‌ ಸಂಸ್ಥೆಯಲ್ಲಿ ಬೋಗಿಗಳನ್ನು ನಿರ್ಮಿಸುವ ಕಾರ್ಯ ಚುರುಕಿನಿಂದ ಸಾಗುತ್ತಿದೆ. ಮೂರು ಬೋಗಿಗಳನ್ನು ಸಂಸ್ಥೆಯು ಇದೇ 14ರಂದು ಹಸ್ತಾಂತರಿಸಲಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಇಎಂಎಲ್‌ನಿಂದ ಬೈಯಪ್ಪನಹಳ್ಳಿ ಡಿಪೊಗೆ ರೈಲನ್ನು ತರಲಾಗುತ್ತದೆ. ಅದನ್ನು ವಾಣಿಜ್ಯ ಸೇವೆಗೆ ಬಳಸುವುದಕ್ಕೆ ಮುನ್ನ ವೇಗ ಪರೀಕ್ಷೆ, ಸುರಕ್ಷತಾ ಪರೀಕ್ಷೆ ಸೇರಿದಂತೆ ಅನೇಕ ರೀತಿಯ ತಪಾಸಣೆಗಳಿಗೆ ಒಳಪಡಿಸಬೇಕಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಈ ಬೋಗಿಗಳನ್ನು ಪರಿಶೀಲಿಸಿ ಅನುಮತಿ ನೀಡಿದ ಬಳಿಕವಷ್ಟೇ ನಾವು ಇವುಗಳನ್ನು ಪ್ರಯಾಣಿಕರ ಓಡಾಟಕ್ಕೆ ಬಳಸಬಹುದು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಹಿಡಿಯಲಿದೆ’ ಎಂದು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ತಿಳಿಸಿದರು.

ಸದ್ಯ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಇದೆ. ಹಾಗಾಗಿ ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿರುವ ಒಂದು ರೈಲಿಗೆ ಈ ಬೋಗಿಗಳನ್ನು ಅಳವಡಿಸಲಿದ್ದೇವೆ. ಒಪ್ಪಂದದ ಪ್ರಕಾರ, ಬಿಇಎಂಎಲ್‌ ಇನ್ನೂ 147 ಬೋಗಿಗಳನ್ನು ಪೂರೈಬೇಕು. ಇವುಗಳನ್ನು ಹಂತ ಹಂತವಾಗಿ ಪೂರೈಸಲಿದೆ ಎಂದು ಅವರು ತಿಳಿಸಿದರು.

ಬೋಗಿಗಳ ಸಂಖ್ಯೆ ಹೆಚ್ಚಿಸಿದರೂ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಮಾರ್ಪಾಡು ಮಾಡಬೇಕಾದ ಅಗತ್ಯ ಇಲ್ಲ. ಎಲ್ಲ ನಿಲ್ದಾಣಗಳಲ್ಲೂ ಆರು ಬೋಗಿಗಳ ನಿಲುಗಡೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ಈಗಾಗಲೇ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಪ್ರಸ್ತುತ ಮೆಟ್ರೊ ರೈಲಿನಲ್ಲಿ 950 ಮಂದಿ ಪ್ರಯಾಣಿಸಬಹುದು. ಮೂರು ಹೆಚ್ಚುವರಿ ಬೋಗಿ ಜೋಡಿಸಿದ ಬಳಿಕ ಒಂದು ರೈಲಿನಲ್ಲಿ 1850 ಮಂದಿ ಪ್ರಯಾಣಿಸಬಹುದು.

ಮಹಿಳೆಯರಿಗೆ ಪ್ರತ್ಯೇಕ ಬೋಗಿ

ಬೆಳಿಗ್ಗೆ 8.30ರಿಂದ 10.00 ಹಾಗೂ ಸಂಜೆ 5.00ರಿಂದ ರಾತ್ರಿ 8.00ಗಂಟೆ ನಡುವೆ  ಮೆಟ್ರೊ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಈ ಅವಧಿಯಲ್ಲಿ ಮಹಿಳೆಯರು ಹಾಗೂ ವಯಸ್ಸಾದವರು ಮೆಟ್ರೊದಲ್ಲಿ ಪ್ರಯಾಣಿಸಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಬಸ್‌ಗಳಲ್ಲಿ ಮಹಿಳೆಯರಿಗೆ ಕೆಲವು ಆಸನಗಳನ್ನು ಮೀಸಲಿಡುವಂತೆ ಮೆಟ್ರೊದಲ್ಲಿ ಒಂದು ಬೋಗಿಯನ್ನು ಮೀಸಲು ಇಡಬೇಕು ಎಂಬ ಬೇಡಿಕೆ ಇದ್ದು, ಇದಕ್ಕೆ ಬಿಎಂಆರ್‌ಸಿಲ್‌ ಕೂಡಾ ಸಮ್ಮತಿಸಿದೆ.

‘ರೈಲಿನ ಬೋಗಿಗಳ ಸಂಖ್ಯೆ ಹೆಚ್ಚಿಸಿದ ಬಳಿಕ ಖಂಡಿತಾ ಮಹಿಳೆಯರಿಗಾಗಿ ಬೋಗಿಯನ್ನು ಕಾಯ್ದಿರಿಸಲಿದ್ದೇವೆ’ ಎಂದು ಶಂಕರ್‌ ತಿಳಿಸಿದರು.

ಡಿಸೆಂಬರ್‌ನಲ್ಲೇ ಹೆಚ್ಚಬೇಕಿತ್ತು ಬೋಗಿಗಳ ಸಂಖ್ಯೆ

2017ರ ಡಿಸೆಂಬರ್‌ನಿಂದಲೇ ಬೋಗಿಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ನಿಗಮವು ಈ ಹಿಂದೆ ತಿಳಿಸಿತ್ತು. ಆದರೆ, ಬೋಗಿಗಳು ಪೂರೈಕೆ ಆಗದ ಕಾರಣ ಇದು ಸಾಧ್ಯವಾಗಿರಲಿಲ್ಲ.

ದಟ್ಟಣೆ ಅವಧಿಯಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ರೈಲು ಸಂಚಾರ ಆರಂಭಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ನಿಗಮ ಕಳೆದ ತಿಂಗಳು ಮುಂದಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಒಂದೇ ದಿನದಲ್ಲಿ ಮೂರು ಬಾರಿ ರೈಲು ಸೇವೆ ಹಠಾತ್‌ ಸ್ಥಗಿತವಾಗಿತ್ತು. ಬಳಿಕ ಈ ಪ್ರಸ್ತಾವದಿಂದ ಹಿಂದಕ್ಕೆ ಸರಿದಿತ್ತು.

ಪ್ರತಿಕ್ರಿಯಿಸಿ (+)