ಶೀಘ್ರ ಆರಂಭವಾಗಲಿದೆ ಕಾಮಗಾರಿ

7

ಶೀಘ್ರ ಆರಂಭವಾಗಲಿದೆ ಕಾಮಗಾರಿ

Published:
Updated:

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಇನ್ನೆರಡು ವಾರಗಳಲ್ಲಿ ಆರಂಭವಾಗಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಈ ಕಾಮಗಾರಿಯ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿಗೆ ವಹಿಸಿದೆ.

‘ಈ ಕಾಮಗಾರಿಯ ಗುತ್ತಿಗೆಯನ್ನು ನಾಲ್ಕು ದಿನಗಳ ಹಿಂದಷ್ಟೇ ಎಲ್‌ ಆ್ಯಂಡ್‌ ಟಿ ಕಂಪನಿಗೆ ವಹಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದೇವೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ತಿಳಿಸಿದರು.

ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನು ಕಂಪನಿ ನೋಡಿಕೊಳ್ಳಲಿದೆ. ಇಲ್ಲಿನ ವಿದ್ಯುತ್‌ ಪೂರೈಕೆ ಹಾಗೂ ವಿತರಣಾ ಜಾಲವನ್ನು ಕಂಪನಿಯೇ ನಿರ್ವಹಿಸಲಿದೆ. ಸೌರ ವಿದ್ಯುತ್‌ ಉಪಕರಣಗಳ ವಿನ್ಯಾಸ ರಚನೆ, ಖರೀದಿ ಹಾಗೂ ಜೋಡಣೆಯ ಉಸ್ತುವಾರಿಯನ್ನು ನೈವೇಲಿ ಲಿಗ್ನೈಟ್‌ ಕಾರ್ಪೊರೇಷನ್‌ ನೋಡಿಕೊಳ್ಳಲಿದೆ.

‘ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸುವುದು, ಕೊಳಚೆ ನೀರು ವಿಲೇವಾರಿ ಜಾಲವನ್ನು ನಿರ್ಮಿಸುವುದು ಹಾಗೂ ದ್ರವತ್ಯಾಜ್ಯ ಸಂಗ್ರಹ ಹಾಗೂ ಸಂಸ್ಕರಣೆ, ಬಡಾವಣೆಯ ವಿದ್ಯುತ್‌ ಪೂರೈಕೆ ಜಾಲದ ಕೇಬಲ್‌ಗಳನ್ನು (ಹೈಟೆನ್ಷನ್‌ ಕೇಬಲ್‌ಗಳೂ ಸೇರಿ) ಹಾಗೂ ಅಪ್ಟಿಕ್‌ ಫೈಬರ್‌ ಕೇಬಲ್‌ಗಳನ್ನು ಅಳವಡಿಸುವುದು, ಈ ಮೂಲಸೌಕರ್ಯಗಳಿಗಾಗಿ ಪ್ರಿಕಾಸ್ಟ್‌ ತಂತ್ರಜ್ಞಾನ ಬಳಸಿ 85 ಕಿ.ಮೀ ಉದ್ದದ ಪ್ರತ್ಯೇಕ ಕೊಳವೆ ಮಾರ್ಗ ರೂಪಿಸುವುದು ಹಾಗೂ ಸ್ಮಾರ್ಟ್‌ ಬೀದಿದೀಪ ವ್ಯವಸ್ಥೆ ಕಲ್ಪಿಸುವುದು ನಮ್ಮ ಕಂಪನಿಯ ಜವಾಬ್ದಾರಿ’ ಎಂದು ಎಲ್‌ ಆ್ಯಂಡ್‌ ಟಿ ಕಂಪನಿಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ದಿನವೊಂದಕ್ಕೆ 2.25 ಕೋಟಿ ಲೀಟರ್‌ಗಳಷ್ಟು ಕೊಳಚೆ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿರುವ ಐದು ಸಂಸ್ಕರಣಾ ಘಟಕಗಳು (ಎಸ್‌ಟಿಪಿ) ಈ ಬಡಾವಣೆಯಲ್ಲಿ ನಿರ್ಮಾಣಗೊಳ್ಳಲಿವೆ. ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಿದ್ದೇವೆ ಎಂದು ಕಂಪನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry