ಭಾನುವಾರ, ಡಿಸೆಂಬರ್ 8, 2019
24 °C
19 ವರ್ಷದೊಳಗಿನವರ ವಿಶ್ವಕಪ್‌

ಯುವಪಡೆಗೆ ಕ್ರಿಕೆಟ್‌ ಕಿರೀಟ

Published:
Updated:
ಯುವಪಡೆಗೆ ಕ್ರಿಕೆಟ್‌ ಕಿರೀಟ

ಮೌಂಟ್‌ ಮಾಂಗನೂಯಿ: ಆರು ವರ್ಷಗಳ ನಂತರ ಭಾರತದ ಯುವಪಡೆಯು 19 ವರ್ಷದೊಳಗಿನವರ ವಿಶ್ವಕಪ್ ಗೆದ್ದು ಸಂಭ್ರಮಿಸಿತು.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಪೃಥ್ವಿ ಶಾ ಬಳಗವು 8 ವಿಕೆಟ್‌ಗಳಿಂದ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ  ಗೆದ್ದಿತು. ಇದರೊಂದಿಗೆ ನಾಲ್ಕು ಬಾರಿ ವಿಶ್ವಕಪ್ ಜಯಿಸಿದ ಸಾಧನೆಯನ್ನು ಮಾಡಿತು. 2000. 2008, 2012ರಲ್ಲಿ ಭಾರತ ತಂಡವು ಚಾಂಪಿಯನ್ ಆಗಿತ್ತು.  ಆಸ್ಟ್ರೇಲಿಯಾ ತಂಡವು ಮೂರು ಬಾರಿ ಗೆದ್ದಿತ್ತು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ  47.2 ಓವರ್‌ಗಳಲ್ಲಿ 216 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಭಾರತ ತಂಡವು  38.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 220 ರನ್ ಗಳಿಸಿತು.  67 ಎಸೆತಗಳು ಬಾಕಿ ಇರುವಾಗಲೇ ಜಯಿಸಿತು. ಭಾರತ ತಂಡವು ಲೀಗ್‌ ಹಂತದಲ್ಲಿ ಆಸ್ಟ್ರೇಲಿಯಾವನ್ನು 100 ರನ್‌ಗಳಿಂದ ಮಣಿಸಿತ್ತು.  ತಂಡ ಎಲ್ಲ ವಿಭಾಗಗಳಲ್ಲೂ ಶ್ರೇಷ್ಠ ಆಟವಾಡಿತು. ಶತಕ ಬಾರಿಸಿದ ಮನ್ಜೋತ್ ಕಾಲ್ರಾ (ಆಜೇಯ 101; 102ಎಸೆತ, 8 ಬೌಂಡರಿ, 3 ಸಿಕ್ಸರ್) ಭಾರತದ ಜಯದ ರೂವಾರಿಯಾದರು. ಅವರು ಪಂದ್ಯ ಶ್ರೇಷ್ಠ ಗೌರವ ಗಳಿಸಿದರು. ಶುಭಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ದೊಡ್ಡ ತಿರುವು: ಪ್ರಶಸ್ತಿ ಗೆದ್ದಿರುವುದು ಕೇವಲ ರೋಚಕ ಅನುಭವ ಮಾತ್ರವಲ್ಲ, ಈ ಸಾಧನೆ ತಂಡದ ಪ್ರತಿಯೊಬ್ಬರ ಬದುಕಿನಲ್ಲಿ ದೊಡ್ಡ ತಿರುವು ಆಗಲಿದೆ’ ಎಂದು ಕೋಚ್ ರಾಹುಲ್‌ ದ್ರಾವಿಡ್‌ ಅಭಿಪ್ರಾಯಪಟ್ಟರು. ಕಳೆದ 14 ತಿಂಗಳಿಂದ ತಂಡದ ಆಟಗಾರರು ಹಾಕಿದ ಶ್ರಮದ ಬಗ್ಗೆ ಪಂದ್ಯದ ನಂತರ ಮಾತನಾಡಿದ ದ್ರಾವಿಡ್‌ ‘‍ಪ್ರತಿಯೊಬ್ಬ ಆಟಗಾರ ಹಾಗೂ ನೆರವು ಸಿಬ್ಬಂದಿ ನಿರಂತರವಾಗಿ ಶ್ರಮಿಸಿದ್ದಾರೆ’ ಎಂದರು.

ದ್ರಾವಿಡ್‌ಗೆ 50ಲಕ್ಷ ಬಹುಮಾನ

ನವದೆಹಲಿ : ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ಮತ್ತು ಆಟಗಾರರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹುಮಾನ ಘೋಷಿಸಿದೆ. ರಾಹುಲ್‌ ದ್ರಾವಿಡ್ ಅವರಿಗೆ ₹ 50 ಲಕ್ಷ ಮತ್ತು ಆಟಗಾರರಿಗೆ ತಲಾ ₹ 30 ಲಕ್ಷ ನೀಡಲು ಅದು ಮುಂದಾಗಿದೆ.

ಫೀಲ್ಡಿಂಗ್ ಕೋಚ್‌ ಅಭಯ್ ಶರ್ಮಾ ಮತ್ತು ಬೌಲಿಂಗ್ ಕೋಚ್‌ ಪಾರಸ್ ಮಾಂಬ್ರೆ ಅವರಿಗೆ ತಲಾ ₹ 20 ಲಕ್ಷ ಸಿಗಲಿದೆ.

‘ಭಾರತ ಗುರು–ಶಿಷ್ಯ ಪರಂಪರೆಗೆ ಹೆಸರಾದ ದೇಶ. ಇಲ್ಲಿ ಗುರುವಿಗೆ ಹೆಚ್ಚು ಬೆಲೆ ಇದೆ. ಹೀಗಾಗಿ ಕೋಚ್‌ಗೆ ಹೆಚ್ಚು ಮೊತ್ತದ ಬಹುಮಾನ ನೀಡಲು ನಿರ್ಧರಿಸಲಾಗಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

***

ಇಂಥ ತಂಡದಲ್ಲಿ ಆಡಲು ಅವಕಾಶ ಲಭಿಸಿದ್ದು ನನ್ನ ಭಾಗ್ಯ. ರಾಹುಲ್ ದ್ರಾವಿಡ್ ಅವರಂಥ ಹಿರಿಯರು ತಂಡಕ್ಕೆ ಕೋಚ್ ಆಗಿ ಲಭಿಸಿದ್ದು ಸಾಧನೆಗೆ ಕಾರಣ

ಶುಭ್‌ಮನ್ ಗಿಲ್, ಭಾರತ ತಂಡದ ಆಟಗಾರ

***

ಹೋದ ಸಲ ಪ್ರಶಸ್ತಿ ಗೆದ್ದಿರಲಿಲ್ಲ. ಈ ಬಾರಿ ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸಿದ್ದರಿಂದ ಗೆಲುವು ಸುಲಭವಾಯಿತು.

– ಅಭಿಷೇಕ್ ಶರ್ಮಾ, ಎಡಗೈ ಸ್ಪಿನ್ನರ್‌

 

ಪ್ರತಿಕ್ರಿಯಿಸಿ (+)