ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿಯುತ್ತಿದ್ದ ಕಾರಿನಲ್ಲಿ ತಾಯಿ–ಮಗು ಕಾಣಲಿಲ್ಲ!

ತಾಯಿ–ಮಗು ಸಜೀವ ದಹನ * ಎಫ್‌ಎಸ್‌ಎಲ್‌ ತಂಡದಿಂದ ಪರಿಶೀಲನೆ * ಎಂಜಿನ್‌ನಿಂದ ಪ್ರಾರಂಭವಾದ ಹೊಗೆ
Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೆಲ್ಲೂರಹಳ್ಳಿಯ ‘ಸುಮಧುರಂ ಆನಂದಂ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪಾರ್ಕಿಂಗ್‌ನಲ್ಲಿ ಶುಕ್ರವಾರ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕಾರಿನೊಳಗೆ ತಾಯಿ–ಮಗು ಇರುವ ವಿಚಾರವೇ ಗೊತ್ತಿರಲಿಲ್ಲ!

ಮಧ್ಯಾಹ್ನ 3.30ರ ಸುಮಾರಿಗೆ ಕಾರಿಗೆ ಬೆಂಕಿ ಹೊತ್ತಿಕೊಂಡು, ನೇಹಾ ವರ್ಮಾ (30) ಹಾಗೂ ಅವರ ನಾಲ್ಕು ವರ್ಷದ ಮಗ ಪರಮ್ ಸಜೀವ ದಹನವಾಗಿದ್ದರು. ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ಸಿಬ್ಬಂದಿ, 20 ನಿಮಿಷ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಕಾರ್ಯಾಚರಣೆ ಮುಗಿದ ಬಳಿಕ ಕಾರಿನ ಬಾಗಿಲು ತೆಗೆದ ಅವರಿಗೆ, ಬೆಂದು ಹೋಗಿದ್ದ ತಾಯಿ–ಮಗುವಿನ ದೇಹಗಳನ್ನು ನೋಡಿ ಆಘಾತವಾಗಿತ್ತು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅಗ್ನಿಶಾಮಕ ಅಧಿಕಾರಿಯೊಬ್ಬರು, ‘ಕಾರಿನಲ್ಲಿ ತಾಯಿ–ಮಗು ಇರುವ ವಿಚಾರ ಸ್ಥಳೀಯರಿಗೂ ಗೊತ್ತಿರಲಿಲ್ಲ. ಅವಘಡ ಸಂಭವಿಸಿದಾಗ ಅವರೇ ನೀರೆರಚಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ನಿಯಂತ್ರಣಕ್ಕೆ ಬಾರದಿದ್ದಾಗ ನಮ್ಮ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ‘ಬೇಸ್‌ಮೆಂಟ್‌ನಲ್ಲಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ’ ಎಂದಷ್ಟೇ ಹೇಳಿದ್ದರು. ಒಂದು ವಾಹನದಲ್ಲಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದೆವು’ ಎಂದು ಹೇಳಿದರು.

‘ಬೆಂಕಿ ಸಂಪೂರ್ಣವಾಗಿ ಆರಿಸಿದ ಬಳಿಕ ಮೊದಲು ಸುತ್ತಮುತ್ತಲ ಸ್ಥಳ ಪರಿಶೀಲಿಸಿದೆವು. ಮೂರ್ನಾಲ್ಕು ನಿಮಿಷಗಳ ನಂತರ ಹೊಗೆ ಕಡಿಮೆಯಾಯಿತು. ಆಗ ಕಾರಿನ ಹತ್ತಿರ ಹೋದರೆ, ತಾಯಿ–ಮಗುವಿನ ದೇಹಗಳಿದ್ದವು. ಆ ದೃಶ್ಯ ನೋಡಿ ದಿಕ್ಕು ತೋಚದಂತಾಯಿತು. ತಾಯಿ–ಮಗು ಇರುವ ವಿಚಾರವನ್ನು ಮೊದಲೇ ಏಕೆ ಹೇಳಲಿಲ್ಲ ಎಂದು ಸ್ಥಳೀಯರ ಮೇಲೆ ರೇಗಾಡಿದೆವು. ‘ನಮಗೂ ಗೊತ್ತಿರಲಿಲ್ಲ’ ಎಂದು ಅವರು  ಹೇಳಿದರು. ನನ್ನ ವೃತ್ತಿ ಜೀವನದಲ್ಲಿ ಇಂಥ ಸನ್ನಿವೇಶ ಎದುರಿಸಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಗಂಡನಿಗೂ ಗೊತ್ತಾಗಲಿಲ್ಲ:  ‘ಶವಗಳನ್ನು ಆಸ್ಪತ್ರೆಗೆ ಸಾಗಿಸಿದ ಸ್ವಲ್ಪ ಸಮಯದಲ್ಲೇ ನೇಹಾ ಪತಿ ರಾಜೇಶ್ ಸ್ಥಳಕ್ಕೆ ಬಂದಿದ್ದರು. ಅವರು ಸಹ ಯಾರದ್ದೋ ಕಾರು ಸುಟ್ಟು ಹೋಗಿದೆ ಎಂದೇ ಭಾವಿಸಿದ್ದರು. ಹತ್ತಿರ ಹೋಗಿ ನೋಂದಣಿ ಸಂಖ್ಯೆ (ಕೆಎ 53 ಪಿ 644) ನೋಡಿದಾಗ, ಅದು ತಮ್ಮದೇ ಕಾರು ಎಂದು ಗೊತ್ತಾಗಿತ್ತು. ಪತ್ನಿ–ಮಗು ಫ್ಲ್ಯಾಟ್‌ನಲ್ಲಿರಬಹುದು ಎಂದುಕೊಂಡಿದ್ದ ಅವರಿಗೆ, ಭದ್ರತಾ ಸಿಬ್ಬಂದಿ ಕಮಲ್ ಇಬ್ಬರೂ ಸಜೀವ ದಹನವಾದ ವಿಚಾರ ತಿಳಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಡೋರ್ ಜಾಮ್: ರಾಜೇಶ್ ಅವರು ಒಂದೂವರೆ ವರ್ಷದ ಹಿಂದೆ ಪತ್ನಿಗೆ ಉಡುಗೊರೆಯಾಗಿ ಈ ‘ಮಾರುತಿ ರಿಟ್ಜ್’ ಕಾರು ಕೊಡಿಸಿದ್ದರು.

ಶನಿವಾರ ಬೆಳಿಗ್ಗೆ ಸ್ಥಳ ಪರಿಶೀಲಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್ಎಲ್‌) ತಜ್ಞರು, ‘ತಾಂತ್ರಿಕ ದೋಷದಿಂದ ಎಂಜಿನ್‌ ಭಾಗದ ವೈರ್‌ಗಳು ಸುಟ್ಟು ಹೊಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ವಾಹನದ ಒಳಗೆಲ್ಲ ದಟ್ಟ ಹೊಗೆ ಆವರಿಸಿಕೊಂಡಿದೆ. ಡೋರ್‌ಗಳೂ ಜಾಮ್ ಆಗಿದ್ದರಿಂದ ಅವರಿಗೆ ಹೊರಬರಲು ಸಾಧ್ಯವಾಗಿಲ್ಲ. ಆ ಕ್ಷಣದಲ್ಲಿ ಸೀಟ್ ಬೆಲ್ಟ್ ಸಹ ಕಳಚಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

‘ಉಸಿರಾಡಲು ಸಾಧ್ಯವಾಗದೆ ತಾಯಿ–ಮಗು ಮೃತಪಟ್ಟಿದ್ದಾರೆ. ಆ ನಂತರ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಆಗ ಕಾರಿನ ಜತೆ ಅವರೂ ಭಸ್ಮವಾಗಿದ್ದಾರೆ’ ಎಂದು ಮಾಹಿತಿ ನೀಡಿದರು.


‍ಪರಮ್, ನೇಹಾ

ಪ್ರೇಮ ವಿವಾಹ: ರಾಜೇಶ್‌ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನವರು. ನೇಹಾ ಮಧ್ಯಪ್ರದೇಶದ ಇಂದೋರ್‌ನವರು. ಇಬ್ಬರೂ ಮೈಸೂರಿನಲ್ಲಿ ಒಂದೇ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದರು. ಆ ಅವಧಿಯಲ್ಲಿ ಪ್ರೇಮಾಂಕುರವಾಗಿ, ಮೈಸೂರಿನಲ್ಲೇ ವಿವಾಹವಾಗಿದ್ದರು.

ಐದು ವರ್ಷ ಅಲ್ಲೇ ನೆಲೆಸಿದ್ದ ದಂಪತಿ, 2016ರಲ್ಲಿ ನಗರಕ್ಕೆ ಬಂದು ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನೆಲೆಸಿದ್ದರು. ರಾಜೇಶ್, ದೊಮ್ಮಲೂರಿನಲ್ಲಿ ಸಾಫ್ಟ್‌ವೇರ್ ಕಂಪನಿ ಪ್ರಾರಂಭಿಸಿದ್ದರು.

‘ಎಂದಿನಂತೆ ಶುಕ್ರವಾರ ಬೆಳಿಗ್ಗೆ 7 ಗಂಟೆಗೇ ಕೆಲಸಕ್ಕೆ ಹೋಗಿದ್ದೆ. ಚಾರ್ಜ್ ಇಲ್ಲದೆ ಮಧ್ಯಾಹ್ನದ ನಂತರ ಮೊಬೈಲ್ ಸ್ವಿಚ್ಡ್‌ಆಫ್ ಆಯಿತು. ಹೀಗಾಗಿ, ದುರಂತದ ಬಗ್ಗೆ ನನಗೆ ಗೊತ್ತಾಗಲಿಲ್ಲ’ ಎಂದು ರಾಜೇಶ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದರು.
**
‘ಕಂಪನಿ ವಿರುದ್ಧ ಕ್ರಮ ಜರುಗಿಸಿ’

‘ರಾಜೇಶ್–ನೇಹಾ ಮಧ್ಯೆ ಅಪಾರ ಪ್ರೀತಿ ಇತ್ತು. ಪರಮ್ ಹುಟ್ಟಿದ ಬಳಿಕ ಆತನ ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ತಾಯಿ–ಮಗನನ್ನು ಬಲಿ ಪಡೆದ ಕಾರು ಕಂಪನಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಮಧುರ್ ವರ್ಮಾ ಒತ್ತಾಯಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕಂಪನಿಗೆ ಹತ್ತಿರದಲ್ಲೇ ಮನೆ ಮಾಡಲು ರಾಜೇಶ್ ನಿರ್ಧರಿಸಿದ್ದರು. ಇನ್ನೊಂದು ತಿಂಗಳಲ್ಲಿ ವಾಸ್ತವ್ಯ ಬದಲಿಸಬೇಕಿತ್ತು. ಅಷ್ಟರಲ್ಲಿ ದುರಂತ ಸಂಭವಿಸಿತು’ ಎಂದು ದುಃಖ‍ತಪ್ತರಾದರು.
**
‘ಊಟಕ್ಕೆ ಹೋಗ್ತೀವಿ’

ಮಧ್ಯಾಹ್ನ 12.30ರ ಸುಮಾರಿಗೆ ಗೆಳತಿಯೊಬ್ಬರಿಗೆ ಕರೆ ಮಾಡಿದ್ದ ನೇಹಾ, ‘ನಾನು ಪರಮ್ ಊಟಕ್ಕೆ ಹೋಟೆಲ್‌ಗೆ ಹೋಗುತ್ತಿದ್ದೇವೆ. ನಮ್ಮ ಜತೆ ನೀನೂ ಬಾ’ ಎಂದು ಬಲವಂತ ಮಾಡಿದ್ದರು. ಆದರೆ, ತನಗೆ ಬೇರೆ ಕೆಲಸ ಇರುವುದಾಗಿ ಗೆಳತಿ ಹೇಳಿದ್ದರು.

ಆ ನಂತರ ಕಾರಿನಲ್ಲಿ ಹೊರಟ ತಾಯಿ–ಮಗ, ಊಟ ಮುಗಿಸಿಕೊಂಡು 3.25ಕ್ಕೆ ವಾಪಸಾಗಿದ್ದರು. ಆ ಸಮಯಕ್ಕೆ ಕಾರು ಒಳಗೆ ಬಂದಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನೇಹಾ ಚಿಕ್ಕಪ್ಪ ಮಧುರ್ ವರ್ಮಾ ಪುಣೆಯಿಂದ ಬಂದಿದ್ದರು. ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಅವರಿಗೆ ಹಸ್ತಾಂತರಿಸಲಾಯಿತು. ಪಣತ್ತೂರಿನ ವಿದ್ಯುತ್ ಚಿತಾಗರದಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ಮಾಡಿದರು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT